ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರ CM ನಾಯ್ಡು–ಮಹಾರಾಷ್ಟ್ರ CM ಶಿಂದೆ ಭೇಟಿ‌: ಪರಸ್ಪರ ಸಹಕಾರದ ಬಗ್ಗೆ ಚರ್ಚೆ

Published 14 ಜುಲೈ 2024, 9:45 IST
Last Updated 14 ಜುಲೈ 2024, 9:45 IST
ಅಕ್ಷರ ಗಾತ್ರ

ಮುಂಬೈ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇಂದು (ಭಾನುವಾರ) ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಭೇಟಿಯಾಗಿದ್ದಾರೆ. ರಾಜಕೀಯ ಸನ್ನಿವೇಶ ಮತ್ತು ಮೂಲಭೂತ ಸೌಕರ್ಯ ಹಾಗೂ ಆರ್ಥಿಕತೆ ಸೇರಿ ವಿವಿಧ ವಲಯಗಳಲ್ಲಿ ಪರಸ್ಪರ ಸಹಕಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಶಿಂದೆ ಅವರ ನಿವಾಸದಲ್ಲಿ ಭೇಟಿ ನಡೆದಿದೆ.

ಈ ಬಗ್ಗೆ ಸಾಮಾಜಿಕ ತಾಣ ‘ಎಕ್ಸ್’ನಲ್ಲಿ ಮಾಹಿತಿ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ, ‘ರಾಜ್ಯಗಳ ಅಭಿವೃದ್ಧಿ ಬಗ್ಗೆ ಪರಸ್ಪರ ಸಹಕಾರ ನೀಡುವ ಬಗ್ಗೆ ಚರ್ಚೆ ನಡೆಯಿತು’ ಎಂದು ಬರೆದುಕೊಂಡಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜಾರಪು ರಾಮ್‌ಮೋಹನ್ ನಾಯ್ಡು, ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ದಾದಾ ಭುಸೆ, ಶಿಂದೆ ಅವರ ಪುತ್ರ, ಸಂಸದರೂ ಆಗಿರುವ ಶ್ರೀಕಾಂತ್ ಶಿಂದೆ ಸಭೆಯಲ್ಲಿ ಇದ್ದರು.

ಶಿಂದೆ ಅವರ ಆಪ್ತ ಮೂಲಗಳಿಂದ ಲಭಿಸಿದ ಮಾಹಿತಿ ಪ್ರಕಾರ, ಉಭಯ ನಾಯಕರೂ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ.

‘ಸದ್ಯದ ರಾಜಕೀಯ ಪರಿಸ್ಥಿತಿ ಸೇರಿ ಹಲವು ವಿಷಯಗಳ ಕುರಿತು  ಚರ್ಚೆ ನಡೆಯಿತು. ಉಭಯ ರಾಜ್ಯಗಳ ನಡುವೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿನಿಮಯ ಮತ್ತು ಉಭಯ ರಾಜ್ಯಗಳ ನಡುವಿನ ಸಹಕಾರದ ಬಗ್ಗೆ ಮಾತುಕತೆ ಸಾಗಿತು. ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಡಿಜಿಟಲ್ ಕ್ಷೇತ್ರದಲ್ಲಿ ಅವಕಾಶಗಳನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಶಿಂದೆ ನೇತೃತ್ವದ ಶಿವಸೇನಾ ಹಾಗೂ ನಾಯ್ಡು ಅವರ ತೆಲುಗುದೇಶಂ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT