* ನೀವು ನಿರ್ದೇಶನಕ್ಕೆ ಇಳಿದಿದ್ದು ಯಾವಾಗ?
ನಾನು ಸಾಮಾಜಿಕ ಚಳವಳಿಯಲ್ಲಿದ್ದವಳು. ಸಿನಿಮಾ ನಿರ್ದೇಶಕಿ ಆಗಬೇಕು ಎಂದು ಎಂದೂ ಅಂದುಕೊಂಡಿರಲಿಲ್ಲ. ನಾವು ಮೊದಲು ಕೆಲಸ ಶುರುಮಾಡಿದ್ದು ಸಾಕ್ಷ್ಯಚಿತ್ರಗಳ ಮೂಲಕ. ನಾನು ಮತ್ತು ಸುನೀಲ್ ಸುಖ್ತಕರ್ ಇಬ್ಬರೂ ಸೇರಿಕೊಂಡು 1984ನಲ್ಲಿ ‘ಬಾಯಿ’ ಎಂಬ ಸಿನಿಮಾ ಮಾಡಿದೆವು. ಅದು ಮಹಿಳೆಯ ಬದುಕಿನ ಕುರಿತಾಗಿತ್ತು. ‘ಬಾಯಿ’ ಚಿತ್ರವನ್ನು ಮಾಡಿ ನಾವು ಕೊಳೆಗೇರಿ, ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಪ್ರದರ್ಶಿಸಿದೆವು. ಅಲ್ಲಿನ ಮಹಿಳೆಯರೊಂದಿಗೆ ಸಂವಾದಿಸಿದೆವು. ಚಿತ್ರವನ್ನು ನೋಡಿದ ಹೆಣ್ಣುಮಕ್ಕಳೆಲ್ಲ ಅದನ್ನು ತಮ್ಮ ಬದುಕಿನೊಂದಿಗೆ ಹೋಲಿಸಿಕೊಳ್ಳುತ್ತಿದ್ದರು. ಚರ್ಚಿಸುತ್ತಿದ್ದರು.

ಯಾವತ್ತೂ ಸಿನಿಮಾ ನೋಡಿರದ ಒಂದು ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಈ ಸಿನಿಮಾ ತೋರಿಸಿದಾಗ ಅವರು ತುಂಬ ಖುಷಿಪಟ್ಟರು. ‘ನೀವ್ಯಾಕೆ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಗಳ ಕುರಿತೂ ಒಂದು ಸಿನಿಮಾ ಮಾಡಬಾರದು’ ಎಂದು ಕೇಳಿದರು. ಆಗ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ. ಮಹಿಳೆಯರು ಕುಡಿಯುವ ನೀರು ತರಲು ಮೈಲಿಗಟ್ಟಲೆ ನಡೆದುಕೊಂಡು ಹೋಗಬೇಕಾಗಿತ್ತು. ಪುರುಷರು ಈ ಬಗ್ಗೆಯೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾನು ಅವರ ಸಮಸ್ಯೆಯನ್ನೇ ಇಟ್ಟುಕೊಂಡು ‘ಪಾನಿ’ ಎಂಬ ಸಿನಿಮಾ ಮಾಡಿದೆ. ಅದಕ್ಕೆ ರಾಷ್ಟ್ರಪ್ರಶಸ್ತಿಯೂ ಬಂತು. ಆಗ ನನಗೆ ಈ ಸಿನಿಮಾ ತುಂಬಾ ಪ್ರಭಾವಶಾಲಿ ಮಾಧ್ಯಮ ಅನಿಸಿತು. ಇದು ಮನುಷ್ಯರ ಮನಸ್ಸನ್ನು ತಲುಪುವುದಷ್ಟೇ ಅಲ್ಲದೇ, ಬದಲಾವಣೆಗೆ ಪ್ರೇರೇಪಿಸುವ ಶಕ್ತಿಯನ್ನೂ ಹೊಂದಿದೆ ಎನ್ನಿಸಿತು. ಸಿನಿಮಾ ನಿರ್ದೇಶಕಿಯಾಗಿ ಮುಂದುವರಿಯಲು ನಿರ್ಧರಿಸಿದೆ.

* ನಿಮ್ಮ ದೃಷ್ಟಿಯಲ್ಲಿ ಸಿನಿಮಾ ಎನ್ನುವುದು ಬರೀ ಕಲೆಯೇ ಅಥವಾ ಸಾಮಾಜಿಕ ಬದಲಾವಣೆಯ ಸಾಧನವೇ?
ಸಿನಿಮಾ ಎನ್ನುವುದು ಸಾಮಾಜಿಕ ಬದಲಾವಣೆಗೆ ಜನರನ್ನು ಪ್ರೇರೇಪಿಸುವ ಕಲೆ. ಆದ್ದರಿಂದಲೇ ನಾನು ಸಿನಿಮಾಗಳಲ್ಲಿ ಕಲೆ ಮತ್ತು ಸಾಮಾಜಿಕ ಕಾಳಜಿಗಳನ್ನು ಬೆರೆಸುವುದು ಮುಖ್ಯ ಎಂದು ನಂಬಿದ್ದೇನೆ. ಇದು ಬರೀ ಕಲೆಯೂ ಅಲ್ಲ, ಹಾಗೆಯೇ ಕೇವಲ ಸಾಮಾಜಿಕ ಸಂದೇಶ ನೀಡುವ ಸಾಧನವೂ ಅಲ್ಲ. ಇದು ಅನಂತ ಸಾಧ್ಯತೆಗಳನ್ನು ಒಳಗೊಂಡಿರುವ ಶಕ್ತಿಶಾಲಿ ಮಾಧ್ಯಮ. ಬದುಕನ್ನು ಶೋಧಿಸುವ ಮಾಧ್ಯಮ. ನಾವು ಬದುಕನ್ನು ಪ್ರಾಮಾಣಿಕವಾಗಿ, ನೈಜ ಪ್ರಜ್ಞೆಯ ಮೂಲಕ ಶೋಧಿಸಿದರೆ ಅದಕ್ಕಿಂತ ಅಮೂಲ್ಯ ಸಂದೇಶ ಬೇರೆ ಯಾವುದೂ ಇಲ್ಲ. ಅದರಲ್ಲಿ ಕಲೆ ಮತ್ತು ಸಂದೇಶ ಎರಡೂ ಮಿಳಿತವಾಗಿಯೇ ಇರುತ್ತದೆ. ಬದುಕಿನ ನಿಜವಾದ ಚಹರೆಯನ್ನು ಶೋಧಿಸುವವನೇ ನಿಜವಾದ ಕಲಾವಿದ.

* ಮರಾಠಿ ಸಿನಿಮಾಗಳ ಪ್ರಯೋಗಶೀಲತೆಯ ದಾರಿಯಲ್ಲಿ ‘ಶ್ವಾಸ್’ ಚಿತ್ರದ ಪಾತ್ರ ಯಾವ ಬಗೆಯದ್ದು?
ಜನರು ಅನವಶ್ಯಕವಾಗಿ ‘ಶ್ವಾಸ್’ ಚಿತ್ರವನ್ನು ಮರಾಠಿ ಚಿತ್ರರಂಗಕ್ಕೆ ತಿರುವು ನೀಡಿದ ಚಿತ್ರ ಎಂದು ಉಲ್ಲೇಖಿಸುತ್ತಾರೆ. ನಾನು ಈ ಮಾತನ್ನು ಖಂಡಿತ ಒಪ್ಪುವುದಿಲ್ಲ. ‘ಶ್ವಾಸ್’ ಮರಾಠಿ ಚಿತ್ರರಂಗದಲ್ಲಿ ಯಾವ ಬದಲಾವಣೆಯನ್ನೂ ತಂದಿಲ್ಲ. ಅದು ಮರಾಠಿಯ ಒಂದು ಒಳ್ಳೆಯ ಸಿನಿಮಾ. ಸಂದೀಪ್ ಸಾವಂತ್ ಒಬ್ಬ ಒಳ್ಳೆಯ ನಿರ್ದೇಶಕ. ಆದರೆ ಖಂಡಿತ ಆ ಚಿತ್ರಕ್ಕಿಂತಲೂ ತುಂಬ ಮೊದಲೇ ಹಲವಾರು ಪ್ರಯೋಗಾತ್ಮಕ ಚಿತ್ರಗಳು ಮರಾಠಿಯಲ್ಲಿ ಬಂದಿದ್ದವು.

* ಶ್ವಾಸ್‌ಗಿಂತ ಮೊದಲು ಮರಾಠಿಯಲ್ಲಿ ನಡೆದ ಪ್ರಯೋಗಗಳ ಬಗ್ಗೆ ಹೇಳುತ್ತೀರಾ?
ಮೊದಲು ಮರಾಠಿ ಸಿನಿಮಾಗಳು ಎಂದರೆ ವಾಸ್ತವದ ಹಂಗೇ ಇಲ್ಲದ ಹಾಸ್ಯಚಿತ್ರಗಳು ಎಂಬ ಭಾವನೆಯೇ ಎಲ್ಲರಲ್ಲಿಯೂ ಇತ್ತು. ನಂತರ ಜಬ್ಬಾರ್ ಪಟೇಲ್, ನಾವೆಲ್ಲ ಸಿನಿಮಾ ಮಾಡಲು ಶುರುಮಾಡಿದ ಮೇಲೆ ರಾಷ್ಟ್ರಮಟ್ಟದಲ್ಲಿ ಜನರು ಮಾರಾಠಿ ಚಿತ್ರಗಳನ್ನು ಗಮನಿಸಲು ಶುರು ಮಾಡಿದರು. ‘ಶ್ವಾಸ್’ ಸಿನಿಮಾ ಬಂದಾಗ ಮರಾಠಿಯಲ್ಲಿ ನಡೆಯುತ್ತಿರುವ ಪ್ರಯೋಗಗಳ ಬಗ್ಗೆ ಗಮನ ಹರಿಸುವಂತಾಯ್ತು. ‘ಶ್ವಾಸ್’ ಚಿತ್ರಕ್ಕೆ ಸಿಕ್ಕ ಜನಪ್ರಿಯತೆ ಹಿಂದಿನ ಎಲ್ಲ ಪ್ರಯೋಗಶೀಲ ನಿರ್ದೇಶಕರ ಶ್ರಮದ ಫಲ.

ಜಬ್ಬಾರ್ ಪಟೇಲ್ ‘ಶ್ವಾಸ್’ಗಿಂತ ಮೊದಲೇ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡುತ್ತಿದ್ದರು. ಅದಕ್ಕಿಂತ ಮುಂಚೆ ಮರಾಠಿಯಲ್ಲಿ ಹಾಸ್ಯಚಿತ್ರಗಳೇ ವಿಜೃಂಭಿಸುತ್ತಿದ್ದವು. ಜಬ್ಬಾರ್ ಪಟೇಲ್ ಅವುಗಳಿಗಿಂತ ತುಂಬ ಭಿನ್ನ ದಾರಿ ತುಳಿದರು. ಅವರ ಜೊತೆ ವಿಜಯ್ ತೆಂಡೂಲ್ಕರ್ ಅವರಂಥ ಶ್ರೇಷ್ಠ ಬರಹಗಾರರು ಇದ್ದರು. ‘ಸಾಮ್ನಾ’, ‘ಜೈತ್ ರೇ ಜೈತ್’, ‘ಉಂಬಾರ್ಥ್’, ‘ಸಿಂಹಾಸನ್’– ಹೀಗೆ ಹಲವು ಪ್ರಯೋಗಾತ್ಮಕ ಸಿನಿಮಾಗಳನ್ನು ಅವರು ಮಾಡಿದ್ದಾರೆ. ಅಮೋಲ್ ಪಾಲೇಕರ್ ಅವರ ‘ಬಾಜಿರಾವೋಚಾ ಭೇಟಾ’ ಮತ್ತು ‘ಶಾಂತತಾ! ಕೋರ್ಟ್ ಚಾಲೂ ಆಹೆ’ ಎಂಬ ಎರಡು ಚಿತ್ರಗಳೂ ಅದುವರೆಗಿನ ಮರಾಠಿ ಸಿನಿಮಾಗಳು ತುಳಿದಿದ್ದ ದಾರಿಗಿಂತ ಭಿನ್ನವಾಗಿದ್ದವು.

* ಮರಾಠಿ ಚಿತ್ರರಂಗದಲ್ಲಿ ಈಗ ಯಾವ ರೀತಿಯ ಸಿನಿಮಾಗಳು ತಯಾರಾಗುತ್ತಿವೆ?
ಹೊಸ ನಿರ್ದೇಶಕರು ಹೆಚ್ಚಾಗಿ ರಿಯಲಿಸ್ಟಿಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹೊಸ ತಂತ್ರಜ್ಞಾನದ ಕುರಿತು ತಿಳಿವಳಿಕೆ ಮತ್ತು ಅದನ್ನು ಕಲಾತ್ಮಕ ಉದ್ದೇಶಗಳಿಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವು ಇಂದಿನ ಹೊಸ ನಿರ್ದೇಶಕರಿಗೆ ಚೆನ್ನಾಗಿ ಗೊತ್ತು. ಅದರ ಫಲ ಇಂದಿನ ಹಲವು ಸಿನಿಮಾಗಳಲ್ಲಿ ಎದ್ದುಕಾಣುತ್ತದೆ.

ವಾಣಿಜ್ಯಾತ್ಮಕ ಸಿನಿಮಾಗಳನ್ನೂ ಚೆನ್ನಾಗಿ ಮಾಡುತ್ತಿದ್ದಾರೆ. ಆದರೆ ಅವರ ಮುಖ್ಯ ಉದ್ದೇಶ ಪ್ರೇಕ್ಷಕರನ್ನು ಆಕರ್ಷಿಸುವುದು. ಹಾಗಾಗಿ ಅವರು ಸಂಗತಿಗಳನ್ನು ವೈಭವೀಕರಿಸುವುದಕ್ಕೇ ಹೆಚ್ಚು ಒತ್ತು ಕೊಡುತ್ತಿದ್ದಾರೆಯೇ ವಿನಾ ವಾಸ್ತವದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ವಾಸ್ತವದ ನೆಲೆಗಟ್ಟಿನಲ್ಲಿಯೇ ಬದುಕನ್ನು ಶೋಧಿಸುವ ಹಲವು ಸಿನಿಮಾಗಳನ್ನು ಹಳ್ಳಿ ಮತ್ತು ನಗರ ಮೂಲದ ಯುವ ನಿರ್ದೇಶಕರು ಮಾಡುತ್ತಿದ್ದಾರೆ.

* ರಂಗಭೂಮಿಯೂ ಮರಾಠಿ ಚಿತ್ರರಂಗವನ್ನು ಸಾಕಷ್ಟು ಪ್ರಭಾವಿಸಿದೆ. ಅವೆರಡರ ನಡುವಿನ ಸಂಬಂಧದ ಕುರಿತು ಹೇಳಿ.
ರಂಗಭೂಮಿ ಹಿನ್ನೆಲೆಯ ಹಲವು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಮೋಹಿತ್ ಟಾಕಲ್ಕರ್ ಒಳ್ಳೆಯ ನಾಟಕ ನಿರ್ದೇಶಕ. ಹಾಗೆಯೇ ಅವರು ನನ್ನ ಸಿನಿಮಾಗಳ ಸಂಕಲನಕಾರರೂ ಹೌದು.

* ಮಹಿಳಾ ನಿರ್ದೇಶಕಿಯಾಗಿ, ಮಹಿಳಾ ಜಗತ್ತು ಸಿನಿಮಾ ಮಾಧ್ಯಮದಲ್ಲಿ ಪೂರ್ತಿಯಾಗಿ ತೆರೆದುಕೊಂಡಿದೆ ಎಂದು ನಿಮಗನಿಸುತ್ತದೆಯೇ?
ಇಲ್ಲ. ಏಕೆಂದರೆ ಭಾರತದಲ್ಲಿ ಈಗಲೂ ಸಿನಿಮಾ ಎನ್ನುವುದು ಜನರನ್ನು ರಂಜಿಸುವ ಮಾಧ್ಯಮವಾಗಿಯೇ ಉಳಿದಿದೆ. ಮನೋರಂಜನೆ ಎಂದು ಬಂದಾಕ್ಷಣ ಮಹಿಳೆಯನ್ನು ವಾಣಿಜ್ಯಾತ್ಮಕ ಉದ್ದೇಶಗಳಿಗೆ ಬೊಂಬೆಗಳ ಹಾಗೆ ಬಳಸಿಕೊಳ್ಳಲಾಗುತ್ತದೆ. ಇದೊಂದು ದೊಡ್ಡ ಮಿತಿ. ಹೀಗಾಗಿಯೇ ನಟನೆಯ ಕ್ಷೇತ್ರದಲ್ಲಿ ಸಾಕಷ್ಟು ಮಹಿಳೆಯರು ಇದ್ದಾರೆ. ಆದರೆ ತಾಂತ್ರಿಕ ಕ್ಷೇತ್ರದಲ್ಲಿ ಅವರ ಸಂಖ್ಯೆ ತುಂಬಾ ಕಡಿಮೆ ಇದೆ.

ಈಗೀಗ ತಾಂತ್ರಿಕ ಕ್ಷೇತ್ರಕ್ಕೂ ಸಾಕಷ್ಟು ಮಹಿಳೆಯರು ಬರುತ್ತಿದ್ದಾರೆ. ವಿಶೇಷವಾಗಿ ಹೊಸ ಪೀಳಿಗೆಯ ಹುಡುಗಿಯರು ಸಾಕಷ್ಟು ಸಾಕ್ಷ್ಯಚಿತ್ರಗಳನ್ನು ಮಾಡುತ್ತಿದ್ದಾರೆ. ಅದು ಖಂಡಿತವಾಗಿ ಬದಲಾವಣೆಯನ್ನು ತರುತ್ತಿದೆ. ಛಾಯಾಗ್ರಹಣ, ಧ್ವನಿವಿನ್ಯಾಸಗಳಲ್ಲಿಯೂ ಮಹಿಳೆಯರು ತೊಡಗಿಕೊಳ್ಳುತ್ತಿದ್ದಾರೆ. ನಾವಿನ್ನೂ ಸಾಗಬೇಕಾದ ದಾರಿ ಬಹುದೂರವಿದೆ.

* ಇಷ್ಟು ವರ್ಷಗಳ ಸುದೀರ್ಘ ಪಯಣದಲ್ಲಿ ಸಿನಿಮಾ ಕುರಿತ ನಿಮ್ಮ ದೃಷ್ಟಿಕೋನಗಳು ಬದಲಾಗಿವೆಯೇ?
ಖಂಡಿತ ಬದಲಾಗಿವೆ. ನಾನು ಸಿನಿಮಾ ಮಾಡಲು ಆರಂಭಿಸಿದ್ದು ಸಂದೇಶ ಕೊಡಬೇಕು ಎಂಬ ಉದ್ದೇಶದಿಂದ. ನಿಧಾನವಾಗಿ ನನಗೆ ಸಂದೇಶವೆಂಬುದು ಬದುಕಿನ ಜೊತೆಗೇ ಒಡಮೂಡುವಂಥದ್ದು, ಅದನ್ನು ಪ್ರತ್ಯೇಕವಾಗಿ ನೀಡಬೇಕಾಗಿಲ್ಲ ಎಂಬುದು ಅರಿವಾಗುತ್ತ ಬಂತು. ಬದುಕನ್ನು ಬಹುಸೂಕ್ಷ್ಮವಾಗಿ ಸೆರೆಹಿಡಿದರೆ, ಅದರ ಮೂಲಕ ನೀವು ಒಂದಲ್ಲ, ಹಲವು ಸಂದೇಶಗಳನ್ನು ಹೊರಡಿಸುತ್ತಿರುತ್ತೀರಿ.

ಬದುಕಿಗೆ ಅನಂತ ಆಯಾಮಗಳಿವೆ. ಪ್ರೇಕ್ಷಕರಿಗೆ ಬದುಕಿನ ಸಾಧ್ಯತೆಗಳನ್ನು ಅರಿಯಲು, ಒಪ್ಪಿಕೊಳ್ಳಲು, ಪ್ರೀತಿ ಬೆಳೆಸಿಕೊಳ್ಳಲು ಸಹಾಯ ಮಾಡುವುದಷ್ಟೇ ನಮ್ಮ ಕೆಲಸ. ಹೀಗೆ ಬದುಕನ್ನು ಅರಿಯಲು ಪ್ರೇರೇಪಿಸುವಂಥ ಸಿನಿಮಾಗಳನ್ನು ಮಾಡಬೇಕಾದರೆ ನಿಮಗೆ ಆ ಮಾಧ್ಯಮದ ಭಾಷೆಯ ಮೇಲೆ ಹಿಡಿತ ಇರಬೇಕು. ನಾನು ಆ ಭಾಷೆಯನ್ನು ಕಲಿಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದೇನೆ. ನನ್ನ ಸಹೋದ್ಯೋಗಿ ಸುನೀಲ್ ಸುಖ್ತಂಕರ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತವರು. ಅವರ ಜೊತೆಗೆ ಕೆಲಸ ಮಾಡುತ್ತಾ ಏಕಲವ್ಯನ ಹಾಗೆ ನಾನೂ ಕಲಿಯುತ್ತಿದ್ದೇನೆ. ಜಗತ್ತಿನ ಎಲ್ಲ ದೇಶ–ಭಾಷೆಗಳಲ್ಲಿ ಬರುತ್ತಿರುವ ಪ್ರಯೋಗಾತ್ಮಕ ಚಿತ್ರಗಳನ್ನೂ ನಾನು ನೋಡುತ್ತೇನೆ. ಹೀಗೆಯೇ ನಾವು ಸಿನಿಮಾ ಭಾಷೆಯನ್ನು ಕಲಿತುಕೊಳ್ಳುವುದು ಸಾಧ್ಯ. ಜಗತ್ತಿನ ಸಿನಿಮಾಗಳ ಮೂಲಕ ಸಾಕಷ್ಟು ಕಲಿಯುತ್ತಲೇ ನಾವು ಭಾರತೀಯರಾಗಿಯೇ ಇದ್ದು, ಇಲ್ಲಿನ ನೆಲದ ಸಿನಿಮಾಗಳನ್ನು ಮಾಡುವುದೂ ಅಷ್ಟೇ ಮುಖ್ಯ ಎಂದು ನನಗನಿಸುತ್ತದೆ.

* ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಯಾವಾಗಲೂ ‘ಕಥೆ ಹೇಳುವುದಷ್ಟೇ ಸಿನಿಮಾದ ಉದ್ದೇಶ ಅಲ್ಲ. ಅದು ‘ಇಮೇಜ್’ಗಳ ಮಾಧ್ಯಮ’ ಎಂದು ಹೇಳುತ್ತಿರುತ್ತಾರೆ. ಈ ಕುರಿತು ನಿಮ್ಮ ಅಭಿಪ್ರಾಯ ಏನು?
ನನ್ನ ಎಲ್ಲ ಚಿತ್ರಗಳಿಗೂ ನಾನೇ ಕಥೆ ಬರೆಯುತ್ತೇನೆ. ನನ್ನ ಮನಸ್ಸಿನಲ್ಲಿ ಒಂದು ಕಥೆ ಹೊಳೆಯುತ್ತದೆ. ಅದನ್ನು ಸ್ಕ್ರಿಪ್ಟ್ ಆಗಿಸುವಾಗ ಆ ಕಥೆ ದೃಶ್ಯಬಿಂಬಗಳಾಗಿ ಅನುವಾದಗೊಳ್ಳುತ್ತದೆ. ಹಾಗಾಗಿ ಒಂದು ಚಿತ್ರ ತಯಾರಾಗುವ ಮುನ್ನವೇ ಮಾತಿನ ರೂಪದಲ್ಲಿದ್ದ ಕಥೆ ದೃಶ್ಯಬಿಂಬಗಳಾಗಿ ಬದಲಾಗಿರುತ್ತದೆ. ಆದರೆ ಆ ಬಿಂಬಗಳು ಕೂಡ ಮತ್ತೊಂದು ಬಗೆಯಲ್ಲಿ ಕಥೆಯನ್ನೇ ಹೇಳುತ್ತಿರುತ್ತವಲ್ಲವೇ?

* ಸೃಜನಶೀಲ ನಿರ್ದೇಶಕಿಯಾಗಿ ಪ್ರಯೋಗಶೀಲತೆಗೆ ಒಡ್ಡಿಕೊಳ್ಳುವುದು ನಿಮಗೆ ಯಾಕೆ ಅಗತ್ಯ ಅನಿಸುತ್ತದೆ?
ಸಿನಿಮಾ ಎನ್ನುವುದು ಹಲವಾರು ಕಲಾಪ್ರಕಾರಗಳನ್ನು ಒಳಗೊಂಡಿರುವ ಕಲೆ. ಅದರಲ್ಲಿ ರಂಗಭೂಮಿ ಇದೆ, ಸಾಹಿತ್ಯ ಇದೆ, ಸಂಗೀತ ಇದೆ. ಈ ಎಲ್ಲ ಕಲೆಗಳನ್ನೂ ಸೇರಿಸಿಕೊಂಡು ಹೊಸದೇನೋ ಪ್ರಯೋಗ ಮಾಡುವುದು ಅಗತ್ಯ. ಪ್ರಯೋಗಶೀಲತೆ ಎನ್ನುವುದು ತುಂಬಾ ಮುಖ್ಯ. ಯಾಕೆಂದರೆ ಬದುಕಿನ ಹೊಸ ಸಾಧ್ಯತೆಗಳನ್ನು ಹುಡುಕಲು ಹೊಸದೇ ಆದ ಭಾಷೆ, ಪರಿಭಾಷೆ, ಪ್ರತಿಮೆಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅವುಗಳನ್ನು ಬಳಸಿಕೊಂಡು ಹೊಸ ರೀತಿಯಲ್ಲಿ ಹೇಳಿದಾಗ ಮಾತ್ರ ಅದು ಸರಿಯಾಗಿ ತಲುಪುತ್ತದೆ.

* ಕಲಾತ್ಮಕ ಮತ್ತು ವಾಣಿಜ್ಯಾತ್ಮಕ ಎಂಬ ಸಿನಿಮಾ ವಿಭಾಗೀಕರಣದ ಬಗ್ಗೆ ನಿಮ್ಮ ಅನಿಸಿಕೆ ಏನು?
ಈ ವಿಭಾಗಗಳೆಲ್ಲ ಅರ್ಥಹೀನ. ಸಿನಿಮಾ ಸಿನಿಮಾ ಅಷ್ಟೆ. ಒಳ್ಳೆಯ ವಾಣಿಜ್ಯಾತ್ಮಕ ಸಿನಿಮಾಗಳೂ ಇರುತ್ತವೆ. ಹಾಗೆಯೇ ಕೆಟ್ಟ ಕಲಾತ್ಮಕ ಸಿನಿಮಾಗಳೂ ಇರುತ್ತವೆ. ಒಳ್ಳೆಯದು ಕೆಟ್ಟದ್ದು ಎನ್ನುವುದೂ ಆಯಾ ವ್ಯಕ್ತಿಯ ಅಭಿರುಚಿಯ ಮೇಲೆ ಅವಲಂಬಿಸಿರುತ್ತದೆ. ಸಿನಿಮಾ ಸ್ವಯಂ ಆಗಿ ಒಳ್ಳೆಯದಾಗಿರುವುದೂ ಇಲ್ಲ, ಕೆಟ್ಟದ್ದೂ ಆಗಿರುವುದಿಲ್ಲ. ನನಗೆ ಯಾವುದು ಇಷ್ಟವಾಗುತ್ತದೆಯೋ ಅದು ಒಳ್ಳೆಯದು, ಇಷ್ಟವಾಗದಿರುವುದು ಕೆಟ್ಟದ್ದು ಅಷ್ಟೆ.

* ಇಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಂಟಾಗುತ್ತಿರುವ ಅಡ್ಡಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಪ್ರಯೋಗಶೀಲತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವೂ ಅಷ್ಟೇ ಅಗತ್ಯ. ಹೊಸ ಹೊಸ ಬಗೆಯ ಅಭಿವ್ಯಕ್ತಿ ಸಾಧ್ಯತೆಗಳನ್ನು ಹುಡುಕಬೇಕು ಎಂದರೆ ಅದಕ್ಕೆ ಸ್ವಾತಂತ್ರ್ಯ ಇರಲೇಬೇಕು. ಈಗಿನ ವಾತಾವರಣ ನಿಜಕ್ಕೂ ಕೊಂಚ ಆತಂಕಕಾರಿಯಾಗಿಯೇ ಆಗಿದೆ. ಸ್ವಾತಂತ್ರ್ಯ, ಸಹಾನುಭೂತಿ ಮತ್ತು ಅಹಿಂಸೆ - ಇವು ಮುಕ್ತ ಸಮಾಜದ ಮೂರು ಮುಖ್ಯ ಲಕ್ಷಣಗಳು.

* ಸೃಜನಶೀಲ ವ್ಯಕ್ತಿಯೊಬ್ಬ ಇಂಥ ಅಡ್ಡಿ ಆತಂಕಗಳನ್ನು ಹೇಗೆ ಎದುರಿಸಬೇಕು?
ಸುಮ್ಮನೇ ನಾವು ಅಂದುಕೊಂಡಿದ್ದನ್ನು ಅಭಿವ್ಯಕ್ತಿಸುತ್ತಾ ಹೋಗುವುದರ ಮೂಲಕವೇ ಎದುರಿಸಬೇಕು. ಧೈರ್ಯದಿಂದ, ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುತ್ತ ಹೋಗಬೇಕು. ನಾವು ಪ್ರಭುತ್ವವನ್ನು ಓಲೈಸಬೇಕಾದ ಅಗತ್ಯ ಇಲ್ಲ. ಅದೇ ಸಮಯದಲ್ಲಿ ನಾವು ಪ್ರಭುತ್ವಕ್ಕೆ ವಿರುದ್ಧವೂ ಆಗಬೇಕಾಗಿಲ್ಲ. ಕಲಾವಿದ ವಸ್ತುನಿಷ್ಠವಾಗಿ ಆತ್ಮಸಾಕ್ಷಿಗೆ ಅನುಗುಣವಾಗಿರಬೇಕು ಅಷ್ಟೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ನಾಟಕಕಾರ ವಿಜಯ ತೆಂಡೂಲ್ಕರ್ ಹಲವು ಮರಾಠಿ ಸಿನಿಮಾಗಳಿಗೆ ಸ್ಕ್ರಿಫ್ಟ್ ಬರೆದಿದ್ದಾರೆ. ನನ್ನ ಒಂದು ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ನನ್ನ ‘ವಾಸ್ತುಪುರುಷ್’ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಮಹೇಶ್ ಎಲ್‌ಕುಂಚವಾರ್ ಅವರು ಒಳ್ಳೆಯ ನಾಟಕಕಾರ. ಸದಾಶಿವ ಅಮ್ರಾಪುರ್‌ಕರ್, ಚಂದ್ರಕಾಂತ್ ಕುಲಕರ್ಣಿ, ಉತ್ತರಾ ಭಾವ್ಕರ್, ಅತುಲ್ ಕುಲಕರ್ಣಿ, ಅಮೃತಾ ಸುಭಾಶ್, ಜ್ಯೋತಿ ಸುಭಾಶ್ – ಹೀಗೆ ಹಲವರು ರಂಗಭೂಮಿಯ ಹಿನ್ನೆಲೆಯಿಂದಲೇ ಬಂದವರು. ಹೀಗೆ ರಂಗಭೂಮಿ ಮತ್ತು ಸಿನಿಮಾಗಳ ಕೊಡುಕೊಳ್ಳುವಿಕೆ ನಡೆಯುತ್ತಲೇ ಇರುತ್ತದೆ.

ನಾವು ಬದುಕನ್ನು ಪ್ರಾಮಾಣಿಕವಾಗಿ, ನೈಜ ಪ್ರಜ್ಞೆಯ ಮೂಲಕ ಶೋಧಿಸಿದರೆ ಅದಕ್ಕಿಂತ ಅಮೂಲ್ಯ ಸಂದೇಶ ಬೇರೆ ಯಾವುದೂ ಇಲ್ಲ. ಅದರಲ್ಲಿ ಕಲೆ ಮತ್ತು ಸಂದೇಶ ಎರಡೂ ಮಿಳಿತವಾಗಿಯೇ ಇರುತ್ತದೆ. ಬದುಕಿನ ನಿಜವಾದ ಚಹರೆಯನ್ನು ಶೋಧಿಸುವವನೇ ನಿಜವಾದ ಕಲಾವಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.