ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಮರೆಯಾದ ರತನ್ ಟಾಟಾ: ಮೌಲ್ಯ ಬಿಟ್ಟುಕೊಡದ ಉದ್ಯಮಿ

Published : 10 ಅಕ್ಟೋಬರ್ 2024, 23:30 IST
Last Updated : 10 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಬಹುಶ್ರುತರೂ ಅಪಾರ ಗೌರವಕ್ಕೆ ಪಾತ್ರರೂ ಆಗಿದ್ದ ಭಾರತೀಯ ಉದ್ಯಮಿ ರತನ್ ಟಾಟಾ ಅವರು, ಭಾರತದ ಉದ್ದಿಮೆಗಳು ಜಾಗತಿಕ ವೇದಿಕೆಗಳಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದರು. ಟಾಟಾ ಉದ್ಯಮ ಸಮೂಹದ ಕಂಪನಿಗಳನ್ನು ಒಗ್ಗೂಡಿಸಿ ಮುನ್ನಡೆಸಿ, ಸಮೂಹಕ್ಕೆ ಹೊಸ ದಿಕ್ಕನ್ನು ತೋರಿಸಿಕೊಟ್ಟರು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಟಾಟಾ ಸಮೂಹವನ್ನು ಅವರು ದೂರದೃಷ್ಟಿಯಿಂದ ಹಾಗೂ ನೈತಿಕವಾಗಿ ಉನ್ನತ ಮಟ್ಟದ ನಾಯಕತ್ವದೊಂದಿಗೆ ಮುಂದಕ್ಕೆ ಒಯ್ದರು. 150 ವರ್ಷಗಳಿಗೂ ಹಳೆಯದಾದ ಸಮೂಹದಲ್ಲಿ ಪರಿವರ್ತನೆ ತಂದರು, ಹೊಸ ಕಾಲದ ಸವಾಲುಗಳಿಗೆ ಸ್ಪಂದಿಸಲು ಅದಕ್ಕೆ ಸಾಧ್ಯವಾಗುವಂತೆ ಮಾಡಿದರು. ಹೊಸ ಕಾರ್ಯವಿಧಾನಗಳನ್ನು ಒಪ್ಪಿಕೊಂಡು, ಸಮೂಹದ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು.

ರತನ್ ಟಾಟಾ ನಾಯಕತ್ವದಲ್ಲಿ ಟಾಟಾ ಸಮೂಹವು ಹೊಸ ಹೊಸ ಆಯಾಮಗಳನ್ನು ಪಡೆದುಕೊಂಡಿತು. ಅಷ್ಟೇ ಅಲ್ಲದೆ, ಸಮೂಹವು ತಾನು ಪ್ರತಿಪಾದಿಸುವ ಮೌಲ್ಯಗಳನ್ನು ಕಾಪಿಟ್ಟುಕೊಳ್ಳುವ ಕೆಲಸವನ್ನೂ ಮಾಡಿತು. ಸಮೂಹವು ತನ್ನ ಪೂರ್ವಿಕರಿಂದ ಬಂದ ಖ್ಯಾತಿಯನ್ನು, ತಾನೇ ಬೆಳೆಸಿಕೊಂಡ ಜನಪ್ರಿಯತೆಯನ್ನು ಉಳಿಸಿಕೊಂಡಿತು ಎಂಬುದು ಉಲ್ಲೇಖಾರ್ಹ. ಟಾಟಾ ಸಮೂಹವು 100ಕ್ಕೂ ಹೆಚ್ಚಿನ ದೇಶಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿ ದ್ದರೂ ಅದು ಅಪ್ಪಟ ಭಾರತೀಯ ಉದ್ಯಮ ಸಮೂಹವಾಗಿಯೇ ಉಳಿದಿದೆ ಎಂಬುದು ಗಮನಾರ್ಹ. ಸಮೂಹದ ಇತಿಹಾಸದಲ್ಲಿ ಬಹಳ ಮಹತ್ವದ ಕಾಲಘಟ್ಟದಲ್ಲಿ, ಭಾರತದ ಆರ್ಥಿಕ ಹಾಗೂ ಔದ್ಯಮಿಕ ಚರಿತ್ರೆಯ ಪ್ರಮುಖ ಹಂತವೊಂದರಲ್ಲಿ ಸಮೂಹಕ್ಕೆ ನಾಯಕತ್ವ ಒದಗಿಸಿದ ರತನ್ ಟಾಟಾ ಅವರು, ಬದಲಾವಣೆಗಳಿಗೂ ಕಾರಣರಾದರು, ಸಮೂಹದ ಮೌಲ್ಯಗಳ ಮುಂದುವರಿಕೆಯನ್ನೂ ಖಾತರಿಪಡಿಸಿದರು.

ಸಮೂಹದ ಮುಖ್ಯಸ್ಥರಾಗಿ ರತನ್ ಟಾಟಾ ಅವರು ಜವಾಬ್ದಾರಿ ವಹಿಸಿಕೊಂಡ ಸಂದರ್ಭ ಹಾಗೂ ಭಾರತವು ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡ ಸಂದರ್ಭವು ಒಂದೇ ಆಗಿದ್ದವು. ಆರ್ಥಿಕ ನೀತಿಗಳಲ್ಲಿ ಆಗಿದ್ದ ಬದಲಾವಣೆಗಳಿಂದಾಗಿ ಸಿಕ್ಕ ಅವಕಾಶ ಗಳನ್ನು ಬಳಸಿಕೊಳ್ಳುವ ಅಂತರ್‌ದೃಷ್ಟಿ ಅವರಿಗೆ ಇತ್ತು. ಅದಕ್ಕಿಂತ ಮುಖ್ಯವಾಗಿ ರತನ್ ಟಾಟಾ ಅವರಲ್ಲಿ ಚಾತುರ್ಯ, ದೃಢಸಂಕಲ್ಪ, ಪ್ರಾಮಾಣಿಕತೆ, ಮುಗ್ಧ ಮನಸ್ಸು ಮತ್ತು ಔದಾರ್ಯದಂತಹ ಗುಣಗಳು ಇದ್ದವು. ದೇಶದ ಅತ್ಯಂತ ಹಳೆಯ ಉದ್ಯಮ ಸಮೂಹಗಳಲ್ಲಿ ಒಂದಾಗಿರುವ ಟಾಟಾ ಸನ್ಸ್‌ನ ಸಾಂಸ್ಥಿಕ ಅನುಭವವನ್ನು ಬಳಸಿಕೊಂಡು, ಸಮೂಹವನ್ನು ಹೊಸ ದಿಗಂತದ ಕಡೆ ಒಯ್ಯಲು ಈ ಗುಣಗಳು ಅವರ ನೆರವಿಗೆ ಬಂದವು.

ಸಮೂಹದ ಹೊಣೆ ಹೊತ್ತುಕೊಂಡ ನಂತರ ರತನ್ ಟಾಟಾ ಅವರು ಒಳಗಿನಿಂದ ಹಾಗೂ ಹೊರಗಿನಿಂದ ಪ್ರತಿರೋಧಗಳನ್ನು, ಸಂಘಟಿತ ಅಭಿಯಾನಗಳನ್ನು ಎದುರಿಸಬೇಕಾ ಯಿತು. ಆದರೆ ತಮ್ಮ ವೈಯಕ್ತಿಕ ತಾಕತ್ತು ಮತ್ತು ಔದ್ಯಮಿಕ ಸಾಮರ್ಥ್ಯದ ಮೂಲಕ ಅವರು ಅವುಗಳನ್ನು ನಿಭಾಯಿಸಿದರು. ಅನುತ್ಪಾದಕ ವಿಭಾಗಗಳ ಮಾರಾಟ, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದು, ಕೆಲವು ಕಂಪನಿಗಳಿಗೆ ಉತ್ತೇಜನ ನೀಡಿ ಮುಂದೆ ಅವು ಉದ್ಯಮ ವಲಯದಲ್ಲಿ ಮುಂಚೂಣಿ ಸ್ಥಾನ ಪಡೆದುಕೊಳ್ಳುವಂತೆ ಮಾಡಿದ್ದು, ಹೊಸ ಕಂಪನಿಗಳನ್ನು ಹಾಗೂ ಅಂತರರಾಷ್ಟ್ರೀಯ ಮಟ್ಟದ ಬ್ರ್ಯಾಂಡ್‌ಗಳನ್ನು ಖರೀದಿಸಿದ್ದು ಇಡೀ ಸಮೂಹದ ಚಹರೆಯನ್ನೇ ಬದಲಾಯಿಸಿದವು. ಈ ಎಲ್ಲ ತೀರ್ಮಾನಗಳು ಬಹಳ ಸುಲಭದವೇನೂ ಆಗಿರಲಿಲ್ಲ.

ಬಹುಕಾಲದಿಂದ ಬೆಳೆದುಬಂದ ಪದ್ಧತಿಗಳು, ಆಲೋಚನಾ ಕ್ರಮಗಳು ಇರುವ ಬಹುದೊಡ್ಡ ಉದ್ಯಮ ಸಂಸ್ಥೆಯಲ್ಲಿ ಹೊಸ ಚಲನಶೀಲತೆಯನ್ನು ತರುವುದು ಸುಲಭದ ಕೆಲಸವೇನೂ ಅಲ್ಲ. ಆದರೆ ಅಂತಹ ಕೆಲಸದಲ್ಲಿ ರತನ್ ಟಾಟಾ ಯಶಸ್ಸು ಕಂಡರು. ದೊಡ್ಡ ಗುರಿಯ ಮೇಲಿನ ಗಮನವನ್ನು ತಗ್ಗಿಸದೆಯೇ, ಬಹಳ ಸೂಕ್ಷ್ಮ ಸಂಗತಿಗಳ ಕಡೆಗೂ ದೃಷ್ಟಿ ಹಾಯಿಸುವ ಶಕ್ತಿ ಅವರಲ್ಲಿ ಇತ್ತು. ಅದು ಅವರ ನೆರವಿಗೆ ಬಂತು. ಬೇರೆ ಬೇರೆ ಘಟಕಗಳ ಮುಖ್ಯಸ್ಥರಿಗೆ ಅತ್ಯಂತ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಿಯೂ, ಅವರ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳುವುದು ಉತ್ತಮ ನಾಯಕರಲ್ಲಿ ಇರುವ ಬಹಳ ದೊಡ್ಡ ಗುಣ. ಅಂತಹ ಗುಣವು ರತನ್ ಟಾಟಾ ಅವರಲ್ಲಿ ಕಾಣುತ್ತಿತ್ತು. ಸಮೂಹದಲ್ಲಿ ದುಡಿಯುವ ಕಾರ್ಮಿಕರ ಹಕ್ಕುಗಳಿಗೆ ರತನ್ ಟಾಟಾ ಬಹಳ ಗೌರವ ನೀಡುತ್ತಿದ್ದರು.

ರತನ್ ಟಾಟಾ ಅವರ ಕೊಡುಗೆಗಳು ಉದ್ಯಮ ಜಗತ್ತಿನ ಆಚೆಗೂ ಇವೆ. ದಾನ ಕಾರ್ಯ, ಶಿಕ್ಷಣ, ಆರೋಗ್ಯಸೇವೆ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ತೋರಿದ ಬದ್ಧತೆಯ ಕಾರಣದಿಂದಾಗಿ ಅವರು ಇತರ ಹಲವು ಉದ್ಯಮಿಗಳಿಗಿಂತ ಭಿನ್ನವಾಗಿ ಕಾಣುತ್ತಾರೆ. ಟಾಟಾ ಸಮೂಹ ಹಾಗೂ ತಮ್ಮ ಸುತ್ತಲಿನ ಜಗತ್ತಿನ ಚಟುವಟಿಕೆಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡೂ, ಅವರು ಏಕಾಂಗಿ ಜೀವನ ಸಾಗಿಸಿದರು. ಸುತ್ತಲಿನ ಸಮಾಜದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವಿಕೆ ಹಾಗೂ ಏಕಾಂಗಿ ಬದುಕು, ಇವೆರಡರ ನಡುವಿನ ಮುಖಾಮುಖಿಯು ಅವರನ್ನು ಅಸಾಧಾರಣ ವ್ಯಕ್ತಿಯನ್ನಾಗಿ ರೂಪಿಸಿರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT