ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾಮಿ ವಿವೇಕಾನಂದರ ಬೇಲೂರು ಮಠ: ಗಾಲಿಕುರ್ಚಿ ಬಳಸುತ್ತಿದ್ದ ಅಂಗವಿಕಲ ಬಾಲಕಿಗೆ ಮಠದೊಳಗೆ ಪ್ರವೇಶ ನಿರಾಕರಣೆ !

ಫಾಲೋ ಮಾಡಿ
Comments

ಕೋಲ್ಕತ್ತಾ: ‘ಮಗಳು ಗಾಲಿಕುರ್ಚಿ ಬಳಸುತ್ತಾಳೆ ಎಂಬ ಕಾರಣಕ್ಕೆ ಸ್ವಾಮಿ ವಿವೇಕಾನಂದರ ಬೇಲೂರು ಮಠದೊಳಗೆ ನಮ್ಮನ್ನು ಬಿಡಲಿಲ್ಲ’ ಎಂದು 43 ವರ್ಷದ ಸೈಕತ್‌ ಬರ್ಮನ್‌ ಆರೋಪಿಸಿದ್ದಾರೆ.

ಬೇಲೂರು ಮಠದ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಮತ್ತು ಸನ್ಯಾಸಿಗಳು ನಡೆದುಕೊಂಡ ರೀತಿ ಬಗ್ಗೆ ಬರ್ಮನ್‌ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲಿ ನಡೆದ ಘಟನೆಯನ್ನು ನೋವಿನಿಂದ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಹಫಿಂಗ್ಟನ್‌ ಪೋಸ್ಟ್‌ ಸುದ್ದಿತಾಣ ವರದಿ ಮಾಡಿದೆ.

ಕಳೆದ ಶನಿವಾರ ಆಗಸ್ಟ್‌ 5ರ ಸಂಜೆ ಈ ಘಟನೆ ನಡೆದಿದೆ ಎಂದು ಬರ್ಮನ್‌ ತಿಳಿಸಿದ್ದಾರೆ.

‘ಶನಿವಾರ ರಜಾ ದಿನವಾದ್ದರಿಂದ ಅಂಗವಿಕಲೆಯಾಗಿರುವ ನನ್ನ ಹಿರಿಯ ಮಗಳನ್ನು ಗಾಲಿಕುರ್ಚಿಯಲ್ಲಿ ಪ್ರಸಿದ್ದ ಬೇಲೂರು ಮಠಕ್ಕೆ ಕರೆದುಕೊಂಡು ಬಂದಿದ್ದೆ. ಅಂದು ಸಂಜೆ ಮಠದಲ್ಲಿ ‘ಸಂದ್ಯಾ ಆರತಿ’ ಧಾರ್ಮಿಕ ಕಾರ್ಯಕ್ರಮ ಇದ್ದುದರಿಂದ ದೇವರ ದರ್ಶನ ಮಾಡಿಕೊಂಡು, ಹಿರಿಯ ಸ್ವಾಮೀಜಿಗಳ ಆರ್ಶಿರ್ವಾದ ಪಡೆಯಲು ಅಂಗವಿಕಲ ಮಗಳೊಂದಿಗೆ ಮಠಕ್ಕೆ ತೆರಳಿದ್ದೆ’

‘ಈ ವೇಳೆ ಮಠದ ಆವರಣದಲ್ಲಿರುವ ಭದ್ರತಾ ಸಿಬ್ಬಂದಿ ನನ್ನನ್ನು ತಡೆದು ನಿಮ್ಮ ಮಗಳು ಗಾಲಿಕುರ್ಚಿ ಬಳಸುವುದರಿಂದ ಮಠದ ಒಳಗೆ ಬಿಡಲು ಸಾಧ್ಯವಿಲ್ಲ ಎಂದರು. ಆಗ ನಾನು ಅವರಲ್ಲಿ ಪರಿಪರಿಯಾಗಿ ಬೇಡಿಕೊಂಡರೂ ಅವರು ಪ್ರವೇಶ ನಿರಾಕರಿಸಿದರು. ನಂತರ ಮಠದ ಆಡಳಿತಾಧಿಕಾರಿಗಳು ಮತ್ತು ಹಿರಿಯ ಸನ್ಯಾಸಿಗಳನ್ನು ಸಂಪರ್ಕಿಸಿದರು ಅವರೂ ಸಹ ನೆರವಿಗೆ ಬಾರದೆ ಮೌನವಾಗಿದ್ದರು. ಕೊನೆಗೂ ಮಠದ ಒಳಗೆ ಹೋಗಲು ನಮಗೆ ಅವಕಾಶವನ್ನೇ ಮಾಡಿಕೊಡಲಿಲ್ಲ’ ಎಂದು ಬರ್ಮನ್‌ ನೋವಿನಿಂದ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ. 

‘ಮಗಳನ್ನು ಹೊರಗಡೆ ಬಿಟ್ಟು ಮಠದ ಒಳಗೆ ಹೋಗಿ ಹಿರಿಯ ಸ್ವಾಮೀಜಿಯೊಬ್ಬರನ್ನು ಭೇಟಿ ಮಾಡಿ, ‘ಯಾಕೆ ನೀವು ಗಾಲಿ ಕುರ್ಚಿಯನ್ನು ಮಠದ ಒಳಗೆ ಬಿಡುವುದಿಲ್ಲ’ ಎಂದು ಕೇಳಿದೆ. ಅದಕ್ಕೆ ಅವರು, ‘ಗಾಲಿಕುರ್ಚಿಯು ರಸ್ತೆಯಲ್ಲಿ ತಿರುಗಾಡಿರುತ್ತದೆ. ಅದರ ಗಾಲಿಗಳಿಗೆ ಕೊಳಕು, ಗಲೀಜು ಮೆತ್ತಿಕೊಂಡಿರುತ್ತದೆ. ಅದನ್ನು ಪವಿತ್ರ ಸ್ಥಳವಾದ ಮಠದೊಳಗೆ ಬಿಟ್ಟುಕೊಳ್ಳುವುದು ಹೇಗೆ?’ ಎಂದು ಪ್ರಶ್ನಿಸಿದರು. ಆಗ ನಾನು ಮೌನವಾಗಿ ಮಠದಿಂದ ಹೊರ ಬಂದೆ. ಮಠದ ಹೊರ ಆವರಣದಿಂದ ಮನೆಗೆ ಹೋಗುವಾಗ ನನ್ನ ಮಗಳ ಕಣ್ಣುಗಳಿಂದ ನೀರು ಬರುತ್ತಿತ್ತು’ ಎಂದು ಬರ್ಮನ್‌ ಬರೆದುಕೊಂಡಿದ್ದಾರೆ.

ಬೇಲೂರು ಮಠದ ಭದ್ರತಾ ಸಿಬ್ಬಂದಿ, ಆಡಳಿತಾಧಿಕಾರಿಗಳು ಮತ್ತು ಹಿರಿಯ ಸನ್ಯಾಸಿಗಳ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT