ಗಡುವಿಗೆ ಒಪ್ಪದ ಸರ್ಕಾರ: ಫಲ ನೀಡದ ಸಭೆ
ಕೋಲ್ಕತ್ತ: ಆರ್.ಜಿ ಕರ್ ಪ್ರಕರಣದಿಂದ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಸೋಮವಾರ ಆಯೋಜಿಸಿದ್ದ ಪಶ್ಚಿಮ ಬಂಗಾಳದ 12 ವೈದ್ಯರಿದ್ದ ಸಂಘ ಹಾಗೂ ಮುಖ್ಯಕಾರ್ಯದರ್ಶಿ ಮನೋಜ್ ಪಂತ್ ಅವರ ನಡುವಿನ ನಿರ್ಣಾಯಕ ಸಭೆ ಯಾವುದೇ ಫಲ ನೀಡಲಿಲ್ಲ. ಬಿಕ್ಕಟ್ಟು ಶಮನಕ್ಕೆ ಗಡುವು ನಿಗದಿಗೊಳಿಸಲು ಸರ್ಕಾರ ಒಪ್ಪದ ಕಾರಣ ಸಮಸ್ಯೆ ಬಗೆಹರಿಯಲಿಲ್ಲ ಎಂದು ಮೂಲಗಳು ತಿಳಿಸಿವೆ. ಸಭೆಗೆ ಆರೋಗ್ಯ ಇಲಾಖೆ ಕಾರ್ಯದರ್ಶಿ ಎನ್.ಎಸ್ ನಿಗಮ್ ಹಾಜರಾಗದಿರುವ ಬಗ್ಗೆ ವೈದ್ಯ ಪ್ರತಿನಿಧಿಗಳು ಪ್ರಶ್ನಿಸಿದರು. ಅಲ್ಲದೇ ಉಪವಾಸ ನಿರತ ಕಿರಿಯ ವೈದ್ಯರನ್ನು ನೇರವಾಗಿ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸುವಂತೆಯೂ ಪಂತ್ ಅವರನ್ನು ವೈದ್ಯರು ಒತ್ತಾಯಿಸಿದರು. ಸರ್ಕಾರಿ ಮೂಲಗಳ ಪ್ರಕಾರ ನಿಗಮ್ ಅವರು ಆರ್.ಜಿ ಕರ್ ವಿಷಯ ಕುರಿತ ಸುಪ್ರೀಂ ಕೋರ್ಟ್ ಕಲಾಪಕ್ಕೆ ಹಾಜರಾಗಲು ದೆಹಲಿಗೆ ತೆರಳಿದ್ದರು. ‘ಸಭೆಯು ಫಲಪ್ರದವಾಗಲಿಲ್ಲ. ಬಿಕ್ಕಟ್ಟು ಶಮನಕ್ಕೆ ಗಡುವು ನಿಗದಿಗೊಳಿಸಲು ಪಂತ್ ಒಪ್ಪಲಿಲ್ಲ’ ಎಂದು ಪಶ್ಚಿಮ ಬಂಗಾಳ ವೈದ್ಯರ ವೇದಿಕೆಯ ಅಧ್ಯಕ್ಷ ಡಾ.ಕೌಶಿಕ್ ಚಾಕಿ ತಿಳಿಸಿದ್ದಾರೆ. ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂತ್ ಎರಡೂವರೆ ತಾಸು ನಾವು ಚರ್ಚಿಸಿದ್ದೇವೆ. ವೈದ್ಯರ 10 ಬೇಡಿಕೆಗಳಲ್ಲಿ ಈಗಾಗಲೇ ಏಳನ್ನು ಈಡೇರಿಸಲಾಗಿದೆ. ಉಳಿದ ಮೂರರಲ್ಲಿ ಗಡುವು ನಿಗದಿ ಕುರಿತ ಬೇಡಿಕೆ ಇದೆ. ಇದು ಆಡಳಿತಾತ್ಮಕ ನಿರ್ಧಾರವಾಗಿರುವುದರಿಂದ ಈ ಕ್ಷಣದಲ್ಲಿ ನಾವು ಗಡುವು ನಿಗದಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕಿರಿಯ ವೈದ್ಯರ ಉಪವಾಸ ನಿರತ ಹೋರಾಟವನ್ನು ಕೊನೆಗೊಳಿಸಲು ಅವರ ಮನವೊಲಿಸುವಂತೆ ವೈದ್ಯರ ವೇದಿಕೆಯನ್ನು ಆಗ್ರಹಿಸಲಾಗಿದೆ ಎಂದು ಸಹ ಅವರು ತಿಳಿಸಿದರು.