ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಎಸ್‌ ಸಂಘಟನೆ ನಂಟು ಆರೋಪ: ಜಾಮೀನಿಗೆ ಹೈಕೋರ್ಟ್‌ ನಕಾರ

Published : 1 ಅಕ್ಟೋಬರ್ 2024, 16:32 IST
Last Updated : 1 ಅಕ್ಟೋಬರ್ 2024, 16:32 IST
ಫಾಲೋ ಮಾಡಿ
Comments

ಬೆಂಗಳೂರು: ‘ರಾಷ್ಟ್ರದ ಸಾರ್ವಭೌಮತೆ, ಏಕತೆ, ಸಮಗ್ರತೆ ಹಾಗೂ ಪ್ರಜಾಪ್ರಭುತ್ವದ ಹಿತಾಸಕ್ತಿಗೆ ಯಾವುದೇ ಸವಾಲುಗಳು ಎದುರಾದಾಗ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಲಾಗದು’ ಎಂದು ಹೈಕೋರ್ಟ್ ಪ್ರತಿಪಾದಿಸಿದೆ.

ನಿಷೇಧಿತ ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌ ಇನ್‌ ಇರಾಕ್‌ ಅಂಡ್ ಸಿರಿಯಾ) ಸಂಘಟನೆ ನಂಟು ಹೊಂದಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅರಫಾತ್ ಅಲಿ ಅಲಿಯಾಸ್ ಅರಾಫಾತ್ (25), ಕೋರಿದ್ದ ಜಾಮೀನಿನ ಕ್ರಿಮಿನಲ್ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ವಿವರಿಸಿದೆ.

‘ಸಂವಿಧಾನದ 21ನೇ ವಿಧಿ ವ್ಯಕ್ತಿಯೊಬ್ಬನ ಸ್ವಾತಂತ್ರ್ಯಕ್ಕೆ ಸಂಬಂಧಿಸಿರುವುದೇನೊ ಸರಿ. ಆದರೆ, ರಾಷ್ಟ್ರೀಯ ಹಿತಾಸಕ್ತಿ ವಿಷಯಗಳು ಒಳಗೊಂಡಾಗ ಅಥವಾ ರಾಷ್ಟ್ರದ ಏಕತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಸವಾಲನ್ನು ಒಡ್ಡಿದಾಗ, ಅಂತಹ ವೈಯಕ್ತಿಕ ಸ್ವಾತಂತ್ರ್ಯ, ತನ್ನ ಮನ್ನಣೆ ಕಳೆದುಕೊಳ್ಳುತ್ತದೆ’ ಎಂದು ನ್ಯಾಯಪೀಠ ತಿಳಿಸಿದೆ.

‘ಕಾನೂನಿನ ಅಡಿಯಲ್ಲಿ ನಿಯಮಗಳನ್ನು ಪಾಲಿಸದೆ ಬಂಧಿಸಲಾಗಿದೆ ಎಂಬಂತಹ ಸಂದರ್ಭಗಳಲ್ಲಿ ಸಂವಿಧಾನದ 21ನೇ ವಿಧಿಯನ್ನು ಪರಿಗಣಿಸಬಹುದು. ಆಗ ಅಂತಹ ವ್ಯಕ್ತಿ ತನ್ನ ಸ್ವಾತಂತ್ರ್ಯದ ಹಕ್ಕಿಗಾಗಿ ಕಾನೂನು ಹೋರಾಟ ನಡೆಸಬಹುದು. ಆದರೆ, ಗುರುತರ ಆರೋಪಗಳಡಿ ಬಂಧನಕ್ಕೆ ಒಳಗಾಗಿದ್ದಲ್ಲಿ ಅದನ್ನು ಕಾನೂನಿನ ಅಡಿಯಲ್ಲಿ ಪರಿಗಣಿಸಬೇಕೇ ಹೊರತು, ವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಡಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆರೋಪಿ ಪರ ಎಸ್‌.ಬಾಲಕೃಷ್ಣನ್‌ ಮತ್ತು ಎನ್‌ಐಎಗೆ (ರಾಷ್ಟ್ರೀಯ ತನಿಖಾ ಸಂಸ್ಥೆ) ಪಿ.ಪ್ರಸನ್ನ ಕುಮಾರ್‌ ಪರವಾಗಿ ಹೈಕೋರ್ಟ್ ವಕೀಲ ಸಿ.ಸಚಿನ್‌ ವಾದ ಮಂಡಿಸಿದ್ದರು.

ಪ್ರಕರಣವೇನು?: ಶಿವಮೊಗ್ಗದಲ್ಲಿ ಪ್ರೇಮ್‌ ಸಿಂಗ್ ಎಂಬುವವರಿಗೆ ಚಾಕುವಿನಿಂದ ಇರಿದ ಆರೋಪದಡಿ 2022ರ ಆಗಸ್ಟ್‌ 15ರಂದು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಕೇಂದ್ರ ಸರ್ಕಾರ 2022ರ ನವೆಂಬರ್ 14ರಂದು ಎನ್‌ಐಎಗೆ ವಹಿಸಿತ್ತು.

‘ತನಿಖೆಯ ಸಂದರ್ಭದಲ್ಲಿ ಅರಾಫತ್‌ ಅಲಿ (10ನೇ ಆರೋಪಿ) ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಪ್ರೇರೇಪಿಸಿದ ಮತ್ತು ಐಎಸ್‌ ಸಂಘಟನೆಗೆ ಉತ್ತೇಜನ ನೀಡಿದ ಮಾಹಿತಿ ಲಭ್ಯವಾಗಿತ್ತು. ಆದರೆ, ಆತ ಕೀನ್ಯ ಮತ್ತು ದುಬೈನಲ್ಲಿ ಇದ್ದ ಕಾರಣದಿಂದ ಬಂಧಿಸಲಾಗಿರಲಿಲ್ಲ’ ಎಂದು ಎನ್‌ಐಎ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ವಿವರಿಸಿತ್ತು.

ಅರಫಾತ್ ಅಲಿಯನ್ನು 2023ರ ಸೆಪ್ಟೆಂಬರ್ 14ರಂದು ಬಂಧಿಸಿದ್ದ ಪೊಲೀಸರು, ವಿಚಾರಣಾ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಏತನ್ಮಧ್ಯೆ, ಅರಾಫತ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ 2024ರ ಫೆಬ್ರುವರಿಯಲ್ಲಿ ವಜಾಗೊಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT