ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರು ಉಪಚುನಾವಣೆ | ಸಂದರ್ಶನ: ಕರಾಳ ಅಧ್ಯಾಯ ಮರುಕಳಿಸದಿರಲಿ; ಇ.ಅನ್ನಪೂರ್ಣ

Published : 10 ನವೆಂಬರ್ 2024, 0:30 IST
Last Updated : 10 ನವೆಂಬರ್ 2024, 0:30 IST
ಫಾಲೋ ಮಾಡಿ
Comments
ಪ್ರ

ನಿಮಗೆ ಚುನಾವಣೆ ಹೊಸದಲ್ಲ. ಆದರೆ, ಇದು ಮೊದಲ ಚುನಾವಣೆ. ಏನನ್ನಿಸುತ್ತಿದೆ?

ತುಕಾರಾಂ ಅವರ ಹಿಂದೆ ನಿಂತು ನಾನು ಕೆಲಸ ಮಾಡುತ್ತಿದ್ದೆ. ಈಗ ನಾನೇ ಕಣಕ್ಕಿಳಿದಿದ್ದೇನೆ. ತೆರೆ ಹಿಂದೆ ಕೆಲಸ ಮಾಡುವುದಕ್ಕೂ, ತೆರೆ ಮುಂದೆ ಬರುವುದಕ್ಕೂ ತುಂಬಾ ವ್ಯತ್ಯಾಸವಿದೆ. ಕ್ಷೇತ್ರದ ಸಮಸ್ಯೆ ಅರಿಯಲು ಸಾಧ್ಯವಾಗಿದೆ. 

ಪ್ರ

ತಮಗೆ ಓದು, ಬರವಣಿಗೆ ಹವ್ಯಾಸ ಇದೆಯೇ?

ನಮ್ಮದು ವಿದ್ಯಾವಂತ ಕುಟುಂಬ. ನನ್ನ ಹುಟ್ಟೂರು ಕಮಲಾಪುರ. ತಂದೆ ಕೃಷಿಯಲ್ಲಿ ಬಿ.ಎಸ್ಸಿ ಪದವೀಧರರು. ಸಿದ್ದರಾಮಯ್ಯ ಅವರಿಗೆ ಸ್ನೇಹಿತರು. ನನ್ನ ಚಿಕ್ಕಪ್ಪ ಪ್ರಾಧ್ಯಾಪಕರಾಗಿದ್ದರು. ನಮ್ಮ ಮನೆಯಲ್ಲಿ ಪತ್ರಿಕೆಗಳನ್ನು ತಂದು ಮಕ್ಕಳಿಗೆ ಓದಲು ಕೊಡುತ್ತಿದ್ದರು. ಆಗಿಂದಲೂ ಸಾಹಿತ್ಯದ ಒಲವು ಬೆಳೆಯಿತು. ನನ್ನ ಅನಿಸಿಕೆ
ಗಳನ್ನು ಬರೆಯುತ್ತೇನೆ. ಸಂಸದ ತುಕಾರಾಂ ಅವರ ಜೀವನ ಚರಿತ್ರೆ ಬರೆಯುವ ಉದ್ದೇಶವಿದೆ.

ಪ್ರ

ಟಿಕೆಟ್‌ ವಿಷಯದ ಗಲಾಟೆ ಈಗ ಬಗೆಹರಿದಿದೆಯೇ?

ಅದು ನಮ್ಮ ಕುಟುಂಬದ ಗಲಾಟೆ. ಕುಟುಂಬ ಎಂದ ಮೇಲೆ ಸಣ್ಣಪುಟ್ಟ ಸಮಸ್ಯೆ ಸಾಮಾನ್ಯ. ಇದನ್ನು ಹಿರಿಯರು ಬಗೆಹರಿಸಿದ್ದಾರೆ. ಈಗ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ನಡೆಸುತ್ತಿದ್ಧಾರೆ. 

ಪ್ರ

ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಕುಟುಂಬಸ್ಥರಿಗೆ ಆದ್ಯತೆ ನೀಡುತ್ತಿರುವುದು ಸಾಮಾಜಿಕ ನ್ಯಾಯದ ನಿರಾಕರಣೆ ಅಲ್ಲವೇ?

ಇಲ್ಲಿ ಸಮಾನತೆ ಆಧಾರದಲ್ಲಿ ಮಹಿಳೆಗೆ ಅವಕಾಶ ನೀಡಲಾಗಿದೆ. ಇಲ್ಲಿ ನಾವು ಮಾಡಿದ ಸೇವೆ ಮುಖ್ಯವಾಗುತ್ತದೆ. ಯಾರಿಗೆ ಅನ್ಯಾಯವಾಯಿತು ಎಂಬುದು ಮುಖ್ಯ ಅಲ್ಲ. 

ಪ್ರ

ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್‌ ಗಣಿ ಅಸ್ತ್ರ ಪ್ರಯೋಗಿಸುತ್ತಿದೆ ಎಂಬ ಮಾತಿದೆ.

ಅದು ನಿಜ. ಅಕ್ರಮ ಗಣಿಗಾರಿಕೆ ಕಾಲದಲ್ಲಿ ಏನಾಯಿತು ಏನೆಂಬುದು ಎಲ್ಲರಿಗೂ ಗೊತ್ತಾಗಿದೆ. ಇಲ್ಲಿನ ಗಣಿ ಮಾಲೀಕರು ತೊಂದರೆ ಅನುಭವಿಸಿದ್ದಾರೆ. ಜನ ಆಗ ಕೃಷಿಯನ್ನೇ ಮಾಡುತ್ತಿರಲಿಲ್ಲ. ಪರಿಸ್ಥಿತಿ ಈಗ ಸಹಜವಾಗಿದೆ. ಇದಕ್ಕೆ ಸಮಯ ಹಿಡಿಯಿತು. ಮತ್ತೆ ಆ ಕರಾಳ ಹಸ್ತ ಸಂಡೂರಿನ ಮೇಲೆ ಬೀಳದಿರುವಂತೆ ನಾವು ಮಾಡಬೇಕಿದೆ.

ಪ್ರ

ಬಸ್‌ ನಿಲ್ದಾಣದ ದುಃಸ್ಥಿತಿಯೇ ಸಂಡೂರು ಅಭಿವೃದ್ಧಿಗೆ ಸಾಕ್ಷಿ ಎಂದು ಬಿಜೆಪಿ ಹೇಳುತ್ತಿದೆ. 

ಒಂದು ತಾಲ್ಲೂಕಿನ ಅಭಿವೃದ್ಧಿಗೆ ಬಸ್‌ ನಿಲ್ದಾಣ ಮಾನದಂಡವಲ್ಲ. ಶಿಕ್ಷಣ, ಮೂಲಸೌಲಭ್ಯ ಸಿಗಬೇಕು. ದ್ವೀಪ ರಾಷ್ಟ್ರದಂತಿದ್ದ ಸಂಡೂರು ಈಗ ಬದಲಾಗಿದೆ. ನಮ್ಮ ವಿರುದ್ಧ ಆರೋಪಿಸುತ್ತಿರುವ ಬಿಜೆಪಿಯವರು ಐಷಾರಾಮಿ ಕಾರಿನಲ್ಲಿ ಬಂದು, ಪ್ರಚಾರ ಮಾಡುತ್ತಿದ್ದಾರೆ. ಅಂಥ ಕಾರುಗಳು ಇಲ್ಲಿ ಓಡಾಡುತ್ತಿವೆ ಎಂದರೆ ಇಲ್ಲಿನ ರಸ್ತೆ ಗುಣಮಟ್ಟ ಎಂಥದ್ದು ಎಂದು ಅವರೇ ತಿಳಿಯಬೇಕು. ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದಾಗ ಒಬ್ಬ ಶಸ್ತ್ರಚಿಕಿತ್ಸಕರನ್ನು ಕೊಡಲಿಲ್ಲ. ತಾಲ್ಲೂಕನ್ನು ಕಡೆಗಣಿಸಿದರು. ಸಾರಿಗೆ ಸಚಿವರಾದರೂ ಅವರು ಬಸ್‌ ಕೊಡಲಿಲ್ಲ. ತುಕಾರಾಂ, ₹1,500 ಕೋಟಿ ತಂದು ಕ್ಷೇತ್ರ ಅಭಿವೃದ್ಧಿ ಮಾಡಿರುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.

ಪ್ರ

ಇದು ಸಂತೋಷ್‌ ಲಾಡ್‌ ವರ್ಚಸ್ಸಿನ ಚುನಾವಣೆಯೋ, ತುಕಾರಾಂ ವರ್ಚಸ್ಸಿನ ಆಧಾರದ ಚುನಾವಣೆಯೋ? 

ಸಂತೋಷ್ ಲಾಡ್‌ ನಮ್ಮ ಶಕ್ತಿ. ಸಂಡೂರಿನ ರಾಜಕಾರಣ, ಅಭಿವೃದ್ಧಿಯಲ್ಲಿ ಅವರು ಹಸ್ತಕ್ಷೇಪ ಮಾಡಿಲ್ಲ. 2004ರ ಬಳಿಕ ಅವರು ಮಾಡಿದ ಬದಲಾವಣೆ ಜನ ಒಪ್ಪಿದ್ದಾರೆ. ನಮ್ಮನ್ನು ಗುರುತಿಸಿ ರಾಜಕೀಯದಲ್ಲಿ ಬೆಳೆಸುವಲ್ಲಿ ಅವರ ಪಾತ್ರ ಹಿರಿದು.

ಪ್ರ

ಗೆದ್ದರೆ ಏನು ಮಾಡಬೇಕು ಎಂದುಕೊಂಡಿದ್ದೀರಿ? 

200 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆಗೆ ಭೂಮಿ ಪೂಜೆ ಆಗಿದೆ. ಅದನ್ನು ಬೇಗ ಪೂರ್ಣಗೊಳಿಸಬೇಕು. ಇಲ್ಲಿ ಅಪಘಾತಗಳು ಹೆಚ್ಚು. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಹಿಳೆಯರ ಕೌಶಲಾಭಿವೃದ್ಧಿ ಕೇಂದ್ರ ತೆರೆಯಬೇಕೆಂದು ಬಯಸಿದ್ದೇನೆ. ಇಲ್ಲಿ ನರ್ಸಿಂಗ್‌ ಕಾಲೇಜು ಮಾಡುವ ಆಸೆ ಇದೆ. ನಾನು ಮತ್ತು ಸಂಸದರು ಈ ಕೆಲಸ ಮಾಡಲಿದ್ದೇವೆ.

ಪ್ರ

ಸಂಡೂರಿನ ಪ್ರಾಕೃತಿಕ ಸಂಪತ್ತು ಕರಗುತ್ತಿದೆ. ಇದರ ಬಗ್ಗೆ ಏನು ಹೇಳುತ್ತೀರಿ?

ಇಲ್ಲಿನ ಪ್ರಾಕೃತಿಕ ಸಂಪತ್ತು ಸಂಡೂರಿಗಷ್ಟೇ ಸೀಮಿತವಲ್ಲ. ಇಡೀ ದೇಶಕ್ಕೆ ಸೇರಿದ್ದು. ಅಕ್ರಮ ಗಣಿಗಾರಿಕೆಗೆ ಉತ್ತರ ಸಿಕ್ಕಿದೆ. ಅದು ಕರಾಳ ಅಧ್ಯಾಯ. ಈಗ ಕಾನೂನಾತ್ಮಕ ರೀತಿಯಲ್ಲಿ  ಮಾತ್ರ ಗಣಿಗಾರಿಕೆಗೆ ಅವಕಾಶ ಇದೆ. ಇಲ್ಲಿನ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುವೆ. ಇದು ಸರ್ಕಾರ, ಜನರ ಜವಾಬ್ದಾರಿ ಕೂಡ ಹೌದು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT