ಬೆಂಗಳೂರು: ‘ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ, ನಾನೇ ಮುಖ್ಯಮಂತ್ರಿಯಾಗಿರುತ್ತೇನೆ’ ಎಂಬ ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್ನಲ್ಲಿ ಕಿಚ್ಚು ಹೊತ್ತಿಸಿದೆ.

ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಗಳ ಸಂಖ್ಯೆ ಹೆಚ್ಚತೊಡಗಿದೆ. ಕೆಲವರು ಸಿದ್ದರಾಮಯ್ಯ ಪರ ಮಾತನಾಡಿದ್ದರೆ, ಕೆಲವು ಶಾಸಕರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರ ವಕಾಲತ್ತು ವಹಿಸಿದ್ದಾರೆ. ಭಾರಿ ಬಹುಮತ ಪಡೆದ ಕಾಂಗ್ರೆಸ್ ಅಧಿಕಾರಕ್ಕೇರಿ ಆರು ತಿಂಗಳು ಪೂರ್ಣಗೊಳ್ಳುವುದರೊಳಗೆ, ಭಿನ್ನಮತ–ಅಪಸ್ವರದ ಬೇಗುದಿ ಪಕ್ಷದ ಒಡಲನ್ನು ಸುಡಲಾರಂಭಿಸಿದಂತಹ ವಾತಾವರಣ ಕಾಣಿಸಿದೆ.

‘ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಷಯ ಕುರಿತು ಸಚಿವರೂ ಸೇರಿ ಯಾರಾದರೂ ಬಾಯ್ತೆರೆದರೆ ಸಚಿವ ಸ್ಥಾನದಿಂದ ಕೆಳಗಿಳಿಸುವುದೂ ಸೇರಿದಂತೆ ಶಿಸ್ತು ಕ್ರಮ ಖಚಿತ’ ಎಂಬ ಕಾಂಗ್ರೆಸ್ ಹೈಕಮಾಂಡ್ನ ಎಚ್ಚರಿಕೆಯನ್ನು ಯಾರೂ ಲೆಕ್ಕಕ್ಕೇ ಇಟ್ಟಿಲ್ಲ. ಶಿಸ್ತುಕ್ರಮದ ಎಚ್ಚರಿಕೆ ಸಚಿವರು, ಶಾಸಕರನ್ನು ಬಡಿದೆಬ್ಬಿಸಿದ್ದು, ತಮ್ಮ ನಾಯಕರ ಪರ ಧ್ವನಿಯೆತ್ತಲು ಪ್ರೇರಣೆ ನೀಡಿದಂತಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲೇ ಹರಿದಾಡುತ್ತಿವೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ತನಕ ಅವರ ಪರ ನಾನು, ಪರಮೇಶ್ವರ ಇರುತ್ತೇವೆ. ಅವರ ನಂತರ ಪರಮೇಶ್ವರಗೆ ಸಿಗಬೇಕೇ ವಿನಃ ಬೇರೆಯವರಿಗೆ ಆ ಸ್ಥಾನ ನೀಡಬಾರದು.
ಕೆ.ಎನ್. ರಾಜಣ್ಣ, ಸಹಕಾರ ಸಚಿವ

ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ, ಪಕ್ಷದೊಳಗೆ ದೊಡ್ಡ ಸದ್ದು ಮಾಡಿದ ಬಳಿಕ ಎಚ್ಚೆತ್ತ ಸಿದ್ದರಾಮಯ್ಯ ಅವರು, ‘ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಅದಕ್ಕೆ ಬದ್ಧ’ ಎಂಬ ಮಾತನ್ನು ಪುನರುಚ್ಚರಿಸುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಯತ್ನ ಮಾಡಿದ್ದಾರೆ.

‘ಎರಡೂವರೆ ವರ್ಷಗಳ ಬಳಿಕ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು’ ಎಂಬ ಕೂಗೆಬ್ಬಿಸಿದ್ದ ಶಿವಕುಮಾರ್ ಆಪ್ತ ಬಣಕ್ಕೆ ತಿರುಗೇಟು ನೀಡುವಂತೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಆದರೆ, ಆಪ್ತವಲಯ ಮೆತ್ತಗಾದಂತೆ ತೋರುತ್ತಿಲ್ಲ. ಶಿವಕುಮಾರ್ ಸೋದರ, ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ‘ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈ ಹುದ್ದೆ ಖಾಲಿ ಇಲ್ಲ. ಇಬ್ಬರು ನಾಯಕರೂ ಒಗ್ಗೂಡಿ ರಾಜ್ಯವನ್ನು ಅಭಿವೃದ್ಧಿಯ ಗುರಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳುವ ಮೂಲಕ, ಈ ವಿಷಯದಲ್ಲಿ ಅಂತರ ಕಾಯ್ದುಕೊಂಡಿದ್ದಾರೆ. ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಮಾತ್ರ, ತಮ್ಮ ನಾಯಕನ ಪರ ಮತ್ತಷ್ಟು ಏರು ಧ್ವನಿಯಲ್ಲಿಯೇ ಮಾತನಾಡಿ, ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆಯೇ, ಶುಕ್ರವಾರ ಗದಗದಲ್ಲಿ ನಡೆದ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕದಲ್ಲೇ ಕುಳಿತಿದ್ದ ಇಬ್ಬರು ನಾಯಕರು ಪರಸ್ಪರ ಮಾತನಾಡಲಿಲ್ಲ ಎಂದು ಹೇಳಲಾಗಿದೆ.

ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕವಾದುದು. ಹೈಕಮಾಂಡ್ ಹೇಳಿದರೆ ಮುಖ್ಯಮಂತ್ರಿಯಾಗಲು ನಾನೂ ಸಿದ್ಧ.
ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

ಕಾರ್ಯಕ್ರಮದ ಬಳಿಕ, ‘ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಯಾರು ಏನೇ ಅಂದರೂ ಸಂತೋಷ’ ಎಂದಷ್ಟೇ ಪ್ರತಿಕ್ರಿಯಿಸಿದರು.

ತುಮಕೂರಿನಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ‘ಸಿದ್ದರಾಮಯ್ಯನವರು ತಾವಾಗಿಯೇ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೆ, ಪರಮೇಶ್ವರ ಮುಖ್ಯಮಂತ್ರಿಯಾಗಬೇಕು. ಹಿಂದೆ ನಾನು ಹೇಳಿದ್ದೆಲ್ಲವೂ ಸತ್ಯವಾಗಿದೆ. ಪರಮೇಶ್ವರ ಮುಖ್ಯಮಂತ್ರಿಯಾಗಿಯೇ ಆಗುತ್ತಾರೆ’ ಎಂದೂ ಹೇಳಿದ್ದಾರೆ. ‘ಬೇರೆ ಯಾರಿಗೂ ಸ್ಥಾನ ಕೂಡದು’ ಎನ್ನುವ ಮೂಲಕ, ಮುಖ್ಯಮಂತ್ರಿಯಾಗುವ ಹಂಬಲ ಇರುವ ಶಿವಕುಮಾರ್ ಅವರಿಗೆ ಪರೋಕ್ಷ ಸವಾಲನ್ನೂ ಒಡ್ಡಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಮಗ ಪ್ರಿಯಾಂಕ್ ಖರ್ಗೆ, ತಾವೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಮೊದಲ ಬಾರಿಗೆ ಬಿಂಬಿಸಿಕೊಂಡಿದ್ದಾರೆ. ‘ಮುಖ್ಯಮಂತ್ರಿ ಯಾರಾಗಬೇಕು, ಯಾರು ಮುಂದುವರಿಯಬೇಕು ಎಂಬುದು ಹೈಕಮಾಂಡ್ ತೀರ್ಮಾನ’ ಎಂದ ಅವರು, ‘ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕವಾದದು’ ಎನ್ನುವ ಮೂಲಕ, ಬೇರೊಂದು ರೀತಿಯ ಸಂದೇಶ ನೀಡುವ ಕೆಲಸವನ್ನೂ ಮಾಡಿದ್ದಾರೆ.

ಸಂಪುಟ ಪುನಾರಚನೆ, ಮೂವರು ಉಪಮುಖ್ಯಮಂತ್ರಿ ಸೃಷ್ಟಿ, ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ವಿಷಯಗಳು ಬದಿಗೆ ಸರಿದಿದ್ದು, ಮುಖ್ಯಮಂತ್ರಿ ಸ್ಥಾನದ ವಿಚಾರವೇ ಕಾಂಗ್ರೆಸ್ನಲ್ಲಿ ಮುನ್ನೆಲೆಗೆ ಬಂದಂತಾಗಿದೆ.

ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಮಾತ್ರವೇ ಮುಖ್ಯಮಂತ್ರಿ ಎಂಬ ವದಂತಿಗೆ ತೆರೆಬಿದ್ದಿದೆ. ಹೈಕಮಾಂಡ್ ಇಂತಹ ತೀರ್ಮಾನ ಮಾಡಿದರೆ ಮುಂದೆ ನೋಡೋಣ.
ಸಂತೋಷ ಲಾಡ್, ಕಾರ್ಮಿಕ ಸಚಿವ

‘ಎಲ್ಲರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಆಗಲ್ಲ’

‘ಜಾತಿಗಣತಿ ವರದಿ ಪಡೆಯುವಾಗ ಅಭಿಪ್ರಾಯ ಕೇಳಬೇಕು’ ಎಂಬ ನಂಜಾವಧೂತ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಜಾತಿ ಗಣತಿ ಇನ್ನು ಕೊಟ್ಟಿಲ್ಲ. ಯಾರೋ ಹೇಳಿದರು ಅಂತ ಎಲ್ಲರಿಗೂ ಪ್ರತಿಕ್ರಿಯಿಸಲು ಆಗುವುದಿಲ್ಲ. ವರದಿ ಬಂದ ನಂತರ ಮಾತನಾಡುವೆ. ಇದು ಜಾತಿ ಗಣತಿ ಅಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಎಲ್ಲ ಶಾಸಕರ ಬೆಂಬಲದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಗೊಂದಲಕ್ಕೆ ತೆರೆ ಎಳೆಯುವುದಕ್ಕಾಗಿಯೇ ಪೂರ್ಣಾವಧಿಗೆ ತಾವೇ ಮುಖ್ಯಮಂತ್ರಿ ಎಂದು ಅವರು ಹೇಳಿರಬಹುದು.
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ನಾನು ಹೇಳೋದೊಂದು; ನೀವು ಬರೆಯೋದೊಂದು: ಸಿ.ಎಂ ಕಿಡಿ

ಗದಗ: ‘ನಾನೊಂದು ಹೇಳಿದರೆ ನೀವೊಂದು ಬರೆಯುತ್ತೀರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳ ಮೇಲೆ ರೇಗಿದರು. ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದ್ದೇನೆ’ ಎಂದು ಹೇಳುವ ಮೂಲಕ ‘ಮುಂದಿನ ಐದು ವರ್ಷ ನಾನೇ ಸಿ.ಎಂ’ ಎಂಬ ಹೇಳಿಕೆ ಸೃಷ್ಟಿಸಿದ ವಿವಾದಕ್ಕೆ ತೆರೆ ಎಳೆಯಲು ಮುಂದಾದರು.

‘ಸಿದ್ದರಾಮಯ್ಯ ಬೇಡ ಅಂದರೆ, ಜಿ.ಪರಮೇಶ್ವರ ಮುಖ್ಯಮಂತ್ರಿ ಆಗಲಿ’ ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.