ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಅಭಿವೃದ್ಧಿಗೆ ನಕ್ಸಲರು ಅತಿ ದೊಡ್ಡ ಅಡ್ಡಿ: ಅಮಿತ್ ಶಾ

Published : 7 ಅಕ್ಟೋಬರ್ 2024, 9:50 IST
Last Updated : 7 ಅಕ್ಟೋಬರ್ 2024, 9:50 IST
ಫಾಲೋ ಮಾಡಿ
Comments

ನವದೆಹಲಿ: ‘ಎಂಟು ಕೋಟಿಗೂ ಅಧಿಕ ಜನರ ಅಭಿವೃದ್ಧಿ ಹಾಗೂ ಅಗತ್ಯ ಕಲ್ಯಾಣಕ್ಕೆ ತಡೆಯೊಡ್ಡುವ ನಕ್ಸಲರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

ನಕ್ಸಲ್‌ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಶಾ, ‘ನಕ್ಸಲರ ವಿರುದ್ಧ ಭದ್ರತಾ ಪಡೆಗಳು ಹಿಂದಿನ ರಕ್ಷಣಾತ್ಮಕ ಕಾರ್ಯಾಚರಣೆ ಬದಲಿಗೆ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಇದರಲ್ಲಿ ಯಶಸ್ವಿಯೂ ಆಗಿವೆ’ ಎಂದರು.

‘ಭದ್ರತೆಯಲ್ಲಿ ವ್ಯಾಪಕ ಸುಧಾರಣೆ ತಂದಿದ್ದರಿಂದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 70ರಷ್ಟು ಮತದಾನವಾಗಿದೆ. ಹಿಂದೆಲ್ಲ ಈ ಪ್ರದೇಶಗಳಲ್ಲಿ ಶೂನ್ಯ ಮತದಾನ ವರದಿಯಾಗಿತ್ತು’ ಎಂದು ತಿಳಿಸಿದರು.

‘ನಕ್ಸಲರು ದೇಶದ ಅಭಿವೃದ್ದಿಗೆ ಅತಿ ದೊಡ್ಡ ತೊಡಕಾಗಿ ಪರಿಣಮಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಛತ್ತೀಸಗಢದ ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿನ ಬಸ್ತರ್‌ ಅರಣ್ಯ ಪ್ರದೇಶದಲ್ಲಿ ಗುರುವಾರ ಮತ್ತು ಶುಕ್ರವಾರ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆಗಳು, 31 ನಕ್ಸಲರನ್ನು ಹತ್ಯೆ ಮಾಡಿದ್ದವು. ಇದಾದ ಬೆನ್ನಲ್ಲೇ ಸಭೆ ನಡೆದಿದೆ.

ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಛತ್ತೀಸ್‌ಗಢ, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ಸೇರಿವೆ.

ಈ ವರ್ಷ ಇಲ್ಲಿಯವರೆಗೆ 230ಕ್ಕೂ ಹೆಚ್ಚು ನಕ್ಸಲರು ಹತರಾಗಿದ್ದು, 723 ಮಂದಿ ಶರಣಾಗಿದ್ದಾರೆ. 812 ನಕ್ಸರನ್ನು ಬಂಧಿಸಲಾಗಿದೆ. ಸದ್ಯ ದೇಶದಲ್ಲಿ 38 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ.

ನಕ್ಸಲ್‌ ಪೀಡಿತ ರಾಜ್ಯಗಳ ದೂರದ ಪ್ರದೇಶಗಳಿಗೆ ಅಭಿವೃದ್ಧಿ ಯೋಜನೆಗಳನ್ನು ಕೊಂಡೊಯ್ಯಲು ಕೇಂದ್ರ ಸರ್ಕಾರವು ರಸ್ತೆ ಮತ್ತು ಮೊಬೈಲ್ ಸಂಪರ್ಕ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಒಟ್ಟು 14,400 ಕಿ.ಮೀ ಉದ್ದದ ರಸ್ತೆ ನಿರ್ಮಿಸಲಾಗಿದ್ದು, 6 ಸಾವಿರ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT