ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯರ ಮುಷ್ಕರಕ್ಕೆ ಮಣಿದ ಬಂಗಾಳ ಸರ್ಕಾರ: ಐದರಲ್ಲಿ ಮೂರು ಬೇಡಿಕೆಗೆ ಅಸ್ತು

Published : 16 ಸೆಪ್ಟೆಂಬರ್ 2024, 21:17 IST
Last Updated : 16 ಸೆಪ್ಟೆಂಬರ್ 2024, 21:17 IST
ಫಾಲೋ ಮಾಡಿ
Comments

ಕೋಲ್ಕತ್ತ: ಕೋಲ್ಕತ್ತದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಿರಿಯ ವೈದ್ಯರು ಮತ್ತು ಸರ್ಕಾರದ ನಡುವೆ ಸೃಷ್ಟಿಯಾಗಿದ್ದ ಬಿಕ್ಕಟ್ಟು ಶಮನವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕಿರಿಯ ವೈದ್ಯರ ಶೇ 99 ರಷ್ಟು ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಅವರು ಭರವಸೆ ಕೊಟ್ಟಿದ್ದಾರೆ.

ಕೋಲ್ಕತ್ತ ಪೊಲೀಸ್ ಆಯುಕ್ತ ವಿನೀತ್ ಗೋಯಲ್, ಆರೋಗ್ಯ ಸೇವೆಗಳ ನಿರ್ದೇಶಕ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ವಜಾಗೊಳಿಸುವುದಾಗಿ ಮಮತಾ ಬ್ಯಾನರ್ಜಿ ಸೋಮವಾರ ರಾತ್ರಿಯೇ ಘೋಷಿಸಿದ್ದಾರೆ. 

ಕಿರಿಯ ವೈದ್ಯರ ಜತೆ ತಮ್ಮ ನಿವಾಸದಲ್ಲಿ ನಡೆಸಿದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮಾತುಕತೆಗಳು ಫಲಿಸಿವೆ’ ಎಂದು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯರ ನಿಯೋಗವು ‘ತಮ್ಮ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಆದರೆ, ಅದು ಕಾರ್ಯರೂಪಕ್ಕೆ ಬರುವವರೆಗೂ ಮುಷ್ಕರ ಮುಂದುವರಿಯಲಿದೆ’ ಎಂದು ಹೇಳಿದೆ. 

ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸದಲ್ಲಿ ಮೊದಲ ಸುತ್ತಿನ ಮಾತುಕತೆ ಸುಮಾರು ಎರಡು ಗಂಟೆ ನಡೆಯಿತು. 35 ಮಂದಿ ಕಿರಿಯ ವೈದ್ಯರ ನಿಯೋಗವು ಸಿ.ಎಂ ನಿವಾಸಕ್ಕೆ ಸಂಜೆ 6:20ಕ್ಕೆ ಆಗಮಿಸಿತು. ಸಂಜೆ 6:50ರ ಸುಮಾರಿಗೆ ಪ್ರಾರಂಭವಾದ ನಿರ್ಣಾಯಕ ಮಾತುಕತೆಗಳ ಸಭೆಯು ರಾತ್ರಿ 9 ಗಂಟೆ ಸುಮಾರಿಗೆ ಕೊನೆಗೊಂಡಿತು. ಆದರೆ, ಸಭೆಯಲ್ಲಿ ಚರ್ಚೆ ಮಾಡಿದ್ದನ್ನು ಅಕ್ಷರರೂಪದಲ್ಲಿ ದಾಖಲಿಸಿ, ಆ ವಿವರಗಳನ್ನು ಎರಡೂ ಕಡೆಯವರು ಪರಿಶೀಲಿಸಿ, ಸಹಿ ಮಾಡಿ, ಪ್ರತಿಗಳನ್ನು ಹಂಚಿಕೊಳ್ಳಲು ಮತ್ತೆ ಎರಡೂವರೆ ತಾಸು ಹಿಡಿಯಿತು. ವೈದ್ಯರ ನಿಯೋಗ ಸಭೆ ಮುಗಿಸಿ, ಬ್ಯಾನರ್ಜಿ ಅವರ ನಿವಾಸದಿಂದ ಹೊರಟಾಗ ರಾತ್ರಿ 11:30 ಆಗಿತ್ತು.

ಕೆಲಸ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ವೈದ್ಯರ ಜೊತೆ ಮಾತುಕತೆ ನಡೆಸಲು ಮಮತಾ ನೇತೃತ್ವದ ಸರ್ಕಾರವು ಈವರೆಗೆ ನಡೆಸಿದ್ದ ಹಲವು ಯತ್ನಗಳು ಫಲ ನೀಡಿರಲಿಲ್ಲ. ವೈದ್ಯ ವಿದ್ಯಾರ್ಥಿನಿಯ ಹತ್ಯೆಯ ವಿಚಾರವಾಗಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ
ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆಯು ಮಂಗಳವಾರ ನಡೆಯುವ ನಿರೀಕ್ಷೆ ಇದೆ. ಈ ವಿಚಾರಣೆಗೆ ಒಂದು ದಿನ ಮೊದಲು ಸಭೆ ನಡೆದಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಹಾಗೂ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಮಮತಾ ಜೊತೆಗಿನ ಸಭೆಯನ್ನು ನೇರಪ್ರಸಾರ ಮಾಡಬೇಕು ಹಾಗೂ ತಾವು ಕರೆಸುವ ಛಾಯಾಗ್ರಾಹಕರ ಮೂಲಕ ಸಭೆಯ ವಿಡಿಯೊ ಚಿತ್ರೀಕರಣ ನಡೆಸಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ವೈದ್ಯರು ಇರಿಸಿದ್ದ ಕಾರಣ, ಸಭೆ ಆಯೋಜಿಸಲು ಈ ಹಿಂದೆ ನಡೆಸಿದ್ದ ಯತ್ನಗಳು ಫಲ ಕೊಟ್ಟಿರಲಿಲ್ಲ. 

ಆದರೆ, ಸಭೆಯಲ್ಲಿ ಏನಾಯಿತು ಎಂಬುದನ್ನು ಅಕ್ಷರ ರೂಪದಲ್ಲಿ ದಾಖಲಿಸಿಕೊಳ್ಳಬಹುದು ಎಂಬ ಪ್ರಸ್ತಾವಕ್ಕೆ ವೈದ್ಯರು ಹಾಗೂ ಸರ್ಕಾರದ ಪ್ರತಿನಿಧಿಗಳು ಒಪ್ಪಿಕೊಂಡ ಕಾರಣಕ್ಕೆ ಸೋಮವಾರದ ಸಭೆ ಸಾಧ್ಯವಾಯಿತು.

ವೈದ್ಯರು ತಮ್ಮ ಜೊತೆ ಸ್ಟೆನೊಗ್ರಾಫರ್‌ಗಳನ್ನೂ ಸಭೆಗೆ ಕರೆತಂದಿದ್ದರು. ಸರ್ಕಾರದ ಅಧಿಕಾರಿಗಳು ಕೂಡ ತಮ್ಮೊಂದಿಗೆ ಇದೇ ಕೆಲಸಕ್ಕೆ ಅಗತ್ಯ ಸಿಬ್ಬಂದಿಯನ್ನು ಕರೆದುಕೊಂಡು ಬಂದಿದ್ದರು.

‘ಕಿರಿಯ ವೈದ್ಯರು ಮಾತುಕತೆಗೆ ಬರಬೇಕು ಎಂದು ನಾನು ಮನವಿ ಮಾಡುತ್ತಿದ್ದೇನೆ. ಮಾತುಕತೆಯ ಮೂಲಕ ಎಲ್ಲ ವಿಷಯಗಳನ್ನು ಬಗೆಹರಿಸಿಕೊಳ್ಳಬಹುದು. ಪರಿಹಾರ ಕಂಡುಕೊಳ್ಳಲು ನಾವು ಯತ್ನಿಸಬೇಕು. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆ ನಡೆಯಲಿದೆ. ಪರಿಹಾರ ಕಂಡುಕೊಳ್ಳುವ ಭರವಸೆ ನಮ್ಮಲ್ಲಿದೆ’ ಎಂದು ಮಮತಾ ಅವರು ಸಭೆಗೂ ಮುನ್ನ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದರು.

ಕೆಲಸವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದನ್ನು ಸೆಪ್ಟೆಂಬರ್ 10ರ ಸಂಜೆ 5ಕ್ಕೆ ಮೊದಲು ಕೊನೆಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ ಕಿರಿಯ ವೈದ್ಯರು ಕೋರ್ಟ್‌ ಮಾತಿಗೆ ಓಗೊಟ್ಟಿರಲಿಲ್ಲ. ಸೆಪ್ಟೆಂಬರ್‌ 12ರಂದು ಸರ್ಕಾರದ ಜೊತೆ ಮಾತುಕತೆಗೆ ವೈದ್ಯರು ಬಂದಿದ್ದರಾದರೂ, ಸಭೆಯ ನೇರಪ್ರಸಾರಕ್ಕೆ ಸರ್ಕಾರ ಒಪ್ಪದ ಕಾರಣಕ್ಕೆ ಸಭೆ ಸಾಧ್ಯವಾಗಿರಲಿಲ್ಲ.

ಸಿ.ಎಂ ಮಮತಾ ಬ್ಯಾನರ್ಜಿ ಹೇಳಿದ್ದೇನು

  • ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಧರಣಿ ನಿರತ ಕಿರಿಯ ವೈದ್ಯರ ಬೇಡಿಕೆಗಳನ್ನು ಪರಿಶೀಲಿಸುತ್ತಿದೆ

  • ಆರೋಗ್ಯ ಸೇವೆಗಳ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ

  • ಕೋಲ್ಕತ್ತ ಪೊಲೀಸ್ ಆಯುಕ್ತರ ಹುದ್ದೆಗೆ ಹೊಸಬರ ಹೆಸರನ್ನು ಮಂಗಳವಾರ ಸಂಜೆ 4 ಗಂಟೆ ನಂತರ ಪ್ರಕಟಿಸಲಾಗುವುದು

  • ಪ್ರತಿಭಟನೆ ನಡೆಸುತ್ತಿರುವ ವೈದ್ಯರ ವಿರುದ್ಧ ಯಾವುದೇ ದಂಡನೀಯ ಕ್ರಮ ಕೈಗೊಳ್ಳುವುದಿಲ್ಲ

  • ಕೋಲ್ಕತ್ತ ಪೊಲೀಸ್‌ ಉತ್ತರ ವಿಭಾಗದ ಉಪ ಆಯುಕ್ತರನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT