ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೌನವೇಕೆ?: ಕಾಶ್ಮೀರದಲ್ಲಿ 3 ಭಯೋತ್ಪಾದಕ ಕೃತ್ಯಗಳ ಬಗ್ಗೆ ಮೋದಿಗೆ ಕಾಂಗ್ರೆಸ್

Published 12 ಜೂನ್ 2024, 10:38 IST
Last Updated 12 ಜೂನ್ 2024, 10:38 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ದಿನಗಳಲ್ಲಿ ನಡೆದ ಮೂರು ಭಯೋತ್ಪಾದಕ ದಾಳಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದನ್ನು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದ್ದು, ಈ ಪ್ರದೇಶದಲ್ಲಿ ಸಹಜ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿಯ ಜೋರಾಗಿ ಎದೆ ಬಡಿದುಕೊಂಡು ಹೇಳುತ್ತಿರುವುದು ಸುಳ್ಳು ಎಂಬುದು ಸಂಪೂರ್ಣವಾಗಿ ಬಹಿರಂಗಗೊಂಡಿದೆ’ ಎಂದು ಆರೋಪಿಸಿದೆ.

ಪಾಕಿಸ್ತಾನದ ನವಾಜ್ ಷರೀಫ್ ಮತ್ತು ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಅವರು ತಮಗೆ ತಿಳಿಸಿದ ಶುಭಾಶಯಕ್ಕೆ ಪ್ರತಿಕ್ರಿಯೆ ನೀಡುವುದರಲ್ಲಿ ನಿರತರಾಗಿರುವ ಪ್ರಧಾನಿ ಮೋದಿಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ, ಕಥುವಾ ಮತ್ತು ದೋಡಾದಲ್ಲಿ ಕಳೆದ ಮೂರು ದಿನಗಳಲ್ಲಿ ಸಂಭವಿಸಿದ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸಲು ಸಮಯವಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಪ್ರದೇಶದಲ್ಲಿ ಸಹಜ ಸ್ಥಿತಿ ನೆಲೆಸಿದೆ ಎಂದು ಹೇಳುವ ಮೋದಿ ಸರ್ಕಾರ 10 ವರ್ಷಗಳಲ್ಲಿ ಕಾಶ್ಮೀರದಲ್ಲಿ ದುರಂತಮಯ ಪರಿಸ್ಥಿತಿ ನಿರ್ಮಾಣ ಮಾಡಿದೆ. ಹೇಡಿತನದ ಭಯೋತ್ಪಾದಕ ಕೃತ್ಯಗಳಿಗೆ ಅಲ್ಲಿನ ಮುಗ್ಧ ಜನರು ಬಲಿಯಾಗುತ್ತಿದ್ದಾರೆ. ಭಯೋತ್ಪಾದಕರ ದಾಳಿ ಮುಂದುವರಿಯುತ್ತಲೇ ಇವೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ದೂರಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತಮ್ಮ ಪಕ್ಷವು ರಾಷ್ಟ್ರದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಒತ್ತಿ ಹೇಳಿದ ಖೇರಾ, ಬಿಜೆಪಿ ಕೇಂದ್ರದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ನಡೆದ ಈ ದಾಳಿಗಳ ಬಗ್ಗೆ ಮೋದಿ ಏಕೆ ಮೌನ ವಹಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿ ಮರುಕಳಿಸಿದೆ ಎಂದು ಬಿಜೆಪಿಗರು ಎದೆಬಡಿದುಕೊಂಡು ಹೇಳುವ ಸುಳ್ಳು ಸಂಪೂರ್ಣ ಬಯಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಎದುರಿಸುವ ಧೈರ್ಯವೂ ಬಿಜೆಪಿಗಿಲ್ಲ. ಏಕೆಂದರೆ, ಅವರ ‘ನಯಾ ಕಾಶ್ಮೀರ್’ ನೀತಿ ವಿಫಲವಾಗಿದೆ’ ಎಂದಿದ್ದಾರೆ.

‘ನನ್ನ ಮಾತು ಸತ್ಯವಲ್ಲವೆಂದಾದರೆ ಕೇಳಿ. ಪೀರ್ ಪಂಜಾಲ್ ರೇಂಜ್‌ನ ರಾಜೌರಿ ಮತ್ತು ಪೂಂಚ್ ಜಿಲ್ಲೆಗಳು ಅಂತರ್‌ಗಡಿ ಭಯೋತ್ಪಾದನೆಯ ಸಕ್ರಿಯ ಚಟುವಟಿಕೆಯ ಪ್ರದೇಶಗಳಾಗಿದ್ದು, 2 ವರ್ಷಗಳ ಅವಧಿಯಲ್ಲಿ ಈ ಪ್ರದೇಶಗಳಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ 35 ಯೋಧರು ಹುತಾತ್ಮರಾಗಿದ್ದಾರೆ. ಅತ್ಯಂತ ಶಾಂತಿಯುತ ಪ್ರದೇಶವಾಗಿದ್ದ ರಿಯಾಸಿಗೂ ಈಗ ಭಯೋತ್ಪಾದನೆ ಹರಡಿದೆ’ ಎಂದು ದೂರಿದ್ದಾರೆ.

ನಮ್ಮ ಭದ್ರತಾ ನೆಲೆಗಳ ಮೇಲೆ ನಡೆದ ಕಳೆದ 19 ದಾಳಿಗಳು ಮೋದಿ ಅವಧಿಯಲ್ಲೇ ನಡೆದಿವೆ. 2016ರ ಪಠಾಣ್‌ಕೋಟ್ ದಾಳಿ ಕುರಿತ ತನಿಖೆಗೆ ಪಾಕಿಸ್ತಾನ ಐಎಸ್‌ಐ ಅನ್ನು ಆಹ್ವಾನಿಸಿದ್ದು ನಿಜವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

‘ಮೋದಿ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 2,262 ಭಯೋತ್ಪಾದಕ ದಾಳಿಗಳು ನಡೆದಿದ್ದು, ಇದರಿಂದ 363 ನಾಗರಿಕರು ಮತ್ತು 596 ಯೋಧರು ಹುತಾತ್ಮರಾಗಿದ್ದಾರೆ. ಮೋದಿ ಅವರು ದೇಶದ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿರುವುದು ಸತ್ಯವಲ್ಲವೇ?’ ಎಂದೂ ಪ್ರಶ್ನಿಸಿದ್ದಾರೆ.

ಜೂನ್ 9ರಂದು ಮೋದಿ ಸರ್ಕಾರ ಪ್ರಮಾಣವಚನ ಸಮಾರಂಭದ ದಿನ ರಿಯಾಸಿಯಲ್ಲಿ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 9 ಮಂದಿ ಯಾತ್ರಿಕರು ಮೃತಪಟ್ಟರು. ದೇವ ಮಾನವ ಎಂದು ಹೇಳಿಕೊಳ್ಳುವ ಪ್ರಧಾನ ಮಂತ್ರಿಗಳಿಂದ ಸಂತ್ರಸ್ತರು ಒಂದು ಸಂತಾಪಕ್ಕೆ ಅರ್ಹರಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT