ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs BAN Test: ಅಶ್ವಿನ್–ಜಡೇಜಾ ಅಮೋಘ ಬ್ಯಾಟಿಂಗ್; ಕುಸಿತದಿಂದ ಪಾರಾದ ಭಾರತ

Published : 19 ಸೆಪ್ಟೆಂಬರ್ 2024, 11:35 IST
Last Updated : 19 ಸೆಪ್ಟೆಂಬರ್ 2024, 11:35 IST
ಫಾಲೋ ಮಾಡಿ
Comments

ಚೆನ್ನೈ: ಅನುಭವಿ ಆಟಗಾರರಾದ ಆರ್‌.ಅಶ್ವಿನ್‌ ಹಾಗೂ ರವೀಂದ್ರ ಜಡೇಜ ಅವರ ಅಮೋಘ ಬ್ಯಾಟಿಂಗ್‌ ಬಲದಿಂದ ಭಾರತ ತಂಡವು ಬಾಂಗ್ಲಾದೇಶ ಎದುರಿನ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕುಸಿತದಿಂದ ಪಾರಾಯಿತು.

ಮುರಿಯದ 7ನೇ ವಿಕೆಟ್‌ ಪಾಲುದಾರಿಕೆಯಲ್ಲಿ 195 ರನ್‌ ಕೆಲಹಾಕಿರುವ ಈ ಇಬ್ಬರು, ಮೊದಲ ದಿನದಾಟದ ಅಂತ್ಯಕ್ಕೆ ತಂಡದ ಮೊತ್ತವನ್ನು 6 ವಿಕೆಟ್‌ಗೆ 339 ರನ್‌ಗಳಿಗೆ ಏರಿಸಿದರು.

ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿದ ಅಶ್ವಿನ್‌, ಟೆಸ್ಟ್ ಕ್ರಿಕೆಟ್‌ನಲ್ಲಿ 6ನೇ ಶತಕದ ಸಂಭ್ರಮ ಆಚರಿಸಿದರು. 112 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 102 ರನ್‌ ಕಲೆಹಾಕಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಜಡೇಜ, 117 ಎಸೆತಗಳಲ್ಲಿ 86 ರನ್‌ ಗಳಿಸಿ ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಕುಸಿದ ಭಾರತಕ್ಕೆ ಅಶ್ವಿನ್, ಜಡೇಜ ಆಸರೆ
ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದ ಆತಿಥೇಯರಿಗೆ ಮಧ್ಯಮ ವೇಗಿ ಹಸನ್ ಮೆಹಮೂದ್ ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ 34 ರನ್‌ ಆಗುವಷ್ಟರಲ್ಲೇ ನಾಯಕ ರೋಹಿತ್‌ ಶರ್ಮಾ (6), ಶುಭಮನ್‌ ಗಿಲ್‌ (0) ಹಾಗೂ ವಿರಾಟ್ ಕೊಹ್ಲಿ (6) ವಿಕೆಟ್‌ ಪಡೆದು ಮಿಂಚಿದರು.

ಹೀಗಾಗಿ, ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತು. ಈ ವೇಳೆ ಜೊತೆಯಾದ ಯಶಸ್ವಿ ಜೈಸ್ವಾಲ್‌ (56) ಮತ್ತು ರಿಷಭ್‌ ಪಂತ್‌ (39), 4ನೇ ವಿಕೆಟ್ ಪಾಲುದಾರಿಕೆಯಲ್ಲಿ 62 ರನ್‌ ಕಲೆಹಾಕಿ ಅಲ್ಪ ಚೇತರಿಕೆ ನೀಡಿದರು. ಈ ವೇಳೆ ಮತ್ತೆ ದಾಳಿಗಿಳಿದ ಹಸನ್‌, ಪಂತ್‌ಗೆ ಪೆವಿಲಿಯನ್‌ ಹಾದಿ ತೋರಿ ಪೆಟ್ಟು ಕೊಟ್ಟರು. ಅವರ ಹಿಂದೆಯೇ, ಜೈಸ್ವಾಲ್‌ ಸಹ ಔಟಾದರು.

ಕೆ.ಎಲ್‌. ರಾಹುಲ್‌ ಆಟ 16 ರನ್‌ಗೆ ಕೊನೆಗೊಂಡಿತು. ಹೀಗಾಗಿ, ರೋಹಿತ್ ಪಡೆ 144 ರನ್‌ಗಳಿಗೆ ಪ್ರಮುಖ 6 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಅಶ್ವಿನ್ ಮತ್ತು ಜಡೇಜ, ಆತಿಥೇಯರಿಗೆ ಆಸರೆಯಾದರು.

ಬಾಂಗ್ಲಾ ಬೌಲರ್‌ಗಳಿಗೆ ನೀರಿಳಿಸಿದ ಈ ಜೋಡಿ, ದ್ವಿಶತಕದ ಜೊತೆಯಾಟದತ್ತ ಸಾಗಿದೆ.

ಬಾಂಗ್ಲಾ ಪರ ಹಸನ್‌ 4 ವಿಕೆಟ್‌ ಉರುಳಿಸಿದರೆ, ನಹೀದ್‌ ರಾಣಾ ಮತ್ತು ಮೆಹದಿ ಹಸನ್‌ ಮಿರಾಜ್‌ ತಲಾ ಒಂದು ವಿಕೆಟ್‌ ಪಡೆದಿದ್ದಾರೆ.

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT