ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಕದಿನ ಮಹಿಳಾ ಕ್ರಿಕೆಟ್ ಸರಣಿ: ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಜಯ

ಏಕದಿನ ಕ್ರಿಕೆಟ್ ಸರಣಿ: ದಕ್ಷಿಣ ಆಫ್ರಿಕಾ ಎದುರು ವಿಜೃಂಭಿಸಿದ ಭಾರತ; ಒಂದೇ ದಿನ ನಾಲ್ಕು ಶತಕ
Published : 19 ಜೂನ್ 2024, 15:56 IST
Last Updated : 19 ಜೂನ್ 2024, 15:56 IST
ಫಾಲೋ ಮಾಡಿ
Comments

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಾಲ್ವರು ಬ್ಯಾಟರ್‌ಗಳು ಶತಕ ದಾಖಲಿಸಿದರು. ಆದರೆ, ಅಂತಿಮ ಓವರ್‌ನಲ್ಲಿ ಪಂದ್ಯದ ಫಲಿತಾಂಶವನ್ನು ಭಾರತದ ಮಡಿಲಿಗೆ ಅರ್ಪಿಸಿದ್ದು ಮಾತ್ರ ಮಧ್ಯಮವೇಗಿ ಪೂಜಾ ವಸ್ತ್ರಕರ್ ಅವರ ಬೌಲಿಂಗ್.

ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 326 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಯ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿತ್ತು. ಆತಿಥೇಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೊಟ್ಟ ಚೆಂಡು ತೆಗೆದುಕೊಂಡ ಪೂಜಾ, ಮೊದಲೆರಡು ಎಸೆತಗಳಲ್ಲಿ ಒಂದು ಬೌಂಡರಿ ಸಹಿತ ಐದು ರನ್‌ ಬಿಟ್ಟುಕೊಟ್ಟರು. ಆದರೆ, ನಂತರ ಸತತ ಎರಡು ವಿಕೆಟ್ ಕಬಳಿಸಿದರಲ್ಲದೇ ಇನ್ನುಳಿದ ಎರಡು ಎಸೆತಗಳಲ್ಲಿ ಕೇವಲ ಎರಡು ರನ್ ಕೊಟ್ಟು ಗೆಲುವಿನ ಕೇಕೆ ಹಾಕಿದರು. ತಂಡವು 4 ರನ್‌ ಗಳ ರೋಚಕ ಜಯ ಸಾಧಿಸಿತು. ಅಲ್ಲದೇ ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.

ಪೂಜಾ ಅವರು ಕೊನೆಯ ಓವರ್‌ನಲ್ಲಿ ಸತತ ಎರಡು ವಿಕೆಟ್ ಕಬಳಿಸದೇ ಹೋಗಿದ್ದರೆ ಜಯ ಕೈತಪ್ಪುವ ಸಾಧ್ಯತೆ ಇತ್ತು. ಅದರಿಂದಾಗಿ ಸ್ಮೃತಿ ಮಂದಾನ (136; 120ಎ, 4X18, 6X2) ಮತ್ತು ಹರ್ಮನ್‌ಪ್ರೀತ್ ಕೌರ್ (ಔಟಾಗದೆ 103; 88ಎ, 4X9, 6X3) ಅವರು ಗಳಿಸಿದ್ದ ಸುಂದರ ಶತಕಗಳು ವ್ಯರ್ಥವಾಗುತ್ತಿದ್ದವು. ಆದರೆ ಬೃಹತ್ ಮೊತ್ತವನ್ನು ಬೆನ್ನಟ್ಟಿ ಶಾಂತಚಿತ್ತದಿಂದ ಆಡಿ ತಮ್ಮ ತಂಡವನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ್ದ ದಕ್ಷಿಣ ಆಫ್ರಿಕಾ ನಾಯಕಿ ಲೌರಾ ವೋಲ್ವಾರ್ಟ್ (ಔಟಾಗದೆ 135; 135ಎ,4X12, 6X3) ಹಾಗೂ ಮರಿಜಾನ್ ಕಾಪ್ (114; 94ಎ, 4X11, 6X3) ಅವರ ಶತಕಗಳು ಮಾತ್ರ ಕ್ರಿಕೆಟ್‌ಪ್ರಿಯರ ಮನಗೆದ್ದವು.

ಬುಧವಾರ ಮಧ್ಯಾಹ್ನ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಮ್ಮ ನಾಯಕಿಯ ನಿರ್ಧಾರ ಸಮರ್ಥಿಸಿಕೊಂಡ ಬೌಲರ್‌ಗಳು ಬಿಗಿ ದಾಳಿ ನಡೆಸಿದರು. ಇದರಿಂದಾಗಿ ಭಾರತದ ಆರಂಭಿಕ ಜೋಡಿ ಸ್ಮೃತಿ ಮತ್ತು ಶಫಾಲಿ ವರ್ಮಾ ಅವರು ಸೇರಿ ಮೊದಲ ನಾಲ್ಕು ಓವರ್‌ಗಳಲ್ಲಿ ಕೇವಲ 2 ರನ್ ಮಾತ್ರ ಗಳಿಸಿದ್ದರು.

ಆದರೆ ಐದನೇ ಓವರ್‌ನಲ್ಲಿ ಬೌಂಡರಿ ಹೊಡೆಯಲು ಆರಂಭಿಸಿದ ಈ ಜೋಡಿಯ ಆಟದಿಂದ ರನ್‌ ಗಳಿಕೆ ಹೆಚ್ಚತೊಡಗಿತು. ಆದರೆ 12ನೇ ಓವರ್‌ನಲ್ಲಿ ಶಫಾಲಿ ಔಟಾದರು. ಹೇಮಲತಾ 24 ರನ್ ಗಳಿಸಿ ನಿರ್ಗಮಿಸಿದರು. ಸ್ಮೃತಿಯೊಂದಿಗೆ ಸೇರಿಕೊಂಡ ಹರ್ಮನ್‌ಪ್ರೀತ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 171 ರನ್‌ ಸೇರಿಸಿದರು. ಕೌರ್ ತಮಗೆ ಲಭಿಸಿದ ಎರಡು ಜೀವದಾನಗಳನ್ನು ಸಮರ್ಥವಾಗಿ ಬಳಸಿಕೊಂಡರು. 38ನೇ ಓವರ್‌ನವರೆಗೂ ಇಬ್ಬರೂ ತಾಳ್ಮೆಯಿಂದ ಆಡಿದರು. ಆದರೆ ನಂತರ ವೇಗ ಹೆಚ್ಚಿಸಿದರು. ಅದರಲ್ಲಿ ಹರ್ಮನ್ ಬೀಸಾಟ ಜೋರಾಗಿತ್ತು. ಇನಿಂಗ್ಸ್‌  ಕೊನೆಯ 12 ಓವರ್‌ಗಳಲ್ಲಿ 125 ರನ್‌ಗಳು ತಂಡದ ಖಾತೆ ಸೇರಿದವು.  

ಸ್ಮೃತಿ 103 ಎಸೆತಗಳಲ್ಲಿ ಶತಕ ಪೂರೈಸಿದಾಗ ಕೌರ್ ಇನ್ನೂ ಅರ್ಧಶತಕ ಗಳಿಸಿರಲಿಲ್ಲ. 58 ಎಸೆತಗಳಲ್ಲಿ 50ರ ಗಡಿ ಮುಟ್ಟಿದ ಅವರು, ತಾವೆದುರಿಸಿದ 87ನೇ ಎಸೆತದಲ್ಲಿ ಶತಕ ದಾಟಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 325 ರನ್ ಗಳಿಸಿತು. 

ಗುರಿ ಬೆನ್ನಟ್ಟಿದ ಪ್ರವಾಸಿ ತಂಡವು 67 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಲೌರಾ ಮತ್ತು ಕಾಪ್ 4ನೇ ವಿಕೆಟ್ ಜೊತೆಯಾಟದಲ್ಲಿ 184 ರನ್ ಸೇರಿಸಿದರು. ಆದರೆ ತಂಡಕ್ಕೆ 6 ವಿಕೆಟ್‌ಗಳಿಗೆ 321 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 325 (ಸ್ಮೃತಿ ಮಂದಾನ 136, ಶಫಾಲಿ ವರ್ಮಾ 20, ಹೇಮಲತಾ 24, ಹರ್ಮನ್‌ಪ್ರೀತ್ ಕೌರ್ ಔಟಾಗದೆ 103, ರಿಚಾ ಘೋಷ್ ಔಟಾಗದೆ 25, ನಾನ್‌ಕುಲುಲೆಂಕೊ ಮ್ಲಾಬಾ 51ಕ್ಕೆ2, ಮಸಾಬ್ತಾ ಕ್ಲಾಸ್ 67ಕ್ಕೆ1) ದಕ್ಷಿಣ ಆಫ್ರಿಕಾ:  50 ಓವರ್‌ಗಳಲ್ಲಿ 6ಕ್ಕೆ321 (ಲೌರಾ ವೊಲ್ವಾರ್ಟ್ ಔಟಾಗದೆ 135, ಮರಿಜಾನ್ ಕಾಪ್ 114, ನಾಡೈನ್ ಡಿ ಕ್ಲರ್ಕ್ 28,  ಪೂಜಾ ವಸ್ತ್ರಕರ್ 54ಕ್ಕೆ2, ದೀಪ್ತಿ ಶರ್ಮಾ 56ಕ್ಕೆ2, ಸ್ಮೃತಿ ಮಂದಾನ 13ಕ್ಕೆ1, ಅರುಂಧತಿ ರೆಡ್ಡಿ 62ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 4 ರನ್ ಜಯ. ಪಂದ್ಯ ಆಟಗಾರ್ತಿ: ಹರ್ಮನ್‌ಪ್ರೀತ್ ಕೌರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT