ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್‌ಗೆ ತಡೆ ನೀಡಬೇಕು ಎಂದು ಅರ್ಜಿದಾರರೊಬ್ಬರ ಪರ ವಾದಿಸಿದ ಹಿರಿಯ ವಕೀಲ ನರೇಂದ್ರ ಹೂಡಾ ಅವರ ಮನವಿಯನ್ನು ಪೀಠ ತಿರಸ್ಕರಿಸಿತು. ‘ಈ ವಿಷಯವನ್ನು ಇದೇ 22ರಂದು ಗಮನಿಸುತ್ತೇವೆ. ಅದಾಗ್ಯೂ ಕೌನ್ಸೆಲಿಂಗ್ ಇದೇ 24 ಅಥವಾ ಮೂರನೇ ವಾರದಲ್ಲಿ ಆರಂಭವಾಗಲಿದ್ದು ತಿಂಗಳು ಅಥವಾ ಅದಕ್ಕೂ ಹೆಚ್ಚು ಕಾಲ ಮುಂದುವರಿಯಲಿದೆ’ ಎಂದು ಪೀಠ ಹೇಳಿತು.
ಏನಿದು ಪ್ರಕರಣ?
ಮೇ 5ರಂದು ದೇಶದ 571 ನಗರಗಳು ಸೇರಿದಂತೆ ವಿದೇಶಗಳಲ್ಲಿನ 14 ಕಡೆಗಳಲ್ಲಿನ 4750 ಕೇಂದ್ರಗಳಲ್ಲಿ ನೀಟ್–ಯುಜಿ ಪರೀಕ್ಷೆ ನಡೆದಿತ್ತು. ಸುಮಾರು 23.33 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ವಿವಿಧ ರೀತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಜುಲೈ 8ರ ವಿಚಾರಣೆ ವೇಳೆ ಪೀಠವು ‘ನೀಟ್–ಯುಜಿ’ ಪರೀಕ್ಷೆಯ ಪಾವಿತ್ರ್ಯವು ಉಲ್ಲಂಘನೆಯಾಗಿದೆ ಎಂಬುದನ್ನು ಗಮನಿಸಿತ್ತು. ಇದು ಇಡೀ ಪರೀಕ್ಷಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದ್ದರೆ ಮರು ಪರೀಕ್ಷೆಗೆ ಆದೇಶಿಸಬಹುದು ಎಂದೂ ಪೀಠ ಹೇಳಿತ್ತು.