ಬೆಂಗಳೂರು: ವಿಚಲಿತಗೊಳ್ಳದ ಶಕ್ತಿ! – ಡಿಎಂಕೆ ಅಧ್ಯಕ್ಷರಾಗಿ ಐವತ್ತನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಎಂ. ಕರುಣಾನಿಧಿ ಅವರ ಬಗ್ಗೆ ಅವರ ಪುತ್ರ ಎಂ.ಕೆ. ಸ್ಟಾಲಿನ್ ಅವರು ಬಣ್ಣಿಸಿದ್ದು ಹೀಗೆ. ಸ್ಟಾಲಿನ್ ಕೆಲವು ದಿನಗಳ ಹಿಂದಷ್ಟೇ ಆಡಿದ ಈ ಮಾತನ್ನು ಸುಳ್ಳು ಮಾಡುವಂತೆ ಕರುಣಾನಿಧಿ ಸಾವಿಗೀಡಾಗಿದ್ದಾರೆ.

ಮುತ್ತುವೇಲು ಕರುಣಾನಿಧಿ ಅವರು ‘ದ್ರಾವಿಡ ಮುನ್ನೇತ್ರ ಕಳಗಂ’ನಲ್ಲಿ (ಡಿಎಂಕೆಯಲ್ಲಿ) ಮುನ್ನೆಲೆಗೆ ಬಂದುದು 1960ರಲ್ಲಿ. ಡಿಎಂಕೆ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ನಿಧನರಾದಾಗ ಅವರ ಜಾಗದಲ್ಲಿ ಬಂದು ಕುಳಿತವರು ಕರುಣಾನಿಧಿ. ಅದಾದನಂತರ ಐದು ದಶಕಗಳ ಹಾದಿಯಲ್ಲಿ ಅವರು ಹಿಂತಿರುಗಿ ನೋಡಲಿಲ್ಲ.

ಸಾರ್ವಜನಿಕ ಜೀವನದಲ್ಲಿ 80 ವರ್ಷ. ಚಿತ್ರರಂಗದಲ್ಲಿ 70 ವರ್ಷ. ವಿಧಾನಸಭೆಯಲ್ಲಿ 75 ವರ್ಷ. ಪಕ್ಷದ ಅಧ್ಯಕ್ಷರಾಗಿ 50 ವರ್ಷ, 5 ಬಾರಿ ಮುಖ್ಯಮಂತ್ರಿ ಸ್ಥಾನ. 12 ವಿಧಾನಸಭಾ ಚುನಾವಣೆಗಳಲ್ಲಿ ಸೋಲರಿಯದ ಸರದಾರ – ಕರುಣಾನಿಧಿ ಅವರ ಜೀವನದಲ್ಲಿ ಎದ್ದುಕಾಣಿಸುವ ಈ ಸಾಧನೆಗಳು ಯಾರನ್ನಾದರೂ ಬೆರಗುಗೊಳಿಸುವಂತಹವು.

ಆಕರ್ಷಕ ವ್ಯಕ್ತಿತ್ವ:ಬಿಳಿ ಬಟ್ಟೆ, ಕಣ್ಣುಗಳನ್ನು ಮರೆಮಾಚುವ ಕಪ್ಪು ಕನ್ನಡಕ ಹಾಗೂ ಕೊರಳನ್ನು ಸುತ್ತುವರೆದ ಹಳದಿ ಬಣ್ಣದ ವಲ್ಲಿ – ಇದು ಕರುಣಾನಿಧಿ ಎಂದಕೂಡಲೇ ನೆನಪಾಗುವ ಚಿತ್ರ.

ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಲೈ ಗ್ರಾಮದಲ್ಲಿ ಜನಿಸಿದ ಕರುಣಾನಿಧಿ (ಜ: 1924ರ ಜೂನ್ 3) ಅವರು ಬೆಳೆದುಬಂದ ಹಾದಿ ಕೂಡ ಅವರು ರಚಿಸಿದ ಚಿತ್ರಕಥೆಗಳಷ್ಟೇ ರಮ್ಯ ರೋಚಕವಾದುದು. ಹದಿನಾಲ್ಕರ ಹುಡುಗನಾಗಿದ್ದಲೇ ‘ತಮಿಳು ವಿದ್ಯಾರ್ಥಿಗಳ ಒಕ್ಕೂಟ’ದ ಮೂಲಕ ರಾಜಕಾರಣದ ಅಂಗಳಕ್ಕೆ ಧುಮುಕಿದರು. ಪೆರಿಯಾರ್ ಪ್ರತಿಪಾದಿಸಿದ ‘ತಮಿಳು ಸ್ವಾಭಿಮಾನ’ದ ಮಂತ್ರವನ್ನು ತಾವೂ ಪಠಿಸಿದರು. ತಮ್ಮನ್ನು ತಾವು ನಾಸ್ತಿಕನೆಂದು ಕರೆದುಕೊಂಡರು. ಬ್ರಾಹ್ಮಣಿಕೆಯನ್ನೂ, ಜಾತೀಯತೆಯನ್ನೂ ಉಗ್ರವಾಗಿ ವಿರೋಧಿಸಿದರು.

1926ರಲ್ಲಿ ಪೆರಿಯಾರ್ ಸಂಘಟಿಸಿದ ‘ಆತ್ಮಗೌರವ ಆಂದೋಲನ’ದ ಪ್ರಭಾವಕ್ಕೆ ಒಳಗಾಗಿದ್ದ ಅಣ್ಣಾದೊರೈ, 1930ರಲ್ಲಿ ತಮ್ಮ ಕಾಲೇಜಿನಲ್ಲಿ ‘ಆತ್ಮಾಭಿಮಾನಿ ಯುವ ಘಟಕ’ವನ್ನು ರಚಿಸಿದ್ದರು. ಆತ್ಮಗೌರವದ ಈ ಪರಂಪರೆಯನ್ನು ಕರುಣಾನಿಧಿ ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿದರು. ರಾಜಾಜಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿನ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವಂತೆ ಆದೇಶಿಸಿದ್ದರು. ಇದನ್ನು ವಿರೋಧಿಸಿ ಕರುಣಾನಿಧಿ ಸಂಘಟಿಸಿದ ಪ್ರತಿಭಟನೆ ಅವರ ರಾಜಕಾರಣದ ಹಾದಿಯಲ್ಲಿನ ಪ್ರಮುಖ ಮೈಲಿಗಲ್ಲುಗಳಲ್ಲೊಂದು.

ದಕ್ಷಿಣಾಮೂರ್ತಿ ಎಂಬುದು ಕರುಣಾನಿಧಿ ಅವರ ಹುಟ್ಟುಹೆಸರು. ದ್ರಾವಿಡ ಚಳವಳಿಯಿಂದ ಪ್ರೇರಿತರಾಗಿದ್ದ ಅವರು, ತಮ್ಮ ಹೆಸರಿನಲ್ಲಿದ್ದ ಸಂಸ್ಕೃತದ ವಾಸನೆಯನ್ನು ನಿರಾಕರಿಸುವುದಕ್ಕಾಗಿ ಕರುಣಾನಿಧಿ ಎಂದು ಹೆಸರು ಬದಲಿಸಿಕೊಂಡರು.

ಮಾಂತ್ರಿಕ ಬರವಣಿಗೆ: ಮಾತನಾಡಿದಷ್ಟೇ ಸಲೀಸಾಗಿ ಭಾವನೆಗಳನ್ನು ಅಕ್ಷರರೂಪಕ್ಕಿಳಿಸುವ ವಿದ್ಯೆ ಅವರಿಗೆ ಸಿದ್ಧಿಸಿತ್ತು. ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಕಲಿಸುವುದನ್ನು ವಿರೋಧಿಸಿ ಎಂಟು ಪುಟಗಳ ಕೈಬರಹದ ಪತ್ರಿಕೆ ಹೊರತರುತ್ತಿದ್ದರು. ಮಾತು–ಬರವಣಿಗೆ ಎರಡರಲ್ಲೂ ಬೆಂಕಿ ಉಗುಳುತ್ತಿದ್ದ ಈ ಯುವಕ, ಅರವತ್ತರ ದಶಕದಲ್ಲಿ ತಮಿಳುನಾಡು ರಾಜಕಾರಣದಲ್ಲಿ ತಮ್ಮದೇ ವರ್ಚಸ್ಸು ಗಳಿಸಿದ್ದ ಅಣ್ಣಾದೊರೈ ಅವರ ಕಣ್ಣಿಗೆ ಬೀಳುವುದು ತಡವಾಗಲಿಲ್ಲ. ದೊಡ್ಡವರ ಪರಿಚಯದ ಮೂಲಕವೇ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಅವರಿಗೆ ದೊರೆಯಿತು. ‘ದ್ರಾವಿಡರ್ ಕಳಗಂ ಪಕ್ಷ’ದ ನಿಯತಕಾಲಿಕೆ ‘ಕುಡಿಯರಸು’ ಸಂಪಾದಕತ್ವವೂ ಒಲಿದುಬಂತು.

ಹೈಸ್ಕೂಲ್ ಮೆಟ್ಟಿಲನ್ನು ದಾಟಲು ವಿಫಲರಾದ ಕರುಣಾನಿಧಿ, ಕೊಯಮತ್ತೂರನ್ನು ತಮ್ಮ ನೆಲೆಯನ್ನಾಗಿಸಿಕೊಂಡು ಬರವಣಿಗೆಯಲ್ಲಿ, ವೃತ್ತಿಪರ ರಂಗತಂಡಗಳಲ್ಲಿ ಗುರ್ತಿಸಿಕೊಂಡರು. ನಾಟಕ–ಸಿನಿಮಾಗಳಿಗಷ್ಟೇ ಕರುಣಾನಿಧಿಯವರ ಬರವಣಿಗೆ ಸೀಮಿತವಾಗಲಿಲ್ಲ. ಕಾವ್ಯ, ಜೀವನಚರಿತ್ರೆ, ಕಾದಂಬರಿ, ಚಲನಚಿತ್ರ ಗೀತೆಗಳು – ಹೀಗೆ ವಿವಿಧ ಪ್ರಕಾರಗಳ ಮೂಲಕ ಸಹೃದಯರಿಗೆ ಹತ್ತಿರವಾದರು. ಕಾಲೇಜು ಮೆಟ್ಟಿಲು ಹತ್ತದ ಈ ಬರಹಗಾರ ಸಿನಿಮಾ ಹಾಗೂ ಸಾಹಿತ್ಯ ಕೃತಿಗಳಿಗೆ ಹಲವು ಬಹುಮಾನಗಳನ್ನೂ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳನ್ನೂ ಪಡೆದಿರುವುದು ಸಾಧಾರಣ ಸಾಧನೆಯಲ್ಲ. ಅವರ ಆತ್ಮಕಥೆ (Nenjukku Neethi) ಆರು ಸಂಪುಟಗಳಲ್ಲಿ ಪ್ರಕಟವಾಗಿದೆ.

ಸೋಲರಿಯದ ಸಾಧನೆ: ಸ್ವಾತಂತ್ರ್ಯಾನಂತರದ ರಾಜಕಾರಣದಲ್ಲಿ ‘ದ್ರಾವಿಡರ್ ಕಳಗಂ’ ಪಕ್ಷ ಹೋಳಾದಾಗ, ಅಣ್ಣಾದೊರೈ ಗರಡಿಯಲ್ಲಿ ಗುರ್ತಿಸಿಕೊಂಡ ಕರುಣಾನಿಧಿ ‘ಡಿಎಂಕೆ’ ಪಕ್ಷದ ಮೊದಲ ಖಜಾಂಚಿಯಾಗಿ ನೇಮಕವಾದರು. 1957ರಲ್ಲಿ ‘ಡಿಎಂಕೆ’ ವಿಧಾನಸಭೆ ಚುನಾವಣೆಗಳಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದಾಗ ಚುನಾಯಿತರಾದ 13 ಶಾಸಕರಲ್ಲಿ ಕರುಣಾನಿಧಿಯವರೂ ಒಬ್ಬರಾಗಿದ್ದರು. 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದು ಅಣ್ಣಾದೊರೈ ಮುಖ್ಯಮಂತ್ರಿಯಾದಾಗ, ಲೋಕೋಪಯೋಗಿ ಸಚಿವರಾದರು. 1969ರಲ್ಲಿ ಅಣ್ಣಾದೊರೈ ನಿಧನರಾದಾಗ ಮುಖ್ಯಮಂತ್ರಿ ಪಟ್ಟದ ಜೊತೆಗೆ, ಪಕ್ಷದ ಅಧ್ಯಕ್ಷ ಸ್ಥಾನವೂ ಒಲಿದುಬಂತು.

ತಮಿಳುನಾಡು ರಾಜಕಾರಣದಲ್ಲಿ ಸಾಮ್ರಾಟನಂತೆ ಮೆರೆಯುತ್ತಿದ್ದ ಕರುಣಾನಿಧಿಯವರ ಅಧಿಪತ್ಯಕ್ಕೆ ಪೆಟ್ಟು ಕೊಟ್ಟವರಲ್ಲಿ ಎಂ.ಜಿ. ರಾಮಚಂದ್ರನ್ ಹಾಗೂ ಜೆ.ಜಯಲಲಿತಾ ಮುಖ್ಯರು. 1977ರಲ್ಲಿ ಡಿಎಂಕೆ ಒಡೆದು ‘ಎಐಎಡಿಎಂಕೆ’ (ಅಣ್ಣಾ ಡಿಎಂಕೆ) ಸ್ಥಾಪಿಸಿದ ಎಂ.ಜಿ.ಆರ್. ಅಧಿಕಾರಕ್ಕೂ ಬಂದರು. ನಂತರದ ಒಂದು ದಶಕದ ಕಾಲ ತಮಿಳುನಾಡಿನಲ್ಲಿ ಎಂಜಿಆರ್ ಪ್ರಭೆ. ಅದಾದ ನಂತರ ಜಯಲಲಿತಾ ಕೂಡ ಪ್ರತಿಸ್ಪರ್ಧಿಯಾಗಿ ಬೆಳೆದರು.

ಎಂಜಿಆರ್ ಹಾಗೂ ಕರುಣಾನಿಧಿ ನಡುವಿನ ಬಾಂಧವ್ಯ ಸುಲಭ ವ್ಯಾಖ್ಯಾನಕ್ಕೆ ನಿಲುಕುವಂತಹದ್ದಲ್ಲ. ಡಿಎಂಕೆ ಕರುಣಾನಿಧಿ ಅವರ ನೀತಿಗಳನ್ನು ಅನುಸರಿಸಿದರೆ ನನ್ನ ಪಕ್ಷ ‘ಅಣ್ಣಾ’ ಅವರ ಆದರ್ಶಗಳನ್ನು ಅನುಸರಿಸುತ್ತದೆ ಎಂದು ಎಂಜಿಆರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ನಂಟು ಕಳೆದುಕೊಂಡಿದ್ದರೂ ಕರುಣಾನಿಧಿ ಬಗ್ಗೆ ಎಂಜಿಆರ್ ಅವರಿಗೆ ಗೌರವವಿತ್ತು. ಗೆಳೆಯನ ಬಗ್ಗೆ ಯಾರಾದರೂ ಲಘುವಾಗಿ ಮಾತನಾಡುವುದನ್ನು ಅವರು ಸಹಿಸುತ್ತಿರಲಿಲ್ಲ. ಎಐಎಡಿಎಂಕೆ ನಾಯಕರೊಬ್ಬರು ಒಮ್ಮೆ ಕರುಣಾನಿಧಿ ಹೆಸರು ಪ್ರಸ್ತಾಪಿಸಿ ಮಾತನಾಡಿದಾಗ, ‘ಅವರ ಹೆಸರು ಹಿಡಿದು ಮಾತನಾಡುವ ಯೋಗ್ಯತೆ ನಿನಗೇನಿದೆ? ಅವರು ನನ್ನ ತಲೈವರ್ (ನಾಯಕ)’ ಎಂದು ಜೋರುಮಾಡಿದ್ದ ಎಂಜಿಆರ್, ತಮ್ಮ ಪಕ್ಷದ ನಾಯಕನಿಗೆ ಕಪಾಳಮೋಕ್ಷ ಮಾಡಿದ್ದರು. 1984ರಲ್ಲಿ ಎಂಜಿಆರ್ ಅನಾರೋಗ್ಯಕ್ಕೆ ಒಳಗಾದಾಗ ‘ಮುರಸೊಳಿ’ ಪತ್ರಿಕೆಯಲ್ಲಿ ಗೆಳೆಯನ ಕುರಿತು ಕರುಣಾನಿಧಿ ಆಪ್ತವಾಗಿ ಬರೆದಿದ್ದರು.

ಸಿನಿಮಾದೊಂದಿಗೆ ಸಹನಡಿಗೆ

ರಾಜಕಾರಣದಲ್ಲಿನ ತಮ್ಮ ಒಲವುಗಳ ಅಭಿವ್ಯಕ್ತಿಗೆ ಸಿನಿಮಾ ಪರಿಣಾಮಕಾರಿ ಮಾಧ್ಯಮ ಎನ್ನುವುದನ್ನು ಕರುಣಾನಿಧಿ ಬಹು ಬೇಗ ಅರ್ಥ ಮಾಡಿಕೊಂಡಿದ್ದರು. ಸಿನಿಮಾ ಹಾಗೂ ರಾಜಕಾರಣದ ನಡುವೆ ಸೃಜನಶೀಲ ನಂಟು ಕಲ್ಪಿಸಿದವರಲ್ಲಿ ಕರುಣಾನಿಧಿ ಅಗ್ರಗಣ್ಯರು.

ತಾರಾ ವರ್ಚಸ್ಸಿನ ಕೆಲವು ಕಲಾವಿದರು ರಾಜಕಾರಣದಲ್ಲೂ ಯಶಸ್ವಿಯಾಗಿದ್ದಾರೆ. ಆದರೆ, ಕರುಣಾನಿಧಿ ನೆಚ್ಚಿಕೊಂಡಿದ್ದು ತಮ್ಮ ಬರವಣಿಗೆಯ ಶಕ್ತಿಯನ್ನು. ತಮ್ಮ ರಾಜಕಾರಣದ ತಾತ್ವಿಕತೆಯನ್ನು ಸಿನಿಮಾ ಬರವಣಿಗೆಯಲ್ಲಿ ಯಶಸ್ವಿಯಾಗಿ ಬಳಸಿಕೊಂಡರು.

ಇಪ್ಪತ್ತನೆಯ ವಯಸ್ಸಿಗೇ ಸಿನಿಮಾ ಬರವಣಿಗೆ ಪ್ರಾರಂಭಿಸಿದ ಅವರು – ‘ರಾಜಕುಮಾರಿ’, ‘ದೇವಕಿ’, ‘ಮನೋಹರ’, ‘ರಂಗೂನ್ ರಾಧಾ’, ‘ಕುರವಂಜಿ’, ‘ಕಾಂಚಿ ತಲೈವನ್’ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಿತ್ಯ ರಚಿಸಿದರು. ಐತಿಹಾಸಿಕ ಹಾಗೂ ಸಮಾಜ ಸುಧಾರಣೆಯ ಕಥೆಗಳನ್ನು ರಚಿಸಿದರು. 1952ರಲ್ಲಿ ತೆರೆಕಂಡ ‘ಪರಾಶಕ್ತಿ’ ಕರುಣಾನಿಧಿಯವರ ರಾಜಕೀಯ ಪ್ರಣಾಳಿಕೆಯ ವ್ಯಕ್ತರೂಪದಂತಿತ್ತು. ಬ್ರಾಹ್ಮಣಿಕೆಯನ್ನು ಟೀಕಿಸಿದ್ದ ಚಿತ್ರ, ದ್ರಾವಿಡ ಚಳವಳಿಯ ಆಶಯಗಳಿಗೆ ಪೂರಕವಾಗಿ ಕಥೆಯನ್ನೊಳಗೊಂಡಿತ್ತು. (ಈ ಚಿತ್ರದ ಮೂಲಕ ಸಿನಿಮಾಗಳನ್ನು ರಾಜಕಾರಣದ ಸಿದ್ಧಾಂತಕ್ಕೆ ಪೂರಕವಾಗಿ ಬಳಸಿಕೊಳ್ಳುವುದನ್ನು ಡಿಎಂಕೆ ಆರಂಭಿಸಿತು.) ಸಾಂಪ್ರದಾಯಿಕರ ವಿರೋಧವನ್ನೂ ‘ಪರಾಶಕ್ತಿ’ ಎದುರಿಸಬೇಕಾಯಿತು. ಐವತ್ತರ ದಶಕದಲ್ಲಿ ಅವರ ಎರಡು ನಾಟಕಗಳು ನಿಷೇಧಕ್ಕೊಳಗಾಗಿದ್ದವು.

ಎಂಜಿಆರ್ ಅವರಿಗೆ ತಮಿಳು ಚಿತ್ರರಂಗದಲ್ಲಿ ದೊರೆತಿದ್ದ ಕ್ಲೀನ್ ಇಮೇಜ್ ಸೃಷ್ಟಿಸುವಲ್ಲಿ ಕರುಣಾನಿಧಿ ಪಾತ್ರವೂ ಇತ್ತು. ನಾಯಕನಟನಾಗಿ ಎಂಜಿಆರ್ಗೆ ವರ್ಚಸ್ಸು ತಂದುಕೊಟ್ಟ ‘ರಾಜಕುಮಾರಿ’ ಚಿತ್ರದ ಸಾಹಿತ್ಯ ಕರುಣಾನಿಧಿ ಅವರದೇ ಆಗಿತ್ತು. ಸಿನಿಮಾಗಳ ಮೂಲಕ ಪ್ರಾರಂಭವಾದ ಇಬ್ಬರ ನಂಟು ರಾಜಕಾರಣದಲ್ಲೂ ಮುಂದುವರಿಯಿತು.

ಜಾಣ್ಮೆಯ ನಡೆ

ಪಕ್ಷದ ಏಳುಬೀಳುಗಳ ನಡುವೆಯೂ ಕರುಣಾನಿಧಿಯವರ ನಾಯಕತ್ವದ ವರ್ಚಸ್ಸು ಕಡಿಮೆಯಾಗಲಿಲ್ಲ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳು ರೂಪುಗೊಂಡಾಗ, ತಮ್ಮ ಪಕ್ಷದ ನಾಯಕರು ಸಚಿವರಾಗುವಂತೆ ನೋಡಿಕೊಂಡ ಜಾಣ್ಮೆ ಅವರದಾಗಿತ್ತು.

ರಾಜಕಾರಣದಂತೆ ವೈಯಕ್ತಿಕ ಬದುಕಿನಲ್ಲೂ ಕರುಣಾನಿಧಿ ಏರಿಳಿತಗಳನ್ನು ಕಂಡಿದ್ದರು. ಮೂವರನ್ನು ಮದುವೆಯಾದರು. ಮೊದಲ ಪತ್ನಿ ಪದ್ಮಾವತಿ ಹೆಚ್ಚು ಕಾಲ ಬದುಕಲಿಲ್ಲ. ದಯಾಳ್ ಅಮ್ಮಾಳ್ ಹಾಗೂ ರಜತಿ ಅಮ್ಮಾಳ್ ಉಳಿದಿಬ್ಬರು ಹೆಂಡಂದಿರು. ಮೂರು ಸಂಬಂಧಗಳಲ್ಲಿ ಆರು ಮಕ್ಕಳನ್ನು ಪಡೆದರು. ಮೊದಲ ಪುತ್ರನ ಮರಣದ ಪುತ್ರಶೋಕವನ್ನೂ ಅನುಭವಿಸಿದರು.

2016ರ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಡಿಎಂಕೆ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಕರುಣಾನಿಧಿ ದೈಹಿಕವಾಗಿಯೂ ಮಾನಸಿಕವಾಗಿಯೂ ಮಂಕಾದಂತಿದ್ದರು. ಎರಡು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಿಂದ ದೂರವುಳಿದಿದ್ದರು. ಈಗ ಶಾಶ್ವತವಾಗಿ ನಿರ್ಗಮಿಸಿದ್ದಾರೆ. ಆದರೆ, ಕರುಣಾನಿಧಿಯವರ ರಾಜಕೀಯ ಸಾಧನೆಗೆ ತಮಿಳುನಾಡಿನ ರಾಜಕಾರಣದಲ್ಲಿ ಮಾತ್ರವಲ್ಲದೆ, ಭಾರತದ ರಾಜಕೀಯ ಚರಿತ್ರೆಯಲ್ಲೂ ವಿಶೇಷ ಸ್ಥಾನವಿದೆ.

ಅಣ್ಣಾದೊರೈ, ಎಂಜಿಆರ್, ಜಯಲಲಿತಾ ಅವರ ನಿರ್ಗಮನದ ನಂತರ ತಮಿಳು ರಾಜಕಾರಣದ ಕೊನೆಯ ದಂತಕಥೆಯಂತೆ ಕರುಣಾನಿಧಿ ಕಾಣಿಸುತ್ತಿದ್ದರು. ಅವರ ನಿರ್ಗಮನದೊಂದಿಗೆ ತಮಿಳು ರಾಜಕಾರಣದ ಪರಂಪರೆಯೊಂದು ಕೊನೆಗೊಂಡಂತಾಗಿದೆ.

ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಸಂಜೆ 6.10ಕ್ಕೆ ನಿಧನ

11ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬುಧವಾರ ರಜೆ ಘೋಷಿಸಿದ ಸರ್ಕಾರ

ಏಳು ದಿನಗಳ ಶೋಕಾಚರಣೆ

ಇಂದು ಸಂಜೆ ಅಂತ್ಯಕ್ರಿಯೆ

ಕರ್ನಾಟಕದಲ್ಲಿ ಶೋಕಾಚರಣೆ ಇಂದು

ಅಂತ್ಯಕ್ರಿಯೆ: ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಡಿಎಂಕೆ

ತಮಿಳುನಾಡಿಗೆ ಬಸ್ ಸಂಚಾರ ಸ್ಥಗಿತ

* ಕರುಣಾನಿಧಿ ಒಬ್ಬ ಪ್ರಖರ ವಿಚಾರವಾದಿ, ಜನನಾಯಕ. ಪ್ರಾದೇಶಿಕ ಮಹತ್ವಾಕಾಂಕ್ಷೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಅವರು ಬದ್ಧರಾಗಿದ್ದರು.

- ನರೇಂದ್ರ ಮೋದಿ, ಪ್ರಧಾನಿ

* ದೇಶ ಒಬ್ಬ ಧೀಮಂತ ಪುತ್ರನನ್ನು ಕಳೆದುಕೊಂಡಿದೆ. ಅವರು ತಮಿಳುನಾಡಿನ ರಾಜಕೀಯದಲ್ಲಿ ಆರು ದಶಕಗಳ ಕಾಲ ಸಾಮ್ರಾಟನಂತೆ ಮೆರೆದ ಮಹಾನ್ ವ್ಯಕ್ತಿ

- ರಾಹುಲ್ ಗಾಂಧಿ, ಅಧ್ಯಕ್ಷ, ಎಐಸಿಸಿ

‘ಕಲೈನಾರ್’ ಹೆಜ್ಜೆಗುರುತು...

ಜೂನ್ 3, 1924: ಮುತ್ತುವೇಲ್ ಹಾಗೂ ಅಂಜುಗಂ ದಂಪತಿಯ ಪುತ್ರನಾಗಿ ತಿರುಕುವಲೈನಲ್ಲಿ ಜನನ. ದಕ್ಷಿಣಮೂರ್ತಿ ಮೊದಲ ಹೆಸರು.

1938: ‘ಜಸ್ಟಿಸ್ ಪಾರ್ಟಿ’ ಅಳಗಿರಿಸ್ವಾಮಿಯವರ ಭಾಷಣದಿಂದ ಪ್ರೇರೇಪಿತರಾಗಿ ರಾಜಕೀಯ ಪ್ರವೇಶ. ಹಿಂದಿ ವಿರೋಧಿ ಚಳವಳಿಯಲ್ಲಿ ಭಾಗಿ

ಆಗಸ್ಟ್ 10, 1942: ಮುರಸೊಳಿ ಮಾಸಪತ್ರಿಕೆ ಆರಂಭ. ನಂತರ, ಇದನ್ನು ದಿನಪತ್ರಿಕೆಯಾಗಿ ಪರಿವರ್ತಿಸಿದರು.

ಏಪ್ರಿಲ್ 11, 1947: ಸಂಭಾಷಣೆಕಾರರಾಗಿ ತಮಿಳು ಚಿತ್ರರಂಗ ಪ್ರವೇಶ.

ಜುಲೈ 15, 1953: ಕಳ್ಳಕುಡಿಯನ್ನು ದಾಲ್ಮಿಯಾಪುರಂ ಎಂದು ಬದಲಾಯಿಸಲು ವಿರೋಧ. ಪ್ರಥಮ ರಾಜಕೀಯ ಪ್ರತಿಭಟನೆಯ ನೇತೃತ್ವ.

1957: ತಿರುಚಿನಾಪಳ್ಳಿ ಜಿಲ್ಲೆಯ ಕುಳಿತಲೈನಿಂದ ವಿಧಾನಸಭೆಗೆ ಆಯ್ಕೆ.

1962: ತಂಜೂವೂರು ಶಾಸಕರಾಗಿ ಆಯ್ಕೆ. ಶಾಸಕಾಂಗ ಪಕ್ಷದ ಉಪನಾಯಕ.

1967: ಲೋಕೋಪಯೋಗಿ ಸಚಿವ

ಫೆಬ್ರುವರಿ 10, 1969: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ

ಜುಲೈ 27, 1969: ಡಿಎಂಕೆ ಪಕ್ಷದ ಅಧ್ಯಕ್ಷ

ಮಾರ್ಚ್ 15, 1971: ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ.

1972: ಡಿಎಂಕೆಯಿಂದ ಎಂ.ಜಿ. ರಾಮಚಂದ್ರನ್ ಉಚ್ಚಾಟನೆ

1975: ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ

1976: ಕರುಣಾನಿಧಿ ಸರ್ಕಾರವನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ

1989: ಮೂರನೇ ಬಾರಿ ಮುಖ್ಯಮಂತ್ರಿ

1996: ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ

2006: ಐದನೇ ಬಾರಿ ಮುಖ್ಯಮಂತ್ರಿ

2011: ಅಧಿಕಾರ ಕಳೆದುಕೊಂಡ ಡಿಎಂಕೆ ಸರ್ಕಾರ

ಅಕ್ಟೋಬರ್, 2016: ಅನಾರೋಗ್ಯ. ಆಸ್ಪತ್ರೆಗೆ ದಾಖಲು

ಜುಲೈ 18, 2018: ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಶ್ವಾಸನಾಳ ಅಳವಡಿಕೆ

ಜುಲೈ 26: ಜ್ವರ, ಮೂತ್ರನಾಳದ ಸೋಂಕು, ಮನೆಯಲ್ಲಿಯೇ ಚಿಕಿತ್ಸೆ

ಜುಲೈ 28: ವಯೋಸಹಜ ಕಾಯಿಲೆ, ಮೂತ್ರನಾಳದ ಸೋಂಕಿನಿಂದಾಗಿ ಕಾವೇರಿ ಆಸ್ಪತ್ರೆಗೆ ದಾಖಲು. ರಕ್ತದ ಒತ್ತಡದಲ್ಲಿ ಕುಸಿತ

ಜುಲೈ 29: ನಿಯಂತ್ರಣಕ್ಕೆ ಬಂದರಕ್ತದ ಒತ್ತಡ, ಉಸಿರಾಟದಲ್ಲಿ ತೊಂದರೆ

ಜುಲೈ 31: ವಯೋ ಸಹಜ ಕಾಯಿಲೆ ಉಲ್ಬಣ, ಯಕೃತ್ನಲ್ಲಿ ತೊಂದರೆ. ಚಿಕಿತ್ಸೆ ನಂತರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ

ಆಗಸ್ಟ್ 6: ಆರೋಗ್ಯದಲ್ಲಿ ಏರುಪೇರು, ಅಂಗಾಂಗಗಳ ವೈಫಲ್ಯಕ್ಕೆ ಚಿಕಿತ್ಸೆ

ಆಗಸ್ಟ್ 7: ಆರೋಗ್ಯ ಸ್ಥಿತಿ ಗಂಭೀರ, ಬಹು ಅಂಗಾಂಗ ವೈಫಲ್ಯ. ಸಂಜೆ 6.10ಕ್ಕೆ ನಿಧನ, ವೈದ್ಯರಿಂದ ಅಧಿಕೃತ ಘೋಷಣೆ

ಇದನ್ನೂ ಓದಿರಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

ಕರುಣಾನಿಧಿ ಬದುಕಿನ ಹಾದಿ

ದ್ರಾವಿಡ ಆಂದೋಲನದ ಕೋಟೆ ಕಟ್ಟಿದ್ದ ರಾಜಕೀಯ ಪ್ರತಿಭೆ

‘ಅಣ್ಣಾ ಸಮಾಧಿ’ ಸಮೀಪ ಕರುಣಾನಿಧಿ ಅಂತ್ಯ ಕ್ರಿಯೆಗೆ ಒಪ್ಪದ ತಮಿಳುನಾಡು ಸರ್ಕಾರ

ಕರುಣಾನಿಧಿಗೆ ಉಂಟು ರಾಮನಗರದ ನಂಟು

ಕರುನಾಡ ಜತೆಗೆ ಕಾರುಣ್ಯದ ‘ನಿಧಿ’

’ಕರುಣಾನಿಧಿ’ ಗೌರವಾರ್ಥ ಅರ್ಧ ಮಟ್ಟದಲ್ಲಿ ರಾಷ್ಟ್ರಧ್ವಜ ಹಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.