ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎತ್ತಿನಹೊಳೆ ಯೋಜನೆ | ಬಯಲು ಸೀಮೆಯ ‘ಬರಡುʼ ನೆಲಕ್ಕೆ ಜೀವಜಲ: ಡಿಕೆಶಿ

Published : 5 ಸೆಪ್ಟೆಂಬರ್ 2024, 14:59 IST
Last Updated : 5 ಸೆಪ್ಟೆಂಬರ್ 2024, 14:59 IST
ಫಾಲೋ ಮಾಡಿ
Comments

ಬೆಂಗಳೂರು: ‘ಎತ್ತಿನಹೊಳೆ ಯೋಜನೆಯ ಮೂಲಕ ‘ಬಯಲುಸೀಮೆ’ಗೆ ಜೀವಜಲ ಒದಗಿಸಬೇಕೆಂದು ಹಿಂದಿನ ಸರ್ಕಾರಗಳು ಪ್ರಯತ್ನಿಸಿದ್ದರೂ, ಬದ್ಧತೆ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಈ ಯೋಜನೆಯ ಮೊದಲ ಹಂತದ ಕಾಮಗಾರಿ ಶುಕ್ರವಾರ ಉದ್ಘಾಟನೆಯಾಗುತ್ತಿದ್ದು, ‘ಗೌರಿ ಹಬ್ಬ’ದಂದು ಗಂಗೆ ಪೂಜೆ ಮಾಡುತ್ತಿರುವುದು ವಿಶೇಷ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

‘ಮೊದಲ ಹಂತದ ನೀರು ಪೂರೈಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಹೆಬ್ಬನಹಳ್ಳಿ ವಿತರಣಾ ತೊಟ್ಟಿಯ 4ರಿಂದ 32 ಕಿ.ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ರೂಪಿಸಿದ್ದು, ಅಲ್ಲಿಂದ ನಾಲೆಯ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಪೂರೈಸಲಾಗುತ್ತದೆ. ನ. 1ರ ವೇಳೆಗೆ ಸುಮಾರು ಐದು ಟಿಎಂಸಿ ಅಡಿ ನೀರನ್ನು ಮೇಲಕ್ಕೆ ಎತ್ತಲಾಗುತ್ತದೆ. ಕೇವಲ ಪೂರ್ಣಗೊಂಡ ಕಾಮಗಾರಿಗೆ ಚಾಲನೆ ನೀಡುವ ದಿನವಲ್ಲ, ಬಯಲುಸೀಮೆಯ ‘ಬರಡು’ ಎಂಬ ಅಪವಾದವನ್ನು ತೊಡೆದುಹಾಕುವ ಗಳಿಗೆ’ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.

‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ‘ಗ್ಯಾರಂಟಿ’ಗಳ ಭರವಸೆ ನೀಡಿತ್ತು. ಜೊತೆಗೆ ನೀರಾವರಿ, ಕೃಷಿ ಸುಧಾರಣೆ, ಕೈಗಾರಿಕಾಭಿವೃದ್ಧಿ, ನಿರುದ್ಯೋಗ ನಿವಾರಣೆ ಮುಂತಾದ ಭರವಸೆಗಳನ್ನು ಪಕ್ಷ ನೀಡಿತ್ತು. ಈ ಪೈಕಿ, ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುವ ಬದ್ಧತೆಯನ್ನು ಪ್ರಣಾಳಿಕೆಯಲ್ಲಿ ಪಕ್ಷ ಘೋಷಿಸಿತ್ತು. ಅದರಂತೆ, ಒಂದೂವರೆ ವರ್ಷದ ಒಳಗೆ ಯೋಜನೆಯ ಮೊದಲ ಹಂತದ ನೀರು ಸರಬರಾಜು ಕಾಮಗಾರಿ ಸಾಕಾರಗೊಂಡಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ, ರಾಮನಗರದ ಕೆಲವು ಭಾಗ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಜೀವಜಲ ಸಿಗಲಿದೆ’ ಎಂದಿದ್ದಾರೆ.

‘ಯೋಜನೆಯಡಿ ಒಟ್ಟು 24.01 ಟಿಎಂಸಿ ಅಡಿ ನೀರನ್ನು ಕುಡಿಯುವ ಅಗತ್ಯಕ್ಕೆ ಮತ್ತು ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುತ್ತದೆ. ಇದರಿಂದ ಬರ ಪೀಡಿತವಾದ 29 ತಾಲ್ಲೂಕುಗಳ 6,657 ಗ್ರಾಮಗಳ 75.59 ಲಕ್ಷ ಜನರ ನೀರಿನ ದಾಹ ತೀರಲಿದೆ. ಜೊತೆಗೆ, ಐದು ಜಿಲ್ಲೆಗಳ 527 ಕೆರೆಗಳ ಅಂತರ್ಜಲ ಮರುಪೂರಣ ಕಾರ್ಯವೂ ನಡೆಯಲಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ₹ 23,251 ಕೋಟಿ ವೆಚ್ಚ ಮಾಡಲಿದೆ’ ಎಂದು ವಿವರಿಸಿದ್ದಾರೆ.

‘2011-12ರಲ್ಲಿ ಅಂದಿನ ಬಿಜೆಪಿ ಸರ್ಕಾರ ದೂರದೃಷ್ಟಿ, ಬದ್ಧತೆ ಇಲ್ಲದೆ, ರಾಜಕೀಯ ಲಾಭದ ದೃಷ್ಟಿಯಿಂದ ಯೋಜನೆ ರೂಪಿಸಿದ್ದರಿಂದಾಗಿ ಕಾಮಗಾರಿ ನಿರೀಕ್ಷೆಯಂತೆ ಮುಂದುವರಿಯಲಿಲ್ಲ. ಬಳಿಕ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ, ಯೋಜನಾ ಮೊತ್ತವನ್ನು ಪರಿಷ್ಕರಿಸಿ, 2014ರ ಫೆಬ್ರವರಿಯಲ್ಲಿ ಅನುಮೋದನೆ ನೀಡಿತು. ಆ ನಂತರ ಚಿಕ್ಕಬಳ್ಳಾಪುರದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅಂದು ಆರಂಭವಾದ ಯೋಜನೆ, ನಡುವೆ ಬಿಜೆಪಿ ಸರ್ಕಾರ ಅಧಿಕಾರದ ಅವಧಿಯಲ್ಲೂ ಪೂರ್ಣಗೊಳ್ಳಲಿಲ್ಲ. ಮತ್ತೆ ಈ ಯೋಜನೆಗೆ ಚುರುಕು ನೀಡಲು ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರಬೇಕಾಯಿತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT