ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು- ಮೈಸೂರು ಪಾದಯಾತ್ರೆ ಹೋರಾಟಕ್ಕೆ ಮೊದಲ ಹಂತದ ಜಯ: ವಿಜಯೇಂದ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಲಿ: ವಿಜಯೇಂದ್ರ
Published : 24 ಸೆಪ್ಟೆಂಬರ್ 2024, 9:50 IST
Last Updated : 24 ಸೆಪ್ಟೆಂಬರ್ 2024, 9:50 IST
ಫಾಲೋ ಮಾಡಿ
Comments

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಹೈಕೋರ್ಟಿನ ತೀರ್ಪನ್ನು ಗೌರವಿಸಿ ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.

ಹೈಕೋರ್ಟ್‌ ತೀರ್ಪು ಪ್ರಕಟವಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದೆ. ಕಾನೂನಿನ ಎದುರು ಎಲ್ಲರೂ ಒಂದೇ ಎಂದು ಹೈಕೋರ್ಟ್ ತಿಳಿಸಿದೆ ಎಂದು ವಿಶ್ಲೇಷಿಸಿದರು.

ಹೈಕೋರ್ಟ್‍ನಲ್ಲಿ ಸುದೀರ್ಘ ವಾದ, ಪ್ರತಿವಾದದ ಬಳಿಕ ಈ ತೀರ್ಪು ಹೊರಬಿದ್ದಿದೆ. ರಾಜ್ಯಪಾಲರು ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟಿದ್ದರು. ಕಾಂಗ್ರೆಸ್ಸಿಗರು ಗೌರವಾನ್ವಿತ ರಾಜ್ಯಪಾಲರು, ರಾಜಭವನವನ್ನು ಕೇಂದ್ರದ ಏಜೆಂಟ್ ಎಂದು ಆಕ್ಷೇಪಿಸಿದ್ದರು ಎಂದು ಟೀಕಿಸಿದರು.

ಕಳೆದ ಕೆಲವು ತಿಂಗಳಿನಿಂದ ಬಿಜೆಪಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಿದ್ದೆವು. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿದ್ದೆವು. ನಂತರ ಸ್ವತಃ ಸಿಎಂ ಕುಟುಂಬವೇ ಫಲಾನುಭವಿಗಳಾಗಿರುವ ಮೈಸೂರಿನ ಮುಡಾ ಹಗರಣ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೆವು ಎಂದು ವಿವರಿಸಿದರು.

ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಭ್ರಷ್ಟಾಚಾರದ ಕಳಂಕ ಹೊತ್ತ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ವಿಶ್ವಾಸ ಇದೆ; ಅವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಮುಡಾ ವಿಚಾರದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಳಿಕ ರಾಜಭವನ, ರಾಜ್ಯಪಾಲರ ವಿರುದ್ಧ ತೇಜೋವಧೆ ಮಾಡಿದ್ದರು. ಈಗ ಹೈಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆದ್ದರಿಂದ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು.  ಪಕ್ಷದ ಮುಂದಿನ ನಡೆಯ ಕುರಿತು ಪ್ರಮುಖರು, ಹಿರಿಯರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಉತ್ತರ ನೀಡಿದರು.

ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT