ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವರ್ಕರ್ ಪ್ರತಿಮೆ ನಿರ್ಮಾಣ ಸಮಂಜಸವಲ್ಲ: ಬಿಜೆಪಿ ಶಾಸಕ ರಘುಪತಿ ಭಟ್‌

ಜಿಲ್ಲಾ ಖಜಾನೆ ಬಳಿಯ ಹಳೆ ತಾಲ್ಲೂಕು ಕಚೇರಿ ವೃತ್ತಕ್ಕೆ ವೀರ ಸಾವರ್ಕರ್ ಹೆಸರು: ಶಾಸಕ ರಘುಪತಿ ಭಟ್‌
Last Updated 23 ಆಗಸ್ಟ್ 2022, 13:56 IST
ಅಕ್ಷರ ಗಾತ್ರ

ಉಡುಪಿ: ನಗರದಲ್ಲಿ ವೀರ ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡುವುದು ಅಷ್ಟು ಸಮಂಜಸವಲ್ಲ ಎಂದು ಶಾಸಕ ರಘುಪತಿ ಭಟ್‌ ಅಭಿಪ್ರಾಯಪಟ್ಟರು.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡಿದರೆ ಮುಂದೆ ಅವಮಾನ ಮಾಡುವಂತಹ ಕಹಿ ಘಟನೆಗಳು ನಡೆಯಬಹುದು, ನಿರ್ವಹಣೆ ಕಷ್ಟವಾಗಬಹುದು. ಈ ಕಾರಣಕ್ಕೆ ಜಿಲ್ಲಾ ಖಜಾನೆ ಬಳಿಯ ಹಳೆಯ ತಾಲ್ಲೂಕು ಕಚೇರಿ ವೃತ್ತಕ್ಕೆ ವೀರ ಸಾವರ್ಕರ್ ಹೆಸರಿಡಲು ನಗರಸಭೆಗೆ ಪತ್ರ ಬರೆಯಲಾಗಿದೆ ಎಂದರು.

ಸಾವರ್ಕರ್ ವೃತ್ತ ಮಾತ್ರವಲ್ಲ, ಅಂಬೇಡ್ಕರ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ವೃತ್ತಕ್ಕೆ ಇಡಲು ನಿರ್ಧರಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಹಿಜಾಬ್ ವಿವಾದಕ್ಕೆ ಸಿಎಫ್‌ಐ ಕಾರಣ:ಹಿಜಾಬ್ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ನಿರಾಕರಿಸಲ್ಪಟ್ಟಿದ್ದರೆ ಅದಕ್ಕೆ ಕ್ಯಾಂಫಸ್‌ ಫ್ರಂಟ್ ಆಫ್ ಇಂಡಿಯಾ ನೇರ ಕಾರಣ. ಸಿಎಫ್‌ಐ ಹಿಜಾಬ್ ವಿವಾದ ಆರಂಭಿಸಿದ್ದರಿಂದ ಹಿಂದಿನಿಂದಲೂ ಹಿಜಾಬ್ ಧರಿಸಿಯೇ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೂ ಹಿಜಾಬ್ ಧರಿಸಲು ಅಡ್ಡಿಯಾಯಿತು ಎಂದು ದೂರಿದರು.

ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ 2 ದಶಕಗಳ ಹಿಂದಿನಿಂದಲೂ ವಸ್ತ್ರ ಸಂಹಿತೆ ಪಾಲನೆಯಾಗುತ್ತಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ತೆಗೆದಿಟ್ಟು ಪಾಠ ಕೇಳುತ್ತಿದ್ದರು. ಈ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನ್ಯಾಯಾಲಯಕ್ಕೆ ಕೊಟ್ಟಿದ್ದರಿಂದ ಪರವಾಗಿ ತೀರ್ಪು ಬಂತು ಎಂದು ರಘುಪತಿ ಭಟ್ ಹೇಳಿದರು.

ಸದ್ಯ ವಿವಾದ ಬಗೆಹರಿದಿದ್ದು ಎಲ್ಲ ವಿದ್ಯಾರ್ಥಿಗಳು ವಸ್ತ್ರ ಸಂಹಿತೆ ಪಾಲಿಸುತ್ತಿದ್ದಾರೆ. ಕಾಲೇಜಿಗೆ ಕಳೆದ ವರ್ಷಕ್ಕಿಂತ ಹೆಚ್ಚಿನ ದಾಖಲಾತಿಯಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT