ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿಕ್ರಮಣಕ್ಕೆ ರಕ್ಷಣೆ ಇಲ್ಲ: ಸುಪ್ರೀಂ ಕೋರ್ಟ್‌

Published : 2 ಅಕ್ಟೋಬರ್ 2024, 0:18 IST
Last Updated : 2 ಅಕ್ಟೋಬರ್ 2024, 0:18 IST
ಫಾಲೋ ಮಾಡಿ
Comments

ನವದೆಹಲಿ: ರಸ್ತೆಗಳ ನಡುವೆ ಇರುವುದು ದರ್ಗಾ ಆಗಿರಲಿ, ದೇವಸ್ಥಾನ ಆಗಿರಲಿ, ಸಾರ್ವಜನಿಕ ಹಿತ ಬಹುಮುಖ್ಯವಾಗಿರುವ ಕಾರಣ ಅಂಥವುಗಳನ್ನು ತೆರವು ಮಾಡಲೇಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.

ವ್ಯಕ್ತಿಯೊಬ್ಬ ಆರೋಪಿ ಎಂದ ಮಾತ್ರಕ್ಕೆ ಅಥವಾ ಆತ ಅಪರಾಧಿ ಎಂದ ಮಾತ್ರಕ್ಕೆ ಕಟ್ಟಡ ಧ್ವಂಸಕ್ಕೆ ಅವಕಾಶ ಇಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ. ಆರೋಪಿಗಳಿಗೆ ಸೇರಿದ ಕಟ್ಟಡಗಳನ್ನು ಹಲವು ರಾಜ್ಯಗಳಲ್ಲಿ ಧ್ವಂಸಗೊಳಿಸಲಾಗುತ್ತಿದೆ ಎಂಬ ದೂರುಗಳು ಇರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕೋರ್ಟ್‌, ತೀರ್ಪನ್ನು ಕಾಯ್ದಿರಿಸಿದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ವಿಭಾಗೀಯ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿದೆ. ಅನಧಿಕೃತವಾದ ಕಟ್ಟಡವನ್ನು ಯಾರೇ ನಿರ್ಮಿಸಿರಲಿ, ಆತನ ಧಾರ್ಮಿಕ ನಂಬಿಕೆಗಳು ಯಾವುದೇ ಆಗಿರಲಿ, ಅಂತಹ ಕಟ್ಟಡಗಳನ್ನು ತೆರವು ಮಾಡಬೇಕಾಗುತ್ತದೆ ಎಂಬುದನ್ನು ಪೀಠವು ಸ್ಪಷ್ಟಪಡಿಸಿದೆ.

ತನ್ನ ಅನುಮತಿ ಇಲ್ಲದೆ ಯಾವುದೇ ಕಟ್ಟಡವನ್ನು ಧ್ವಂಸಗೊಳಿಸಬಾರದು ಎಂದು ಸೆಪ್ಟೆಂಬರ್ 17ರಂದು ನೀಡಿದ್ದ ನಿರ್ದೇಶನವು ಪ್ರಕರಣ ಇತ್ಯರ್ಥ ಆಗುವವರೆಗೂ ಜಾರಿಯಲ್ಲಿ ಇರುತ್ತದೆ ಎಂದು ಪೀಠವು ಹೇಳಿದೆ. ಆದರೆ, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಜಮೀನು, ಅರಣ್ಯ ಭೂಮಿ ಹಾಗೂ ನೀರಿನ ಮೂಲಗಳ ಅತಿಕ್ರಮಣವನ್ನು ತಾನು ರಕ್ಷಿಸುವುದಿಲ್ಲ ಎಂಬುದನ್ನು ಅದು ಸ್ಪಷ್ಟಪಡಿಸಿದೆ.

ನಾವು ಧರ್ಮನಿರಪೇಕ್ಷ ದೇಶದಲ್ಲಿದ್ದೇವೆ. ಮಾರ್ಗಸೂಚಿಗಳನ್ನು ನಾವು ಎಲ್ಲ ನಾಗರಿಕರಿಗೆ ಅನ್ವಯವಾಗುವಂತೆ ರೂಪಿಸುತ್ತಿದ್ದೇವೆ. ಅವು ಯಾವುದೇ ಧರ್ಮಕ್ಕೆ ಸೀಮಿತವಾಗಿರುವುದಿಲ್ಲ
ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ

‘ಧ್ವಂಸಕ್ಕೆ ಮುನ್ನ ನೋಟಿಸ್‌ ಕೊಡಿ’

ಕಟ್ಟಡ ಧ್ವಂಸಗೊಳಿಸುವುದಕ್ಕೆ ಸಂಬಂಧಿಸಿದ ನೋಟಿಸ್‌ಗಳನ್ನು ಅವುಗಳ ಮಾಲೀಕರಿಗೆ ರಿಜಿಸ್ಟರ್ಡ್ ಅಂಚೆಯ ಮೂಲಕ ಕಳುಹಿಸಬೇಕು ನೋಟಿಸ್‌ಗಳನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಪ್ರಕಟಿಸಬೇಕು ಆಗ ನೋಟಿಸ್‌ಗಳ ಡಿಜಿಟಲ್ ದಾಖಲೆಯೊಂದು ಇರುವಂತಾಗುತ್ತದೆ ಎಂದು ಪೀಠ ಹೇಳಿದೆ. ಧ್ವಂಸ ಆದೇಶ ಹಾಗೂ ಧ್ವಂಸ ಕಾರ್ಯಾಚರಣೆ ನಡುವೆ 10 ಅಥವಾ 15 ದಿನಗಳ ಅಂತರವಿದ್ದರೆ ಜನರಿಗೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೂಡ ಪೀಠವು ಸಲಹೆ ನೀಡಿದೆ. ‘ಮಹಿಳೆಯರು ಮತ್ತು ಮಕ್ಕಳು ರಸ್ತೆ ಮೇಲೆ ನಿಲ್ಲಬೇಕಾದ ಸ್ಥಿತಿಯು ಒಳ್ಳೆಯದಲ್ಲ’ ಎಂದು ಹೇಳಿರುವ ಪೀಠವು 15 ದಿನ ತಡೆದು ಕಟ್ಟಡ ‌ಧ್ವಂಸ ಕಾರ್ಯಾಚರಣೆ ನಡೆಸಿದರೆ ನಷ್ಟವೇನೂ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT