ಸಿ.ಎಂ ಆಗಿದ್ದಾಗ ಮೋದಿಗೆ ಸಹಾಯ ಮಾಡಿದ್ದೆ
ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವೇಳೆ ಅವರಿಗೆ ಸಹಾಯ ಮಾಡಿದ್ದೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಗುರುವಾರ ಹೇಳಿದರು. ‘ಮೋದಿ ಅವರು ನನಗೆ ಪತ್ರ ಬರೆಯುತ್ತಿದ್ದರು ಮತ್ತು ನಾನು ಕೃಷಿ ಕ್ಷೇತ್ರ ಎದುರಿಸುತ್ತಿದ್ದ ಬಿಕ್ಕಟ್ಟನ್ನು ಪರಿಹರಿಸಲು ಅವರಿಗೆ ಸಹಾಯ ಮಾಡುತ್ತಿದ್ದೆ’ ಎಂದು ಪವಾರ್ ಸುದ್ದಿಗಾರರಿಗೆ ವಿವರಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಶರದ್ ಪವಾರ್ ಅವರು ಕೃಷಿ ಸಚಿವರಾಗಿದ್ದರು. ‘ಮೋದಿ ಅವರು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಂಡು ನನ್ನ ಬಳಿಗೆ ಬರುತ್ತಿದ್ದರು ಮತ್ತು ನನ್ನನ್ನು ಗುಜರಾತ್‌ಗೆ ಕರೆದೊಯ್ಯುತ್ತಿದ್ದರು. ಒಮ್ಮೆ ಅವರನ್ನು ಇಸ್ರೇಲ್‌ಗೂ ಕರೆದೊಯ್ದಿದ್ದೆ. ಮೋದಿ ಅವರು ಈಗ ಏನು ಹೇಳುತ್ತಿದ್ದಾರೋ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು. ಮೋದಿ ಅವರು ಚುನಾವಣಾ ರ್‍ಯಾಲಿಗಳಲ್ಲಿ ಶರದ್ ಪವಾರ್ ಅವರನ್ನು ಸತತವಾಗಿ ಟೀಕಿಸುತ್ತಿದ್ದಾರೆ.