ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ | ಕೊನೆಯ ಹಂತ; ಶೇ 66 ಮತದಾನ

Published : 1 ಅಕ್ಟೋಬರ್ 2024, 16:01 IST
Last Updated : 1 ಅಕ್ಟೋಬರ್ 2024, 16:01 IST
ಫಾಲೋ ಮಾಡಿ
Comments

ಜಮ್ಮು/ ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೂರನೇ ಹಾಗೂ ಅಂತಿಮ ಹಂತದಲ್ಲಿ ಸರಾಸರಿ ಶೇ 65.65 ಮತದಾನವಾಗಿದೆ.

ಮೂರನೇ ಹಂತದಲ್ಲಿ 40 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತ‌ದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು. ಜಮ್ಮು ವಲಯದ 24 ಹಾಗೂ ಕಾಶ್ಮೀರ ವಲಯದ 16 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಜಮ್ಮುವಿನ ಸಾಂಬಾ ಜಿಲ್ಲೆಯಲ್ಲಿ ಅತ್ಯಧಿಕ (ಶೇ 73.45) ಹಾಗೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ (ಶೇ 55.73) ಮತದಾನ ನಡೆದಿದೆ. ಮೊದಲ ಎರಡು ಹಂತಗಳಿಗೆ ಹೋಲಿಸಿದರೆ, ಮೂರನೇ ಹಂತದಲ್ಲಿ ಮತದಾರರು ಹೆಚ್ಚಿನ ಉತ್ಸಾಹ ತೋರಿದ್ದಾರೆ.

ಕಣಿವೆ ನಾಡಿನಲ್ಲಿ 10 ವರ್ಷಗಳ ಬಿಡುವಿನ ಬಳಿಕ ವಿಧಾನಸಭಾ ಚುನಾವಣೆ ನಡೆದಿದ್ದು, ಅಕ್ಟೋಬರ್‌ 8 ರಂದು ಮತ ಎಣಿಕೆ ನಡೆಯಲಿದೆ. ಇದೀಗ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. 

ಉತ್ತರ ಕಾಶ್ಮೀರದ ಮೂರು ಗಡಿ ಜಿಲ್ಲೆಗಳಾದ ಬಾರಾಮುಲ್ಲಾ, ಕುಪ್ವಾರ ಮತ್ತು ಬಾಂದೀಪೋರಾದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು, ವಾಲ್ಮೀಕಿ ಸಮಾಜ ಮತ್ತು ಗೋರ್ಖಾ ಸಮುದಾಯದ ಸದಸ್ಯರು ಇದೇ ಮೊದಲ ಬಾರಿ ಮತ ಚಲಾಯಿಸಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ಕಾರಣ ಇವರಿಗೆ ಮತ ಚಲಾಯಿಸುವ ಹಕ್ಕು ದೊರೆತಿದೆ.

ನಿರ್ವಸಿತರಾಗಿರುವ ಸಾವಿರಾರು ಕಾಶ್ಮೀರಿ ಪಂಡಿತರು ತಮಗೆ ಮತ್ತೆ ಕಾಶ್ಮೀರ ಕಣಿವೆಗೆ ಮರಳಲು ಸಾಧ್ಯವಾಗಬಹುದು ಎಂಬ ಆಶಾಭಾವನೆಯೊಂದಿಗೆ ಮತ ಚಲಾಯಿಸಿದರು.

‘ಕಾಶ್ಮೀರ ಕಣಿವೆಯಲ್ಲಿರುವ ನಮ್ಮ ಮನೆಗಳಿಗೆ ಮರಳುವ ಬೇಡಿಕೆಯನ್ನು ಈಡೇರಿಸುವ ಮೂಲಕ ಹೊಸ ಸರ್ಕಾರವು ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುತ್ತದೆ ಎಂಬ ಭರವಸೆಯೊಂದಿಗೆ ಮತ್ತೊಮ್ಮೆ ಮತ ಚಲಾಯಿಸಿದ್ದೇನೆ’ ಎಂದು 76 ವರ್ಷದ ಬದರೀನಾಥ್‌ ಹೇಳಿದರು.‌‌‌‌

ಅಕ್ಟೋಬರ್‌ 8ರಂದು ಫಲಿತಾಂಶ ಪ್ರಕಟ ಕೊನೆಯ ಹಂತ: 40 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಬಿಗಿ ಭದ್ರತೆ ನಡುವೆ ಶಾಂತಿಯುತ ಮತದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT