ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢ: 28 ನಕ್ಸಲರ ಹತ್ಯೆ

ಬಸ್ತರ್‌ ವಲಯದಲ್ಲಿ ಭದ್ರತಾ ಸಿಬ್ಬಂದಿಯಿಂದ ಎನ್‌ಕೌಂಟರ್
Published : 4 ಅಕ್ಟೋಬರ್ 2024, 16:54 IST
Last Updated : 4 ಅಕ್ಟೋಬರ್ 2024, 16:54 IST
ಫಾಲೋ ಮಾಡಿ
Comments

ದಾಂತೇವಾಡ: ಛತ್ತೀಸಗಢದ ಬಸ್ತರ್‌ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಶುಕ್ರವಾರ ನಡೆಸಿದ ಎನ್‌ಕೌಂಟರ್‌ನಲ್ಲಿ 28 ನಕ್ಸಲರು ಹತರಾಗಿದ್ದಾರೆ. ರಾಜ್ಯದಲ್ಲಿ ಮಾವೋವಾದಿಗಳ ವಿರುದ್ಧ ಈಚೆಗೆ ನಡೆದ ಅತಿದೊಡ್ಡ ಕಾರ್ಯಾಚರಣೆ ಇದು ಎಂದು ಅಧಿಕಾರಿಗಳು ಹೇಳಿದ್ದಾರೆ. 

‘ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಭಾಗದಲ್ಲಿ ಶುಕ್ರವಾರ ಮಧ್ಯಾಹ್ನ 1ರ ಸುಮಾರಿಗೆ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ’ ಎಂದು ಬಸ್ತರ್‌ ವಲಯದ ಐಜಿಪಿ ಪಿ.ಸುಂದರರಾಜ್‌ ತಿಳಿಸಿದ್ದಾರೆ.

‘ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಜಂಟಿಯಾಗಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಕೈಗೊಂಡಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಹತರಾದ ನಕ್ಸಲರ ಮೃತದೇಹಗಳು ಮತ್ತು ಎಕೆ–47 ರೈಫಲ್, ಎಸ್‌ಎಲ್‌ಆರ್‌ (ಸೆಲ್ಫ್‌ ಲೋಡಿಂಗ್‌ ರೈಫಲ್) ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಸ್ಥಳದಲ್ಲಿ ದೊರೆತಿವೆ’ ಎಂದಿದ್ದಾರೆ. 

ದಾಂತೇವಾಡ ಎಸ್‌ಪಿ ಗೌರವ್‌ ರಾಯ್ ಅವರು, ‘ಎನ್‌ಕೌಂಟರ್‌ನಲ್ಲಿ 30 ನಕ್ಸಲರು ಹತರಾಗಿದ್ದಾರೆ’ ಎಂದು ಹೇಳಿದ್ದರು. ಆದರೆ, ಮುಖ್ಯಮಂತ್ರಿ ವಿಷ್ಣು ದೇವ್‌ ಸಾಯಿ ಅವರು ‘28 ನಕ್ಸಲರು ಹತರಾಗಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ಪ್ರಕಟಿಸಿದ್ದಾರೆ.

ಮುಖ್ಯಮಂತ್ರಿ ಅವರು ಭದ್ರತಾ ಸಿಬ್ಬಂದಿಯ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದು, ‘ಡಬಲ್‌ ಎಂಜಿನ್‌ ಸರ್ಕಾರವು (ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ) ನಕ್ಸಲರ ಪಿಡುಗು ಹತ್ತಿಕ್ಕಲು ಬದ್ಧವಾಗಿದೆ. ರಾಜ್ಯದಿಂದ ನಕ್ಸಲಿಸಂ ತೊಲಗಿಸುವುದೇ ನಮ್ಮ ಗುರಿ ’ ಎಂದು ಹೇಳಿದ್ದಾರೆ.

ಬಾಕ್ಸ್...

ಈ ವರ್ಷ 185 ನಕ್ಸಲರು ಬಲಿ

ಶುಕ್ರವಾರದ ಎನ್‌ಕೌಂಟರ್‌ ಸೇರಿದಂತೆ ಛತ್ತೀಸಗಢದ ಬಸ್ತರ್‌ ವಲಯದಲ್ಲಿ ಈ ವರ್ಷ ಭದ್ರತಾ ಸಿಬ್ಬಂದಿಯ ಗುಂಡಿಗೆ ಬಲಿಯಾದ ನಕ್ಸಲರ ಸಂಖ್ಯೆ 185ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಏಪ್ರಿಲ್‌ 16ರಂದು ಕಾಂಕೇರ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪ್ರಮುಖ ಮಾವೋವಾದಿ ನಾಯಕರೂ ಒಳಗೊಂಡಂತೆ 29 ನಕ್ಸಲರು ಬಲಿಯಾಗಿದ್ದರು. ಬಸ್ತರ್‌ ವಲಯವು ದಾಂತೇವಾಡ ಮತ್ತು ನಾರಾಯಣಪುರ ಒಳಗೊಂಡಂತೆ ಏಳು ಜಿಲ್ಲೆಗಳನ್ನು ಒಳಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT