ಹೊಸದಾಗಿ ನಿರ್ಮಿಸಿರುವ ಕೊಳಾರ ಮೇಲ್ಸೇತುವೆಯ ಬೀದಿ ದೀಪಗಳು ಹಾಳಾಗಿ ಒಂದು ಭಾಗದಲ್ಲಿ ಕತ್ತಲೆ ಆವರಿಸಿಕೊಂಡಿದೆ
ಹಾಳಾದ ಹೊಸ ರಸ್ತೆಯ ದೀಪಗಳು
ಬೀದರ್‌ನ ಕೊಳಾರ ರೇಷ್ಮೆ ಇಲಾಖೆಯ ಸಮೀಪ ಹೊಸ ಸೇತುವೆಯನ್ನು ನಿರ್ಮಿಸಿ ಬೈಪಾಸ್ ರಸ್ತೆ ನಿರ್ಮಿಸಿದಾಗ ಜನ ಬಹಳ ಖುಷಿಪಟ್ಟಿದ್ದರು. ಬೆಂಗಳೂರಿನಂಥ ಮಹಾನಗರಕ್ಕೆ ಸೀಮಿತವಾಗಿದ್ದ ಮೇಲ್ಸೇತುವೆಗಳು ಬೀದರ್‌ಗೂ ಬಂತಲ್ಲ ಎಂದು ಜನ ಸಂಭ್ರಮಿಸಿದ್ದರು. ಗುಣಮಟ್ಟದ ರಸ್ತೆ ಎರಡೂ ಕಡೆ ವಿದ್ಯುತ್ ದೀಪಗಳು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ ಒಂದೂವರೆ ವರ್ಷದಲ್ಲಿ ಆ ರಸ್ತೆಯ ಬೀದಿ ದೀಪಗಳು ಕೆಟ್ಟು ಹೋಗಿವೆ. ಇದರ ಪರಿಣಾಮ ಒಂದು ಭಾಗ ಅಂಧಕಾರದಲ್ಲಿ ಮುಳುಗಿದೆ.
ಗೆದ್ದ ನಂತರ ಸಿಗದ ನಗರಸಭೆ ಸದಸ್ಯರು
ಚುನಾವಣೆಯಲ್ಲಿ ಗೆದ್ದ ನಂತರ ಹೆಚ್ಚಿನ ನಗರಸಭೆ ಸದಸ್ಯರು ಅವರ ವಾರ್ಡ್‌ಗಳಿಗೆ ಭೇಟಿ ನೀಡುವುದಿಲ್ಲ. ಜನರ ಸಂಪರ್ಕಕ್ಕೂ ಸಿಗುವುದಿಲ್ಲ ಎಂಬ ದೂರುಗಳಿವೆ. ‘ಚುನಾವಣೆಗೂ ಮುನ್ನ ಸಾಕಷ್ಟು ಭರವಸೆಗಳನ್ನು ಕೊಡುತ್ತಾರೆ. ಗೆದ್ದ ನಂತರ ನೇರವಾಗಿಯೂ ಸಿಗುವುದಿಲ್ಲ. ಮೊಬೈಲ್‌ಗೂ ಸಿಗುವುದಿಲ್ಲ. ಹೀಗಾದರೆ ನಮ್ಮ ಸಮಸ್ಯೆ ಹೇಳಿಕೊಳ್ಳುವುದಾದರೂ ಯಾರಿಗೆ’ ಎಂದು ಮೈಲೂರಿನ ನಿವಾಸಿ ರಾಕೇಶ್ ಪ್ರಶ್ನಿಸಿದರು. ‘ನನಗೆ ಗೊತ್ತಿರುವಂತೆ ಬೀದರ್ ನಗರದಲ್ಲಿ 35 ವಾರ್ಡ್‌ಗಳಿವೆ. ಯಾವ ವಾರ್ಡ್‌ನಲ್ಲೂ ನಗರಸಭೆ ಸದಸ್ಯರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆಯಾದರೂ ವಾರ್ಡ್‌ನಲ್ಲಿ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಕೇಳಿಸಿಕೊಂಡು ಅವುಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದು ನಾನು ಗಮನಿಸಿಲ್ಲ. ಮಾಧ್ಯಮಗಳಲ್ಲೂ ಅದು ವರದಿಯಾಗಿಲ್ಲ. ಅವರು ಕಮಿಷನ್ ದಂದೆಯಿಂದ ಹೊರಬರಲು ಸಮಯ ಸಿಕ್ಕರಷ್ಟೇ ಜನರ ಗೋಳು ಕೇಳಿಸಿಕೊಳ್ಳುತ್ತಾರೆ. ಪಾಪ ಅವರಿಗೆಲ್ಲಿ ಸಮಯ’ ಎಂದು ವ್ಯಂಗ್ಯವಾಗಿ ಹೇಳಿದರು.
ನಗರಸಭೆ ಪೌರಾಯುಕ್ತರು ಏನಂತಾರೆ?
‘ನೌಬಾದ್ ಬಳಿ ರಸ್ತೆ ನಿರ್ಮಿಸುವ ವೇಳೆ ಬೀದಿ ದೀಪಗಳ ತಂತಿಗಳು ಕಟ್ ಆಗಿರುವುದರಿಂದ ಸಮಸ್ಯೆಯಾಗಿದೆ. ಕೆಲ ದಿನಗಳಲ್ಲಿ ಅದನ್ನು ಸರಿಪಡಿಸಲಾಗುವುದು. ಇತರೆ ಕಡೆಗಳಲ್ಲಿಯೂ ಸಮಸ್ಯೆಯಿದ್ದರೆ ಪರಿಶೀಲಿಸಿ ಸರಿಪಡಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ. ‘ಕೆಕೆಆರ್‌ಡಿಬಿ ಅನುದಾನದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಳವಡಿಸಿರುವಂತೆ ಚಿದ್ರಿ ರಸ್ತೆಯಲ್ಲೂ ಹೊಸ ಬೀದಿ ದೀಪಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದ್ದಾರೆ.
ಮಹಿಳೆಯರಲ್ಲಿ ಅಸುರಕ್ಷತೆಯ ಭಾವ
ಬೀದರ್ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳು ಹಾಳಾಗಿ ಕತ್ತಲೆ ಆವರಿಸಿಕೊಂಡಿರುವುದರಿಂದ ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆ ಮೂಡಿದೆ. ‘ಎಲ್ಲ ಸರಿಯಿದ್ದರೂ ಅಪರಾಧಗಳು ನಡೆಯುತ್ತಿವೆ. ಅದರಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಇನ್ನು ಮುಖ್ಯರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದಿದ್ದರೆ ಮಹಿಳೆಯರು ಹೊರಗೆ ಓಡಾಡುವುದು ಎಷ್ಟು ಸುರಕ್ಷಿತವಾಗಿರುತ್ತದೆ. ಮೊದಲೇ ಚಳಿಗಾಲ ಆರಂಭಗೊಂಡಿದ್ದು ದಟ್ಟ ಮಂಜು ಇರುತ್ತದೆ. ಬೀದಿ ದೀಪಗಳಿರದಿದ್ದರೆ ಸಂಪೂರ್ಣ ಅಂಧಕಾರ ಇರುತ್ತದೆ. ಸಂಬಂಧಿಸಿದವರು ಗಮನಹರಿಸಿ ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಬೇಕು’ ಎಂದು ನೌಬಾದ್ ನಿವಾಸಿ ಲಕ್ಷ್ಮಿ ಒತ್ತಾಯಿಸಿದರು.