ಜನಾಶೀರ್ವಾದ ಯಾತ್ರೆಗೆ ಕಡೆಗಣನೆ:ಉಮಾಭಾರತಿ ತೀವ್ರ ಅಸಮಾಧಾನ
ಭೋಪಾಲ್: ಮಧ್ಯಪ್ರದೇಶದಲ್ಲಿ ‘ಜನಾಶೀರ್ವಾದ ಯಾತ್ರೆ’ಗೆ ಆಹ್ವಾನಿಸದ ಪಕ್ಷದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಬಿಜೆಪಿ ನಾಯಕಿ ಉಮಾಭಾರತಿ ‘ಈಗ ಆಹ್ವಾನಿಸಿದರೂ ಹೋಗುವುದಿಲ್ಲ’ ಎಂದಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರು ‘ಎಕ್ಸ್’ ಜಾಲತಾಣದಲ್ಲಿ ಸರಣಿ ಸಂದೇಶ ಪೋಸ್ಟ್ ಮಾಡಿದ್ದಾರೆ. ರಾಜ್ಯ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೋರಿದರೆ ಪ್ರಚಾರ ಮಾಡುತ್ತೇನೆ ಎಂದೂ ಹೇಳಿದ್ದಾರೆ. ಜನಾಶೀರ್ವಾದ ಯಾತ್ರೆ ಭಾನುವಾರ ಆರಂಭವಾಗಿದ್ದು ಸೆ.25ರಂದು ಭೋಪಾಲ್‌ನಲ್ಲಿ ಸಮಾಪ್ತಿಗೊಳ್ಳಲಿದೆ. ‘ಯಾತ್ರೆಗೆ ಪಕ್ಷ ಆಹ್ವಾನಿಸಿಲ್ಲ ಎಂಬುದು ನಿಜ. ಇದರಿಂದ ನನ್ನ ವ್ಯಕ್ತಿತ್ವ ಬದಲಾಗದು. ಈಗ ಆಹ್ವಾನಿಸಿದರೆ ಹೋಗುವುದಿಲ್ಲ. ಸಮಾರೋಪದಲ್ಲಿಯೂ ಪಾಲ್ಗೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನನ್ನ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಡುವೆ ಗೌರವದ ಬಾಂಧವ್ಯವಿದೆ. ಅವರು ಕೋರಿದರೆ ಭಾಗವಹಿಸುತ್ತೇನೆ. ಬಿಜೆಪಿ ಕಟ್ಟುವಲ್ಲಿ ನನ್ನ ಪಾತ್ರವಿದೆ. ಪಕ್ಷಕ್ಕೆ ಧಕ್ಕೆ ಉಂಟುಮಾಡುವುದಿಲ್ಲ’ ಎಂದಿದ್ದಾರೆ.