ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪ್ರಚಾರಾರ್ಥವಾಗಿ ಭಾನುವಾರ ಬೈಕ್ ರ್‍ಯಾಲಿ ನಡೆಯಿತು
‘ಬೇರೆಯವರ ಬಗ್ಗೆ ಯೋಚಿಸುವುದಿಲ್ಲ’
‘ವಿರೋಧ ಪಕ್ಷದವರು ಏನು ಮಾಡುತ್ತಿದ್ದಾರೆ ಎಂದು ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಕೆಲಸ ನಾವು ಮಾಡುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ‘ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ ಕ್ಷೇತ್ರದ ಉಸ್ತುವಾರಿ. ನಾನು ಚಿಕ್ಕೋಡಿ ಕ್ಷೇತ್ರದ ಉಸ್ತುವಾರಿ. ಇಬ್ಬರೂ ಪರಸ್ಪರ ಸಮನ್ವಯದಿಂದ ಕೆಲಸ ಮಾಡುತ್ತೇವೆ. ಅಗತ್ಯತೆ ಆಧರಿಸಿ ಆಯಾ ಕ್ಷೇತ್ರಗಳಲ್ಲಿ ಇಬ್ಬರೂ ಪ್ರಚಾರ ಕೈಗೊಳ್ಳುತ್ತೇವೆ. ಒಟ್ಟಾರೆಯಾಗಿ ಉತ್ತಮವಾಗಿ ಕೆಲಸ ಮಾಡಿ ಬೆಳಗಾವಿ ಚಿಕ್ಕೋಡಿ ಮತ್ತು ಕೆನರಾ ಕ್ಷೇತ್ರದಲ್ಲಿ ಗೆದ್ದು ಬರುತ್ತೇವೆ’ ಎಂದರು. ‘ಟಿಕೆಟ್ ವಿಚಾರವಾಗಿ ಕೆಲವರಿಗೆ ಅಸಮಾಧಾನ ಇರಬಹುದು. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಸಕಾರಾತ್ಮಕ ವಿಚಾರಗಳನ್ನಿಟ್ಟುಕೊಂಡು ಕೆಲಸ ಮಾಡುತ್ತೇವೆ. ಬೇರೆಯವರ ತಂತ್ರ ಕುತಂತ್ರಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು. ‘ಯಾವುದೇ ಚುನಾವಣೆಯನ್ನು ನಾವು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಒತ್ತಡ ಇರುತ್ತದೆ. ಆದರೆ ಎಲ್ಲರ ಸಹಕಾರ ಇರುವುದರಿಂದ ಒತ್ತಡ ಕಡಿಮೆಯಾಗುತ್ತದೆ’ ಎಂದರು. ನೆರವವು ನೀಡಿದ ಕೇಂದ್ರ ಸರ್ಕಾರ: ‘ಪ್ರವಾಹ ಮತ್ತು ಕೋವಿಡ್ ಸಂದರ್ಭ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಹಾಯ ಮಾಡಿಲ್ಲ. ಈಗ ಬರಗಾಲದಲ್ಲಾದರೂ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈಗಲೂ ಸಹಾಯಕ್ಕೆ ಬರುತ್ತಿಲ್ಲ’ ಎಂದು ದೂರಿದರು. ಬಿಜೆಪಿಯವರು ರಾಮನನ್ನು ಜಪಿಸುತ್ತಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ‘ನಾನು ಕೂಡ ರಾಮನ ಭಕ್ತಳೇ. ನಮ್ಮ ಸಂಸ್ಕೃತಿ ಬಿಡುವುದಿಲ್ಲ. ಆದರೆ ನಾನು ಅಭಿವೃದ್ಧಿ ಪರ ಚುನಾವಣೆ ಮಾಡುತ್ತೇನೆ. ಅಭಿವೃದ್ಧಿ ನೋಡಿ ಮತ ಕೊಡಿ ಎಂದು ಕೇಳುತ್ತೇನೆ. ನಮ್ಮಲ್ಲಿ ಜಾತಿ ಪ್ರಾದೇಶಿಕ ಭೇದವಿಲ್ಲ. ಎಲ್ಲರಿಗೂ ಗ್ಯಾರಂಟಿ ಯೋಜನೆಯ ಲಾಭ ನೀಡಿದ್ದೇವೆ’ ಎಂದು ಉತ್ತರಿಸಿದರು.