ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌ ಆಟಗಾರ್ತಿ ಸಂಜನಾಗೆ ₹10 ಲಕ್ಷ ಪರಿಹಾರ: ಹೈಕೋರ್ಟ್‌ ಆದೇಶ

Published : 2 ಅಕ್ಟೋಬರ್ 2024, 0:20 IST
Last Updated : 2 ಅಕ್ಟೋಬರ್ 2024, 0:20 IST
ಫಾಲೋ ಮಾಡಿ
Comments

ಬೆಂಗಳೂರು: ‘ಕ್ರೀಡಾ ಕೋಟಾದಡಿ ಅರ್ಹತೆ ಹೊಂದಿದ್ದರೂ ವೈದ್ಯಕೀಯ ಸೀಟು ನೀಡದೆ ಹೋದ ಕಾರಣಕ್ಕೆ ಅಂತರರಾಷ್ಟ್ರೀಯ ಚೆಸ್‌ ಪಟು ಸಂಜನಾ ರಘುನಾಥ್‌ ಅವರಿಗೆ ₹10 ಲಕ್ಷ  ಪರಿಹಾರ ಪಾವತಿಸಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಈ ಸಂಬಂಧ ನಗರದ ಎಚ್‌ಎಸ್‌ಆರ್‌ ಲೇ ಔಟ್‌ ನಿವಾಸಿಯಾಗಿರುವ ಸಂಜನಾ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿ ಮಂಗಳವಾರ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರು ಕ್ರೀಡಾ ಕೋಟಾದಡಿ ಸೀಟು ಪಡೆಯುವ ಅರ್ಹತೆ ಹೊಂದಿ ಪಿ-1 ಶ್ರೇಣಿಗೆ ಅರ್ಹರಿದ್ದಾರೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಿದೆ. ನಿಯಮಗಳ ಪ್ರಕಾರ ಈ ವರ್ಗೀಕರಣ ಊರ್ಜಿತವಾಗದು’ ಎಂದು ನ್ಯಾಯಪೀಠ ಹೇಳಿದೆ.

‘ಸರ್ಕಾರಿ ಕೋಟಾದಡಿ ಸೀಟು ಸಿಗದೇ ಹೋದ ಕಾರಣ ಅವರು ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾದಡಿ ಅಂದಾಜು ₹11 ಲಕ್ಷ ಪಾವತಿಸಿದ್ದಾರೆ. ಹಾಗಾಗಿ, ಅವರಿಗೆ ರಾಜ್ಯ ಸರ್ಕಾರ ಆರು ವಾರಗಳಲ್ಲಿ ₹10 ಲಕ್ಷ ಪರಿಹಾರದ ಮೊತ್ತವನ್ನು ಪಾವತಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಂ.ಪಿ.ಶ್ರೀಕಾಂತ್‌ ವಾದ ಮಂಡಿಸಿದರು.

ಪ್ರಕರಣವೇನು?:

ಹೆಸರಾಂತ ಚೆಸ್‌ ಆಟಗಾರ್ತಿ ಸಂಜನಾ ರಘುನಾಥ್‌ ಹಲವು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚೆಸ್‌ ಟೂರ್ನಿಗಳಲ್ಲಿ ಭಾಗವಹಿಸಿದ್ದರು. 2019ರಲ್ಲಿ 13 ವರ್ಷದೊಳಗಿನ 32ನೇ ರಾಷ್ಟ್ರೀಯ ಬಾಲಕಿಯರ ಚೆಸ್‌ ಚಾಂಪಿಯನ್‌ಷಿಪ್‌, ಏಷ್ಯಾ ಯುವ ಚೆಸ್‌ ಚಾಂಪಿಯನ್‌ಷಿಪ್‌ ಹಾಗೂ ಕಾಮನ್‌ ವೆಲ್ತ್‌ ಚೆಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿದ್ದರು. ಅಖಿಲ ಭಾರತ ಚೆಸ್‌ ಫೆಡರೇಷನ್‌ನಲ್ಲಿ ಪದಕ ಜಯಸಿದ್ದರು.

ವೈದ್ಯೆಯಾಗುವ ಆಕಾಂಕ್ಷೆ ಹೊಂದಿದ್ದ ಅವರು 2022-23ನೇ ಸಾಲಿನ ನೀಟ್‌ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ್ದರು. ಆದರೆ, ಕೆಇಎ ಅವರ ಅರ್ಹತೆಗೆ ತಕ್ಕಂತೆ ಶ್ರೇಣಿ ನೀಡದ ಕಾರಣ ಸೀಟು ವಂಚಿತರಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT