ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

G20 Summit | ‘ನವದೆಹಲಿ ಘೋಷಣೆ’ಗೆ ‘ಜಿ–20’ ಒಮ್ಮತದ ಮುದ್ರೆ

Published 9 ಸೆಪ್ಟೆಂಬರ್ 2023, 19:30 IST
Last Updated 9 ಸೆಪ್ಟೆಂಬರ್ 2023, 19:30 IST
ಅಕ್ಷರ ಗಾತ್ರ

ನವದೆಹಲಿ: ಜಿ–20 ಶೃಂಗಸಭೆಯ ಮೊದಲನೆಯ ದಿನವಾದ ಶನಿವಾರವೇ ಜಾಗತಿಕ ನಾಯಕರು ಪರಸ್ಪರ ವಿಸ್ತೃತ ಚರ್ಚೆಯ ಮೂಲಕ ‘ನವದೆಹಲಿ ಘೋಷಣೆ’ ಕುರಿತು ಒಮ್ಮತ ಅಭಿಪ್ರಾಯಕ್ಕೆ ಬಂದಿದ್ದಾರೆ. 

ಉಕ್ರೇನ್‌ ವಿರುದ್ಧ ವಿಶೇಷ ಸೇನಾ ಕಾರ್ಯಾಚರಣೆ ನಡೆಸಿದ ರಷ್ಯಾವನ್ನು ಖಂಡಿಸುವುದರಿಂದ ದೂರ ಉಳಿಯಲು ಸದಸ್ಯ ರಾಷ್ಟ್ರಗಳ ನಾಯಕರು ತೀರ್ಮಾನಿಸಿದ್ದಾರೆ. ಆದರೆ, ಯುದ್ಧದಿಂದ ವಿಶ್ವದ ಆರ್ಥಿಕತೆ, ಆಹಾರ ಮತ್ತು ಇಂಧನದ ಮೇಲೆ ಉಂಟಾಗಿರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. 

ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಆರಂಭವಾಗಿರುವ ಜಿ–20 18ನೇ ಶೃಂಗಸಭೆಯಲ್ಲಿ ‘ನವದೆಹಲಿ ಘೋಷಣೆ’ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಉಕ್ರೇನ್‌ ಯುದ್ಧದ ಬಗ್ಗೆ ಕರಡುವಿ ನಲ್ಲಿದ್ದ ಉಲ್ಲೇಖದ ಕುರಿತು ಸದಸ್ಯ ರಾಷ್ಟ್ರಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆಯಿತು. ಬಳಿಕ ಎಲ್ಲ ರಾಷ್ಟ್ರಗಳು ನಿರ್ಣಯದ ಕುರಿತು ಒಮ್ಮತದ ಅಭಿಪ್ರಾಯಕ್ಕೆ ಬಂದವು. ನವದೆಹಲಿ ಘೋಷಣೆಗೆ ತ್ವರಿತಗತಿಯಲ್ಲಿ ಅಂಗೀಕಾರ ಸಿಕ್ಕಿದ್ದು ಭಾರತದ ಪಾಲಿಗೆ ದೊಡ್ಡ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ.

ದಿನದ ಎರಡನೇ ಅಧಿವೇಶನದಲ್ಲಿ ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ‘ಸ್ನೇಹಿತರೇ, ಈಗ ನಮಗೆ ಒಳ್ಳೆಯ ಸುದ್ದಿ ಬಂದಿದೆ’ ಎಂದರು.

‘ನಮ್ಮ ತಂಡಗಳ ಕಠಿಣ ಪರಿಶ್ರಮದಿಂದ ಮತ್ತು ನಿಮ್ಮೆಲ್ಲರ ಸಹಕಾರದೊಂದಿಗೆ ನವದೆಹಲಿ ಜಿ–20 ಶೃಂಗಸಭೆಯ ನಾಯಕರ ಘೋಷಣೆಗೆ ಒಮ್ಮತವಿದೆ’ ಎಂದು ಹೇಳಿದರು. 

ನವದೆಹಲಿ ಘೋಷಣೆ ಪ್ರಕಾರ, ವಿಶ್ವದ ಹಲವೆಡೆ ನಡೆಯುತ್ತಿರುವ ಯುದ್ಧ ಮತ್ತು ಬಿಕ್ಕಟ್ಟುಗಳಿಂದ ಮಾನವರು ಎದುರಿಸುತ್ತಿರುವ ತೀವ್ರ ಸಂಕಷ್ಟದ ಬಗ್ಗೆ ಜಿ–20 ನಾಯಕರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಘೋಷಣೆಯಲ್ಲಿ, 2022ರ ನವೆಂಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ 17ನೇ ಶೃಂಗಸಭೆಯ ನಿರ್ಣಯಗಳನ್ನು ಉಲ್ಲೇಖಿಸಲಾಗಿದೆ. ಜತೆಗೆ, ವಿಶ್ವಸಂಸ್ಥೆಯ ಭದ್ರತಾ ಪರಿಷತ್‌ ಹಾಗೂ ಸಾಮಾನ್ಯ ಸಭೆಯಲ್ಲಿ ಕಲಹದ ಕುರಿತು ಕೈಗೊಂಡ ನಿರ್ಣಯವನ್ನೂ ಪ್ರಸ್ತಾಪಿಸಲಾಗಿದೆ.

ಎಲ್ಲ ರಾಷ್ಟ್ರಗಳು, ಇತರ ರಾಷ್ಟ್ರಗಳ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವುದು ಅಥವಾ ರಾಜಕೀಯ ಸ್ವಾತಂತ್ರ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಬೆದರಿಕೆ ಒಡ್ಡುವುದು ಅಥವಾ ಸೇನೆಯನ್ನು ಬಳಸುವುದರಿಂದ ದೂರ ಉಳಿಯಬೇಕು ಎಂದು ಜಿ–20 ನಾಯಕರು ನಿರ್ಣಯದಲ್ಲಿ ಸ್ಪಷ್ಟಪಡಿಸಿದ್ದಾರೆ. 

ಬಾಲಿಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಉಕ್ರೇನ್‌ ವಿರುದ್ಧ ಆಕ್ರಮಣಶೀಲ ಮನೋಭಾವ ತೋರುತ್ತಿರುವ ರಷ್ಯಾದ ವಿರುದ್ಧ ಈ ಶೃಂಗಸಭೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಉಕ್ರೇನ್‌ ಪ್ರಾಂತ್ಯದಿಂದ ರಷ್ಯಾ ತನ್ನೆಲ್ಲ ಸೇನಾ ಪಡೆಗಳನ್ನು ಸಂಪೂರ್ಣವಾಗಿ ಹಾಗೂ ಬೇಷರತ್‌ ಆಗಿ ಹಿಂಪಡೆಯಬೇಕು ಎಂದು ‘ಬಾಲಿ ನಿರ್ಣಯ’ದಲ್ಲಿ ಆಗ್ರಹಿಸಲಾಗಿತ್ತು. ಆದರೆ, ನವದೆಹಲಿ ನಿರ್ಣಯದಲ್ಲಿ ಅಂತಹ ಯಾವುದೇ ಪ್ರಸ್ತಾಪ ಇಲ್ಲ.

ಕಳೆದ ವಾರ ಭಾರತದ ವಿದೇಶಾಂಗ ಸಚಿವ ಜೈಶಂಕರ್– ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್‌ ಭೇಟಿ ಮಾಡಿದ್ದರು. ಶೃಂಗಸಭೆಗೆ ಮುನ್ನ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಶುಕ್ರವಾರ ಸಮಾಲೋಚನೆ ನಡೆಸಿದ್ದರು. ಆ ಬಳಿಕ ಹೊಸ ಕರಡನ್ನು ಸದಸ್ಯ ರಾಷ್ಟ್ರಗಳಿಗೆ ಭಾರತವು ನೀಡಿತು. ಆ ನಂತರ ನಿರ್ಣಯಕ್ಕೆ ಅಂಗೀಕಾರ ಸಿಕ್ಕಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೈಶಂಕರ್‌, ‘ಬಾಲಿ ಘೋಷಣೆಯ ನಂತರ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ’ ಎಂದರು.

‘ನವದೆಹಲಿ ಘೋಷಣೆ’ ಇಂದಿನ ಪರಿಸ್ಥಿತಿಗೆ ಸ್ಪಂದಿಸುತ್ತದೆ. ಅಂದಿನ ಕಾಳಜಿಗಳಿಗೆ ‘ಬಾಲಿ ಘೋಷಣೆ’ ಪ್ರತಿಕ್ರಿಯಿಸಿದಂತೆ ‘ನವದೆಹಲಿ ಘೋಷಣೆ’ ಇಂದಿನ ಕಳವಳಗಳಿಗೆ ಪ್ರತಿಕ್ರಿಯಿಸುತ್ತದೆ’ ಎಂದು ಸ್ಪಷ್ಟಪಡಿಸಿದರು.

ಭಯೋತ್ಪಾದನೆಯನ್ನು ಗಂಭೀರ ಬೆದರಿಕೆ ಎಂದು ಕರೆದಿರುವ ಜಿ–20 ಘೋಷಣೆಯು, ಭಯೋತ್ಪಾದಕರ ಗುಂಪಿನ ಸುರಕ್ಷಿತ ತಾಣಗಳು, ಕಾರ್ಯಾಚರಣೆಗಳು, ಚಲನವಲನ ಮತ್ತು ನೇಮಕಾತಿಯ ಸ್ವಾತಂತ್ರ್ಯ, ಹಣಕಾಸಿನ ನೆರವು ಅಥವಾ ರಾಜಕೀಯ ಬೆಂಬಲವನ್ನು ತಿರಸ್ಕರಿಸಲು ಅಂತರ ರಾಷ್ಟ್ರೀಯ ಸಹಕಾರ ಹೆಚ್ಚುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದೆ. 

2019ರ ಮಟ್ಟಕ್ಕೆ ಹೋಲಿಸಿದರೆ 2030ರ ವೇಳೆಗೆ ಇಂಗಾಲದ ಹೆಜ್ಜೆಗುರುತನ್ನು ಶೇ 43ರಷ್ಟು ಕಡಿತ ಮಾಡಲು ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯ ಮೇಲೆ ‘ಕ್ಷಿಪ್ರ, ಆಳವಾದ ಮತ್ತು ನಿರಂತರ’ ನಿಯಂತ್ರಣ ಸಾಧಿಸುವ ಅಗತ್ಯವಿದೆ ಎಂದು ಜಿ–20 ದೇಶಗಳು ಹೇಳಿವೆ. ಆದರೆ, ಇಂತಹ ಕ್ರಮಕ್ಕೆ ಅಗತ್ಯ ಸಂಪನ್ಮೂಲ ಒದಗಿಸುವ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. 

ಐದು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಣ

* ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ

* ಎಸ್‌ಡಿಜಿಗಳಲ್ಲಿ ಪ್ರಗತಿಯನ್ನು ವೇಗಗೊಳಿಸುವುದು

* ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ

* 21ನೇ ಶತಮಾನಕ್ಕಾಗಿ ಬಹುಪಕ್ಷೀಯ ಸಂಸ್ಥೆಗಳು

* ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT