ಬೆಂಗಳೂರು: ಕೃಷಿ ತಾಂತ್ರಿಕತೆಗಳ ಅನಾವರಣ, ಹೊಸ ತಳಿಗಳು ಮತ್ತು ಆಧುನಿಕ ತಂತ್ರಜ್ಞಾನದ ಉಪಕರಣಗಳ ಪ್ರದರ್ಶನ ಒಳಗೊಂಡಿದ್ದ ಕೃಷಿ ಮೇಳಕ್ಕೆ ಭಾನುವಾರ ತೆರೆ ಬಿದ್ದಿತು.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಈ ಮೇಳದಲ್ಲಿ ರೈತರು, ಯುವಕರು, ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರರು ಪ್ರಾತ್ಯಕ್ಷಿಕೆ ತಾಕುಗಳು, ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಮೇಳದ ಕೊನೆಯ ದಿನವೂ ಜನಸಾಗರ ಹರಿದು ಬಂತು. ಭಾನುವಾರ ಮಳೆರಾಯ ಬಿಡುವು ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಅದರಲ್ಲೂ ರೈತರಿಗಿಂತಲೂ ನಗರದ ಜನತೆ ಕುಟುಂಬದ ಸದಸ್ಯರೊಂದಿಗೆ ಬಂದಿದ್ದರು. ಮಕ್ಕಳಿಗೆ ಪೋಷಕರು ವಿವಿಧ ಬೆಳೆಗಳ ಬಗ್ಗೆ ಪರಿಚಯಿಸಿದರು.

ಕುರಿ, ಕೋಳಿ ಸಾಕಣೆ ಮತ್ತು ಮೀನು ಸಾಕಣೆ, ಪಶುಸಂಗೋಪನೆ, ಹೈನುಗಾರಿಕೆ, ಕೃಷಿ ಯಂತ್ರೋಪಕರಣಗಳ ವಿಭಾಗ, ಸಾವಯವ ಹಾಗೂ ಸಿರಿಧಾನ್ಯ ವಿಭಾಗಗಳಿಗೆ ಹೆಚ್ಚಿನ ಜನರು ಲಗ್ಗೆ ಇಟ್ಟರು. ನಾಲ್ಕು ದಿನಗಳಲ್ಲಿ ಎಂಟು ಲಕ್ಷ ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯ ತಿಳಿಸಿದೆ. ಮೊದಲ ದಿನವಾದ ಗುರುವಾರ 66 ಸಾವಿರ, ಎರಡನೇ ದಿನ 1.70 ಲಕ್ಷ, ಮೂರನೇ ದಿನ 3 ಲಕ್ಷ ಮತ್ತು ನಾಲ್ಕನೇ ದಿನವಾದ ಭಾನುವಾರ 2.64 ಲಕ್ಷ ಮಂದಿ ಮೇಳಕ್ಕೆ ಭೇಟಿ ನೀಡಿದ್ದರು.

ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲೂ ಕೃಷಿ ಮೇಳವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದ್ದು ವಿಶೇಷವಾಗಿದೆ. ನಾಲ್ಕು ದಿನಗಳಲ್ಲಿ ಒಟ್ಟು 38.11 ಲಕ್ಷ ಮಂದಿ ಮೇಳ ವೀಕ್ಷಿಸಿದ್ದಾರೆ. ಈ ನಾಲ್ಕು ದಿನಗಳಲ್ಲಿ ₹4.25 ಕೋಟಿ ವಹಿವಾಟು ನಡೆದಿದೆ.

ಕೃಷಿಯತ್ತ ಯುವಕರು!

ಕೃಷಿ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭೇಟಿ ನೀಡಿದ್ದು ಗಮನಸೆಳೆಯಿತು.

‘ಕೃಷಿಯತ್ತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಣೆಗೆ ಒಳಗಾಗಿದ್ದಾರೆ. ಹೀಗಾಗಿ, ಸ್ವಯಂ ಆಸಕ್ತಿಯಿಂದ ಬಂದಿದ್ದಾರೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಸೇರಿದಂತೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪನ್ನಗಳನ್ನು ಬೆಳೆಯುವ ಕುರಿತು ಯುವಕರು ಮಾಹಿತಿ ಪಡೆದರು’ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದರು.

‘ಆಹಾರ ಉತ್ಪಾದನೆ ಹೆಚ್ಚಿಸಲು ಹಸಿರು ಕ್ರಾಂತಿ ಅಗತ್ಯ’

‘ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಸಾಧಿಸಲು ಹಸಿರು ಕ್ರಾಂತಿ ಪ್ರಮುಖ ಪಾತ್ರ ವಹಿಸಿತು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

‘ಕೃಷಿ ಮೇಳ-2021’ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಸಿರು ಕ್ರಾಂತಿಯು ದೇಶವನ್ನು ಆಹಾರದ ಬಿಕ್ಕಟ್ಟಿನಿಂದ ಹೊರತಂದಿದೆ. ಭಾರತೀಯ ಕೃಷಿ ಅಭಿವೃದ್ಧಿ ಹೊಂದಲು ಉತ್ತಮ ಕೃಷಿ ಪದ್ಧತಿ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ನ್ಯಾನೊ ತಂತ್ರಜ್ಞಾನ, ಕೃಷಿಯಲ್ಲಿ ಡ್ರೋನ್ಗಳ ಬಳಕೆ, ನೀರಾವರಿಯಲ್ಲಿ ಯಾಂತ್ರೀಕರಣ, ಕೃಷಿ ಯಾಂತ್ರೀಕರಣ, ನೈಸರ್ಗಿಕ ಮತ್ತು ಸಾವಯವ ಕೃಷಿ, ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ರೈತ ಸ್ನೇಹಿ ಹೊಸ ನವೋದ್ಯಮಗಳನ್ನು ಉತ್ತೇಜಿಸುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಏಳು ಕೃಷಿ ಸಾಧಕರಿಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿಗಳನ್ನು ರಾಜ್ಯಪಾಲರು ಪ್ರದಾನ ಮಾಡಿದರು. ‘ಎಚ್.ಡಿ.ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ’ ಗೆ ಆಯ್ಕೆಯಾದ ಹಾಸನ ಜಿಲ್ಲೆಯ ದೊಡ್ಡಮಗ್ಗೆಯ ಎಂ.ಸಿ.ರಂಗಸ್ವಾಮಿ, ‘ಡಾ.ಎಂ.ಎಚ್.ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ’ಗೆ ಆಯ್ಕೆಯಾದ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ತುಮಕೂರಿನ ಟಿ.ಎಂ.ಅರವಿಂದ, ‘ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ’ಗೆ ಆಯ್ಕೆಯಾದ ಹಾಸನ ಜಿಲ್ಲೆಯ ಯಡೂರು ಗ್ರಾಮದ ವೈ.ಜಿ.ಮಂಜುಳಾ, ‘ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ’ಗೆ ಆಯ್ಕೆಯಾದ ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಷ್ಮಿದೇವಿಪುರದ ಸಿ. ನವಿಕ್ರಮ್, ‘ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ’ಗೆ ಆಯ್ಕೆಯಾದ ಕೋಲಾರ ಜಿಲ್ಲೆಯ ಅರಿನಾಗನಹಳ್ಳಿ ಮುನಿರೆಡ್ಡಿ, ‘ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ’ಗೆ ಆಯ್ಕೆಯಾದ ದೊಡ್ಡಬಳ್ಳಾಪುರದ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎ.ಪಿ.ಮಲ್ಲಿಕಾರ್ಜುನಗೌಡ, ‘ಎಂ.ಎಚ್.ಮರೀಗೌಡ ಅತ್ಯುತ್ತಮ ತೋಟಗಾರಿಕಾ ಸಂಶೋಧನಾ ರಾಷ್ಟ್ರೀಯ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾದ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಎಚ್.ಪಿ.ಮಹೇಶ್ವರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೃತಿ ಬಿಡುಗಡೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊರತಂದಿರುವ ‘ರೇಷ್ಮೆ ಕೃಷಿ ಆಧುನಿಕ ಬೇಸಾಯ ಪದ್ಧತಿಗಳು’ ಕೃತಿಯನ್ನು ರಾಜ್ಯಪಾಲರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ರೇಷ್ಮೆ ಕೃಷಿಕರಿಗೆ ಈ ಪುಸ್ತಕ ಉಪಯುಕ್ತವಾಗಿದೆ. ಒಂದು ತಿಂಗಳ ನಂತರ ಪಿಡಿಎಫ್ ರೂಪದ ಈ ಬಹು ಉಪಯೋಗಿ ಪುಸ್ತಕವನ್ನು ಉಚಿತವಾಗಿ ಮೊಬೈಲ್ನಲ್ಲಿ ಪಡೆಯಲು ರೈತರು ವಾಟ್ಸ್ಆ್ಯಪ್ ಸಂಖ್ಯೆ: 9535355329 ಅಥವಾ 8553242422ಗೆ ಸಂದೇಶದ ಮೂಲಕ ಮನವಿ ಸಲ್ಲಿಸಿ ಪಡೆದುಕೊಳ್ಳಬಹುದು ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.