ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮ ಲಲ್ಲನ ಮೂರ್ತಿ ಕೆತ್ತನೆ ಪೂರ್ಣಗೊಳಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್

ಶಿಲ್ಪಾ ಪಿ.
Published 21 ಡಿಸೆಂಬರ್ 2023, 14:22 IST
Last Updated 21 ಡಿಸೆಂಬರ್ 2023, 14:25 IST
ಅಕ್ಷರ ಗಾತ್ರ

ಮೈಸೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದಲ್ಲಿ ಜ. 22ರಂದು ಪ್ರತಿಷ್ಠಾಪನೆಗೊಳ್ಳಲಿರುವ ರಾಮ ಲಲ್ಲ ಮೂರ್ತಿಯ ಕೆತ್ತನೆಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಪೂರ್ಣಗೊಳಿಸಿದ್ದಾರೆ.

ಮೂರ್ತಿಯು ಪ್ರತಿಷ್ಠಾಪನೆಗಿಂತ ನಾಲ್ಕು ದಿನ ಮುಂಚಿತವಾಗಿ ಗರ್ಭಗುಡಿಯೊಳಗೆ ಸ್ಥಾಪನೆಗೊಳ್ಳಲಿದೆ. ಅರುಣ್ ಅವರೊಂದಿಗೆ ಬೆಂಗಳೂರಿನ ಜಿ.ಎಲ್.ಭಟ್‌ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೇ ಕೂಡಾ ಮೂರ್ತಿಗಳನ್ನು ಕೆತ್ತಿದ್ದಾರೆ.

ಮೂರ್ತಿ ಕೆತ್ತನೆ ಕುರಿತು ಪ್ರತಿಕ್ರಿಯಿಸಿದ ಅರುಣ್, ‘ರಾಮ ಲಲ್ಲ ಮೂರ್ತಿ ಕೆತ್ತನೆಗೆ ಆರು ತಿಂಗಳು ಬೇಕಾಯಿತು. ಬಾಲ ರಾಮನ ವಿಗ್ರಹ ಇದಾಗಿದೆ. ಕೈಯಲ್ಲಿ ಬಿಲ್ಲು ಹಾಗೂ ಬಾಣ ಹಿಡಿದ ಮೂರ್ತಿ ಇದು. ಒಟ್ಟು ಮೂರು ವಿಗ್ರಹಗಳನ್ನು ಕೆತ್ತಲಾಗಿದೆ. ಅಂತಿಮವಾಗಿ ಇವುಗಳಲ್ಲಿ ಒಂದು ಪ್ರತಿಷ್ಠಾಪನೆಗೆ ಆಯ್ಕೆಯಾಗಲಿದೆ’ ಎಂದು ತಿಳಿಸಿದ್ದಾರೆ.

51 ಇಂಚು ಎತ್ತರದ ಮೂರ್ತಿ ಇದು. ಒಟ್ಟು ಇಡೀ ಮೂರ್ತಿಯ ಒಟ್ಟು ಗಾತ್ರ 8 ಅಡಿ ಎತ್ತರ ಹಾಗೂ ಮೂರು ಅಡಿ ಅಗಲ ಇದೆ. ಇದರಲ್ಲಿ ಪ್ರಭಾವಳಿಯೂ ಒಳಗೊಂಡಿದೆ. ಈ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಮೊದಲು ಕೇದಾರನಾಥ ದೇಗುಲಕ್ಕೆ ಆದಿ ಶಂಕರಾಚಾರ್ಯರ ಮೂರ್ತಿಯನ್ನು ಅರುಣ್ ಕೆತ್ತಿದ್ದರು. ದೆಹಲಿಯ ಇಂಡಿಯಾ ಗೇಟ್ ಬಳಿ (ಕರ್ತವ್ಯ ಪಥ) ಸ್ಥಾಪಿಸಲಾದ ಸುಭಾಶಚಂದ್ರ ಬೋಸ್ ಅವರ ಪ್ರತಿಮೆಯನ್ನೂ ಇವರು ಕೆತ್ತಿದ್ದರು. ಇದನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.

ಕೇದಾರನಾಥನಲ್ಲಿ ಪ್ರತಿಷ್ಠಾಪನೆಯಾದ ಶಂಕರಾಚಾರ್ಯರ 12.5 ಅಡಿ ಎತ್ತರದ ಮೂರ್ತಿ ಮೊದಲಾರ್ಧ ಹಂತದಲ್ಲಿದ್ದಾಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡುತ್ತಿರುವುದು

ಕೇದಾರನಾಥನಲ್ಲಿ ಪ್ರತಿಷ್ಠಾಪನೆಯಾದ ಶಂಕರಾಚಾರ್ಯರ 12.5 ಅಡಿ ಎತ್ತರದ ಮೂರ್ತಿ ಮೊದಲಾರ್ಧ ಹಂತದಲ್ಲಿದ್ದಾಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡುತ್ತಿರುವುದು

ಜ. 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಆಯೋಜನೆಗೊಂಡಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 2 ಸಾವಿರ ಆಹ್ವಾನಿತರಲ್ಲಿ ಅರುಣ್ ಕೂಡಾ ಒಬ್ಬರು. ಇದರೊಂದಿಗೆ ದೆಹಲಿಯ ಜೈಸಲ್ಮೇರ್ ಹೌಸ್‌ನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಕೆತ್ತನೆಗೂ ನ್ಯಾಯಾಂಗ ಇಲಾಖೆ ಅರುಣ್ ಅವರನ್ನೇ ಆಯ್ಕೆ ಮಾಡಿದೆ. ಪ್ರತಿಮೆಯನ್ನು ಫೆಬ್ರುವರಿ ಅಂತ್ಯದೊಳಗೆ ನೀಡುವಂತೆ ಇಲಾಖೆ ಸೂಚಿಸಿದೆ. ಇದು ಬರುವ ಏ. 14ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಎಂಬಿಎ ಪದವೀಧರರಾದ ಅರುಣ್ ಕಾರ್ಪೊರೇಟ್ ನೌಕರಿಯನ್ನು ತೊರೆದು ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. 2008ರಿಂದ ಈವರೆಗೂ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರತಿಮೆಗಳನ್ನು ಇವರು ಕೆತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT