ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಯಡಿಯೂರಪ್ಪ ಬಂಧನ ಕೋರಿ ರಿಟ್‌

Published : 12 ಜೂನ್ 2024, 15:36 IST
Last Updated : 12 ಜೂನ್ 2024, 15:36 IST
ಫಾಲೋ ಮಾಡಿ
Comments

ಬೆಂಗಳೂರು: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣದ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಲು ಬೆಂಗಳೂರು ನಗರ ಪೊಲೀಸ್ ಕಮಿಶನರ್‌ ಅವರಿಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗಿದೆ. ಈ ಸಂಬಂಧ ಸಂತ್ರಸ್ತ ಬಾಲಕಿಯ ಅಣ್ಣ ರಿಟ್‌ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಪ್ರಕರಣವೇನು?: ‘ನನ್ನ ಮಗಳ ಮೇಲೆ ಅತ್ಯಾಚಾರ ನಡೆದಿದೆ, ನನಗೆ ನ್ಯಾಯ ಕೊಡಿಸಿ‘ ಎಂದು ಬಿ.ಎಸ್.ಯಡಿಯೂರಪ್ಪ ಅವರ ಬಳಿ ಹೋಗಿದ್ದ 53 ವರ್ಷದ ಮಹಿಳೆಯೊಬ್ಬರು; ಯಡಿಯೂರಪ್ಪ ಅವರು ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 2024ರ ಮಾರ್ಚ್‌ 14ರಂದು ಸದಾಶಿವ ನಗರ ಪೊಲೀಸ್‌ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದರು.

ಇದರನ್ವಯ ಪೊಲೀಸರು ಪೋಕ್ಸೊ ಕಾಯ್ದೆ ಕಲಂ 8 ಮತ್ತು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 354(ಎ) ಅಡಿಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದರು. 

ದೂರಿನಲ್ಲಿ ಏನಿತ್ತು?: ‘ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಮೋಸ ಮಾಡಲಾಗಿದೆ. ನಮ್ಮ ಕೇಸನ್ನು ಎಸ್‌ಐಟಿಗೆ ವಹಿಸಿ ನಮಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಂಡೆವು. ಯಡಿಯೂರಪ್ಪ ಅವರು ನಮ್ಮೊಂದಿಗೆ ಸುಮಾರು 9 ನಿಮಿಷಗಳ ಕಾಲ ಮಾತನಾಡಿ ನಮಗೆ ಟೀ ಕುಡಿಸಿದರು. ನಮ್ಮ ಸಂಭಾಷಣೆಯ ನಡುವೆ ಯಡಿಯೂರಪ್ಪ ಅವರು ನನ್ನ 17 ವರ್ಷದ ಮಗಳ ಕೈ ಹಿಡಿದುಕೊಂಡು ಮಾತನಾಡಿಸುತ್ತಿದ್ದರು. ನನ್ನ ಮಗಳು ಅವರನ್ನು ತಾತ ಎನ್ನುತ್ತಾ ಮಾತನಾಡುತ್ತಿದ್ದಳು. ನಾನು ಅಪ್ಪಾಜಿ ಎಂದು ಸಂಭೋಧಿಸಿ ಮಾತನಾಡುತ್ತಿದ್ದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.  

‘ಕೆಲ ಸಮಯದ ಬಳಿಕ ಯಡಿಯೂರಪ್ಪ ಅವರು ನನ್ನ ಮಗಳನ್ನು ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡು ಸುಮಾರು 5 ನಿಮಿಷಗಳ ರೂಮಿನ ಒಳಗೆ ಇದ್ದರು. ಆ ಸಮಯದಲ್ಲಿ ಯಡಿಯೂರಪ್ಪ ಅವರು ನನ್ನ ಮಗಳು ಧರಿಸಿದ್ದ ಶರ್ಟ್‌ ಒಳಗೆ ಕೈ ಹಾಕಿ ಬಲಭಾಗದ ವಕ್ಷಸ್ಥಲವನ್ನು ಹಿಸುಕಿ ಲೈಂಗಿಕ ಕಿರುಕುಳ ನೀಡಿದ್ದು, ನನ್ನ ಮಗಳು ಅವರಿಂದ ತಪ್ಪಿಸಿಕೊಂಡು ಆಚೆ ಬರಲು ಯತ್ನಿಸಿದರೂ ಆಕೆಯನ್ನು ಬಿಡದೆ ಲಾಕ್‌ ಮಾಡಿಕೊಂಡಿದ್ದರು. ನಂತರ ಯಡಿಯೂರಪ್ಪ ಅವರೇ ಬಾಗಿಲನ್ನು ಮೆಲ್ಲಗೆ ತೆರೆದು ಹೊರಬಂದಾಗ ನನ್ನ ಮಗಳು ರೂಮಿನಿಂದ ಆಚೆ ಬಂದು ನನಗೆ ಎಲ್ಲಾ ವಿಚಾರ ತಿಳಿಸಿದಳು’ ಎಂದು ದೂರಿನಲ್ಲಿ ವಿವರಿಸಲಾಗಿದೆ.

’ನಾನು ಯಡಿಯೂರಪ್ಪ ಅವರಿಗೆ ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದ್ದಕ್ಕೆ, ಅವರು, ಆಕೆಗೆ ರೇಪ್‌ ಆಗಿದೆಯೊ ಇಲ್ಲವೊ ಎಂದು ಚೆಕ್‌ ಮಾಡಲು ಹಾಗೆ ಮಾಡಿದೆ ಎಂದು ಹೇಳಿ ತಕ್ಷಣವೇ ಕ್ಷಮೆ ಯಾಚಿಸುತ್ತಾ, ನಿಮಗೆ ಮೋಸ ಆಗಿರುವ ಬಗ್ಗೆ ನಾನು ಸಹಾಯ ಮಾಡುತ್ತೇನೆ ಎಂದರು. ಅದಕ್ಕೆ ನಾನು ಒಪ್ಪಲಿಲ್ಲ. ಆದರೂ ಯಡಿಯೂರಪ್ಪ ಅವರು ಈ ವಿಚಾರವನ್ನು ಹೊರಗೆ ಎಲ್ಲೂ ತಿಳಿಸಬಾರದು ಎಂದು ನಮ್ಮನ್ನು ತಡೆಯಲು ತುಂಬಾ ಪ್ರಯತ್ನಿಸಿರುತ್ತಾರೆ. ನನ್ನ ಮಗಳಿಗೆ ಆಗಿದ್ದ ಅನ್ಯಾಯದ ಬಗ್ಗೆ ನ್ಯಾಯ ದೊರಕಿಸುವಂತೆ ಕೇಳಲು ಹೋದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ವಿಶದವಾಗಿ ವಿವರಿಸಿದ್ದಾರೆ.

ರಿಟ್‌ ಅರ್ಜಿಯಲ್ಲಿ ಏನಿದೆ?: ದೂರು ನೀಡಿದ್ದ ಸಂತ್ರಸ್ತ ಬಾಲಕಿಯ ತಾಯಿ 2024ರ ಮೇ 27ರಂದು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಈಗ ಅವರ ಪುತ್ರ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ಯಡಿಯೂರಪ್ಪ ಅವರ ಮನೆಯಲ್ಲಿ 2024ರ ಫೆಬ್ರುವರಿ 2ರಂದು ಘಟನೆ ನಡೆದಿದೆ. ಮಾರ್ಚ್‌ 14ರಂದು ದೂರು ನೀಡಲಾಗಿದೆ. ಯಡಿಯೂರಪ್ಪ ಅವರ ಜೊತೆ ಮಾತನಾಡಿರುವ ವಿಡಿಯೊ ರೆಕಾರ್ಡಿಂಗ್ ಕೂಡಾ ಇದ್ದು ಅದರ ಪೆನ್‌ ಡ್ರೈವ್ ಅನ್ನು ಲಗತ್ತಿಸಲಾಗಿದೆ. ಸಂತ್ರಸ್ತ ಬಾಲಕಿ 2024ರ ಮಾರ್ಚ್‌ 14ರಂದು ಬೆಂಗಳೂರಿನ 25ನೇ ಎಸಿಎಂಎಂ ನ್ಯಾಯಾಲಯದಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆ–1973ರ ಕಲಂ 164 (5) ಅಡಿಯಲ್ಲಿ ಸ್ವಯಂ ಹೇಳಿಕೆ ದಾಖಲಿಸಿದ್ದಾಳೆ. ಈ ಕುರಿತಂತೆ, ಸಂತ್ರಸ್ತೆಯ ತಾಯಿ ಮಹಿಳಾ ಆಯೋಗದ ಅಧ್ಯಕ್ಷರಿಗೆ, ಮುಖ್ಯ ನ್ಯಾಯಮೂರ್ತಿಗಳಿಗೆ, ಎಡಿಜಿಪಿ ಹಾಗೂ ಇತರ ಪ್ರಮುಖರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಈತನಕ ಯಾವುದೇ ಪ್ರಗತಿಯಾಗಿಲ್ಲ’ ಎಂದು ವಿವರಿಸಲಾಗಿದೆ.

‘ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಈತನಕ ಪಂಚನಾಮೆ ಮಾಡಿಲ್ಲ. ಯಾವುದೇ ಸಾಕ್ಷ್ಯ ಸಂಗ್ರಹಿಸಿಲ್ಲ. ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ. ಪೋಕ್ಸೊ ಕಾಯ್ದೆಯಡಿ ನೋಟಿಸ್ ನೀಡಿಲ್ಲ. ಆದ್ದರಿಂದ, ಯಡಿಯೂರಪ್ಪ ಅವರನ್ನು ಬಂಧಿಸಿ, ವಿಚಾರಣೆ ನಡೆಸಿ ಸತ್ಯಾಂಶ ಬಯಲಿಗೆ ತರಬೇಕು. ಇದಕ್ಕಾಗಿ ಅಗತ್ಯವಿರುವ ಸಿಸಿಟಿವಿ ದೃಶ್ಯಗಳು, ಮೆಮೊರಿ ಕಾರ್ಡ್‌ ಮತ್ತು ಹಾರ್ಡ್‌ ಡಿಸ್ಕ್‌ ವಶಪಡಿಸಿಕೊಳ್ಳಬೇಕು. ತನಿಖೆಯನ್ನು ಚುರುಕುಗೊಳಿಸಿ ಒಂದು ತಿಂಗಳ ಒಳಗೆ ವರದಿ ಸಲ್ಲಿಸಲು ನಗರ ಪೊಲೀಸ್‌ ಆಯುಕ್ತರು ಮತ್ತು ಸಿಐಡಿ ಇನ್‌ಸ್ಪೆಕ್ಟರ್‌ಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ಎಸ್.ಬಾಲನ್‌ ವಕಾಲತ್ತು ವಹಿಸಿದ್ದಾರೆ.

ಅಶೋಕ್‌ ನಾಯಕ್‌ ವಿಶೇಷ ಪ್ರಾಸಿಕ್ಯೂಟರ್

ಅಶೋಕ್ ನಾಯಕ್

ಅಶೋಕ್ ನಾಯಕ್

ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ವಿಚಾರಣಾ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯಗಳಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ಹಾಜರಾಗಿ ವಾದ ಮಂಡಿಸಲು ಅಶೋಕ್‌ ನಾಯಕ್‌ ಅವರನ್ನು ವಿಶೇಷ ಸರ್ಕಾರಿ ವಕೀಲರನ್ನಾಗಿ ನೇಮಕ ಮಾಡಲಾಗಿದೆ.

ಈ ಕುರಿತಂತೆ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ. ಅಶೋಕ್‌ ನಾಯಕ್ ಅವರು ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲೂ ವಿಚಾರಣಾ ನ್ಯಾಯಾಲಯಗಳಲ್ಲಿ ಪ್ರಾಸಿಕ್ಯೂಷನ್‌ ಪರ ವಿಶೇಷ ಪ್ರಾಸಿಕ್ಯೂಟರ್‌ ಆಗಿ ವಾದ ಮಂಡಿಸುತ್ತಿದ್ದಾರೆ.

======

ಪ್ರಕರಣ ರದ್ದು ಕೋರಿ ಅರ್ಜಿ

ತಮ್ಮ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಪಡಿಸುವಂತೆ ಕೋರಿ ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

‘ನಾನು ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಿಲ್ಲ. ಫಿರ್ಯಾದುದಾರ ಮಹಿಳೆಗೆ ದೂರು ನೀಡುವುದೇ ಹವ್ಯಾಸ. ಎಫ್‌ಐಆರ್‌ ದಾಖಲಾದ ನಂತರ ಏಪ್ರಿಲ್‌ 12ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೇ ಧ್ವನಿ ಮಾದರಿ ಸಂಗ್ರಹಿಸಿದರು. ದೂರಿನಲ್ಲಿ ಅಪರಾಧದ ಅಂಶಗಳು ಇಲ್ಲದೇ ಇರುವುದರಿಂದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿದ್ದಾರೆ.

ಸಿಐಡಿ ವಿಚಾರಣೆಗೆ ಬಿಎಸ್‌ವೈ ಗೈರು

ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್​.ಯಡಿಯೂರಪ್ಪ ಅವರು ಬುಧವಾರ (ಜೂ.12) ಸಿಐಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಲಿಲ್ಲ.

ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಬುಧವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದರು. ಆದರೆ, ಜೂನ್‌ 17ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದ ಯಡಿಯೂರಪ್ಪ, ವಿಚಾರಣೆಗೆ ಗೈರಾಗಿದ್ದರು.

ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ವಿಚಾರಣೆ ಅಗತ್ಯವಿದ್ದು, ಬುಧವಾರ ಬೆಳಿಗ್ಗೆ 10.30ಕ್ಕೆ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT