ಚಿರಾಪುಂಜಿಯ ಖಾಸಿ ಬೆಟ್ಟಗಳ ನಡುವೆ ಧುಮ್ಮಿಕ್ಕುವ ‘ನೊಹ್ಕಾಲಿಕೈ’ ಎಂಬ ಏಕಾಂಗಿ ಜಲಧಾರೆ ನೋಡಲು ಹೊರಟು ನಿಂತಾಗ ಮನಸ್ಸಿನಲ್ಲಿ ಸಣ್ಣದೊಂದು ಭಯ ಶುರುವಾಗಿತ್ತು. ಅಪರಿಚಿತ ಊರು, ಅರಿಯದ ಭಾಷೆ. ಅಲ್ಲಿನವರಿಗೆ ಹಿಂದಿ ಭಾಷೆಯೂ ಬಾರದು. ಇಂಥ ಅಳಕುಗಳ ನಡುವೆ ‘ಪ್ರಕೃತಿ ನೋಡಲು ಯಾವ ಪರಿಚಯ ಬೇಕು. ಯಾವ ಭಾಷೆ ಬೇಕು’ ಎಂದು ಧೈರ್ಯ ಮಾಡಿ ಜಲಪಾತ ನೋಡಲು ಹೊರಟೇ ಬಿಟ್ಟೆವು.

ನೊಹ್ಕಾಲಿಕೈ, ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಿಂದ 54 ಕಿ.ಮೀ ದೂರದಲ್ಲಿರುವ ಸೂಚಿಪರ್ಣ ಕಾಡುಗಳ ನಡುವೆ ಧುಮ್ಮಿಕ್ಕುವ ಜಲಪಾತ. ನಾವು ಹೊರಟಾಗ, ದಾರಿಯುದ್ದಕ್ಕೂ ಮಂಜಿನ ಹಾಸು, ರಸ್ತೆ ಇಕ್ಕೆಲಗಳಲ್ಲಿ ಚೆರ್ರಿ ಹೂ ಪಕಳೆಗಳು ಸ್ವಾಗತಿಸಿದವು. ಇವನ್ನೆಲ್ಲ ನೋಡಿದ ಮೇಲೆ ಆರಂಭದಲ್ಲಿದ್ದ ಭಯ, ಅಳಕು ಮಾಯವಾಯಿತು. ಜಲಧಾರೆ ನೋಡುವುದಕ್ಕೂ ಸ್ವಲ್ಪ ಧೈರ್ಯ ಬಂತು.

ದಟ್ಟ ಕಾಡುಗಳ ನಡುವೆ ಚುಚ್ಚುವ ಸೂಜಿಯಂತಹ ಚಳಿ. ಸಾಮಾನ್ಯವಾಗಿ ವಾತಾವರಣದಲ್ಲಿ ಚಳಿ–ಗಾಳಿ ಇದ್ದರೆ ಹಸಿವು ಹೆಚ್ಚಂತೆ. ನಮಗೂ ಶಿಲ್ಲಾಂಗ್ - ಚಿರಾಪುಂಜಿ ಕಾಡಿನಲ್ಲಿ ಸಾಗುತ್ತಿದ್ದಾಗ ಅಲ್ಲಿನ ವಾತಾವರಣಕ್ಕೆ ಹೊಟ್ಟೆ ಚುರ್ ಎನ್ನುತ್ತಿತ್ತು. ಸಾಗುತ್ತಿದ್ದ ದಾರಿಯಲ್ಲಿ ಅಕ್ಕಪಕ್ಕ ಕಣ್ಣಾಡಿಸಿದಾಗ ಮಾವ್ಡಾಕ್ ಎಂಬ ಕಣಿವೆ ಬಳಿ ಢಾಬಾ ಸಿಕ್ಕಿತು. ರಸ್ತೆ ಪಕ್ಕ ಕಾರು ನಿಲ್ಲಿಸಿ, ಢಾಬಾದಲ್ಲಿ ಪರೋಟ ಮತ್ತು ವಿಶಿಷ್ಟ ರುಚಿಯ ಪಕೋಡ ಸವಿದು ಪಯಣ ಮುಂದುವರಿಸಿದೆವು.

ಜಲಪಾತ ನೋಡಲು ಹೋಗುತ್ತಿದ್ದ ದಾರಿಯುದ್ದಕ್ಕೂ ಕಾಣುವ ಬೆಟ್ಟಗಳ ಸಾಲು, ಅವುಗಳ ನಡುವೆ ಧುಮ್ಮಿಕ್ಕುವ ಝರಿಗಳು, ಕಿರು ಜಲಪಾತಗಳು, ನಮ್ಮನ್ನು ಸ್ವಾಗತಿಸಲು ಕಲಶ ಹಿಡಿದು ನಿಂತಂತೆ ಭಾಸವಾಗುತ್ತಿತ್ತು!

ಈ ಜಲಧಾರೆಗಳು ಬೆಟ್ಟಗಳಿಂದ ಇಳಿದು ಸೃಜಿಸುವ ಸ್ಫಟಿಕ ಶುಭ್ರ ಹನಿಗಳ ಸಿಂಚನ ನೋಡುವುದೇ ಒಂದು ಸೊಬಗು. ಕಣ್ಣು ರೆಪ್ಪೆ ಮಿಟುಕಿಸದಂತೆ ಈ ದೃಶ್ಯ ಕಾವ್ಯಗಳನ್ನು ಕಣ್ತುಂಬಿಸಿಕೊಳ್ಳುತ್ತಿದ್ದೆ. ‘ಮಳೆಗಾಲದಲ್ಲಿ ಇಲ್ಲಿ ಪ್ರತಿ ಬೆಟ್ಟಗಳ ಮೇಲೂ ಎಣಿಸಲಾಗದಷ್ಟು ಜಲಕನ್ನಿಕೆಯರ ಮೆರವಣಿಗೆಯೇ ನಡೆಯುತ್ತದೆ’ ಎಂದು ಹೇಳಿ ಹೊಟ್ಟೆ ಉರಿಸಿದ ನಮ್ಮ ಕಾರು ಚಾಲಕ.

ವಿಶಾಲ ಬೆಟ್ಟಗಳ ಸರಣಿ ದಾಟಿ ಮುಂದಡಿ ಇಟ್ಟಾಗ ಸಾಲು ಸಾಲು ಅಂಗಡಿಗಳು ಕಂಡವು. ಸ್ಥಳೀಯ ಮಸಾಲೆ ಪದಾರ್ಥಗಳು, ತರಹೇವಾರಿ ಅಳತೆಯ ಬಿದಿರ ಬುಟ್ಟಿಗಳು, ಬಿದಿರ ಬುಟ್ಟಿಯ ಕೀ ಚೈನುಗಳು, ಪರ್ಸುಗಳು ಸೇರಿದಂತೆ ಅನೇಕ ಬಗೆಯ ಅಲಂಕಾರಿಕ ಬಿದಿರಿನ ವಸ್ತುಗಳು ಮಾರಾಟಕ್ಕಿಟ್ಟಿದ್ದರು. ಅವನ್ನೆಲ್ಲ ನೋಡುತ್ತಾ ಸ್ಥಳೀಯರ ಕಲಾ ಕೌಶಲದ ಬಗ್ಗೆ ಹೆಮ್ಮೆ ಎನ್ನಿಸಿತು.

ಹೀಗೆ ದಾರಿಯುದ್ದಕ್ಕೂ ಇಂಥ ಸುಮಧುರ ಸ್ಥಳಗಳನ್ನು ನೋಡುತ್ತಾ, ನಮೂನೆ ಜನರನ್ನು ಭೇಟಿಯಾಗುತ್ತಾ ನೊಹ್ಕಾಲಿಕೈ ಜಲಧಾರೆಯ ಎದುರು ನಿಂತೆವು.

ಪೂರ್ವ ಖಾಸಿ ಬೆಟ್ಟಗಳ ಸರಣಿಯಲ್ಲಿ ಸುಮಾರು 340 ಮೀಟರ್ (1115 ಅಡಿ) ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತದ ಸೌಂದರ್ಯ ವರ್ಣಿಸಲಸದಳ. ಬೆಟ್ಟದಿಂದ ಜಿಗಿಯುವ ಈ ಜಲಧಾರೆ ಮುಂದೆ ಚಿರಾಪುಂಜಿಯ ಕಾಡನ್ನೆಲ್ಲಾ ಸುತ್ತಾಡುತ್ತಾ ಕೊನೆಗೆ ಬ್ರಹ್ಮಪುತ್ರ ನದಿಗೆ ಸೇರುತ್ತದೆ.

ಇದು ಅತಿ ಹೆಚ್ಚು ಎತ್ತರದಿಂದ ಧುಮ್ಮಿಕ್ಕುವ ವಿಶ್ವದ ನಾಲ್ಕನೇ ಜಲಪಾತವಾದರೆ, ಏಷ್ಯಾ ಖಂಡದಲ್ಲೇ ಇದು ಮೊದಲ ಜಲಧಾರೆಯಂತೆ. ಈ ಜಲಪಾತದ ಆಸುಪಾಸಿನಲ್ಲಿ ಕಿರು ಜಲಧಾರೆಗಳೂ ಕಾಣಿಸುತ್ತವೆ. ಹಸಿರು ಬಟ್ಟೆಯ ನಡುವೆ ದಪ್ಪ ಬಿಳಿಯ ನೂಲಿನಂತೆ ಬಿಡಿ ಡಿಯಾಗಿ ಕೆಳಗಿಳಿಯುವ ಕಿರು ಜಲಪಾತಗಳ ಸೊಬಗು ನೋಡುವುದೇ ಚೆಂದ. ಹೇಳಿಕೇಳಿ ಮೇಘಾಲಯ ಮೋಡಗಳ ನಾಡು. ಮಂಜಿನ ಬೀಡು. ಕ್ಷಣ ಕ್ಷಣಕ್ಕೂ ಮಂಜು ಆವರಿಸಿಕೊಳ್ಳುತ್ತದೆ. ಹೀಗಾಗಿ ಜಲಧಾರೆ ದರ್ಶನಕ್ಕೆ ಕ್ಷಣಗಳಷ್ಟು ಸಮಯ ಮಾತ್ರ ಸಿಗುತ್ತದೆ. ಏಕೆಂದರೆ, ಮಂಜಿನ ಪರದೆ ಯಾವಾಗ ಮುಚ್ಚಿ ಬಿಡುತ್ತದೋ ತಿಳಿಯುವುದಿಲ್ಲ.

ಏಕಾಂಗಿ ಜಲಧಾರೆ ನೋಡುತ್ತಾ, ವಾಪಸ್ ಬರುವಾಗ ಮಾವುಜ್ರಂಗ್ ಎಂಬ ಊರನ್ನು ನೋಡಿದೆ. ಸ್ವಚ್ಛವಾದ ಊರು ಅದು. ಅದರೊಳಗೆ ಸುತ್ತಾಡುತ್ತಿದ್ದಾಗ ನನಗೆ ಕರ್ನಾಟಕದ ಹಳ್ಳಿಗಳ ಬೀದಿಗಳೊಮ್ಮೆ ಕಣ್ಮುಂದೆ ಬಂದವು. ಆ ಗ್ರಾಮದ ಸ್ವಚ್ಛ ಪರಿಸರ ನಮ್ಮನ್ನೊಂದು ಹೊಸ ಲೋಕಕ್ಕೆ ಕರೆದೊಯ್ಯಿತು. ಇಡೀ ಊರನ್ನು ಹುಡುಕಿದರೂ ಒಂದು ಸಣ್ಣ ಪ್ಲಾಸ್ಟಿಕ್ ಕಸವಿಲ್ಲ. ಇಲ್ಲಿನ ಜನರು ತಮ್ಮ ಮನೆಯ ಅಂಗಳದ ಜತೆಗೆ, ಪಕ್ಕದ ಜಾಗವನ್ನು ಗುಡಿಸಿ ಶುಚಿಯಾಗಿಡುತ್ತಾರೆ. ನಾವು ಹೋಗಿದ್ದ ವೇಳೆ, ಸ್ಥಳೀಯರು ರಸ್ತೆ ಸ್ವಚ್ಛ ಮಾಡುತ್ತಿದ್ದರು. ಅಂದ ಹಾಗೆ, ಏಷ್ಯಾದ ‘ಸ್ವಚ್ಛ ಹಳ್ಳಿ‘ ಪುರಸ್ಕಾರ ಪಡೆದಿರುವ ‘ಮಾವುಲಿನ್ನೋಂಗ್’ ಎಂಬ ಗ್ರಾಮ, ಶಿಲ್ಲಾಂಗ್ನಿಂದ 78 ಕಿಲೋ ಮೀಟರ್ ದೂರದಲ್ಲಿದೆಯಂತೆ. ಆದರೆ, ನಮಗೆ ಅದನ್ನು ನೋಡಲು ಸಾಧ್ಯವಾಗಲಿಲ್ಲ.

ಇಂಥ ಸುಂದರ ತಾಣಗಳಲ್ಲೂ ಒಂದಷ್ಟು ಪರಿಸರಕ್ಕೆ ಮಾರಕವಾಗುವಂತಹ ಚಟುವಟಿಕೆಗಳು ಕಂಡವು. ನಾವು ಸಾಗುತ್ತಿದ್ದ ದಾರಿ ಅಕ್ಕಪಕ್ಕದಲ್ಲಿ ಬೆಟ್ಟಗಳನ್ನು ಕೊರೆದು ಸುಣ್ಣದ ಕಲ್ಲಿನ ಗುಹೆಗಳನ್ನಾಗಿ ಮಾಡುತ್ತಿದ್ದರು. ಕಲ್ಲಿನ ಕ್ವಾರಿಗಳು ಕಂಡವು. ಈ ಸುಣ್ಣ ಕಲ್ಲುಗಳು ಸನಿಹದಲ್ಲಿರುವ ಸಿಮೆಂಟ್ ಕಾರ್ಖಾನೆಗೆ ಸರಬರಾಜಾಗುತ್ತವಂತೆ. ಹೀಗೆ ಬೆಟ್ಟ ಕೊರೆಯುತ್ತಿದ್ದರೆ, ಒಂದೆರಡು ದಶಕಗಳಲ್ಲಿ ಬೆಟ್ಟಗಳೆಲ್ಲ ಬಯಲಾಗುವುದರಲ್ಲಿ ಸಂಶಯವೇ ಇಲ್ಲ ಎನ್ನಿಸಿತು. ಅಭಿವೃದ್ಧಿಯ ಹೆಸರಿನಲ್ಲಿ ಚಿರಾಪುಂಜಿಯ ಸುಮನೋಹರ ಬೆಟ್ಟಗಳನ್ನು ಬಲಿಕೊಡುವುದು ಎಷ್ಟು ಸರಿ? ಎಂಬ ಜಿಜ್ಞಾಸೆಯೊಂದಿಗೆ ‘ಮೌಸ್ಮಿ’ ಎಂಬ ನಾಲಗೆ ಹೊರಳದ ಊರಿನ ಗುಹೆಗೆ ತೆರಳಿದೆವು.

ಹೋಗುವುದು ಹೇಗೆ ?

ಬೆಂಗಳೂರಿನಿಂದ ಗುವಾಹಟಿ (ಅಸ್ಸಾಂ)ವರೆಗೆ ರೈಲು ಮತ್ತು ವಿಮಾನ ಸೌಲಭ್ಯಗಳಿವೆ. ಮೇಘಾಲಯ ರಾಜಧಾನಿ ಶಿಲ್ಲಾಂಗ್ ತಲುಪಲು ಈ ರೈಲು ಮತ್ತು ವಿಮಾನ ನಿಲ್ದಾಣಗಳು ಸಮೀಪವಾಗಿವೆ. ಗುವಾಹಟಿಯಿಂದ ಶಿಲ್ಲಾಂಗ್ಗೆ 164 ಕಿ.ಮೀ ದೂರವಿದೆ. ಟ್ಯಾಕ್ಸಿ ಮತ್ತು ಬಸ್ ಎರಡೂ ಲಭ್ಯವಿವೆ. ಒಟ್ಟು ನಾಲ್ಕು ಗಂಟೆಯ ಪ್ರಯಾಣ. ಶಿಲ್ಲಾಂಗ್ - ಚಿರಾಪುಂಜಿ(ನೊಹ್ಕಾಲಿಕೈ ಜಲಧಾರೆ)ಗೆ 54 ಕಿ.ಮೀ ದೂರ. ಖಾಸಗಿ ವಾಹನ, ಬಸ್ಗಳು ಲಭ್ಯವಿವೆ. ಆಸಕ್ತಿ ಇದ್ದರೆ ಟ್ರಾವೆಲ್ ಏಜೆನ್ಸಿಗಳೊಂದಿಗೂ ತೆರಳಬಹುದು.

ಯಾವ ಸಮಯ ಸೂಕ್ತ

ಜೂನ್ನಿಂದ ನವೆಂಬರ್ ತಿಂಗಳವರೆಗೆ ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಈ ಜಲಧಾರೆ ನೋಡಲು ಬೆಳಗಿನ ವೇಳೆಯಲ್ಲೇ ಹೋಗಬೇಕು. ಮಳೆಗಾಲದಲ್ಲಿ ಇದರ ಸೊಬಗೇ ಬೇರೆ.

ಊಟ-ವಸತಿ

ಶಿಲ್ಲಾಂಗ್ನಿಂದ ಚಿರಾಪುಂಜಿಗೆ ಹೋಗುವ ದಾರಿಯುದ್ದಕ್ಕೂ ಅನೇಕ ಉತ್ತಮ ಹೋಟೆಲ್ಗಳಿವೆ. ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿ ತರಹೇವಾರಿ ತಿನಿಸುಗಳು ಸಿಗುತ್ತವೆ. ನಾನು ಊಟ ಮಾಡಿದ ಹೋಟೆಲ್ ಗ್ರೀನ್ ಆರ್ಕಿಡ್ ಅದ್ಭುತವಾಗಿತ್ತು. ಇಲ್ಲಿ ಉಳಿದುಕೊಳ್ಳಲು ಸಾಕಷ್ಟು ವಸತಿ ಗೃಹಗಳಿವೆ. ಆನ್ಲೈನ್ ನಲ್ಲಿ ಬುಕ್ ಮಾಡಿ ಹೋಗುವುದು ಕ್ಷೇಮ.

ಇನ್ನು ಏನೇನು ನೋಡಬಹುದು?

ಈ ಜಲಧಾರೆಯ ನೋಡಿ ಸನಿಹದ ಅಕ್ಕ ತಂಗಿ ಜಲಪಾತ, ಮೌಸಮಿ ಸುಣ್ಣದ ಕಲ್ಲಿನ ಗುಹೆ, ವಾಕಾಬಾ ಜಲಧಾರೆ, ಲಿವಿಂಗ್ ರೂಟ್ ಅಣೆಕಟ್ಟು, ಸೆವೆನ್ ಸಿಸ್ಟರ್ಸ್ ಫಾಲ್ಸ್, ಮಾಕ್ಡೊಕ್ ಡೈಮ್ಪೆಪ್ ವ್ಯಾಲಿ, ಇಕೊ ಪಾರ್ಕ್ ಮತ್ತು ಕಾ ಖೋಹ್ ರಾಮ್ಹಾ.. ಇನ್ನೂ ಅನೇಕ ಸ್ಥಳಗಳಿವೆ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.