ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಮತಾ ಬ್ಯಾನರ್ಜಿ ‘ಆಶ್ರಯ’ ಹೇಳಿಕೆಗೆ ಬಾಂಗ್ಲಾ ಸರ್ಕಾರ ಆಕ್ಷೇಪ

ಬಾಂಗ್ಲಾದೇಶದ ಅಸಹಾಯಕ ಜನರಿಗೆ ಆಶ್ರಯ ನೀಡುವುದಾಗಿ ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿ
Published 25 ಜುಲೈ 2024, 3:40 IST
Last Updated 25 ಜುಲೈ 2024, 3:40 IST
ಅಕ್ಷರ ಗಾತ್ರ

ನವದೆಹಲಿ: ಬಾಂಗ್ಲಾದೇಶದ ಅಸಹಾಯಕ ಜನರಿಗೆ ಆಶ್ರಯ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ದೇಶದ ಆಂತರಿಕ ವ್ಯವಹಾರಗಳ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ಸ್ವತಃ ಬಾಂಗ್ಲಾದೇಶ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

‘ಬಾಂಗ್ಲಾದೇಶದ ಆಂತರಿಕ ವಿಷಯಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರು ‘ಎಕ್ಸ್‌’ನಲ್ಲಿ ಮಾಡಿರುವ ಪೋಸ್ಟ್‌ ಪ್ರಚೋದನಕಾರಿಯಾಗಿದೆ ಮತ್ತು ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸುಳ್ಳು ಅಂಶಗಳನ್ನು ಹೊಂದಿದೆ’ ಎಂದು ಬಾಂಗ್ಲಾ ಸರ್ಕಾರ ಆಕ್ಷೇಪಿಸಿದೆ.

‘ಅಸಹಾಯಕ ಜನರಿಗ ಆಶ್ರಯ ನೀಡುವ ಮಮತಾ ಬ್ಯಾನರ್ಜಿ ಅವರ ಹೇಳಿಕೆಯು ಅಪಾಯಕಾರಿಯಾಗಿದೆ. ‌ಭಯೋತ್ಪಾದಕರು ಮತ್ತು ದುಷ್ಕರ್ಮಿಗಳು ಇಂತಹ ಭರವಸೆಗಳ ಲಾಭ ಪಡೆದುಕೊಳ್ಳುವ ಸಾಧ್ಯತೆಯಿದೆ’ ಎಂದು ಅದು ಎಚ್ಚರಿಸಿದೆ.

ಕಳೆದ ವಾರ ಟಿಎಂಸಿ ಆಯೋಜಿಸಿದ್ದ ಹುತ್ಮಾತರ ದಿನದ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ಬಾಂಗ್ಲಾದೇಶ ಸಾರ್ವಭೌಮ ರಾಷ್ಟ್ರವಾಗಿದೆ. ಅದರ ಆಂತರಿಕ ವಿದ್ಯಮಾನಗಳ ಕುರಿತು ನಾನು ಮಾತನಾಡುವುದಿಲ್ಲ. ಈ ವಿಷಯವು ಕೇಂದ್ರಕ್ಕೆ ಸಂಬಂಧಿಸಿದ್ದಾಗಿದೆ. ಆದರೆ, ನೆರೆಯ ದೇಶದ ಅಸಹಾಯಕ ಜನರು ಸಹಾಯ ಕೋರಿ ಬಂದರೆ, ನಾವು ಖಂಡಿತವಾಗಿಯೂ ಅವರಿಗೆ ಆಶ್ರಯ ನೀಡುತ್ತೇವೆ’ ಎಂದು ಹೇಳಿದ್ದರು. ಅಲ್ಲದೇ ಈ ಕುರಿತು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಏತನ್ಮಧ್ಯೆ, ಬಾಹ್ಯ ವ್ಯವಹಾರಗಳನ್ನು ನಿಭಾಯಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ಯಾವ ಆಧಾರದಲ್ಲಿ ಇಂತಹ ಹೇಳಿಕೆ ನೀಡಲಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ರಾಜ್ಯಪಾಲ ಸಿ.ವಿ.ಆನಂದ ಬೋಸ್, ಮಮತಾ ಬ್ಯಾನರ್ಜಿ ಅವರಿಗೆ ಸೂಚಿಸಿದ್ದರು. ಅಲ್ಲದೇ ನೆರೆಯ ದೇಶದ ಆಂತರಿಕ ವ್ಯವಹಾರಗಳ ಬಗ್ಗೆ ಯಾವುದೇ ಹೇಳಿಕೆ ನೀಡದಂತೆಯೂ ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT