ನವದೆಹಲಿ: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆ ‘ಭಯಾನಕ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕೆ ಹಾಗೂ ಸರ್ಕಾರಿ ಸ್ವಾಮ್ಯದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಿಡಿಗೇಡಿಗಳ ವಿಧ್ವಂಸಕ ಕೃತ್ಯವನ್ನು ತಡೆಯದೆ ಇದ್ದುದಕ್ಕೆ ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರ ಮೇಲೆ ‘ಸರ್ಕಾರದ ಶಕ್ತಿಯನ್ನು ತೋರಿಸಲು ಮುಂದಾಗಬೇಡಿ’, ಅವರ ಜೊತೆ ಬಹಳ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋರ್ಟ್ ಮಂಗಳವಾರ ಕಿವಿಮಾತು ಹೇಳಿದೆ.

ವೈದ್ಯರು ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವ ಇತರ ವೃತ್ತಿಪರರ ಸುರಕ್ಷತೆಗಾಗಿ ನಿಯಮಗಳನ್ನು ರೂಪಿಸಲು 10 ಮಂದಿ ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ಕೂಡ ಅದು ರಚಿಸಿದೆ. ಈ ಸಮಿತಿಯು ಮೂರು ವಾರಗಳಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಬೇಕಿದೆ. ಅಂತಿಮ ವರದಿ ಸಲ್ಲಿಕೆಗೆ ಎರಡು ತಿಂಗಳ ಗಡುವು ನೀಡಲಾಗಿದೆ.

ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಈ ತೀರ್ಮಾನ ಪ್ರಕಟಿಸಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿದ್ದಾರೆ.

ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆಯನ್ನು ಈ ಪೀಠವು ನಡೆಸುತ್ತಿದೆ.

ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ತನಿಖೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದು ಸಿಬಿಐಗೆ, ವಿಧ್ವಂಸಕ ಕೃತ್ಯ ನಡೆಸಿದವರ ವಿರುದ್ಧ ಕೈಗೊಂಡ ಕ್ರಮದ ಕುರಿತು ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪೀಠವು ಸೂಚನೆ ನೀಡಿದೆ.

ಸಂತ್ರಸ್ತೆಯ ಹೆಸರು, ಆಕೆಯ ಭಾವಚಿತ್ರ, ಆಕೆಯ ಶವದ ದೃಶ್ಯಗಳು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದರ ಬಗ್ಗೆ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಆಸ್ಪತ್ರೆಯಲ್ಲಿ ನಡೆದ ಗುಂಪು ಹಿಂಸಾಚಾರ ಹಾಗೂ ಕೋಲ್ಕತ್ತ ಪೊಲೀಸರು ಆ ಸ್ಥಳದಿಂದ ಓಡಿಹೋಗಿದ್ದರು ಎಂಬ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ವೈದ್ಯರು ಅಲ್ಲಿ ಮತ್ತೆ ಕೆಲಸ ಮಾಡಲು ಸಾಧ್ಯವಾಗುವಂತೆ ಭದ್ರತೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್ಎಫ್) ನಿಯೋಜಿಸುವಂತೆ ಸೂಚಿಸಿದೆ.

‘ಕ್ರೂರವಾದ ಕೃತ್ಯ ಹಾಗೂ ಅದಕ್ಕೆ ಪ್ರತಿಭಟನೆಗಳು ನಡೆದಾಗ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಎದುರಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರವು ಆಡಳಿತ ಯಂತ್ರವನ್ನು ನಿಯೋಜಿಸಬೇಕಿತ್ತು. ಆಸ್ಪತ್ರೆಯ ಆವರಣದಲ್ಲಿ ನಡೆದ ಅಪರಾಧ ಕೃತ್ಯದ ತನಿಖೆಯು ನಡೆಯುತ್ತಿದ್ದ ಕಾರಣ ಹಾಗೆ ಮಾಡುವುದು ತೀರಾ ಅಗತ್ಯವಾಗಿತ್ತು. ಆದರೆ, ಆಸ್ಪತ್ರೆಯ ಆವರಣದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಿಭಾಯಿಸಲು ಸರ್ಕಾರ ಸಜ್ಜಾಗಿಲ್ಲದೆ ಇದ್ದುದು ಹೇಗೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ’ ಎಂದು ಕೋರ್ಟ್ ಹೇಳಿದೆ.

ಕೋರ್ಟ್ ಮಾತುಗಳನ್ನು ಅಲ್ಲಗಳೆದ ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್, ಕೋಲ್ಕತ್ತ ಪೊಲೀಸರು ಅಗತ್ಯವಾಗಿದ್ದ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದರು ಎಂದು ತಿಳಿಸಿದರು. ‘ಮಹಜರು ನಡೆಸಿ, ಅಸಹಜ ಸಾವು ಪ್ರಕರಣವನ್ನು ತಕ್ಷಣವೇ ದಾಖಲಿಸಿಕೊಳ್ಳಲಾಯಿತು’ ಎಂದು ಸಿಬಲ್ ವಿವರಿಸಿದರು.

ಏಳು ಸಾವಿರ ಜನರು ಇದ್ದ ಗುಂಪೊಂದು ಆಸ್ಪತ್ರೆ ಬಳಿ ಸೇರಿತ್ತು. ಪೊಲೀಸರಿಗೆ ಮಾಹಿತಿ ಇಲ್ಲದೆ, ಅವರ ಒಪ್ಪಿಗೆ ಇಲ್ಲದೆ ಹೀಗಾಗಲು ಸಾಧ್ಯವೇ ಇಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೂರಿದರು. ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣವಾಗಿ ಕುಸಿದುಬಿದ್ದಿದೆ’ ಎಂದೂ ಅವರು ಹೇಳಿದರು.

ನ್ಯಾಯಪೀಠ ಹೇಳಿದ ಮಾತು

ಕೋಲ್ಕತ್ತದಲ್ಲಿ ನಡೆದಿರುವುದು ಭಯಾನಕವಾದ ಹತ್ಯೆ; ಅದು ವೈದ್ಯರ ಸುರಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತಿದೆ

ದೇಶದಾದ್ಯಂತ, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ, ಸುರಕ್ಷಾ ಕ್ರಮಗಳು ಇಲ್ಲ. ಇದು ಕಳವಳಕಾರಿ

ಪುರುಷ, ಮಹಿಳಾ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯಗಳು ಇಲ್ಲ

ಮಹಿಳೆಯರು ತಾವು ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷಿತ ವಾಗಿರಲು ಸಾಧ್ಯವಿಲ್ಲ ಎಂದಾದರೆ ನಾವು ಅವರಿಗೆ ಸಮಾನತೆಯನ್ನು ನಿರಾಕರಿಸುತ್ತಿದ್ದೇವೆ ಎಂದೇ ಅರ್ಥ

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಾಯ ದಾಖಲಿಸುತ್ತಿರುವವರ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರವು ಕಠಿಣ ಕ್ರಮ ಜರುಗಿಸಬಾರದು

ಪ್ರತಿಭಟನೆಯಲ್ಲಿ ತೊಡಗಿರುವ ವೈದ್ಯರು ಕರ್ತವ್ಯಕ್ಕೆ ಮರಳಬೇಕು. ಅವರ ಸುರಕ್ಷತೆಯು ಬಹಳ ಮಹತ್ವದ್ದು

ಹಿಂದಿನ ಪ್ರಾಂಶುಪಾಲರ ನಡೆಗೆ ಆಕ್ರೋಶ

ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದಕ್ಕಾಗಿ, ಆಕೆಯ ಪಾಲಕರಿಗೆ ಮೃತದೇಹವನ್ನು ನೋಡಲು ಹಲವು ಗಂಟೆ ಬಿಡದೆ ಇದ್ದುದಕ್ಕಾಗಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಸಂದೀಪ್ ಘೋಷ್ ಅವರನ್ನು ಪೀಠವು ತೀವ್ರವಾಗಿ ಟೀಕಿಸಿದೆ.

‘ಪ್ರಾಂಶುಪಾಲರು ಏನು ಮಾಡುತ್ತಿದ್ದರು? ಇದನ್ನು ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ಹಾಗೂ ಎಫ್ಐಆರ್ ದಾಖಲು ಮಾಡದೆ ಇದ್ದುದು ಏಕೆ? ಅಂತ್ಯಸಂಸ್ಕಾರ ನಡೆಸಲು ಮೃತದೇಹವನ್ನು ತಡ ರಾತ್ರಿಯಲ್ಲಿ ಹಸ್ತಾಂತರಿಸಲಾಯಿತು. ಮಾರನೇ ದಿನ ವೈದ್ಯರು ಪ್ರತಿಭಟನೆಗೆ ಮುಂದಾದರು, ಆಸ್ಪತ್ರೆಯ ಬಳಿ ಉದ್ರಿಕ್ತರು ಗುಂಪುಗೂಡಿದ್ದರು. ಆಸ್ಪತ್ರೆಯ ಮೇಲೆ ದಾಳಿ ನಡೆಯಿತು, ಪ್ರಮುಖವಾದ ಪರಿಕರ ಗಳನ್ನು ಹಾಳುಮಾಡಲಾಯಿತು’ ಎಂದು ಪೀಠವು ಹೇಳಿತು.

ಪೊಲೀಸರು ಏನು ಮಾಡುತ್ತಿದ್ದರು?

ಗಂಭೀರವಾದ ಅಪರಾಧ ನಡೆದಿದೆ, ಅಪರಾಧ ನಡೆದ ಸ್ಥಳವು ಆಸ್ಪತ್ರೆಯ ಆವರಣದಲ್ಲಿದೆ. ಅಪರಾಧ ನಡೆದ ಸ್ಥಳಕ್ಕೆ ಪೊಲೀಸರು ರಕ್ಷಣೆ ಒದಗಿಸಬೇಕಿತ್ತು. ವಿಧ್ವಂಸಕ ಕೃತ್ಯ ನಡೆಸುವವರು ಆಸ್ಪತ್ರೆಯನ್ನು ಪ್ರವೇಶಿಸಲು ಪೊಲೀಸರು ಅವಕಾಶ ನೀಡಿದ್ದು ಹೇಗೆ? ಪ್ರಾಂಶುಪಾಲರು ರಾಜೀನಾಮೆ ನೀಡಿದ ನಂತರ ಅವರನ್ನು ಇನ್ನೊಂದು ಆಸ್ಪತ್ರೆಗೆ ಕಳುಹಿಸಲಾಗಿದೆ. ಅವರ ನಡತೆಯ ಬಗ್ಗೆಯೇ ಪರಿಶೀಲನೆ ನಡೆಯುತ್ತಿರುವಾಗ, ಅವರನ್ನು ಇನ್ನೊಂದು ಸಂಸ್ಥೆಗೆ ತಕ್ಷಣ ನೇಮಕ ಮಾಡಿದ್ದು ಹೇಗೆ’ ಎಂದು ಪೀಠ ಪ್ರಶ್ನಿಸಿತು.

‘ದಯವಿಟ್ಟು ವಿಶ್ವಾಸ ಇರಿಸಿ’

ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಪ್ರತಿಭಟನೆಯನ್ನು ಕೈಬಿಟ್ಟು ಕೆಲಸಕ್ಕೆ ಮರಳಬೇಕು ಎಂಬ ಮನವಿ ಮಾಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ‘ದಯವಿಟ್ಟು ನಮ್ಮ ಮೇಲೆ ವಿಶ್ವಾಸ ಇರಿಸಿ’ ಎಂದು ಹೇಳಿದೆ.

‘ವೈದ್ಯರ ರಕ್ಷಣೆ ಹಾಗೂ ಸುರಕ್ಷತೆಯು ದೇಶದ ಪಾಲಿಗೆ ಅತ್ಯಂತ ಮುಖ್ಯವಾದ ಸಂಗತಿ ಎಂಬುದನ್ನು ಖಾತರಿಪಡಿಸಲು ನಾವು ಇಲ್ಲಿದ್ದೇವೆ. ದಯವಿಟ್ಟು ನಮ್ಮ ಮೇಲೆ ವಿಶ್ವಾಸ ಇರಿಸಿ. ಹೀಗಾಗಿಯೇ ನಾವು ಈ ವಿಚಾರವನ್ನು ಹೈಕೋರ್ಟ್ಗೇ ಬಿಟ್ಟುಬಿಡುವ ಕೆಲಸ ಮಾಡಿಲ್ಲ’ ಎಂದು ಪೀಠವು ಹೇಳಿದೆ.

ಕಾರ್ಯಪಡೆಯಲ್ಲಿ ಇರುವವರು

ಸರ್ಜನ್ ವೈಸ್ ಅಡ್ಮಿರಲ್ ಆರತಿ ಸರೀನ್, ಡಾ.ಡಿ. ನಾಗೇಶ್ವರ ರೆಡ್ಡಿ, ಡಾ.ಎಂ. ಶ್ರೀನಿವಾಸ್, ಡಾ. ಪ್ರತಿಮಾ ಮೂರ್ತಿ, ಡಾ. ಗೋವರ್ಧನ ದತ್ ಪುರಿ, ಡಾ. ಸೌಮಿತ್ರಾ ರಾವತ್, ಪ್ರೊ. ಅನಿತಾ ಸಕ್ಸೇನಾ, ಪ್ರೊ. ಪಲ್ಲವಿ ಸಪ್ರೆ, ಡಾ. ಪದ್ಮಾ ಶ್ರೀವಾಸ್ತವ

ಕೇಂದ್ರದ ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ, ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷ ಪದನಿಮಿತ್ತ ಸದಸ್ಯರಾಗಿರುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.