ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ನಭಾಗ್ಯ: ನಗದು ಬದಲು ‘ದಿನಸಿ ಕಿಟ್‌’

Published : 28 ಆಗಸ್ಟ್ 2024, 18:39 IST
Last Updated : 28 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯಡಿ ಐದು ಕೆ.ಜಿ ಅಕ್ಕಿ ಜತೆಗೆ ನೀಡುತ್ತಿರುವ ನಗದು ಬದಲು ‘ದಿನಸಿ ಕಿಟ್‌’ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.‌

ಅಡುಗೆ ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ದಿನಸಿ ಕಿಟ್‌ನಲ್ಲಿ ಇರಲಿದೆ. ಈ ಕುರಿತು ಆಹಾರ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಅಕ್ಟೋಬರ್ 1ರಿಂದ ಜಾರಿಗೊಳಿಸಲು ಸಿದ್ಧತೆ ನಡೆದಿದೆ.

‘ಅನ್ನಭಾಗ್ಯ’ದ ಗ್ಯಾರಂಟಿಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿತ್ತು. ಅಷ್ಟು ಪ್ರಮಾಣದ ಅಕ್ಕಿ ಲಭ್ಯವಾಗದೇ ಇದ್ದಾಗ, ಐದು ಕೆ.ಜಿ ಅಕ್ಕಿ ಜತೆಗೆ, ಉಳಿದ ಐದು ಕೆ.ಜಿ ಲೆಕ್ಕದಲ್ಲಿ ನಗದು ನೀಡುವ ಯೋಜನೆ ಜಾರಿಗೊಳಿಸಿತ್ತು. ನಗದಿನ ಬದಲು ದಿನಸಿ ನೀಡುವ ಯೋಜನೆ ಜಾರಿಗೆ ಬರಲಿದೆ. 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಯೋಜನೆ ಜಾರಿಗೆ ಅಗತ್ಯವಿದ್ದ ಹೆಚ್ಚುವರಿ ಅಕ್ಕಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಈ ಹಿಂದೆ ಪ್ರತಿ ವ್ಯಕ್ತಿಗೆ ನೀಡುತ್ತಿದ್ದ ಐದು ಕೆ.ಜಿ ಹೊರತುಪಡಿಸಿ ಹೆಚ್ಚುವರಿ ಅಕ್ಕಿ ಸರಬರಾಜು ಮಾಡಲು ಕೇಂದ್ರ ಒಪ್ಪಿರಲಿಲ್ಲ.    

ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ₹34 ನೀಡಿ ಖರೀದಿಸಲು‌ ಸಿದ್ಧವಿರುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೂ ಕೇಂದ್ರ ನೀಡಿರಲಿಲ್ಲ. ಈಗ ಕೇಂದ್ರವೇ ₹28ರಂತೆ ಪೂರೈಸಲು ಸಿದ್ಧವಿದ್ದರೂ ಖರೀದಿಸಲು ರಾಜ್ಯ ಸರ್ಕಾರ ನಿರಾಕರಿಸಿದೆ. ಕೇಂದ್ರದಿಂದ ಅಕ್ಕಿಗೆ ಯಾಚನೆ ಮಾಡುವ ಬದಲು, ದಿನಸಿ ಕಿಟ್ ವಿತರಿಸುವ ಯೋಜನೆಯನ್ನು ರೂಪಿಸಿದೆ.

ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ ಅನ್ನಭಾಗ್ಯದಡಿ ಅಕ್ಕಿ ಹೊಂದಿಸಲು ಸಾಧ್ಯವಾಗದೇ ಹೋದಾಗ ತಲಾ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕೆ.ಜಿ ಅಕ್ಕಿಗೆ ₹34ರಂತೆ ಲೆಕ್ಕಹಾಕಿ ಪ್ರತಿ ಫಲಾನುಭವಿ ಖಾತೆಗೆ ₹170 ನೇರ ಜಮಾ ಮಾಡಲು ಸರ್ಕಾರ ತೀರ್ಮಾನಿಸಿತ್ತು. 2023ರ ಜುಲೈ 10ರಿಂದ ಅಧಿಕೃತ ಚಾಲನೆ ನೀಡಲಾಗಿತ್ತು.

1.16 ಕೋಟಿ ಪಡಿತರ ಚೀಟಿದಾರರು 4.8 ಕೋಟಿ ಫಲಾನುಭವಿಗಳು 2.29 ಲಕ್ಷ ಟನ್‌ ಪ್ರತಿ ತಿಂಗಳು ಅಗತ್ಯವಿದ್ದ ಅಕ್ಕಿ ₹841.06 ಕೋಟಿ ತಲಾ ಐದು ಕೆ.ಜಿ. ಅಕ್ಕಿಗೆ ಪ್ರತಿ ತಿಂಗಳ ವೆಚ್ಚ ₹7,763 ಕೋಟಿ  ಒಂದು ವರ್ಷದಲ್ಲಿ ಫಲಾನುಭವಿಗಳ ಖಾತೆಗೆ ಜಮೆ  ₹8,079 ಕೋಟಿ 2024–25ನೇ ಸಾಲಿನಲ್ಲಿ ಮೀಸಲಿಟ್ಟ ಮೊತ್ತ

ಸಮೀಕ್ಷೆಯಲ್ಲಿ ಶೇ 93ರಷ್ಟು ಜನರು ಐದು ಕೆ.ಜಿ. ಅಕ್ಕಿ ಬದಲು ಬೇಳೆ ಎಣ್ಣೆ ಪೂರೈಸಲು ಬೇಡಿಕೆ ಸಲ್ಲಿಸಿದ್ದಾರೆ. ಕೇಂದ್ರ ಆಹಾರ ಸಚಿವರಿಗೂ ಮನವರಿಕೆ ಮಾಡಿದ್ದೇವೆ
ಕೆ.ಎಚ್‌. ಮುನಿಯಪ್ಪ ಆಹಾರ ಸಚಿವ

₹28ಕ್ಕೆ ಅಕ್ಕಿ ನೀಡಲು ಆಹ್ವಾನ; ನಿರಾಕರಣೆ

ಎಫ್‌ಸಿಐ ಇಲ್ಲಿಯವರೆಗೂ ಪ್ರತಿ ಕೆ.ಜಿ. ಅಕ್ಕಿಗೆ ₹34 ದರದಲ್ಲಿ ಅಕ್ಕಿ ಪೂರೈಸುತ್ತಿತ್ತು. ಈಗ ₹28 ದರಲ್ಲಿ ನೀಡಲು ಕೇಂದ್ರ ಸರ್ಕಾರ ಮುಂದೆ ಬಂದಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರವನ್ನೂ ಬರೆದಿದೆ. ಆಹಾರ ಭದ್ರತಾ ಯೋಜನೆ ಅಡಿ ಕೇಂದ್ರ ನೀಡುತ್ತಿರುವ ಐದು ಕೆ.ಜಿ. ಅಕ್ಕಿಯನ್ನಷ್ಟೇ ಪೂರೈಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದ್ದು ಗ್ಯಾರಂಟಿ ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿ ಖರೀದಿಸದಿರಲು ನಿರ್ಧರಿಸಿದೆ.

ಸಿಗುತ್ತಿರುವುದು ಮೂರೇ ಕೆ.ಜಿ ಅಕ್ಕಿ

ಕೇಂದ್ರದ ಆಹಾರ ಭದ್ರತಾ ಯೋಜನೆ ಸೇರಿದಂತೆ ಅನ್ನಭಾಗ್ಯ ಯೋಜನೆ ಅಡಿ ರಾಜ್ಯದಲ್ಲಿ ಆದ್ಯತಾ ವಲಯದ ಕುಟುಂಬದ ಪ್ರತಿ ಸದಸ್ಯರಿಗೆ ಘೋಷಿಸಿರುವುದು 10 ಕೆ.ಜಿ. ಅಕ್ಕಿ. ಆದರೆ ವಾಸ್ತವದಲ್ಲಿ ಸಿಗುತ್ತಿರುವುದು ಮೂರು ಕೆ.ಜಿ ಮಾತ್ರ. 10 ಕೆ.ಜಿ.ಯಲ್ಲಿ ಐದು ಕೆ.ಜಿ.ಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಉಳಿದ ಐದು ಕೆ.ಜಿ.ಯಲ್ಲಿ ಮೂರು ಕೆ.ಜಿ. ಅಕ್ಕಿ ಉಳಿದ ಎರಡು ಕೆ.ಜಿ. ರಾಗಿ ಅಥವಾ ಜೋಳ ನೀಡಲಾಗುತ್ತಿದೆ.  ಪ್ರಸ್ತುತ 4 ಲಕ್ಷ ಟನ್‌ ರಾಗಿ 1 ಲಕ್ಷ ಟನ್‌ ಜೋಳ ವಿತರಿಸಲಾಗುತ್ತಿದ್ದು. 8 ಲಕ್ಷ ಟನ್‌ ರಾಗಿ 3 ಲಕ್ಷ ಟನ್‌ ಜೋಳ ಹೆಚ್ಚುವರಿ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT