ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಭಾಷಣ:ಶಾಸಕ ಭರತ್ ಶೆಟ್ಟಿಗೆ ಮಧ್ಯಂತರ ಜಾಮೀನು

ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಬಿಎನ್ಎಸ್ ಖಾತೆ ತೆರೆದ ಆರೋಪಿ
Published 11 ಜುಲೈ 2024, 15:29 IST
Last Updated 11 ಜುಲೈ 2024, 15:29 IST
ಅಕ್ಷರ ಗಾತ್ರ

ಬೆಂಗಳೂರು: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವೈ.ಭರತ್ ಶೆಟ್ಟಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ.

ಈ ಸಂಬಂಧ ಭರತ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಗುರುವಾರ ವಿಚಾರಣೆ ನಡೆಸಿದರು.

‘ಒಂದು ವೇಳೆ ಭರತ್ ಶೆಟ್ಟಿ ಅವರನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದರೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಭರತ್ ಶೆಟ್ಟಿ ಅವರು ₹1 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್, ಒಬ್ಬರ ಭದ್ರತೆ ಒದಗಿಸಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯ ತಿರುಚಬಾರದು. ತನಿಖಾಧಿಕಾರಿ ವಿಚಾರಣೆಗೆ ಕರೆದಾಗ ಹಾಜರಾಗಬೇಕು‘ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲರಿಗೆ ನಿರ್ದೇಶಿಸಿದ ನ್ಯಾಯಾಲಯ ಇದೇ 16ಕ್ಕೆ ವಿಚಾರಣೆ ಮುಂದೂಡಿದೆ. ಅರ್ಜಿದಾರರ ಪರ ಹೈಕೋರ್ಟ್ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿದರು.

ಈ ಆದೇಶದ ಮೂಲಕ; ಕರ್ನಾಟಕದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಭಾರತೀಯ ನಾಗರಿಕ ಸಂಹಿತೆ-2023ರ (ಬಿಎನ್ ಎಸ್) ಅಡಿಯಲ್ಲಿ ಶಾಸಕ ಭರತ್ ಶೆಟ್ಟಿ ಜಾಮೀನು ಪಡೆದ ಮೊದಲ ಆರೋಪಿ ಎನಿಸಿ ಖಾತೆ ತೆರೆದಿದ್ದಾರೆ.

ಪ್ರಕರಣವೇನು?:

‘ಇದೇ 8ರಂದು ಬೆಳಿಗ್ಗೆ ಕಾವೂರು ಜಂಕ್ಷನ್ ನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಭರತ್ ಶೆಟ್ಟಿ ಬಾಷಣ ಮಾಡಿದ್ದರು. ರಾಹುಲ್ ಗಾಂಧಿ ಒಬ್ಬ ಹುಚ್ಚ. ಅವನನ್ನು ಸಂಸತ್ ನಿಂದ ಹೊರಹಾಕಬೇಕು. ಅವನು ಮಾತನಾಡುವ ಶೈಲಿ ನೋಡಿದರೆ ಹಿಂದೂ ಆದ ನಾನು ಲೋಕಸಭೆಗೆ ಹೋಗಿ ಕೆನ್ನೆಗೆ ಎರಡು ಹೊಡೆಯಬೇಕು ಎನಿಸುತ್ತದೆ. ಹಾಗೆ ಮಾಡಿದರೆ ಆತನಿಗೆ ಬುದ್ಧಿ ಬರುವುದು. ನಾನೊಬ್ಬ ಹಿಂದೂವಾಗಿದ್ದು, ಯಾರಾದರೂ ಹಿಂದೂ ವಿಚಾರದಲ್ಲಿ ಮಾತನಾಡಿದರೆ ಅವರಿಗೆ ತಕ್ಕ ಬುದ್ಧಿ ಕಲಿಸಲು ನಾವೆಲ್ಲಾ ಒಂದಾಗಬೇಕು. ಅಗತ್ಯ ಬಿದ್ದರೆ ಶಸ್ತ್ರಾಸ್ತ್ರ ಹಿಡಿದು ಹೋರಾಟ ಮಾಡಲು ನಾವೆಲ್ಲಾ ಸಿದ್ಧರಾಗಬೇಕು. ರಾಹುಲ್ ಗಾಂಧಿ ಬೀದಿ ನಾಯಿಯಾಗಿದ್ದು, ಅದರಷ್ಟೂ ಬುದ್ಧಿ ಆತನಿಗೆ ಇಲ್ಲ. ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿದರೆ ಕಾಂಗ್ರೆಸ್ ಅನ್ನು ನಾಶ ಮಾಡಲು ಸಿದ್ಧರಿದ್ದೇವೆ. ಹಿಂದುತ್ವದ ವಿಚಾರ ಮಾತನಾಡಿದರೆ ಶಸ್ತ್ರಾಸ್ತ್ರ ಉಪಯೋಗಿಸಿ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ. ನಮ್ಮ ಮೇಲೆ ಪ್ರಕರಣ ದಾಖಲಿಸಿದ ಮಾತ್ರಕ್ಕೆ ಹೆದರಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ವೇದವ್ಯಾಸ್ ಕಾಮತ್, ಮಂಗಳೂರು ಸಂಸದ ಬ್ರಿಜೇಶ್ ಚೌಟ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಭರತ್ ಶೆಟ್ಟಿ ಭಾಷಣಕ್ಕೆ ಪ್ರಚೋದನೆ ನೀಡಿದ್ದಾರೆ‘ ಎಂದು ಆರೋಪಿಸಿ ಮಂಗಳೂರಿನ ಅನಿಲ್ ಕುಮಾರ್, ಕಾವೂರು ಠಾಣೆಗೆ ದೂರು ನೀಡಿದ್ದರು.

ದೂರನ್ನು ಆಧರಿಸಿ, ಭರತ್ ಶೆಟ್ಟಿ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 351 (3) (ಕ್ರಿಮಿನಲ್ ಬೆದರಿಕೆ), 353 (ಪ್ರಚೋದನೆ) ಅಡಿ ಎಫ್ಐಆರ್ ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT