ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಷ್ಟ ಶಕ್ತಿ ಎದುರು ಸತ್ಯದ ಜಯ: ರಾಜ್ಯ ಸರ್ಕಾರದ ಜಾಹೀರಾತಿಗೆ ಎಚ್‌ಡಿಕೆ ಟೀಕೆ

Published : 11 ಅಕ್ಟೋಬರ್ 2024, 6:06 IST
Last Updated : 11 ಅಕ್ಟೋಬರ್ 2024, 6:06 IST
ಫಾಲೋ ಮಾಡಿ
Comments

ಮೈಸೂರು: ದುಷ್ಟ ಶಕ್ತಿ ಎದುರು ಸತ್ಯದ ಜಯ ಎಂಬ ಜಾಹೀರಾತು ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್‌ನವರು ಇಂದು ಪೇಪರ್‌ಗಳಲ್ಲಿ ಅದ್ಯಾವುದೋ ಜಾಹೀರಾತು ಕೊಟ್ಟಿದ್ದಾರೆ. ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ! ಕರ್ನಾಟಕ ರಾಜ್ಯವನ್ನು ವಾಮಾಮಾರ್ಗ, ಮೋಸದಿಂದ ಅಸ್ಥಿರಗೊಳಿಸುತ್ತಿದ್ದಾರೆ ಎಂದು ಜಾಹೀರಾತು ಕೊಟ್ಟಿದ್ದಾರೆ. ಆದರೆ, ವಾಮಾಮಾರ್ಗ, ಮೋಸವನ್ನು ಸ್ಥಿರಗೊಳಿಸಲು ಹೊರಟಿರುವ ಸರ್ಕಾರವಿದು. ಇವರು ಯಾವತ್ತು ಸತ್ಯ ಹಾಗೂ ಧರ್ಮವನ್ನು ಉಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಹರ್ಷಿ ವಾಲ್ಮೀಕಿ ನಿಗಮದಿಂದ ಬಡವರಿಗೆ ಕೊಡಬೇಕಾದ ಹಣವನ್ನು ನುಂಗಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿ ಮುಡಾ ನಿವೇಶನ ತೆಗೆದುಕೊಂಡಿದ್ದಾರೆ. ಬಳಿಕ ಪರಿಸ್ಥಿತಿ ವ್ಯತಿರಿಕ್ತವಾದಾಗ ವಾಪಸ್ ಕೊಟ್ಟಿದ್ದಾರೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆಗಿದೆ. ಇವರೇ ಆರ್ಥಿಕ ಸಚಿವರು, ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆ ಆಗಿದೆ. ಅದರ ಸತ್ಯಾಂಶಗಳು ಹೊರಬರುವ ಕಾಲ ದೂರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಸಿದ್ರಾಮಣ್ಣನ ಬಗ್ಗೆ ಹಿನಕಲ್ ಸಾಕಮ್ಮನ ಕೇಳಿದರೆ ಗೊತ್ತಾಗುತ್ತದೆ. ಯಾವ ವಾಮ ಮಾರ್ಗದಲ್ಲಿ ನಿವೇಶನ ಪಡೆದಿದ್ದಾರೆ ಎಂಬುದು ಗೊತ್ತಾಗುತ್ತದೆ. ಇದೆಲ್ಲ ಇತಿಹಾಸ ಇದೆ ಎಂದರು.

ಹಾಗಾಗಿ ಇಲ್ಲಿ ಸ್ಥಿರಗೊಳಿಸುವುದು, ಅಸ್ಥಿರಗೊಳಿಸೊದು ನಮ್ಮ ಕೈಯಲ್ಲಿಲ್ಲ. ಎಲ್ಲ ಚಾಮುಂಡೇಶ್ವರಿ ಅಮ್ಮನ ಕೈಯಲ್ಲಿದೆ ಎಂದು ಹೇಳಿದರು.

ಎಚ್‌ಡಿಕೆ ಕೇವಲ ಆರೋಪ ಮಾಡದೇ ದಾಖಲೆ ನೀಡಲಿ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಎಷ್ಟು ದಾಖಲೆ ಕೊಡಲಿ? ಈಗ ಕೊಟ್ಟಿರುವುದನ್ನೇ ಅವರಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಮುಖಂಡರೇ ಅ ಬಗ್ಗೆ ಮಾತಾಡುತ್ತಾರೆ ಎಂದರು.

ನಾನು ಮಾಧ್ಯಮದವರ ಎದುರು ತೋರಿಸಿದ್ದ ಪೆನ್‌ಡ್ರೈವ್‌ನಲ್ಲಿ ವರ್ಗಾವಣೆ ದಂಧೆ ಬಗ್ಗೆ ಇತ್ತೇ ‌ಹೊರತು ಅಶ್ಲೀಲ ಚಿತ್ರ ಇರಲಿಲ್ಲ. ನಾನು ಕಮಿಷನ್ ಮಾಡಬೇಕು ಅಂತಿದ್ರೆ ರೈತರ ಸಾಲ ಮನ್ನಾ ಮಾಡಬೇಕಾಗಿರಲಿಲ್ಲ. ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಯಾರಿಗೂ ಒತ್ತಡ ಹಾಕಿ ಕಮಿಷನ್ ಪಡೆದಿಲ್ಲ. ಇದನ್ನೆಲ್ಲಾ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹೇಳುತ್ತಿದ್ದೇನೆ. ಕಮಿಷನ್ ಪಡೆದಿಲ್ಲ ಎಂದು ತಿಳಿಸಿದರು.

ಡಿನ್ನರ್ ಮೀಟಿಂಗ್ ಅಥವಾ ಬ್ರೇಕ್ ಫಾಸ್ಟ್ ಮೀಟಿಂಗ್ ಬೆಳವಣಿಗೆಗಳೆಲ್ಲಾ ಕಾಂಗ್ರೆಸ್‌ನವರಿಗೆ ಸೇರಿದ್ದು. ಮುಖ್ಯಮಂತ್ರಿ ಬದಲಾವಣೆ ವಿಚಾರ ಅವರ ಪಕ್ಷಕ್ಕೆ ಸೇರಿದ್ದು. ನಾನು ಮುಖ್ಯಮಂತ್ರಿ ಇದ್ದಾಗ ಜಾತಿಗಣತಿ ವರದಿ ಸ್ವೀಕರಿಸಲಿಲ್ಲ ಎಂದು ಆರೋಪ ಮಾಡಿದ್ದರು. ನಾನು 14 ತಿಂಗಳು ಸಿಎಂ ಆಗಿದ್ದೆ. ಸಿದ್ದರಾಮಯ್ಯ ಅವರು ಬಂದು 15 ತಿಂಗಳಾಗಿವೆ. ಏಕೆ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ? ಪ್ರತಿ ನಿತ್ಯ, ನಾನು ಕುರಿ ಕಾಯುವವನು, ಅದಕ್ಕೆ ವಿರೋಧಪಕ್ಷದವರು ಹೊಟ್ಟೆ ಉರಿ ಪಟ್ಕೊತಾ ಇದ್ದಾರೆ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ನರೇಂದ್ರ ಮೋದಿ ಚಹಾ ಮಾರಿಲ್ವಾ.? ನಾವು ಅಸೂಯೆ ಪಟ್ಟರೆ ಆಗುತ್ತದೆಯೇ? ಜನರೇ ಎಲ್ಲವನ್ನೂ ತೀರ್ಮಾನ ಮಾಡುತ್ತಾರಲ್ಲವೇ? ಹತ್ತು ವರ್ಷ ಹಿಂದೆ ಮಾಡಿದ ಜಾತಿಗಣತಿ ವರದಿಯದು. ಈಗ ಆ ಜಾತಿಗಣತಿ ಇಟ್ಕೊಂಡು ಏನು ಮಾಡ್ತೀರಿ? ಅದು ಸಿದ್ದರಾಮಯ್ಯ ಕಚೇರಿಯಲ್ಲಿ ಕುಳಿತು ತಯಾರಿಸಿದ ವರದಿ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೋವಿಡ್ ಹಗರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರ ನಿರ್ಧಾರಕ್ಕೆ ನಮ್ಮದೇನೂ ತಕರಾರಿಲ್ಲ. ಸರ್ಕಾರ ರಚನೆಯಾಗಿ 15 ತಿಂಗಳಾಗಿವೆ. ಇಷ್ಟು ದಿನ ಸುಮ್ಮನಿದ್ದವರು, ಈಗ ತನಿಖೆ ಮಾಡುತ್ತಾರಾ? ಅವರ ವೈಫಲ್ಯ ಮುಚ್ಚಿಕೊಳ್ಳಲು ಇವೆಲ್ಲ ಮಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಬಹಳ ಆರೋಪ ಮಾಡಿದ್ದರು. ಸರ್ಕಾರ ಬಂದ ಮೇಲೆ ಸುಮ್ಮನಿದ್ದು ಈಗ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕ ಜಿ.ಡಿ. ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮುಖಂಡರಾದ ರವಿಕುಮಾರ್, ಎಸ್‌ಬಿಎಂ ಮಂಜು, ದ್ವಾರಕೀಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT