ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈ ಅವಧಿಯಲ್ಲೇ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿ: ಅಮಿತ್ ಶಾ

ಕೇಂದ್ರ ಸರ್ಕಾರಕ್ಕೆ 100 ದಿನ ತುಂಬಿದ ಸಂದರ್ಭದಲ್ಲಿ ಶಾ ಹೇಳಿಕೆ
Published : 17 ಸೆಪ್ಟೆಂಬರ್ 2024, 14:44 IST
Last Updated : 17 ಸೆಪ್ಟೆಂಬರ್ 2024, 14:44 IST
ಫಾಲೋ ಮಾಡಿ
Comments

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ವ್ಯವಸ್ಥೆಯನ್ನು ತನ್ನ ಈಗಿನ ಅವಧಿಯಲ್ಲೇ ಜಾರಿಗೆ ತರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೆಯ ಅವಧಿಗೆ ರಚನೆಯಾಗಿರುವ ಸರ್ಕಾರವು 100 ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾ ಅವರು ಈ ಮಾತು ಹೇಳಿದರು. ಶಾ ಅವರ ಜೊತೆ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಆಗಸ್ಟ್‌ 15ರಂದು ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಅವರೂ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಬಗ್ಗೆ ಪ್ರಸ್ತಾಪಿಸಿದ್ದರು. ದೇಶದಲ್ಲಿ ಪದೇ ಪದೇ ಚುನಾವಣೆಗಳು ಎದುರಾಗುವುದರಿಂದ ಅಭಿವೃದ್ಧಿಗೆ ಅಡ್ಡಿ ಉಂಟಾಗುತ್ತದೆ ಎಂದು ಅವರು ಹೇಳಿದ್ದರು.

ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧಪಡಿಸಿದ ಪ್ರಣಾಳಿಕೆಯಲ್ಲಿ, ‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆಯನ್ನು ಜಾರಿಗೆ ತರುವ ಭರವಸೆ ಇದೆ.

ವಕ್ಫ್‌ ಮಸೂದೆ: ವಕ್ಫ್‌ (ತಿದ್ದುಪಡಿ) ಮಸೂದೆಯು ವಕ್ಫ್‌ ಆಸ್ತಿಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ, ಈ ಮಸೂದೆಯು ಮುಂಬರುವ ದಿನಗಳಲ್ಲಿ ಸಂಸತ್ತಿನ ಅಂಗೀಕಾರ ಪಡೆಯಬಹುದು ಎಂದು ಶಾ ಭರವಸೆ ವ್ಯಕ್ತಪಡಿಸಿದರು.

ಈ ಮಸೂದೆಯು ವಕ್ಫ್‌ ಆಸ್ತಿಗಳ ದುರ್ಬಳಕೆಯನ್ನು ತಡೆಯುವ ಉದ್ದೇಶವನ್ನು ಕೂಡ ಹೊಂದಿದೆ ಎಂದರು. ವಕ್ಫ್‌ (ತಿದ್ದುಪಡಿ) ಮಸೂದೆಯನ್ನು ಈಗ ಸಂಸತ್ತಿನ ಜಂಟಿ ಸಮಿತಿಗೆ (ಜೆಪಿಸಿ) ಪರಿಶೀಲನೆಗಾಗಿ ಒಪ್ಪಿಸಲಾಗಿದೆ. 

Cut-off box - ಕುಕಿ ಮೈತೇಯಿ ಪ್ರತಿನಿಧಿಗಳ ಜೊತೆ ಮಾತುಕತೆ ಮಣಿಪುರದಲ್ಲಿ ಶಾಂತಿ ನೆಲಸುವಂತೆ ಮಾಡಲು ಮೈತೇಯಿ ಹಾಗೂ ಕುಕಿ ಸಮುದಾಯಗಳ ಪ್ರತಿನಿಧಿಗಳ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಮ್ಯಾನ್ಮಾರ್‌ ಕಡೆಯಿಂದ ನುಸುಳುಕೋರರು ಭಾರತ ಪ್ರವೇಶಿಸುವುದನ್ನು ತಡೆಯಲು ಬೇಲಿ ನಿರ್ಮಾಣ ಕಾರ್ಯ ಶುರುವಾಗಿದೆ ಎಂದು ಅಮಿತ್ ಶಾ ತಿಳಿಸಿದರು.‌ ಕಳೆದ ವಾರ ಮೂರು ದಿನ ಹಿಂಸಾಚಾರ ಸಂಭವಿಸಿದ್ದನ್ನು ಹೊರತುಪಡಿಸಿದರೆ ಮೂರು ತಿಂಗಳಲ್ಲಿ ಅಲ್ಲಿ ದೊಡ್ಡ ಘಟನೆಗಳೇನೂ ವರದಿಯಾಗಿಲ್ಲ ಎಂದರು. ‘ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನಮಗೆ ಸಾಧ್ಯವಾಗುತ್ತದೆ ಎಂಬ ಭರವಸೆ ನನಗಿದೆ. ಅಲ್ಲಿ ನಡೆದಿರುವುದು ಜನಾಂಗೀಯ ಹಿಂಸಾಚಾರ. ಎರಡೂ ಸಮುದಾಯಗಳ ನಡುವೆ ಮಾತುಕತೆ ಸಾಧ್ಯವಾಗದ ಹೊರತು ಪರಿಹಾರ ಕಂಡುಕೊಳ್ಳಲು ಆಗದು’ ಎಂದರು. ಮಣಿಪುರದ ಆಯಕಟ್ಟಿನ ಸ್ಥಳಗಳಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ನಿಯೋಜನೆಯನ್ನು ಕೇಂದ್ರ ಸರ್ಕಾರ ಪೂರ್ಣಗೊಳಿಸಿದೆ ಎಂದು ತಿಳಿಸಿದರು.  ‘30 ಕಿ.ಮೀ. ಉದ್ದಕ್ಕೆ ಬೇಲಿ ನಿರ್ಮಾಣ ಪೂರ್ಣಗೊಂಡಿದೆ. ಒಟ್ಟು 1500 ಕಿ.ಮೀ. ಉದ್ದಕ್ಕೆ ಬೇಲಿ ನಿರ್ಮಿಸಲು ಕೇಂದ್ರವು ಹಣಕಾಸಿನ ಅನುಮೋದನೆ ನೀಡಿದೆ’ ಎಂದು ಹೇಳಿದರು.

‘ರೈಲು ಅಪಘಾತ ತಡೆಗೆ ಕ್ರಮ’

ರೈಲು ಅಪಘಾತ ಸಂಭವಿಸುವಂತೆ ಮಾಡುವ ಯಾವುದೇ ಪಿತೂರಿ ಹೆಚ್ಚು ದಿನ ನಡೆಯುವುದಿಲ್ಲ ಎಂದು ಅಮಿತ್ ಶಾ ಎಚ್ಚರಿಸಿದರು. ದೇಶದ 1.10 ಲಕ್ಷ ಕಿ.ಮೀ. ರೈಲು ಜಾಲದ ರಕ್ಷಣೆಗೆ ಉಪಕ್ರಮವೊಂದನ್ನು ಕೇಂದ್ರವು ಶೀಘ್ರದಲ್ಲಿಯೇ ಅನಾವರಣಗೊಳಿಸಲಿದೆ ಎಂದು ಅವರು ತಿಳಿಸಿದರು. ರೈಲು ಹಳಿಗಳ ಮೇಲೆ ಭಾರಿ ವಸ್ತುಗಳನ್ನು ಇರಿಸಿ ವಿಧ್ವಂಸಕ ಕೃತ್ಯ ಎಸಗಲು ನಡೆಸಿದ ಯತ್ನಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಹಾಗೂ ಹಲವು ರೈಲು ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಶಾ ಅವರು ಈ ಮಾತು ಹೇಳಿದ್ದಾರೆ. ‘ರೈಲು ಅಪಘಾತಗಳಿಗೆ ಕಾರಣ ಏನು ಎಂಬ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಅಪಘಾತಗಳ ಹಿಂದೆ ಪಿತೂರಿ ಇತ್ತು ಎಂದಾದರೆ ಅಂತಹ ಕೃತ್ಯಗಳು ಹೆಚ್ಚು ದಿನ ನಡೆಯುವುದಿಲ್ಲ. ಲೋಪಗಳು ಇದ್ದರೆ ಅವುಗಳನ್ನು ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು. ರೈಲ್ವೆ ಜಾಲದಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳು ನಡೆಯುವುದನ್ನು ತಡೆಯಲು ಸಿಬಿಐ ಎನ್‌ಐಎ ರೈಲ್ವೆ ಪೊಲೀಸರು ಮತ್ತು ಗೃಹ ಸಚಿವಾಲಯವು ಒಟ್ಟಾಗಿ ಯೋಜನೆಯೊಂದನ್ನು ರೂಪಿಸುತ್ತಿವೆ ಎಂದರು. ನರೇಂದ್ರ ಮೋದಿ ಅವರು ಸತತ ಮೂರನೆಯ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ 100 ದಿನಗಳಲ್ಲಿ ಒಟ್ಟು 38 ರೈಲು ಅಪಘಾತಗಳು ಸಂಭವಿಸಿವೆ ಎಂದು ಕಾಂಗ್ರೆಸ್ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT