ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಸಭೆ ಉಪಚುನಾವಣೆ: ಇಂಡಿಯಾ ಬಣಕ್ಕೆ 10, ಬಿಜೆಪಿಗೆ 2 ಸ್ಥಾನ

Published 13 ಜುಲೈ 2024, 13:19 IST
Last Updated 13 ಜುಲೈ 2024, 19:09 IST
ಅಕ್ಷರ ಗಾತ್ರ

ನವದೆಹಲಿ: ಏಳು ರಾಜ್ಯಗಳಲ್ಲಿ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವು 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಬಿಜೆಪಿಯನ್ನು ಕೇವಲ ಎರಡಕ್ಕೆ ಸೀಮಿತಗೊಳಿಸಿದೆ. ಲೋಕಸಭಾ ಚುನಾವಣೆಯ ನಂತರ ನಡೆದ ಮೊದಲ ಚುನಾವಣೆಯಲ್ಲಿ ಕಮಲ ‍ಪಾಳಯಕ್ಕೆ ಭಾರಿ ಹಿನ್ನಡೆಯಾಗಿದೆ. 

ಈ ಚುನಾವಣೆಯಲ್ಲಿ ಹೆಚ್ಚಿನ ಲಾಭ ಆಗಿರುವುದು ಕಾಂಗ್ರೆಸ್‌ ಹಾಗೂ ತೃಣಮೂಲ ಕಾಂಗ್ರೆಸ್‌ಗೆ. ಉಭಯ ಪಕ್ಷಗಳು ತಲಾ 4 ಕ್ಷೇತ್ರಗಳನ್ನು ಗೆದ್ದುಕೊಂಡಿವೆ. ಎಎಪಿ, ಡಿಎಂಕೆ ಹಾಗೂ ಪಕ್ಷೇತರ ಅಭ್ಯರ್ಥಿ ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. 

ಬಿಹಾರದಲ್ಲಿ ಎನ್‌ಡಿಎ ಮಿತ್ರ ಪಕ್ಷ ಜೆಡಿಯು ತನ್ನ ಕ್ಷೇತ್ರವನ್ನು ಕಳೆದುಕೊಂಡಿದೆ. ಇಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಈ ಕ್ಷೇತ್ರದಲ್ಲಿ ಆರ್‌ಜೆಡಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಹಿಮಾಚಲ ಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡದಲ್ಲಿ ಪಕ್ಷಾಂತರಿಗಳಿಂದ ಬಿಜೆಪಿಗೆ ಲಾಭವಾಗಿಲ್ಲ. 

ಹಿಮಾಚಲ ಪ್ರದೇಶದ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಹಮೀರ್‌ಪುರ ಕ್ಷೇತ್ರ ಬಿಜೆಪಿ ಪಾಲಾಗಿದೆ. ಈ ಫಲಿತಾಂಶವು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಹೆಚ್ಚಿನ ರಾಜಕೀಯ ಬಲವನ್ನು ತಂದುಕೊಟ್ಟಿದೆ. 

ಉತ್ತರಾಖಂಡದ ಎರಡೂ ಕ್ಷೇತ್ರಗಳು ‘ಕೈ’ಪಾಲಾಗಿವೆ. ಬದರಿನಾಥ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿದ್ದ ರಾಜೇಂದ್ರ ಸಿಂಗ್ ಭಂಡಾರಿ ಅವರು ಕಮಲ ಪಾಳಯಕ್ಕೆ ಜಿಗಿದಿದ್ದರು. ಇಲ್ಲಿ ಭಂಡಾರಿ ಅವರನ್ನು ಕಾಂಗ್ರೆಸ್‌ನ ಲಖಪತ್ ಸಿಂಗ್‌ ಬುಟೋಲಾ ಅವರು ಸೋಲಿಸಿದರು. ಮಂಗ್ಳೋರ್ ಕ್ಷೇತ್ರದಲ್ಲಿ ಬಿಎಸ್‌ಪಿ ಶಾಸಕ ಸರ್ವತ್‌ ಖರೀಂ ಅನ್ಸಾರಿ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. ಇಲ್ಲಿ ಕಾಂಗ್ರೆಸ್‌ನ ಖ್ವಾಜಿ ಮೊಹಮ್ಮದ್‌ ನಿಜಾಮುದ್ದೀನ್ ಅವರು ಬಿಜೆಪಿಯ ಕರ್ತಾರ್ ಸಿಂಗ್ ಭದಾನ ಅವರನ್ನು ಸೋಲಿಸಿದರು. 

ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯ ಗೆಲುವನ್ನು ಉಲ್ಲೇಖಿಸಿ ಹಿರಿಯ ಸಂಸದ ಮಾಣಿಕಂ ಟ್ಯಾಗೋರ್‌, ‘ಅಯೋಧ್ಯೆಯಲ್ಲಿ ಗೆದ್ದ ನಂತರ ಬದರಿನಾಥವನ್ನೂ ಗೆದ್ದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಹಿಂದುತ್ವದ ಭದ್ರ ನೆಲೆಯಲ್ಲೂ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬ ಸಂದೇಶವನ್ನು ಕಾಂಗ್ರೆಸ್‌ ರವಾನಿಸಿದೆ. 

ಪಶ್ಚಿಮ ಬಂಗಾಳದ ಎಲ್ಲ ನಾಲ್ಕು ಕ್ಷೇತ್ರಗಳು ತೃಣಮೂಲ ಕಾಂಗ್ರೆಸ್‌ನ ಪಾಲಾಗಿವೆ. ರಾಯ್‌ಗಂಜ್‌, ರಾಣಾಘಾಟ್‌ ದಕ್ಷಿಣ ಹಾಗೂ ಬಾಗ್ದಾ ಕ್ಷೇತ್ರಗಳನ್ನು ಬಿಜೆಪಿಯಿಂದ ಕಿತ್ತುಕೊಳ್ಳುವ ಮೂಲಕ ಟಿಎಂಸಿ ಮತ್ತೆ ಪ್ರಾಬಲ್ಯ ಮೆರೆದಿದೆ. ಹಾಲಿ ಶಾಸಕರ ಸಾವಿನಿಂದಾಗಿ ಉಪಚುನಾವಣೆ ನಡೆದ ಮಾಣಿಕ್ತಾಲಾ ಕ್ಷೇತ್ರವನ್ನು ಟಿಎಂಸಿ ಉಳಿಸಿಕೊಂಡಿದೆ. 

ಪಂಜಾಬ್‌ನ ಜಲಂಧರ್ ಪಶ್ಚಿಮದಲ್ಲಿ ಎಎಪಿಯಿಂದ ಆಯ್ಕೆಯಾಗಿದ್ದ ಶೀತಲ್ ಅಂಗುರಾಲ್ ಅವರು ಈ ವರ್ಷದ ಆರಂಭದಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಅವರನ್ನು ಎಎಪಿಯ ಮೊಹಿಂದರ್‌ ಭಗತ್‌ ಅವರು 37,325 ಮತಗಳಿಂದ ಸೋಲಿಸಿದರು. ಇಲ್ಲಿ ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಎಎಪಿ ಕಳಪೆ ಸಾಧನೆ ಮಾಡಿತ್ತು.

ಬಿಹಾರದ ರುಪೌಲಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶಂಕರ್ ಸಿಂಗ್ ಅವರು ಜೆಡಿಯು ಹಾಗೂ ಆರ್‌ಜೆಡಿಯ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದಾರೆ. ಅವರು 8,246 ಮತಗಳ ಅಂತರದಿಂದ ಜಯ ಗಳಿಸಿದರು. ಜೆಡಿಯು ಶಾಸಕರಾಗಿದ್ದ ಭೀಮಾ ಭಾರ್ತಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಆರ್‌ಜೆಡಿಗೆ ಜಿಗಿದಿದ್ದರು. ಆದರೆ, ಪೂರ್ಣಯಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಪಪ್ಪು ಯಾದವ್‌ ವಿರುದ್ಧ ಸೋತಿದ್ದರು. ಉಪಚುನಾವಣೆಯಲ್ಲಿ ಭಾರ್ತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಮಧ್ಯ ಪ್ರದೇಶದ ಅಮರವಾರ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಗಳಿಸಿದೆ. 2023ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ನ ಕಮಲೇಶ್‌ ಪ್ರತಾಪ್ ಶಾ ಜಯ ಗಳಿಸಿದ್ದರು. ಬಳಿಕ ಅವರು ಕಮಲ ಪಾಳಯಕ್ಕೆ ಸೇರಿದ್ದರು. ಈ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಧೀರನ್‌ ಸಾಹ್‌ ಸುಖರಾಮ್‌ ದಾಸ್‌ ಇನ್ವತಿ ವಿರುದ್ಧ ಗೆದ್ದರು. ಶಾ ಅವರು ಬಹುತೇಕ ಸುತ್ತುಗಳಲ್ಲಿ ಹಿನ್ನಡೆಯಲ್ಲಿದ್ದರು. ಅವರಿಗೆ ಕೊನೆಯ ನಾಲ್ಕೈದು ಸುತ್ತುಗಳ ಎಣಿಕೆಗಳಲ್ಲಿ ಮುನ್ನಡೆ ಸಿಕ್ಕಿತು. ಅವರ ಗೆಲುವಿನ ಅಂತರ 3027 ಮತಗಳು. ಈ ಕ್ಷೇತ್ರವು ಛಿಂದ್ವಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಛಿಂದ್ವಾರ ಕ್ಷೇತ್ರವನ್ನು ಕಾಂಗ್ರೆಸ್‌ ಕಳೆದುಕೊಂಡಿತ್ತು. ಈ ಪ್ರದೇಶದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಕಮಲನಾಥ್ ಪ್ರಭಾವ ಕುಸಿಯುತ್ತಿರುವ ನಡುವೆಯೇ ಈ ಫಲಿತಾಂಶ ಬಂದಿದೆ.

ತಮಿಳುನಾಡಿನ ವಿಕ್ರವಾಂಡಿ ಕ್ಷೇತ್ರವನ್ನು ಡಿಎಂಕೆ ಉಳಿಸಿಕೊಂಡಿದೆ. ಡಿಎಂಕೆ ಶಾಸಕ ಎನ್‌.ಪುಗಜೆಂತಿ ಅವರ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT