ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಕಾಂತದ ಚಾರಣಕ್ಕೆ ಚಿನಗ

ತೇಜಸ್ ಪಿ.
Published 22 ಜೂನ್ 2024, 5:00 IST
Last Updated 22 ಜೂನ್ 2024, 5:00 IST
ಅಕ್ಷರ ಗಾತ್ರ

ಮೇಲೆ ಮಂಜಿನ ಮುಸುಕಿನಲ್ಲಿ ಮರೆಯಾದ ತುದಿ. ಕೆಳಗೆ ಬಂಡೆಹಾಸುಗಳ ಮೇಲೆ ನೀರು ಹರಿದ ಹಾದಿ. ಅಕ್ಕಪಕ್ಕದ ಗಿಡಗಂಟಿಗಳ ಎಲೆಗಳಿಂದ ತೊಟ್ಟಿಕ್ಕುತ್ತಿರುವ ಇಬ್ಬನಿ. ಅಲ್ಲೆಲ್ಲೋ ಖೇಂಕರಿಸುವ ಗಂಡುನವಿಲಿಗೆ ಇನ್ನೆಲ್ಲಿಂದಲೋ ಹೆಣ್ಣು ನವಿಲುಗಳ ಮಾರ್ದನಿ. ಎರಡಾಳೆತ್ತರದ ಮರಗಳಲ್ಲಿ ಕೂತು ಜೂಗಡಿಸುತ್ತಿರುವ ಹನುಮಾನ್‌ ಲಂಗೂರ್‌. ಇದ್ದೂ ಇಲ್ಲದ ಕಾಲುಹಾದಿಯಲ್ಲಿ ಒಂದರ ಮೇಲೊಂದರಂತೆ ಹೆಜ್ಜೆ ಹಾಕುತ್ತಿದ್ದಾಗ ಪಕ್ಕದ ಪೊದೆಯಿಂದ ದಿಢೀರ್ ಎಂದು ಹಾರಿ ಬೆಚ್ಚಿಬೀಳಿಸುವ ನವಿಲು. ಬೆಳಿಗ್ಗೆಯೇ ಎದ್ದು ಗಬ್ಬಲವೆಬ್ಬಿಸಿ, ಸುತ್ತಲಿನ ನಿಶ್ಯಬ್ಧವನ್ನು ಓಡಿಸುತ್ತಿರುವ ಬ್ಯಾಬ್ಲರ್‌ಗಳು... ಹೀಗೆ ದಿಟ್ಟಿ ಹಾಯಿಸಿದತ್ತೆಲ್ಲಾ ಮುದ ನೀಡುವಂತಹ ಬೆಳಗಿಗೆ ಸಾಕ್ಷಿಯಾಗಲು ನಿತ್ಯಹರಿದ್ವರ್ಣದ ಬೆಟ್ಟಕಾಡಿಗೇ ಹೋಗಬೇಕಿಲ್ಲ. ಬೆಂಗಳೂರಿನ ಸುತ್ತಲಿನಲ್ಲೇ ಇಂತಹ ಹತ್ತಾರು ಬೆಟ್ಟ–ಗುಡ್ಡಗಳಿವೆ. ಮೇಲಿನ ಎಲ್ಲಾ ಅನುಭವವನ್ನು ಒದಗಿಸಿಕೊಟ್ಟದ್ದು ಚಿನಗ.

ಚಿನಗ, ಚಿನಿಗ ಎಂದೆಲ್ಲಾ ಕರೆಯಲಾಗುವ ತೀರಾ ಪರಿಚಿತವಲ್ಲದ ಈ ಬೆಟ್ಟ ಬೆಂಗಳೂರು ಕೇಂದ್ರದಿಂದ ಸುಮಾರು 75 ಕಿ.ಮೀ.ಗಳಷ್ಟು ದೂರವಿದೆ. ಹತ್ತಾರು ಬೆಟ್ಟಗಳನ್ನು ಒಳಗೊಂಡು ರೂಪುಗೊಂಡಿರುವ ದೇವರಾಯನದುರ್ಗ ಬೆಟ್ಟಸಾಲಿನಲ್ಲಿ ಚಿನಗವೂ ಒಂದು. ದೇವರಾಯನದುರ್ಗದಿಂದ ವಾಯವ್ಯ ದಿಕ್ಕಿನಲ್ಲಿರುವ ಈ ಚಿಕ್ಕ ಬೆಟ್ಟವು, ತೀರಾ ಪರಿಚಿತವಲ್ಲದ ಕಾರಣಕ್ಕೇ ತನ್ನ ಸೌಂದರ್ಯವನ್ನು ಉಳಿಸಿಕೊಂಡಿದೆ. ತುಮಕೂರು ನಗರ ಕೇಂದ್ರದಿಂದ 10–11 ಕಿ.ಮೀ.ನಷ್ಟೇ ಹತ್ತಿರದಲ್ಲಿ ಇದ್ದರೂ, ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡುವುದಿಲ್ಲ. ಹೆಚ್ಚಿನ ಜನ ಬರದೇ ಇರುವ ಕಾರಣಕ್ಕೆ ಬೆಟ್ಟದ ಬುಡದಲ್ಲಿ ಯಾವುದೇ ಅಂಗಡಿಗಳು–ಹೋಟೆಲ್‌ಗಳೂ ಇಲ್ಲ. ಚಾರಣಕ್ಕೆ ಸಾಕಾಗುವಷ್ಟು ನೀರು, ತಿಂಡಿ–ತಿನಿಸು ಕಟ್ಟಿಕೊಂಡು ಹೋಗಲೇಬೇಕು. ಬೆಂಗಳೂರಿನಿಂದ ಒಂದು ದಿನದಲ್ಲಿ ಹೊರಟು, ಜನದಟ್ಟಣೆ ಇಲ್ಲದೆಡೆ ಚಾರಣ ಮುಗಿಸಿ ಮತ್ತೆ ಸಂಜೆ ವೇಳೆಗೆ ವಾಪಸಾಗಲು ಹೇಳಿಮಾಡಿಸಿದಂತ ತಾಣ ಚಿನಗ.

ಚಿನಗದ ಚಾರಣ ಸಾಧಾರಣ ಮಟ್ಟದ್ದು. ಬೆಟ್ಟದ ಮಧ್ಯಭಾಗದಲ್ಲಿರುವ ಬೆಟ್ಟದ ರಂಗನಾಥಸ್ವಾಮಿ ದೇವಾಲಯದವರೆಗೂ ವಾಹನಗಳು ಹೋಗುತ್ತವೆ. ಅಲ್ಲಿಂದ ಕಾಲುಹಾದಿ ಹಿಡಿದು ಕಾಡು ಹೊಕ್ಕಬೇಕು. ಸ್ವಲ್ಪದೂರ ಹಾದಿ ಕಾಣುತ್ತದೆ. ಆಮೇಲೆ ನಾವು ನಡೆದದ್ದೇ ಹಾದಿ. ಬೆಟ್ಟದ ತುದಿಯಲ್ಲಿರುವ ಬಂಡೆಹಾಸನ್ನು ತಲುಪುವುದಷ್ಟೇ ಗುರಿ. ಹಾದಿ ಇಲ್ಲದಿರುವುದು, ಜನಸಂದಣಿ ಇಲ್ಲದಿರುವುದು ಮತ್ತು ಹಕ್ಕಿ–ಪಕ್ಷಿಗಳ ಇರುವಿಕೆ, ಸುಳಿರ್ಗಾಳಿ ಈ ಸಾಧಾರಣ ಚಾರಣವನ್ನೂ ರೋಮಾಂಚನಗೊಳಿಸುತ್ತದೆ. ಬಂಡೆಹಾಸನ್ನು ತಲುಪಿ, ಬುತ್ತಿ ತೆರೆದು ಹೊಟ್ಟೆ ತುಂಬಿಸಿಕೊಳ್ಳಬೇಕು.  ಅಲ್ಲಿಂದ ಮತ್ತೆ ಕಣ್ತುಂಬಿಸಿಕೊಳ್ಳುವ ಕಾಯಕ. ಬಂಡೆಹಾಸಿನಿಂದ ಎರಡು ವಿರುದ್ಧ ದಿಕ್ಕಿನಲ್ಲಿ ಎರಡು ಕಿರುಗುಡ್ಡಗಳಿವೆ. ಒಂದು ಕಂಬದಕಲ್ಲು ಮತ್ತೊಂದು ಅಣ್ಣ–ತಮ್ಮ ರಾಶಿ ಬಂಡೆ.

ಬೆಟ್ಟದ ಮೇಲೆ ಎದ್ದುನಿಂತಿರುವ ಕೋಡುಗಲ್ಲಿನ ಕಾರಣಕ್ಕೇ ಇವನ್ನು ಕಂಬದಕಲ್ಲು ಎನ್ನಲಾಗುತ್ತದೆ. ಸಾಹಸಪಟ್ಟರೆ ಕಂಬದಕಲ್ಲುಗಳನ್ನು ಹತ್ತಿ ತುದಿ ತಲುಪಬಹುದು. ಇನ್ನು ಅಣ್ಣ–ತಮ್ಮ ರಾಶಿಬಂಡೆ ಎಂದು ಏಕೆ ಕರೆಯುತ್ತಾರೆ ಎಂದು ಕತೆ ಹೇಳುವವರು ಯಾರೂ ಅಲ್ಲಿರಲಿಲ್ಲ. ಅಲ್ಲಿಯೂ ಬೆಟ್ಟದ ಮೇಲೆ ನಿಂತು ಪ್ರಕೃತಿಯನ್ನು ಸವಿಯಲು ಅವಕಾಶಗಳಿವೆ. 3–4 ತಾಸಿನಲ್ಲಿ ಇಷ್ಟೆಲ್ಲಾ ಚಾರಣ ಮುಗಿಯುತ್ತದೆ. ಕೆಲವರು ಟೆಂಟ್‌ ಹಾಕಿ ರಾತ್ರಿಯನ್ನು ಅಲ್ಲೇ ಕಳೆಯುತ್ತಾರೆ. ಆದರೆ ಅದು ಅಸುರಕ್ಷಿತ ಮತ್ತು ಕಾನೂನು ಬಾಹಿರವೂ ಹೌದು. ಹೀಗಾಗಿ ಸಂಜೆ ವೇಳೆಗೆ ಬೆಟ್ಟ ಇಳಿದು ಬೆಂಗಳೂರಿನತ್ತ ಹೊರಟರಾಯಿತು. ಮನೆ ತಲುಪುವಷ್ಟರಲ್ಲಿ ಹೊಟ್ಟೆ ತುಂಬಿಸಲು ಹೆದ್ದಾರಿಯುದ್ದಕ್ಕೂ ಹತ್ತಾರು ಹೋಟೆಲ್‌ಗಳಿವೆ. 

ಗೂಗಲ್‌ ಲೊಕೇಷನ್‌ ಕೋಆರ್ಡಿನೇಟ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT