ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರಪ್ರದೇಶ: ನಾಯ್ಡು ಮುಖ್ಯಮಂತ್ರಿ, ಪವನ್ ಮಂತ್ರಿ

ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ಭಾಗಿ
Published 12 ಜೂನ್ 2024, 15:37 IST
Last Updated 12 ಜೂನ್ 2024, 15:37 IST
ಅಕ್ಷರ ಗಾತ್ರ

ಅಮರಾವತಿ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾನ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಜೆ.‍ಪಿ.ನಡ್ಡಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಸೇರಿದಂತೆ ಬಿಜೆಪಿ ಮುಖಂಡರು ಭಾಗವಹಿಸಿದ್ದರು. 

ಇದೇ ವೇಳೆ ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಸೇರಿದಂತೆ ಹಲವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 25 ಸದಸ್ಯರ ಸಚಿವ ಸಂಪುಟದಲ್ಲಿ ಪವನ್ ಕಲ್ಯಾಣ ನೇತೃತ್ವದ ಜನಸೇನಾದಿಂದ ಮೂವರು ಹಾಗೂ ಬಿಜೆಪಿಯಿಂದ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲರಾದ ಎಸ್‌.ಅಬ್ದುಲ್ ನಜೀರ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ಚಂದ್ರಬಾಬು ನಾಯ್ಡು ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಲಂಗಿಸಿಕೊಂಡು ಅಭಿನಂದಿಸಿದರು. ನಂತರ ಪ್ರಧಾನಿ, ತೆಲುಗು ನಟ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಅವರ ಕೈಗಳನ್ನು ಹಿಡಿದು ಆತ್ಮೀಯತೆಯಿಂದ ಕುಶಲೋಪರಿ ನಡೆಸಿದರು. ವೇದಿಕೆಯ ಮೇಲಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ, ನಟ ರಜನಿಕಾಂತ್ ಮತ್ತು ಅವರ ಪತ್ನಿ ಲತಾ ಅವರೊಂದಿಗೂ ಪ್ರಧಾನಿ ಆತ್ಮೀಯತೆಯಿಂದ ಮಾತನಾಡಿದರು.

ಎನ್‌. ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಎರಡು ಬಾರಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ನಂತರ, ರಾಜ್ಯ ವಿಭಜನೆಯಾದ ನಂತರ ಈಗ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. 

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎನ್‌.ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಾಯ್ಡು ಅವರನ್ನು ಆಲಂಗಿಸಿಕೊಂಡರು–ಪಿಟಿಐ ಚಿತ್ರ
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎನ್‌.ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಾಯ್ಡು ಅವರನ್ನು ಆಲಂಗಿಸಿಕೊಂಡರು–ಪಿಟಿಐ ಚಿತ್ರ

‘ಡಿಸಿಎಂ ಪವನ್’ ಎಂದ ಶಾ

ಚಿರಂಜೀವಿ ಜನಸೇನಾ ಮುಖಂಡ ನಟ ಪವನ್ ಕಲ್ಯಾಣ್ ಅವರು ಚಂದ್ರಬಾಬು ನಾಯ್ಡು ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಉಪಮುಖ್ಯಮಂತ್ರಿ ಆಗಬಹುದು ಎನ್ನುವ ವದಂತಿಗಳಿದ್ದರೂ ಅಧಿಕೃತವಾಗಿ ಅವರು ಇನ್ನೂ ಕೇವಲ ಸಚಿವರು ಮಾತ್ರ. ಆದರೆ ಪವನ್ ಅವರನ್ನು ಕೇಂದ್ರ ಸಚಿವ ಅಮಿತ್ ಶಾ ಮತ್ತು ನಟ ಚಿರಂಜೀವಿ ಸಾಮಾಜಿಕ ಜಾಲತಾಣದ ಪ್ರತ್ಯೇಕ ಪೋಸ್ಟ್‌ಗಳಲ್ಲಿ ಉಪಮುಖ್ಯಮಂತ್ರಿ ಎಂದು ಉಲ್ಲೇಖಿಸಿದ್ದಾರೆ.  ‘ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡುಜೀ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌ಜೀ ಮತ್ತು ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಚಿವರಿಗೂ ಅಭಿನಂದನೆಗಳು’ ಎಂದು ಕೇಂದ್ರ ಸಚಿವ ಅಮಿತ್ ಶಾ ಪೋಸ್ಟ್ ಮಾಡಿದ್ದಾರೆ. ಇದೇ ರೀತಿ ಪವನ್ ಕಲ್ಯಾಣ್ ಅವರ ಅಣ್ಣ ನಟ ಚಿರಂಜೀವಿ ಕೂಡ ಪೋಸ್ಟ್ ಮಾಡಿದ್ದು ‘ಉಪಮುಖ್ಯಮಂತ್ರಿ ಕೊನಿಡೇಲ ಪವನ್ ಕಲ್ಯಾಣ್ ಮತ್ತು ಸಂಪುಟದ ಇತರರಿಗೆ ಅಭಿನಂದನೆಗಳು’ ಎಂದು ಉಲ್ಲೇಖಿಸಿದ್ದಾರೆ.

‘ಮೆಗಾ’ ಸೋದರರ ಮೂಲಕ ಮೋದಿ ಸಂದೇಶ

ಆಂಧ್ರಪ್ರದೇಶದ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪವನ್ ಕಲ್ಯಾಣ್ ಅವರು ವೇದಿಕೆಯ ಇನ್ನೊಂದು ಬದಿ ಇದ್ದ ತಮ್ಮ ಅಣ್ಣ ಚಿರಂಜೀವಿ ಅವರನ್ನು ಭೇಟಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದರು. ಅದರಂತೆ ಮೋದಿ ಅವರು ಚಿರಂಜೀವಿ ಅವರನ್ನು ಭೇಟಿ ಮಾಡಿದ್ದಷ್ಟೇ ಅಲ್ಲ ಜನರ ಕಡೆ ತಿರುಗಿ ತಮ್ಮ ಎಂದಿನ ಶೈಲಿಯಲ್ಲಿ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರ ಕೈಗಳನ್ನು ಹಿಡಿದು ಮೇಲೆತ್ತಿದರು.  ಮೋದಿ ಅವರು ಈ ಮೂಲಕ ಆಂಧ್ರಪ್ರದೇಶದ ಜನತೆಗೆ ಒಂದು ಸಂದೇಶ ರವಾನಿಸಿದರು. ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಒಂದು ರಾಜಕೀಯ ಶಕ್ತಿಯಾಗಿ ರೂಪುತಳೆದಿದ್ದು ಎನ್‌ಡಿಎ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  ಪವನ್ ಮತ್ತು ಚಿರಂಜೀವಿ ಆಂಧ್ರಪ್ರದೇಶದ ಕಾಪು ಸಮುದಾಯಕ್ಕೆ ಸೇರಿದ್ದು ಅದು ರಾಜ್ಯದಲ್ಲಿ ಶೇ 15ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಸಮುದಾಯವು ಈ ಬಾರಿಯ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಮತ ಚಲಾಯಿಸಿದೆ. ಸಮುದಾಯದ ನಾಯಕರಾಗಿ ಪವನ್ ಕಲ್ಯಾಣ್ ಗುರುತಿಸಿಕೊಂಡಿದ್ದು ಅದನ್ನು ಗುರುತಿಸಿಯೇ ಬಿಜೆಪಿ ಅವರ ಬೆನ್ನಿಗೆ ನಿಂತಿದೆ. ಜನವರಿಯಲ್ಲಿ ಚಿರಂಜೀವಿ ಅವರಿಗೆ ಮೋದಿ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೆಲ್ಲವೂ ಬಿಜೆಪಿ ದಕ್ಷಿಣದಲ್ಲಿ ಬಲ ವೃದ್ಧಿಸಿಕೊಳ್ಳಲು ನಡೆಸುತ್ತಿರುವ ಚಟುವಟಿಕೆಗಳಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT