ನಮ್ಮದು ಆಧುನಿಕ ಸಮಾಜ; ನಮ್ಮ ಪೂರ್ವಜರಿಗಿಂತಲೂ ವಿದ್ಯೆಯಲ್ಲಾಗಲೀ ಸಾಧನೆಯಲ್ಲಾಗಲೀ ಸಾಂಸ್ಕೃತಿಕವಾಗಿಯಾಗಲೀ ತುಂಬ ಮುಂದುವರಿದಿರುವ ಜನಾಂಗದವರು ನಾವು ಎಂಬ ಹೆಮ್ಮೆ ನಮ್ಮದು. ಆದರೆ ವಾಸ್ತವ ಹೀಗೆ ಇದೆಯೇ – ಎಂದು ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾಗಿದೆ ನಾವಿಂದು. ಸಮಾಜವೊಂದು ಎಷ್ಟು ಕೋಮಲವಾಗಿದೆ, ಸುಂದರವಾಗಿದೆ, ಸುರಕ್ಷಿತವಾಗಿದೆ – ಎಂಬುದನ್ನು ನಾವು ಹೇಗೆ ಕಂಡುಕೊಳ್ಳುವುದು? ಇದಕ್ಕೆ ಉತ್ತರ ಸುಲಭವೆನ್ನಿ! ಒಂದು ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು ಹೇಗಿವೆ – ಎಂಬುದು ಆ ಸಮಾಜದ ಸಂಸ್ಕಾರಕ್ಕೂ ಸಂತೋಷಕ್ಕೂ ಪ್ರಗತಿಗೂ ಪ್ರತಿಭೆಗೂ ಮಾನದಂಡವಾಗಿರುತ್ತದೆ ಎಂದರೆ ಇದೇನೂ ತಪ್ಪಾಗದು. ದಿಟವಾಗಿಯೂ ನಾವು ‘ಮುಂದುವರೆದ ಜನಾಂಗ’ ಎಂದು ನಮಗೆ ನಾವೇ ಬೆನ್ನನ್ನು ತಟ್ಟಿಕೊಳ್ಳುವಂಥ ಅರ್ಹತೆಯನ್ನು ಸಂಪಾದಿಸಿಕೊಂಡಿದ್ದೇವೆಯೆ? ಇಂದು ನಮ್ಮ ಸಮಾಜದಲ್ಲಿ ದಿನವೂ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಪರಿಸ್ಥಿತಿ ಹೀಗಿದ್ದಾಗ ನಮ್ಮದು ಪ್ರಬುದ್ಧ ಸಮಾಜ ಹೇಗಾಗುತ್ತದೆ? ಈ ಪ್ರಶ್ನೆಯನ್ನು ನಾವು ‘ರಕ್ಷಾಬಂಧನ’ದ ದಿನ ಕೇಳಿಕೊಳ್ಳಬೇಕಾಗಿದೆ.

‘ರಕ್ಷಾಬಂಧನ’ಕ್ಕೂ ಸ್ತ್ರೀಯರ ರಕ್ಷಣೆ–ಸುರಕ್ಷತೆಗೂ ನೇರ ನಂಟಿದೆ. ಸ್ತ್ರೀಯರನ್ನು ರಕ್ಷಿಸುತ್ತೇನೆ – ಎಂಬ ಮಹಾಸಂಕಲ್ಪವೇ ರಕ್ಷಾಬಂಧನದ ಉದ್ದೇಶ. ‘ನೀನು ಅಪಾಯಗಳಿಂದ ಹೆದರಬೇಕಿಲ್ಲ; ನಿನ್ನ ರಕ್ಷಣೆಗೆ ಸದಾ ನಾನಿದ್ದೇನೆ’ ಎಂದು ಸಹೋದರಿಯರಿಗೆ ಸಹೋದರರು ಅಭಯವನ್ನು ಕೊಡಬೇಕು. ಆಗ ಸಹೋದರಿಯರು ‘ನಿನ್ನ ಈ ಸಹೋದರಿಯನ್ನು ಎಂದಿಗೂ ಮರೆಯಬೇಡ; ನನ್ನನ್ನು ರಕ್ಷಿಸುವ ಹೊಣೆಗಾರಿಕೆ ಎಂದೂ ನಿನ್ನ ನೆನಪಿನಿಂದ ಜಾರದಿರಲಿ ಎಂಬುದರ ಸಂಕೇತವಾಗಿ ಈ ಪವಿತ್ರ ರಕ್ಷೆಯನ್ನು ನಿನಗೆ ಕಟ್ಟುತ್ತಿರುವೆ’ ಎಂದು ಸಹೋದರರಿಗೆ ರಕ್ಷೆಯನ್ನು ಕೈಗೆ ಕಟ್ಟಬೇಕು. ಇದು ರಕ್ಷಾಬಂಧನದ ದಿನದ ಪ್ರಮುಖ ಆಚರಣೆ. ಅಂದು ಶ್ರೀಕೃಷ್ಣನಿಗೆ ದ್ರೌಪದಿಯು ಹೀಗೆ ರಕ್ಷೆಯನ್ನು ಕಟ್ಟಿದ್ದಳಂತೆ. ಕೃಷ್ಣನು ದ್ರೌಪದಿಯ ಮಾನಸರಂಕ್ಷಣೆಯನ್ನು ಹೇಗೆ ಮಾಡಿದ ಎಂಬುದು ನಮಗೆ ಗೊತ್ತಿದೆ. ಎಂದರೆ ಮಹಾಭಾರತದ ಕಾಲದಿಂದಲೂ ಈ ಪರಂಪರೆ ಬಂದಿದೆ ಎಂದಾಯಿತು. ಅದಕ್ಕೂ ಮೊದಲೇ ಇದ್ದಿರಬಹುದು. ಆದರೆ ಅಂದಿಗಿಂತಲೂ ಇಂದಿಗೆ ರಕ್ಷಾಬಂಧನದ ಅನಿವಾರ್ಯತೆ ಇದೆ ಎಂಬುದರಲ್ಲಿ ಅನುಮಾನವಿಲ್ಲವೆನ್ನಿ.

ಹೆಣ್ಣನ್ನು ರಕ್ಷಿಸುವ ಹೊಣೆಗಾರಿಕೆ ಕೇವಲ ಅವಳ ಸಹೋದರರಿಗೆ ಮಾತ್ರವೇ ಇರುವಂಥದ್ದಲ್ಲ; ಒಟ್ಟು ಸಮಾಜವೇ ಅವಳಿಗೆ ಸಹೋದರನ ಸ್ಥಾನದಲ್ಲಿದ್ದುಕೊಂಡು, ಅವಳ ಮಾನ–ಪ್ರಾಣಗಳನ್ನು ಕಾಪಾಡಬೇಕಾಗಿದೆ. ಸಮಾಜದಲ್ಲಿ ಹೆಣ್ಣಿಗೆ ಅಭಯ ಸಿಗಲಿ; ಅವಳು ಸುಖ–ಸಂತೋಷದಲ್ಲಿ ತನ್ನ ಜೀವನವನ್ನು ರೂಪಿಸಿಕೊಳ್ಳುವಂಥ ಸ್ವಾತಂತ್ರ್ಯ–ಶಕ್ತಿಗಳನ್ನು ಸಮಾಜ ನಿರಂತರವಾಗಿ ಅವಳಿಗೆ ಒದಗಿಸಲಿ ಎಂಬ ಆಶಯವೂ ಕರ್ತವ್ಯಬುದ್ಧಿಯೂ ನಮ್ಮದಾಗಲಿ. ಇದೇ ಈ ಸಲದ ರಕ್ಷಾಬಂಧನದ ನಮ್ಮೆಲ್ಲರ ಸಂಕಲ್ಪವೂ ಆಗಲಿ.

ಇಂದು ‘ಸಂಸ್ಕೃತದಿನ’ವೂ ಹೌದು. ಸಂಸ್ಕೃತ ಎಂಬುದು ಯಾವುದೋ ಒಂದು ಭಾಷೆಯನ್ನಷ್ಟೆ ಪ್ರತಿನಿಧಿಸುವುದಿಲ್ಲ. ಶುದ್ಧವಾಗಿ ಬಳಸಿದ, ಔಚಿತ್ಯಪೂರ್ಣವಾಗಿ ಆಡಿದ, ವ್ಯಷ್ಟಿಯ ಸುಖ–ಸಂತೋಷಕ್ಕಾಗಿ ವ್ಯವಹರಿಸಿದ ಅರ್ಥಪೂರ್ಣ ನುಡಿಗಳೆಲ್ಲವೂ ‘ಸಂಸ್ಕೃತ‘ವೇ ಹೌದು. ಇಂಥ ಭಾಷೆಯನ್ನು ಎತ್ತಿಹಿಡಿಯುವ, ಕಾಪಾಡುವ ‘ಭಾಷೆ’ಯನ್ನೂ ನಾವಿಂದು ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.