ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂ–ಮೈ ಎಕ್ಸ್‌ಪ್ರೆಸ್‌ವೇ: 160 KM ವೇಗದಲ್ಲಿ ಚಲಿಸುವ ವಾಹನಗಳಿಂದ ಶೇ 75 ಅಪಘಾತ

Published 3 ಆಗಸ್ಟ್ 2023, 5:15 IST
Last Updated 3 ಆಗಸ್ಟ್ 2023, 5:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದ ಅಪಘಾತಗಳ ಪೈಕಿ ಮೂರನೇ ಒಂದರಷ್ಟು ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳು ಇವೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ.

ಎಕ್ಸ್‌ಪ್ರೆಸ್ ಹೈವೇಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ನಿಷೇಧ ಹೇರಿರುವ ಬಗ್ಗೆ ಮಾಹಿತಿ ನೀಡುವ ವೇಳೆ ಸಚಿವಾಲಯ ಈ ಅಂಕಿ ಅಂಶವನ್ನು ಉಲ್ಲೇಖಿಸಿದೆ.

ಆಗಸ್ಟ್‌ 1 ರಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ಮಂದಗತಿಯ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ದ್ವಿಚಕ್ರ ವಾಹನಗಳು ಇದ್ದ ಅಪಘಾತಗಳು ಸಾವಿಗೆ ಅಥವಾ ಗಂಭೀರ ಗಾಯಗಳಿಗೆ ಕಾರಣವಾಗಿವೆ. ಶೇ 25ರಷ್ಟು ಅಪಘಾತಗಳು ವಾಹನಗಳು ಡಿಕ್ಕಿಯಾಗಿ ಸಂಭವಿಸಿವೆ. ಮಂದಗತಿಯಲ್ಲಿ ಚಲಿಸುವ ವಾಹನಗಳು ಬಲಬದಿಯಲ್ಲಿ ಚಲಿಸಿದ್ದರಿಂದ ಹಾಗೂ ಲೇನ್ ನಿಯಮ ಪಾಲಿಸದಿದ್ದರಿಂದ ಈ ಅಪಘಾತಗಳು ಉಂಟಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಒಟ್ಟಾರೆಯಾಗಿ ಶೇ 65–75ರಷ್ಟು ಅಪಘಾತಗಳು ಗಂಟೆಗೆ 160 ಕಿ.ಮಿ ವೇಗದವರೆಗೆ ಚಲಿಸುವ ದ್ವಿಚಕ್ರ ಹಾಗೂ ಕಾರುಗಳಿಂದ ಉಂಟಾಗಿದೆ. ಆದರೆ ಎಕ್ಸ್‌ಪ್ರೆಸ್‌ವೇಯ ವೇಗದ ಮಿತಿ 80–100 ಕಿ.ಮಿ ಎಂದು ಸಚಿವಾಲಯ ಹೇಳಿದೆ.

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಎಕ್ಸ್‌ಪ್ರೆಸ್‌ವೇಯ ಎರಡೂ ಬದಿ ಇರುವ ಟೋಲ್ ರಹಿತ ಸರ್ವೀಸ್‌ ರಸ್ತೆಯನ್ನು ಬಳಸಬಹುದು ಎಂದು ಹೇಳಿರುವ ಸಚಿವಾಲಯವು, ಬಿಡದಿ, ರಾಮನಗರ, ಚನ್ನಪಟ್ಟಣ ಹಾಗೂ ಮಂಡ್ಯದಲ್ಲಿ ರೈಲ್ವೇ ಓವರ್‌ ಬ್ರಿಡ್ಜ್‌ನಿಂದಾಗಿ ಸರ್ವೀಸ್‌ ರಸ್ತೆ ಇಲ್ಲ ಎಂದು ಒಪ್ಪಿಕೊಂಡಿದೆ. ಅಲ್ಲದೆ ಮಂದಗತಿಯ ವಾಹನಗಳು ಹಳೆಯ ಬೆಂಗಳೂರು–ಮೈಸೂರು ರಸ್ತೆಯನ್ನು (ರಾಷ್ಟ್ರೀಯ ಹೆದ್ದಾರಿ 275) ಬಳಕೆ ಮಾಡಬಹುದು ಎಂದು ಸಲಹೆ ನೀಡಿದೆ.

ಅಲ್ಲದೆ ಬಾಕಿ ಇರುವ ಸರ್ವೀಸ್‌ ರಸ್ತೆಯ ನಿರ್ಮಾಣ ಶೀಘ್ರವೇ ಪ್ರಾರಂಭ ಮಾಡುವುದಾಗಿ ಹೇಳಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 275 ಅನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT