ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ: ತೆಲಂಗಾಣ ಮುಖ್ಯಮಂತ್ರಿ ವಿರುದ್ಧ ಟೀಕೆ, ಸ್ಟಾಲಿನ್‌ ಜೊತೆ ಸ್ನೇಹ!

ತೆಲಂಗಾಣ ಮುಖ್ಯಮಂತ್ರಿ ವಿರುದ್ಧ ಟೀಕೆ, ಸ್ಟಾಲಿನ್‌ ಜೊತೆ ಸ್ನೇಹ
Last Updated 8 ಏಪ್ರಿಲ್ 2023, 14:44 IST
ಅಕ್ಷರ ಗಾತ್ರ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಣತಂತ್ರ ರೂಪಿಸುವ ಕುರಿತು ಕಳೆದ ಕೆಲ ದಿನಗಳಿಂದ ದಕ್ಷಿಣದ ಕೆಲ ರಾಜ್ಯಗಳ ರಾಜಕೀಯ ನೇತಾರರು ಸಭೆಗಳನ್ನು ನಡೆಸಿದ್ದರು. ಈ ಕಾವೇರಿದ ರಾಜಕೀಯ ಚಟುವಟಿಕೆಗಳು ಒಂದೆಡೆಯಾದರೆ, ಪ್ರಧಾನಿ ಮೋದಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಶನಿವಾರ ಅನ್ಯೋನ್ಯತೆ ಪ್ರದರ್ಶಿಸಿದ್ದು ಎಲ್ಲರನ್ನು ಹುಬ್ಬೇರುವಂತೆ ಮಾಡಿತು.

ಸಿಕಂದರಾಬಾದ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು.

ತೆಲಂಗಾಣದಲ್ಲಿ ಅನುಷ್ಠಾನಗೊಳಿಸುವ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ಟೀಕಾಪ್ರಹಾರ ಮಾಡಿದ್ದರು. ಮುಖ್ಯಮಂತ್ರಿ ರಾವ್‌, ಈ ಕಾರ್ಯಕ್ರಮದಿಂದ ದೂರವೇ ಉಳಿದಿದ್ದರು. ವಿಮಾನನಿಲ್ದಾಣದಲ್ಲಿ ಪ್ರಧಾನಿಯನ್ನು ಸ್ವಾಗತಿಸಲೂ ಅವರು ಬಂದಿರಲಿಲ್ಲ.

ನಂತರ ಚೆನ್ನೈನಲ್ಲಿ ಬಂದಿಳಿದ ಅವರು ಅಂತರರಾಷ್ಟ್ರೀಯ ವಿಮಾನನಿಲ್ದಾಣದ ನೂತನ ಟರ್ಮಿನಲ್‌ ಉದ್ಘಾಟಿಸಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಸ್ಟಾಲಿನ್, ಮೋದಿ ಅವರನ್ನು ಸ್ವಾಗತಿಸಿದರು.

ಮುಖ್ಯಮಂತ್ರಿ ಸ್ಟಾಲಿನ್ ಅವರ ಕೈಹಿಡಿದು ಟರ್ಮಿನಲ್‌ ವೀಕ್ಷಣೆ ಮಾಡಿದ ಮೋದಿ, ಹಾಸ್ಯ ಚಟಾಕಿ ಹಾರಿಸಿದರಲ್ಲದೇ, ಆಗಾಗ ಸ್ಟಾಲಿನ್‌ ಅಂಗೈ ತಟ್ಟುತ್ತಿದ್ದುದು ಕಂಡು ಬಂತು.

ರಾಜ್ಯಪಾಲ ಆರ್.ಎನ್‌.ರವಿ ಹಾಗೂ ರಾಜ್ಯ ಸರ್ಕಾರದ ನಡುವೆ ಕಳೆದ ಕೆಲ ದಿನಗಳಿಂದ ಸಂಘರ್ಷ ನಡೆಯುತ್ತಿದೆ. 2018ರಲ್ಲಿ ನಡೆದ ಸ್ಟರ್ಲೈಟ್‌ ಘಟಕದ ವಿರೋಧಿ ಪ್ರತಿಭಟನೆಗಳಿಗೆ ವಿದೇಶಿ ನೆರವು ಇತ್ತು ಎಂಬುದಾಗಿ ರಾಜ್ಯಪಾಲ ರವಿ ಇತ್ತೀಚೆಗೆ ಹೇಳಿದ್ದರು. ಇದು ರಾಜಭವನ ಹಾಗೂ ರಾಜ್ಯ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.

ರಾಜ್ಯಪಾಲರ ಹೇಳಿಕೆ ತಮಿಳುನಾಡು ಜನತೆ ಅವಮಾನ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ ಡಿಎಂಕೆ ಕಾರ್ಯಕರ್ತರು, ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಕಾವೇರಿ ನದಿಮುಖಜ ಪ್ರದೇಶದಲ್ಲಿ ಪತ್ತೆಯಾದ ಮೂರು ಕಲ್ಲಿದ್ದಲು ನಿಕ್ಷೇಪಗಳನ್ನು ರಾಷ್ಟ್ರ ಮಟ್ಟದ ಹರಾಜು ಪ್ರಕ್ರಿಯೆಯಿಂದ ಹೊರಗಿಡಬೇಕು ಎಂದು ಆಗ್ರಹಿಸಿ ಕೆಲ ದಿನಗಳ ಹಿಂದೆ ಸ್ಟಾಲಿನ್‌ ಅವರು ಮೋದಿಗೆ ಪತ್ರ ಬರೆದಿದ್ದರು. ಇದಕ್ಕೆ ತ್ವರಿತವಾಗಿ ಸ್ಪಂದಿಸಿದ್ದ ಕೇಂದ್ರ ಸರ್ಕಾರ, ಆ ಮೂರು ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಪ್ರಕ್ರಿಯೆಯಿಂದ ಕೈಬಿಟ್ಟಿತ್ತು.

ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ರಾಜ್ಯ ಸರ್ಕಾರ, ಡಿಎಂಕೆ ಪಕ್ಷ ಸಂಘರ್ಷಕ್ಕೆ ಇಳಿದಿದ್ದ ಸಂದರ್ಭದಲ್ಲಿಯೇ ಚೆನ್ನೈಗೆ ಬಂದಿಳಿದ ಪ್ರಧಾನಿ ಅವರನ್ನು ಸ್ಟಾಲಿನ್‌ ಆತ್ಮೀಯವಾಗಿ ಬರಮಾಡಿಕೊಂಡು, ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಅಚ್ಚರಿ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT