ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾ: ನವೀನ್ ಪಟ್ನಾಯಕ್ ರಾಜೀನಾಮೆ

24 ವರ್ಷಗಳ ಬಿಜೆಡಿ ಆಡಳಿತ ಅಂತ್ಯ * ಮೊದಲ ಬಾರಿಗೆ ಚುನಾವಣೆಯಲ್ಲಿ ಸೋಲು
Published 5 ಜೂನ್ 2024, 14:22 IST
Last Updated 5 ಜೂನ್ 2024, 14:22 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಡಿ ನಾಯಕ ನವೀನ್ ಪಟ್ನಾಯಕ್, ಬುಧವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅವರ 24 ವರ್ಷಗಳ ಆಡಳಿತ ಅಂತ್ಯಗೊಂಡಿದೆ.

ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ರಘುಬರ್ ದಾಸ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಪಟ್ನಾಯಕ್ ಅವರ ನಿವಾಸದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ನೆರೆದಿದ್ದರೂ, ಅವರು ಏಕಾಂಗಿಯಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು. 

ಪಟ್ನಾಯಕ್ ಅವರು 2000ರ ಮಾರ್ಚ್ 5ರಂದು ಮೊದಲ ಬಾರಿಗೆ ಒಡಿಶಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಮೊದಲ ಸೋಲು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಡಿ ಪಕ್ಷದ ಮುಖ್ಯಸ್ಥ ನವೀನ್ ಪಟ್ನಾಯಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮನಮೋಹನ್ ಸಮಾಲ್ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಶರತ್ ಪಟ್ನಾಯಕ್– ಮೂವರೂ ಸೋಲು ಅನುಭವಿಸಿದ್ದಾರೆ. 

ಐದು ಬಾರಿ ಒಡಿಶಾದ ಮುಖ್ಯಮಂತ್ರಿಯಾಗಿರುವ ನವೀನ್ ಪಟ್ನಾಯಕ್ ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಹಿಂಜಿಲಿಯಲ್ಲಿ 4,636 ಮತಗಳ ಸಣ್ಣ ಅಂತರದಿಂದ ಜಯ ಗಳಿಸಿದ್ದಾರೆ. ಆದರೆ, ಕಾಂಟಾಬಾಂಜಿ ಕ್ಷೇತ್ರದಲ್ಲಿ ರಾಜಕೀಯದಲ್ಲಿ ಅನುಭವವೇ ಇಲ್ಲದ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಬಾಗ್ ವಿರುದ್ಧ 16,344 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 

ತಮ್ಮ 26 ವರ್ಷಗಳ ರಾಜಕೀಯ ಇತಿಹಾಸದಲ್ಲಿ ನವೀನ್ ಪಟ್ನಾಯಕ್ ಅವರು ಇದೇ ಮೊದಲ ಬಾರಿಗೆ ಸೋಲು ಕಂಡಿದ್ದಾರೆ. 

ಬಿಜೆಪಿಯು 78 ವಿಧಾನಸಭೆ ಕ್ಷೇತ್ರಗಳಲ್ಲಿ ಜಯಿಸುವ ಮೂಲಕ ಅಧಿಕಾರದ ಗದ್ದುಗೆಗೇರಿದೆ. ಆದಾಗ್ಯೂ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮನಮೋಹನ್ ಸಮಾಲ್ ಅವರು ಚಾಂದ್‌ಬಾಲಿ ಕ್ಷೇತ್ರದಲ್ಲಿ ಬಿಜೆಡಿಯ ಬ್ಯೋಮಕೇಶ್ ರಾಯ್ ಎದುರು 1,916 ಮತಗಳ ಅಲ್ಪ ಅಂತರದಲ್ಲಿ ಪರಾಭವಗೊಂಡಿದ್ದಾರೆ. 

ಇನ್ನು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಶರತ್ ಪಟ್ನಾಯಕ್ ಅವರು ನುವಾಪಡಾ ಕ್ಷೇತ್ರದಲ್ಲಿ ಕೇವಲ 15,501 ಮತಗಳನ್ನು ಪಡೆದು, ಹೀನಾಯ ಸೋಲು ಅನುಭವಿಸಿದ್ದಾರೆ. 

ಏಕಾಂಗಿಯಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ 26 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಸೋಲು ಮೂರೂ ಪಕ್ಷಗಳ ನಾಯಕರಿಗೇ ಸೋಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT