ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ ರೈಲು ಅಪಘಾತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ, 31 ಮಂದಿಗೆ ಗಾಯ

ಮೃತರ ಕುಟುಂಬದ ಸದಸ್ಯರಿಗೆ ₹10 ಲಕ್ಷ ಪರಿಹಾರ
Published : 19 ಜುಲೈ 2024, 7:34 IST
Last Updated : 19 ಜುಲೈ 2024, 7:34 IST
ಫಾಲೋ ಮಾಡಿ
Comments

ಗೊಂಡಾ (ಉತ್ತರಪ್ರದೇಶ): ‘ಗೊಂಡಾ ಜಿಲ್ಲೆಯಲ್ಲಿ ಚಂಡೀಗಢ– ದಿಬ್ರೂಗಢ ಎಕ್ಸ್‌ಪ್ರೆಸ್‌ ರೈಲು ಗುರುವಾರ ಹಳಿ ತಪ್ಪಿದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ. ಗಾಯಗೊಂಡವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

‘ಗೊಂಡಾ– ಗೋರಖಪುರ ಸೆಕ್ಷನ್‌ನ ಝಿಲಾಯಿ ರೈಲು ನಿಲ್ದಾಣ ಸಮೀಪ ಸಂಭವಿಸಿದ ಅಪಘಾತದಲ್ಲಿ ಇದುವರೆಗೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. 31 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ’ ಎಂದು ಗೊಂಡ ಜಿಲ್ಲಾಧಿಕಾರಿ ನೇಹಾ ಶರ್ಮಾ ತಿಳಿಸಿದರು.

‘ಮೃತರನ್ನು ರಾಹುಲ್‌ (38) ಸರೋಜ್‌ ಕುಮಾರ್‌ ಸಿಂಗ್‌ (31) ಎಂದು ಗುರುತಿಸಿದ್ದು, ಇನ್ನಿಬ್ಬರ ಗುರುತು ಪತ್ತೆಯಾಗಬೇಕಿದೆ. ನಾಲ್ಕು ಮೃತದೇಹಗಳನ್ನು ಜಿಲ್ಲಾಕೇಂದ್ರಕ್ಕೆ ತರಲಾಗಿದೆ. ಸಂಬಂಧಿಕರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಅಪಘಾತ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ’ ಎಂದರು.

‘ಚಂಡೀಗಢ– ದಿಬ್ರೂಗಢ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ 600 ಮಂದಿ ಪ್ರಯಾಣಿಕರನ್ನು ಗುರುವಾರ ರಾತ್ರಿಯೇ ವಿಶೇಷ ರೈಲಿನ ಮೂಲಕ ಅಸ್ಸಾಂಗೆ ಕಳುಹಿಸಿಕೊಡಲಾಯಿತು. ಪ್ರಯಾಣಿಕರ ಜೊತೆ ಮಾತುಕತೆ ನಡೆಸಿದ ವೇಳೆ ಸಹ ಪ್ರಯಾಣಿಕರು ನಾಪತ್ತೆಯಾಗಿರುವ ಕುರಿತಂತೆ ಯಾರೂ ಕೂಡ ದೂರು ನೀಡಿಲ್ಲ. ಹಳಿ ಸರಿಪಡಿಸುವ ಕೆಲಸ ನಡೆದಿದ್ದು, ಶೀಘ್ರದಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ’ ಎಂದು ನೇಹಾ ಶರ್ಮಾ ತಿಳಿಸಿದರು.

ತಂತ್ರಜ್ಞರ ತಂಡ ಭೇಟಿ: ರೈಲ್ವೆ ತಂತ್ರಜ್ಞರ ತಂಡವು ಗುರುವಾರವೇ ಸ್ಥಳಕ್ಕೆ ತಲುಪಿದ್ದು, ಅಪಘಾತ ನಡೆದ ಸ್ಥಳದಲ್ಲಿ ಛಾಯಾಚಿತ್ರಗಳನ್ನು ತೆಗೆದು, ಮಾದರಿ ಸಂಗ್ರಹಿಸಿದೆ. ಟಾರ್ಚ್‌ಲೈಟ್‌, ಜನರೇಟರ್‌ ಬಳಸಿಕೊಂಡು ಇಲಾಖೆಯ 800 ಮಂದಿ ಕಾರ್ಮಿಕರು ಹಳಿ ರಿಪೇರಿ ಕಾರ್ಯ ಆರಂಭಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

‘ಈಶಾನ್ಯ ರೈಲ್ವೆ ವಿಭಾಗದ ಜನರಲ್‌ ಮ್ಯಾನೇಜರ್‌ ಸೌಮ್ಯಾ ಮಾಥುರ್‌ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಪರಾಮರ್ಶಿಸುತ್ತಿದ್ದಾರೆ. ಜಖಂಗೊಂಡ ಬೋಗಿಗಳನ್ನು ಗ್ಯಾಸ್‌ ಕಟ್ಟರ್‌ ಬಳಸಿ ಬೇರ್ಪಡಿಸಲಾಗಿದೆ. ಮಗುಚಿಬಿದ್ದ ಬೋಗಿಯನ್ನು ಜೆಸಿಬಿ ಬಳಸಿ, ಮತ್ತೆ ಹಳಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಗೊಂಡಾ– ಗೋರಖ್‌ಪುರ ರೈಲುಮಾರ್ಗ ಸಂಪೂರ್ಣ ವಿದ್ಯುದೀಕರಣ ಹೊಂದಿದೆ. ಅಪಘಾತದಿಂದ ಹಾನಿಯಾದ ವಿದ್ಯುತ್‌ ಮಾರ್ಗವನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.

ಅಪಘಾತಕ್ಕೆ ಸಂಬಂಧಿಸಿದಂತೆ, ‘ರೈಲ್ವೆ ಸುರಕ್ಷತಾ ಆಯೋಗ’ದ ಜೊತೆಗೆ ರೈಲ್ವೆ ಇಲಾಖೆಯೂ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

₹10 ಲಕ್ಷ ಪರಿಹಾರ: ಅಪಘಾತದಲ್ಲಿ ಮೃ‍ತಪಟ್ಟ ಕುಟುಂಬದ ಸದಸ್ಯರಿಗೆ ರೈಲ್ವೆ ಇಲಾಖೆಯು ₹10 ಲಕ್ಷ ಪರಿಹಾರ, ಗಂಭೀರ ಗಾಯಗೊಂಡವರಿಗೆ ₹2.5 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ ₹50 ಸಾವಿರ ಪರಿಹಾರ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT