ಬೆಂಗಳೂರು: ಹಿರಿಯ ಭೂ ವಿಜ್ಞಾನಿ ಕೆ.ಎಸ್. ಪ್ರತಿಮಾ (43) ಕೊಲೆ ಪ್ರಕರಣ ಭೇದಿಸಿರುವ ದಕ್ಷಿಣ ವಿಭಾಗದ ಪೊಲೀಸರು, ಆರೋಪಿ ಕಿರಣ್ ನನ್ನು (32) ಚಾಮರಾಜನಗರದ ಮಹದೇಶ್ವರ ಬೆಟ್ಟದಲ್ಲಿ ಬಂಧಿಸಿದ್ದಾರೆ.

‘ಜಂಬೂಸವಾರಿ ದಿಣ್ಣೆ ನಿವಾಸಿ ಕಿರಣ್, ಗುತ್ತಿಗೆ ಆಧಾರದಲ್ಲಿ ಪ್ರತಿಮಾ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅಪಘಾತ ಹಾಗೂ ನಡತೆ ಕಾರಣಕ್ಕೆ ಎರಡು ತಿಂಗಳ ಹಿಂದೆಯಷ್ಟೇ ಆತನನ್ನು ಪ್ರತಿಮಾ ಕೆಲಸದಿಂದ ತೆಗೆಸಿದ್ದರು. ಇದೇ ಕಾರಣಕ್ಕೆ ಆತ, ಕೊಲೆ ಮಾಡಿರುವುದಾಗಿ ಗೊತ್ತಾಗಿದೆ’ ಎಂದು ದಕ್ಷಿಣ ವಿಭಾ ಗದ ಡಿಸಿಪಿ ರಾಹುಲ್‌ಕುಮಾರ್ ಶಹಾಪುರ್ ವಾಡ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶನಿವಾರ ರಾತ್ರಿ ಕೊಲೆ ಮಾಡಿದ್ದ ಕಿರಣ್, ಭಾನುವಾರ ಬೆಳಿಗ್ಗೆ ಮೂವರು ಸ್ನೇಹಿತರ ಜೊತೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ. ಅಲ್ಲಿಗೆ ತೆರಳಿದ ಪೊಲೀಸರ ವಿಶೇಷ ತಂಡ, ಅಂದೇ ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿತ್ತು. ತಾನೇ ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಹೇಳಿದರು.

ಕಾದು ಕುಳಿತಿದ್ದ ಚಾಲಕ: ‘ಕೆಲಸ ಹೋಗಿದ್ದರಿಂದ ಕಿರಣ್‌ಗೆ ಜೀವನ ನಿರ್ವಹಣೆ ಕಷ್ಟವಾಗಿತ್ತು. ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ವಿನಂತಿಸಲು ಶುಕ್ರವಾರ (ನ.3) ಸಂಜೆ ಪ್ರತಿಮಾ ಮನೆಗೆ ಹೋಗಿದ್ದ. ಆದರೆ, ಅವರು ಇರಲಿಲ್ಲ. ಶನಿವಾರ ಭೇಟಿಯಾಗಲು ನಿರ್ಧರಿಸಿದ್ದ ಆತ, ಸಂಜೆ 7 ಗಂಟೆ ಸುಮಾರಿಗೆ ಪ್ರತಿಮಾ ಮನೆಗೆ ಹೋಗಿದ್ದ. ಅವರಿನ್ನೂ ಬಂದಿರಲಿಲ್ಲ. ದೂರದ ನಿರ್ಜನ ಪ್ರದೇಶದಲ್ಲಿ ಕಾಯುತ್ತ ನಿಂತಿದ್ದ’ ಎಂದು ಪೊಲೀಸರು ತಿಳಿಸಿದರು.

‘ರಾತ್ರಿ 7.45ರ ಸುಮಾರಿಗೆ ಪ್ರತಿಮಾ ಕಾರಿನಲ್ಲಿ ಮನೆಗೆ ಬಂದಿದ್ದರು. ಚಾಲಕ ಚೇತನ್, ಮನೆ ಎದುರು ಕಾರು ನಿಲ್ಲಿಸಿ ತಮ್ಮ ಬೈಕ್‌ನಲ್ಲಿ ಹೊರಟು ಹೋಗಿದ್ದರು. ಅದನ್ನು ಗಮನಿಸಿದ್ದ ಕಿರಣ್, ನೇರವಾಗಿ ಮನೆಗೆ ಹೋಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ಪ್ರತಿಮಾ ಬಾಗಿಲು ತೆರೆದು ಒಳಗೆ ಹೋಗುತ್ತಿದ್ದಂತೆ, ಆರೋಪಿಯೂ ಅವರನ್ನು ಹಿಂಬಾಲಿಸಿದ. ಆತನನ್ನು ನೋಡಿದ್ದ ಪ್ರತಿಮಾ, ‘ಮನೆಗೆ ಏಕೆ ಬಂದಿದ್ದಿಯಾ? ಹೊರಟು ಹೋಗು’ ಎಂದಿದ್ದರು. ಕಾಲಿಗೆ ಬಿದ್ದಿದ್ದ ಕಿರಣ್, ‘ಕೆಲಸಕ್ಕೆ ವಾಪಸು ತೆಗೆದುಕೊಳ್ಳಿ’ ಎಂದಿದ್ದ. ‘ಸಾಧ್ಯವಿಲ್ಲ’ ಎಂದು ಪ್ರತಿಮಾ ಹೇಳಿದ್ದರು. ಸಿಟ್ಟಾದ ಆರೋಪಿ, ಪ್ರತಿಮಾ ಅವರ ವೇಲ್ ಕಸಿದುಕೊಂಡು ಕುತ್ತಿಗೆಗೆ ಬಿಗಿದಿದ್ದ. ಈ ವೇಳೆ ಮಳೆ ಜೋರಾಗಿ ಸುರಿಯುತ್ತಿದ್ದುದರಿಂದ ಪ್ರತಿಮಾ ಕೂಗಾಡಿದರೂ ಹೊರಗೆ ಧ್ವನಿ ಕೇಳಿಸಿರಲಿಲ್ಲ’ ಎಂದು ಹೇಳಿದರು.

‘ಕುತ್ತಿಗೆ ಬಿಗಿದಿದ್ದರಿಂದ ಪ್ರತಿಮಾ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆರೋಪಿಯೇ ಅವರನ್ನು ಎತ್ತಿಕೊಂಡು ಮಲಗುವ ಕೊಠಡಿಯ ಹಾಸಿಗೆ ಮೇಲೆ ಹಾಕಿದ್ದ. ಅಡುಗೆ ಕೊಠಡಿಯಲ್ಲಿದ್ದ ಚಾಕು ತಂದು ಕತ್ತು ಕೊಯ್ದಿದ್ದ. ಉಸಿರಾಟ ನಿಂತಿದ್ದನ್ನು ಖಾತ್ರಿಪಡಿಸಿಕೊಂಡು ಚಾಕು ಸಮೇತ ಸ್ಥಳದಿಂದ ಹೊರಟು ಹೋಗಿದ್ದ’ ಎಂದು ತಿಳಿಸಿದರು.

ಹೋಟೆಲ್ ಕೊಠಡಿಯಲ್ಲಿ ಮದ್ಯ: ‘ಪ್ರತಿಮಾ ಮನೆಯಿಂದ ಹೋಟೆಲ್ ಕೊಠಡಿಗೆ ಹೋಗಿದ್ದ ಆರೋಪಿ, ಮೂವರು ಸ್ನೇಹಿತರಿಗೆ ಕರೆ ಮಾಡಿ, ಪಾರ್ಟಿ ಮಾಡಲು ಕರೆಸಿಕೊಂಡಿದ್ದ. ಎಲ್ಲರೂ ಸೇರಿ ಮದ್ಯ ಕುಡಿದಿದ್ದರು. ಭಾನುವಾರ ಬೆಳಿಗ್ಗೆ 5.30ಕ್ಕೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ ಆರೋಪಿ, ‘ದೇವರಿಗೆ ಮುಡಿ ನೀಡಬೇಕು’ ಎಂದು ಸ್ನೇಹಿತರಿಗೆ ಹೇಳಿದ್ದ. ಸ್ನೇಹಿತನದ್ದೇ ಆಟೊದಲ್ಲಿ ಎಲ್ಲರೂ ಮಹದೇಶ್ವರ ಬೆಟ್ಟದತ್ತ ಹೊರಟಿದ್ದರು. ಬೆಟ್ಟ ತಲುಪಿ, ಸ್ನಾನ ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಜೊತೆ ಸ್ನೇಹಿತರಿರುವ ಮಾಹಿತಿ ಲಭ್ಯವಾಗಿತ್ತು. ಅವರ ಮೊಬೈಲ್ ಸಂಖ್ಯೆ ಆಧರಿಸಿ ಮಾಹಿತಿ ಕಲೆಹಾಕಿದಾಗ, ಎಲ್ಲರೂ ಮಹದೇಶ್ವರ ಬೆಟ್ಟದಲ್ಲಿರುವುದು ಗೊತ್ತಾಯಿತು. ಪೊಲೀಸರು, ಕಿರಣ್‌ನನ್ನು ಹಿಡಿದು ಕೊಂಡಾಗಲೇ, ಆತ ಕೊಲೆ ಆರೋಪಿ ಎಂಬುದು ಸ್ನೇಹಿತರಿಗೆ ಗೊತ್ತಾಗಿತ್ತು’ ಎಂದು ಹೇಳಿದರು.

‘ಕೆಲಸಕ್ಕೆ ತೆಗೆದುಕೊಳ್ಳಲು ಅವರು ನಿರಾಕರಿಸಿದರು. ಸಿಟ್ಟಾಗಿ ವೇಲ್‌ನಿಂದ ಕುತ್ತಿಗೆ ಬಿಗಿದೆ. ಪ್ರಜ್ಞೆ ತಪ್ಪಿದ್ದರು. ಎಚ್ಚರಗೊಂಡರೆ, ಪೊಲೀಸರಿಗೆ ಮಾಹಿತಿ ನೀಡುತ್ತಾರೆಂದು ಭಾವಿಸಿ ಚಾಕುವಿನಿಂದ ಕತ್ತು ಕೊಯ್ದೆ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಆರೋಪಿ ನಿರ್ಜನ ಪ್ರದೇಶವೊಂದರಲ್ಲಿ ಬಿಸಾಕಿದ್ದು, ಅದಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ತನಿಖಾ ತಂಡಕ್ಕೆ ಮೆಚ್ಚುಗೆ: ಪ್ರಕರಣ ದಾಖಲಾದ ಕೆಲ ಗಂಟೆಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ವಿಭಾಗದ ತನಿಖಾ ತಂಡದ ಕಾರ್ಯಕ್ಕೆ ಪೊಲೀಸ್ ಕಮಿಷನರ್ ಬಿ. ದಯಾನಂದ್ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಪಿ ರಾಹುಲ್‌ಕುಮಾರ್ ಶಹಾಪುರ್‌ವಾಡ್ ಮಾರ್ಗದರ್ಶನದಲ್ಲಿ ಎಸಿಪಿ ಎನ್. ಪವನ್ ನೇತೃತ್ವದಲ್ಲಿ ರಚಿಸಲಾಗಿದ್ದ ತನಿಖಾ ತಂಡದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಜಗದೀಶ್, ಎನ್. ಜಗದೀಶ್, ಪಿಎಸ್‌ಐಗಳಾದ ಕೆ.ಆರ್. ಶ್ರೀನಿವಾಸ್, ನಿರಂಜನ್, ಜ್ಯೋತಿ, ಕಾರ್ತಿಕ್, ಪ್ರವೀಣ್ ಶೆಟ್ಟಿ, ವಿನಯ್, ಸತೀಶ್, ನಾಗರಾಜು, ಕೆಂಡಗಣ್ಣಸ್ವಾಮಿ, ಕೆ.ಎನ್. ಪ್ರಸನ್ನಕುಮಾರ್, ಸಿಬ್ಬಂದಿ ಯಾದ ಗುರುಮೂರ್ತಿ, ವೆಂಕಟೇಶ್, ಎಸ್.ಎಸ್. ಪ್ರದೀಪ್, ಮೃತ್ಯುಂಜಯ, ಕೆ. ಬಸವರಾಜು, ಮಂಜುನಾಥ್, ರಂಗ ನಾಥ್, ಶಿವಪುಟ್ಟೇಗೌಡ, ಶಿವರಾಜಯ್ಯ, ಗಿರೀಶ್, ಶ್ರೀನಿವಾಸ್, ವಿಶ್ವನಾಥ್, ನರಸಿಂಹಮೂರ್ತಿ, ಗೋಪಾಲ್ ನಾಯಕ್ ಇದ್ದರು.

‘ಚಿನ್ನಾಭರಣ ಕದ್ದೊಯ್ದರೆ ಸಿಕ್ಕಿ ಬೀಳುವ ಭಯ’

‘ಕೊಲೆ ಮಾಡಿದ ಬಳಿಕ ಕಿರಣ್, ಪ್ರತಿಮಾ ಬಳಿಯ ಚಿನ್ನಾಭರಣ ಹಾಗೂ ನಗದು ಮುಟ್ಟಿರಲಿಲ್ಲ. ಚಿನ್ನಾಭರಣ ಕದ್ದೊಯ್ದರೆ ತನ್ನ ಸುಳಿವು ಸಿಗಬಹುದೆಂದು ಕಿರಣ್ ಅಂದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಚಿನ್ನಾಭರಣ ಏಕೆ ಮುಟ್ಟಲಿಲ್ಲ ಎಂದು ಪ್ರಶ್ನಿಸಿದಾಗ, ‘ಚಿನ್ನಾಭರಣ ಕದ್ದು, ಮನೆಗೆ ಕೊಂಡೊಯ್ದರೆ ತಂದೆ–ತಾಯಿ ಬೈಯುತ್ತಾರೆ. ಆಗ, ಅವುಗಳನ್ನು ಎಲ್ಲಾದರೂ ಗಿರವಿ ಇರಿಸಬೇಕು. ಆಗ ನನ್ನ ಫೋಟೊ ಹಾಗೂ ಸಹಿ ಪಡೆಯುತ್ತಾರೆ. ಚಿನ್ನಾಭರಣ ಕಳವಾಗಿದ್ದರೆ, ಪೊಲೀಸರು ಮೊದಲು ಎಲ್ಲ ಗಿರವಿ ಅಂಗಡಿ ಹಾಗೂ ಏಜೆನ್ಸಿಗಳಲ್ಲಿ ಹುಡುಕಾಡುತ್ತಾರೆ. ಅವಾಗ, ನನ್ನ ಮಾಹಿತಿಯೂ ಸಿಗುತ್ತದೆ ಎಂಬ ಭಯ ಇತ್ತು’ ಎಂಬುದಾಗಿ ಆರೋಪಿ ಹೇಳಿದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ತವರು ಮನೆಗೆ ಹೋಗಿದ್ದ ಪತ್ನಿ’

‘ಆರೋಪಿ ಕಿರಣ್‌ನ ತಂದೆ ಸರ್ಕಾರಿ ಇಲಾಖೆಯೊಂದರಲ್ಲಿ ಕಾರು ಚಾಲಕರಾಗಿದ್ದಾರೆ. ಗುತ್ತಿಗೆ ಆಧಾರದಲ್ಲಿ ಚಾಲಕನ ಕೆಲಸ ಸಿಗುತ್ತಿದ್ದಂತೆ ಆರೋಪಿ ಕಿರಣ್, ಶಿವಮೊಗ್ಗದ ಯುವತಿಯನ್ನು ಮದುವೆಯಾಗಿದ್ದ. ಪತ್ನಿ ಈಗ ಗರ್ಭಿಣಿ’ ಎಂದು ಪೊಲೀಸರು ಹೇಳಿದರು.

‘ಕೆಲಸ ಹೋಗಿದ್ದರಿಂದ ಕಿರಣ್ ಹೆಚ್ಚು ಸಮಯ ಮನೆಯಲ್ಲಿರುತ್ತಿದ್ದ. ಪತ್ನಿ ಜೊತೆ ಜಗಳ ಮಾಡುತ್ತಿದ್ದ. ನೊಂದ ಪತ್ನಿ, ಮನೆ ಬಿಟ್ಟು ತವರಿಗೆ ಹೋಗಿದ್ದರು. ಪತ್ನಿಯನ್ನು ಕರೆತರಲೆಂದು ತವರು ಮನೆಗೆ ಹೋಗಿದ್ದ ಕಿರಣ್, ಅಲ್ಲಿಯೇ ಒಂದು ತಿಂಗಳು ವಾಸವಿದ್ದ. ಕೆಲ ದಿನಗಳ ಹಿಂದೆಯಷ್ಟೇ ವಾಪಸು ಬೆಂಗಳೂರಿಗೆ ಬಂದಿದ್ದ’ ಎಂದು ತಿಳಿಸಿದರು.

‘13 ದಿನ ಜೈಲಿನಲ್ಲಿದ್ದ ಕಿರಣ್’

‘ಆರೋಪಿ ಕಿರಣ್, ಅಪರಾಧ ಹಿನ್ನೆಲೆಯುಳ್ಳವ. ಸುಲಿಗೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಈತನ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘13 ದಿನ ಜೈಲಿನಲ್ಲಿದ್ದ ಕಿರಣ್, ಜಾಮೀನು ಮೇಲೆ ಹೊರಬಂದಿದ್ದ. ಇದಾದ ನಂತರ ಚಾಲಕನಾಗಿ ಕೆಲಸ ಸಿಕ್ಕಿತ್ತು’ ಎಂದು ತಿಳಿಸಿದರು.

ಪ್ರತಿಮಾ ಅಂತ್ಯಸಂಸ್ಕಾರ

ತೀರ್ಥಹಳ್ಳಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೆ.ಎಸ್. ಪ್ರತಿಮಾ (43) ಅವರ ಅಂತ್ಯಸಂಸ್ಕಾರ ಪಟ್ಟಣದಲ್ಲಿ ಸೋಮವಾರ ನಡೆಯಿತು.

ಸಮೀಪದ ತುಡ್ಕಿ ಗ್ರಾಮದ ಸ್ವಗೃಹದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಅವರ ಪುತ್ರ ಪಾರ್ಥ ಅವರು ತಾಯಿಯ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು. ಪತಿ ಸತ್ಯನಾರಾಯಣ ಸೇರಿದಂತೆ ಕುಟುಂಬದವರು, ಸಾರ್ವಜನಿಕರು ಇದ್ದರು.

ಪ್ರತಿಮಾ ಅವರು ತುಡ್ಕಿ ಗ್ರಾಮದಲ್ಲಿ ನಿರ್ಮಿಸಿದ್ದ ನೂತನ ಮನೆಯಲ್ಲಿ ವಿಜಯದಶಮಿಯ ಹಿಂದಿನ ದಿನ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು. ಸಮಾರಂಭದಲ್ಲಿ ಪ್ರತಿಮಾ ಸಂಭ್ರಮದಿಂದ ಭಾಗವಹಿಸಿದ್ದರು.
.ಶಾಸಕರ ವಿರುದ್ಧದ ಪ್ರಕರಣ: ₹25.35 ಲಕ್ಷ ನಷ್ಟದ ವರದಿ ನೀಡಿದ್ದ ಪ್ರತಿಮಾ.ಗಣಿ ಇಲಾಖೆ ಭೂವಿಜ್ಞಾನಿ ಪ್ರತಿಮಾ ಕೊಲೆ: ಬಾಗಿಲು ಬಳಿ ಬಿದ್ದಿದ್ದ ಬ್ಯಾಗ್, ಕನ್ನಡಕ.ಭೂ ವಿಜ್ಞಾನಿ ಪ್ರತಿಮಾ ಕೊಲೆ: ಉಸಿರುಗಟ್ಟಿಸಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.