ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲಿ ಬಿಸಿಲಾಘಾತ: ಒಂದೇ ದಿನ ಐವರು ಸಾವು

ದೆಹಲಿಯಲ್ಲಿ ಬಿಸಿ ಗಾಳಿ ತೀವ್ರ: ಮೂರು ವಾರಗಳ ಅವಧಿಯಲ್ಲಿ 20 ಜನರು ಮೃತ
Published : 19 ಜೂನ್ 2024, 15:58 IST
Last Updated : 19 ಜೂನ್ 2024, 15:58 IST
ಫಾಲೋ ಮಾಡಿ
Comments

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಬಿಸಿಗಾಳಿ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಬುಧವಾರ ಒಂದೇ ದಿನ ಬಿಸಿಲಾಘಾತದಿಂದಾಗಿ ಐವರು ಕೊನೆಯುಸಿರೆಳೆದಿದ್ದಾರೆ. 

ಕಳೆದ ತಿಂಗಳಾಂತ್ಯದಲ್ಲಿ ಬಿಸಿಗಾಳಿಯ ಹಾವಳಿ ಆರಂಭಗೊಂಡ ನಗರದ ಮೂರು ಆಸ್ಪತ್ರೆಗಳಲ್ಲಿ 20 ಮಂದಿ ಮೃತಪಟ್ಟಿದ್ದಾರೆ. 12 ಮಂದಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ.

‘ಬಿಸಿಗಾಳಿಯಿಂದ ಬಾಧಿತರಾಗಿ ಆಸ್ಪತ್ರೆ ಸೇರಿರುವರಿಗೆ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಬುಧವಾರ ಎಲ್ಲ ಆಸ್ಪತ್ರೆಗಳಿಗೂ ಸೂಚನೆ ನೀಡಿದ್ದಾರೆ. 

ಜನರಿಗೆ ಎಚ್ಚರಿಕೆ: ಬಿಸಿಲಾಘಾತ ಮತ್ತು ಬಿಸಿಗಾಳಿಯಿಂದ ಸ್ವಯಂ ರಕ್ಷಣೆ ಪಡೆಯುವಂತೆ ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಕ್ಕಳು, ವೃದ್ಧರು ಬಿಸಿಲಿಗೆ ಹೋಗದಂತೆ ಸಲಹೆ ನೀಡಿದೆ. 

ಇದಲ್ಲದೇ, ಬಿಸಿಗಾಳಿಯ ತೀವ್ರತೆ ಹೆಚ್ಚಿರುವ ಉತ್ತರ ಭಾರತಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯ ಸಲಹಾ ಪತ್ರ ಸಿದ್ಧಪಡಿಸುತ್ತಿದೆ.  

ದೆಹಲಿ, ಗಾಜಿಯಾಬಾದ್‌ ಮತ್ತು ನೊಯಿಡಾ ಸೇರಿದಂತೆ ರಾಜಧಾನಿಯ ಬಹುತೇಕ ಕಡೆಗಳಲ್ಲಿ ಗುಡುಗು, ಮಿಂಚಿನ ಸಹಿತ ಪ್ರಬಲ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್‌ ಅಲರ್ಟ್‌ ಘೋಷಿಸಿದೆ. 

ಕಳೆದ ತಿಂಗಳ ಅಂತ್ಯದಲ್ಲಿ ಬಿಸಿಗಾಳಿ ಬೀಸಲು ಆರಂಭಿಸಿದ್ದು, ರಾಮ್‌ ಮನೋಹರ ಲೋಹಿಯಾ ಆಸ್ಪತ್ರೆ ಮತ್ತು ಸಫ್ದರ್‌ಜಂಗ್‌ ಆಸ್ಪತ್ರೆಗಳಲ್ಲಿ ತಲಾ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಏಳು ಸಾವುಗಳು ಎರಡು ದಿನಗಳ ಅವಧಿಯಲ್ಲಿ ಸಂಭವಿಸಿವೆ. ಲೋಕ ನಾಯಕ ಆಸ್ಪತ್ರೆಯಲ್ಲಿ ಕಳೆದ ವಾರ ಇಬ್ಬರು ಅಸುನೀಗಿದ್ದಾರೆ. 

ಪ್ರತ್ಯೇಕ ವಿಭಾಗ ಆರಂಭಕ್ಕೆ ಆದೇಶ: ಈ ಮಧ್ಯೆ ದೆಹಲಿ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಬಿಸಿಗಾಳಿ ಹಾವಳಿಯ ಸದ್ಯದ ಪರಿಸ್ಥಿತಿಯನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಬುಧವಾರ ಪರಿಶೀಲಿಸಿದರು. ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಮಾಡಿಕೊಂಡಿರುವ ಸಿದ್ಧತೆಗಳನ್ನೂ ಅವರು ಪರಾಮರ್ಶಿಸಿದರು. 

ಬಿಸಿಗಾಳಿಯಿಂದಾಗಿ ಅಸ್ವಸ್ಥರಾದವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಎಲ್ಲ ಆಸ್ಪತ್ರೆಗಳು ಸಜ್ಜಾಗಿರಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಬಿಸಿಗಾಳಿಯ ಪ್ರಭಾವಕ್ಕೆ ತುತ್ತಾದವರ ಆರೈಕೆಗೆ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ಆರಂಭಿಸಲೂ ಅವರು ಆದೇಶಿಸಿದರು. 

12 ವರ್ಷಗಳಲ್ಲೇ ಅತ್ಯಂತ ‘ಬಿಸಿ’ ರಾತ್ರಿ

ದೆಹಲಿಯ ಜನರು ಮಂಗಳವಾರ ರಾತ್ರಿ 12 ವರ್ಷಗಳಲ್ಲೇ ಅತ್ಯಂತ ಬಿಸಿಯಾದ ರಾತ್ರಿಯನ್ನು ಅನುಭವಿಸಿದರು. ಮಂಗಳವಾರ ಕನಿಷ್ಠ ಉಷ್ಣಾಂಶ 35.2 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು. ಇದು ವಾತಾವರಣದ ಸಾಮಾನ್ಯ ಉಷ್ಣಾಂಶಕ್ಕಿಂತ ಎಂಟು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು.   ಈ ಮೊದಲು 2012ರ ಜೂನ್‌ ತಿಂಗಳಲ್ಲಿ 34 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.  ಈ ವರ್ಷ ದೆಹಲಿಯಲ್ಲಿ ಬಿಸಿಗಾಳಿ ತೀವ್ರವಾಗಿದ್ದು ಗರಿಷ್ಠ ಉಷ್ಣಾಂಶ 49 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದೆ. ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ವಾತಾವರಣದ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗುತ್ತಿದೆ.  ಹವಾಮಾನ ಇಲಾಖೆಯು ಉತ್ತರ ಭಾರತಕ್ಕೆ ರೆಡ್‌ ಅಲರ್ಟ್‌ ಘೋಷಿಸಿದ್ದು ಗುರುವಾರದ ಹೊತ್ತಿಗೆ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT