ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಅವರ ಕಾದಂಬರಿಗಳಲ್ಲೇ ಮೇರು ಕೃತಿ. ಮೂಕಜ್ಜಿಯ ಪಾತ್ರದ ಮೂಲಕ ಅವರು ಜೀವನದ ಸಾರ ಸತ್ವವನ್ನು ವಿಮರ್ಶಿಸಿದ್ದಾರೆ. ಗಹನವಾದ, ವೈಚಾರಿಕ ವ್ಯಕ್ತಿ-ವಿಷಯಗಳ ಸುತ್ತ ಹಬ್ಬಿಕೊಂಡಿರುವ ಮೂಕಜ್ಜಿಯನ್ನು ರಂಗರೂಪಕ್ಕೆ ಅಳವಡಿಸಿದ ಪ್ರಯತ್ನವೇ ಇತ್ತೀಚೆಗೆ ‘ರಂಗಶಂಕರ’ದಲ್ಲಿ ಕಲಾಗಂಗೋತ್ರಿ ಪ್ರದರ್ಶಿಸಿದ ನಾಟಕ.

ಕಾದಂಬರಿಯಷ್ಟೇ ಕುತೂಹಲಕಾರಿಯಾಗಿ ಸಾಗುವ ನಾಟಕದ ಕೇಂದ್ರಬಿಂದು ಮೂಕಜ್ಜಿ. ಜೀವನದಲ್ಲಿ ಯಾವ ಸುಖಾನುಭವಗಳನ್ನೂ ಕಾಣದ ಬಾಲ ವಿಧವೆ ಮೂಕಜ್ಜಿ ಅನುಭವಗಳ ಗಣಿ, ಲೋಕಾನುಭವದಲ್ಲಿ ನಿಷ್ಣಾತಳೆಂಬುದೇ ಈ ಕಥಾನಕದ ವಿಶೇಷ. ಬಾಯಿ ಬಡುಕಿ ಮೂಕಳಾಗಿದ್ದು ಇನ್ನೊಂದು ವಿಪರ್ಯಾಸ. ಇವಳು ತ್ರಿಕಾಲ ಜ್ಞಾನಿ, ಒಂದು ವಸ್ತುವನ್ನು ಸ್ಪರ್ಶಿಸಿಯೇ ಅದರ ಇತಿಹಾಸ, ಹಿನ್ನೆಲೆಗಳನ್ನು ಬಿಡಿಬಿಡಿಸಿ ಹೇಳಬಲ್ಲ ಅವಧೂತ ಮಹಿಳೆ. ಮೇಲ್ನೋಟಕ್ಕೆ ಬಾಯಿಗೆ ಬಂದದಂತೆ ಬಡಬಡಿಸುವ ಹೆಂಗಸಿನಂತೆ ಭಾಸವಾದರೂ ಅವಳಾಡುವ ಒಂದೊಂದು ಶಬ್ದದಲ್ಲೂ ಮಹದರ್ಥ ಅಡಗಿರುವ ಸತ್ಯ ಪಾಮರರಿಗೆ ತಿಳಿಯದು.

ಚಿಕ್ಕಂದಿನಿಂದ ಅವಳಿಗೆ ಆ ವಿಶೇಷ ಶಕ್ತಿ, ಸಿದ್ಧಿ ಕರಗತವಾಗಿತ್ತು. ಅವಳು ಪರಮ ಜ್ಞಾನಿ. ಓದಿದವಳಲ್ಲವಾದರೂ ಪುರಾಣ-, ಇತಿಹಾಸ, ಅಧ್ಯಾತ್ಮ, ಲೌಕಿಕ-, ಪಾರಮಾರ್ಥಿಕ ಎಲ್ಲ ವಿಚಾರಗಳನ್ನೂ ಕೂಲಂಕಷವಾಗಿ ಬಲ್ಲಳು, ಅದರ ಬಗ್ಗೆ ತಲಸ್ಪರ್ಶಿಯಾಗಿ ಚರ್ಚೆ ಮಾಡಬಲ್ಲ ಸಾಮರ್ಥ್ಯವುಳ್ಳ ತೀಕ್ಷ್ಣಮತಿ. ಈ ದಿಟ್ಟ ಹೆಂಗಸಿನ ಸ್ಪಷ್ಟ, ನೇರ ಮಾತುಗಳನ್ನು ಜೀರ್ಣಿಸಿಕೊಳ್ಳಲಾರದ ಅವಳ ಸುತ್ತಮುತ್ತಲಿನ ಜನ ಅವಳಿಗೆ ತಲೆ ನೆಟ್ಟಗಿಲ್ಲ, ಅವಳ ಮೈಮೇಲೆ ಜಕಣಿ ಬರುತ್ತದೆಂಬ ವದಂತಿ ಹುಟ್ಟಿಸಿ ಅವಳ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ. ಇದು ಯಾವ ಸಮಾಜದಲ್ಲೂ, ಯಾವ ಕಾಲದಲ್ಲೂ ಇದ್ದದ್ದೆ. ನಂಬಿ ಬಂದ ನಂಬಿಕೆ--, ಆಚರಣೆಗಳ ಬಗ್ಗೆ ಪ್ರಶ್ನಿಸುವುದು, ಹೊಸ ವಿಷಯ ಅಥವಾ ವೈಚಾರಿಕ ಧೋರಣೆಯನ್ನು ಪ್ರಕಟಪಡಿಸುವುದನ್ನು ಹಲವರು ಸಹಿಸರು. ಅನೇಕರಿಗೆ ಇದು ಅಪಥ್ಯ.

ಸಮಾಜದ ಜನ ಹೀಗೆ ಪ್ರತಿಕ್ರಿಯಿಸುವುದು ಸಾಮಾನ್ಯ. ಈ ಕಾರಣವಾಗಿ ತಾನು ಮೂಕಿಯಾದೆನೆಂದು ಅವಳೇ ಹೇಳಿಕೊಳ್ಳುವಳು. ಅವಳ ಬಾಯಿಯಿಂದ ಹೊರಬೀಳುವ ಅನುಭಾವದ ಸತ್ಯನುಡಿಗಳನ್ನು ಕೇಳಲು ಅವಳ ಮೊಮ್ಮಗ ಸುಬ್ರಾಯನಿಗೆ ಬಲು ಕುತೂಹಲ ಮತ್ತು ಆಸಕ್ತಿ. ಅವನ ಪ್ರಶ್ನೆಗಳಿಂದ ಅನೇಕ ಅಪರೂಪದ ಸಂಗತಿ, ವಿಶ್ಲೇಷಣೆಗಳು ಅವಳ ಅನುಭವದ ಮೂಸೆಯಿಂದ ಹೊರಬೀಳುತ್ತವೆ.
ಮಲೆನಾಡಿನ ಒಂದು ಸಣ್ಣ ಹಳ್ಳಿಯಲ್ಲಿರುವ ಸುಬ್ರಾಯ ಮತ್ತವನ ಹೆಂಡತಿ ಸೀತೆ ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾರೆ.

ಅಜ್ಜಿಗೂ ಅವನನ್ನು ಕಂಡರೆ ಬಲು ಮುಚ್ಚಟೆ. ಮಡಿ ಹೆಂಗಸಾದ ಅಜ್ಜಿಯ ವಾಸ ದಿನದ ಬಹುಹೊತ್ತು ಮನೆಯೆದುರಿನ ಆಲದಮರದ ಕೆಳಗೇ. ಅದರ ಕೆಳಗೇ ಅಜ್ಜಿ-–ಮೊಮ್ಮಗನ ಸಂವಾದ. ಪ್ರಶ್ನೋತ್ತರದಲ್ಲಿ ಬ್ರಹ್ಮಾಂಡವೇ ತೆರೆದುಕೊಳ್ಳುತ್ತದೆ. ದೇವರು ಸಮೃದ್ಧಿಯಾಗಿ ನೆಲ–ಜಲ–-ಗಾಳಿ, ಪ್ರಕೃತಿ ಸಂಪತ್ತನ್ನು ನೀಡಿದ್ದರೂ ಈ ಜನ ಮತ್ತೆ ಮತ್ತೆ ಅವನನ್ನು ಬೇಡುವ ಅವರ ದುರಾಸೆಯ ಬಗ್ಗೆ ವಿಡಂಬಿಸುತ್ತಾಳೆ. ಬ್ರಹ್ಮ, ವಿಷ್ಣು, ಮಹೇಶ್ವರರು ತಂತಮ್ಮ ಹೆಂಡತಿಯರನ್ನೇ ನಿಭಾಯಿಸಲು ಹೆಣಗುತ್ತಿರುವಾಗ ಈ ಜನರನ್ನೇನು ಸಂಭಾಳಿಸಿಯಾರು? ಎನ್ನುವ ಅಜ್ಜಿ, ಹವನ-ಹೋಮದ ಹವಿಸ್ಸು ಅರ್ಪಣೆಗಳ ಅಗತ್ಯ, ಪರಿಣಾಮಗಳ ಬಗ್ಗೆ ತಾರ್ಕಿಕ ವಿಶ್ಲೇಷಣೆ ನೀಡಿ, ಕಟುವಾಗಿ ವಿಮರ್ಶಿಸಿ ತನ್ನ ವೈಜ್ಞಾನಿಕ ದೃಷ್ಟಿಯನ್ನೂ ತೋರಿಸುತ್ತಾಳೆ. ದೇವರಿಂದ ಮಾನವನೋ, ಮಾನವನಿಂದ ದೇವರೋ ಎಂಬ ಅಧ್ಯಾತ್ಮಿಕ ಚರ್ಚೆಯನ್ನೂ ಮುಂದಿಡುತ್ತಾಳೆ.

ಸುಬ್ರಾಯ ಕಾಡು ಅಲೆಯುವಾಗ ತನಗೆ ಸಿಕ್ಕ ಮೂಳೆಗಳು, ಕೊಂಬು ಹಾಗೂ ಹಿತ್ತಾಳೆಯ ಪಾತ್ರೆ ಇತ್ಯಾದಿಯನ್ನು ಅಜ್ಜಿಯ ಕೈಗೆ ನೀಡಿದಾಗ ಅವಳದನ್ನು ಕೈಯಲ್ಲಿ ಮುಟ್ಟಿ ನೋಡುತ್ತ, ಅಂದಿನ ಕಾಲಘಟ್ಟಕ್ಕೆ ಪಯಣಿಸಿ, ಅದರ ಮೂಲ, ನಡೆದ ಘಟನೆ, ಸಂದರ್ಭಗಳನ್ನು ತಾನು ಕಂಡ ಹಾಗೆ ವಿವರಿಸುತ್ತಾಳೆ. ಆದಿ ಮಾನವನ ಕಾಲದ ಧಾರ್ಮಿಕ ಘರ್ಷಣೆ, ಶಿಲಾಯುಗ, ಲೋಹಯುಗ, ಅಘೋರಿ-ಕಾಪಾಲಿಕರ ಕಥೆ, ಜೈನ-–ಬೌದ್ಧರ ಆಗಮನ, ಕುಲಾಚರಣೆಗಳ ಬಗ್ಗೆ ತಿಳಿಸಿಕೊಡುತ್ತಾಳೆ. ಅಜ್ಜಿಗೆ ಸಾಮಾಜಿಕ ಹೊಣೆಯೂ ಅಷ್ಟೇ ಉಂಟು. ರಾಮಣ್ಣ, ನಾಗಿಯರ ಕೆಟ್ಟುಹೋದ ಬದುಕನ್ನು ಸರಿಪಡಿಸುತ್ತಾಳೆ.

ಮನೆಯಲ್ಲಿ ನಡೆಯುವ ಸುಬ್ರಾಯನ ತಮ್ಮ ನಾರಾಯಣನ ಮದುವೆ ಆಗು ಹೋಗುಗಳಲ್ಲಿ, ಊರ ಹಿರಿಯ ಏರ್ಪಡಿಸುವ ಮೂಕಾಂಬಿಕೆ ಅಮ್ಮನವರ ಕೈಂಕರ್ಯದಲ್ಲಿ ಭಾಗವಹಿಸುತ್ತಾಳೆ. ಬೇರೆ ಊರಿನಲ್ಲಿದ್ದ ತನ್ನಂತೆ ಮಡಿ ಹೆಂಗಸಾದ ತಿಪ್ಪಜ್ಜಿಯ ಕೊನೆಗಾಲದಲ್ಲಿ ಹೋಗಿ ನೆರವಾಗುವಂಥ ಮಾನವೀಯತೆಯನ್ನೂ ಮೆರೆಯುತ್ತಾಳೆ. ಮನೆಗೆ ಬಂದ ಅನಂತಯ್ಯನ ಖೊಟ್ಟಿ ಸನ್ಯಾಸತ್ವ, ಜನಾರ್ದನನ ಚಂಚಲ ಸ್ವಭಾವ, ಊರಿಗೆ ಊಟ ಹಾಕಿಸಿ ಜಂಭದಿಂದ ಬೀಗುವ ಮಂಜುನಾಥನ ಅಹಂಕಾರ ಮರ್ಧನ, ಸರ್ವಜ್ಞನೆಂದು ಭ್ರಮಿಸಿದವನ ಗರ್ವಭಂಗ, ಆಷಾಢಭೂತಿತನವನ್ನು ಬಯಲಿಗೆಳೆವ ಪ್ರಸಂಗಗಳೂ ನಡೆಯುತ್ತವೆ. ಒಟ್ಟಿನಲ್ಲಿ ಈ ಮೂಕಜ್ಜಿ ತನ್ನ ಅತೀತ ಶಕ್ತಿಯಿಂದ ನಿನ್ನೆ, ಇಂದು– ನಾಳೆಯ ಎಲ್ಲ ಸಂಗತಿಗಳನ್ನೂ ತಿಳಿಸುವ ವಾಸ್ತವ ಸತ್ಯ ಸಂಗತಿಗಳು ಅವಳ ‘ಕನಸ’ಲ್ಲ. ‘ಕಣಸು’, ‘ಕಾಣ್ಕೆ’, ‘ದರ್ಶನ ’ ಎಂಬುದೇ ಹೆಚ್ಚು ಸೂಕ್ತ.

ಅಜ್ಜಿಯಾಡುವ ಮಾರ್ಮಿಕ, ಅರ್ಥಪೂರ್ಣ ಮಾತುಗಳನ್ನು ಹೇಳುತ್ತ ಹೋದರೆ ಅದಕ್ಕೆ ಕೊನೆ ಮೊದಲಿಲ್ಲ. ಪ್ರತಿ ಮಾತು, ಹೇಳಿಕೆಗಳೂ ನೋಡುಗನ ಮನದಲ್ಲಿ ಅಚ್ಚೊತ್ತಿದ್ದವು. ನಾಟಕದ ಮುಖ್ಯ ಪಾತ್ರಗಳಾದ ಅಜ್ಜಿ (ಎನ್. ಮಂಗಳಾ) ತಮ್ಮ ಪ್ರಬುದ್ಧ ಅಭಿನಯದಿಂದ ಮತ್ತು ಸುಬ್ರಾಯ (ರಾಜೇಂದ್ರ ಕಾರಂತ) ನೋಡುಗರನ್ನು ತಮ್ಮ ಮಾತುಗಾರಿಕೆಯಿಂದ, ಅಮೋಘ ಅಭಿನಯದಿಂದ ಸೆಳೆದುಕೊಳ್ಳುತ್ತಾರೆ. ಇಬ್ಬರ ಧ್ವನಿಗಳೂ ಕಂಚಿನಂಥವು. ಸಂಭಾಷಣೆ ಸ್ಫಟಿಕದಷ್ಟೇ ಸ್ಪಷ್ಟ. ಎರಡು ಪಾತ್ರಗಳೂ ಪ್ರೇಕ್ಷಕರ ಮನದೊಳಗೆ ಆಳವಾಗಿ ಕೂತುಬಿಡುತ್ತವೆ. ಅವರಿಬ್ಬರು ನಟಿಸುತ್ತಿದ್ದಾರೆಂದೇ ಅನಿಸುವುದಿಲ್ಲ. ಪಾತ್ರಗಳೇ ಅವರಾಗಿಬಿಟ್ಟಿದ್ದರು.

ಉಳಿದವರೂ ಅಷ್ಟೇ ಸಹಜ ಅಭಿನಯ ನೀಡಿದ್ದರಿಂದಲೇ ನಾಟಕ ಬಹು ಪರಿಣಾಮಕಾರಿಯಾಗಿದ್ದದ್ದು. ಬೇರುಗಳು ಚಾಚಿಕೊಂಡ ಬೃಹದಾಕಾರದ ಆಲದ ಮರದ ಕೆಳಗಿನ ಕಟ್ಟೆ, ಹಳ್ಳಿಯ ಮನೆ, ಸಾಮಾನು-ಸರಂಜಾಮು ಇತ್ಯಾದಿ ಪರಿಕರಗಳನ್ನೆಲ್ಲ ಜೋಡಿಸಿ ರಚಿಸಿದ ರಂಗಸಜ್ಜಿಕೆ ನಿಜಕ್ಕೂ ಉತ್ತಮ ಅನುಭವಕ್ಕೆ ಕಾರಣವಾಯಿತು. ಅಜ್ಜಿ ವಸ್ತುಗಳನ್ನು ಕೈಯಲ್ಲಿ ಹಿಡಿದು ಧೇನಿಸುವಾಗ ಹಿನ್ನೆಲೆಯಲ್ಲಿ ಸರಿಯುವ ದೃಶ್ಯಗಳು ಅಮೋಘವಾಗಿದ್ದವು. ಕಾಡು ಮನುಷ್ಯರು, ಕಾಪಾಲಿ-, ಅಘೋರಿಗಳು, ಪುರಾಣದ ಪಾತ್ರಗಳು ಅಭಿನಯಿಸುವ ದೃಶ್ಯಗಳು ಅನನ್ಯ ಅನುಭವ ನೀಡಿದವು. ತಿಪ್ಪಜ್ಜಿಯ ಪಾತ್ರದಲ್ಲಿ ಲೀಲಾವತಿ ಬಸವರಾಜು ಗಮನಾರ್ಹ ಅಭಿನಯ ನೀಡಿದರು.

ಸೀತೆಯಾಗಿ ಎಂ.ಎಸ್. ವಿದ್ಯಾ, ರಾಮಣ್ಣನಾಗಿ ಮಧುಸೂದನ್, ನಾಗಿಯಾಗಿ ಜಯಶೀಲ, ಮಂಜುನಾಥನಾಗಿ ರವೀಂದ್ರ, ಜನಾರ್ದನನಾಗಿ ಸಿದ್ಧಾರ್ಥ ಭಟ್ ಮುಂತಾದ ಪ್ರತಿಯೊಬ್ಬರೂ ಸಹಜಾಭಿನಯ ನೀಡಿ ನಾಟಕದ ಯಶಸ್ಸಿಗೆ ಕಾರಣರಾದರು. ಕಾದಂಬರಿಯನ್ನು ಸಾರವತ್ತಾಗಿ ರಂಗರೂಪಕ್ಕೆ ಅಳವಡಿಸಿದವರು ಎಸ್. ರಾಮಮೂರ್ತಿ. ಸಮರ್ಥವಾಗಿ ನಾಟಕವನ್ನು ನಿರ್ದೇಶಿಸಿದ ಡಾ. ಬಿ.ವಿ. ರಾಜಾರಾಂ ಅವರ ಶ್ರಮ ಸಾರ್ಥಕವಾಗಿತ್ತು. ಕಲಾಗಂಗೋತ್ರಿಯ ಮಂಜು ನೆರಳು ಬೆಳಕಿನಾಟದಲ್ಲಿ ತಮ್ಮ ಪಾತ್ರದ ಪ್ರಾಮುಖ್ಯ ತೋರಿದರು. ವಿಜಯಕುಮಾರ್ ಬೆಣಚ ಅವರ ಪ್ರಸಾಧನ ಕಾರ್ಯವೂ ಗಮನೀಯವಾಗಿತ್ತು. ಮೇಳದ ನಟನೆ ಹಾಗೂ ನಿರ್ವಹಣೆ (ಪ್ರದೀಪ್ ನಾಡಿಗ್) ಪರಿಣಾಮಕಾರಿಯಾಗಿತ್ತು. ಒಟ್ಟಿನಲ್ಲಿ ನಲವತ್ತೈದಕ್ಕೂ ಹೆಚ್ಚು ಜನರ ಪರಿಶ್ರಮವನ್ನು ಒಳಗೊಂಡ ‘ಮೂಕಜ್ಜಿಯ ಕನಸುಗಳು’ ನಾಟಕವನ್ನು ಅರ್ಥ ಮಾಡಿಕೊಳ್ಳಲು ಒಂದು ಬಾರಿ ನೋಡಿದರೆ ಸಾಲದೆನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.