ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಕ್ಷಗಾನ ಅಭಿವೃದ್ಧಿ ಪ್ರಾಧಿಕಾರ ರಚಿಸಿ: ಭಂಡಾರಿ

Published 23 ಜುಲೈ 2024, 16:23 IST
Last Updated 23 ಜುಲೈ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಚೀನ ಕಲೆಯಾಗಿರುವ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಲು ‘ಕರ್ನಾಟಕ ಯಕ್ಷಗಾನ ಅಕಾಡೆಮಿ’ಯನ್ನು ‘ಕರ್ನಾಟಕ ಯಕ್ಷಗಾನ ಅಭಿವೃದ್ಧಿ ಪ್ರಾಧಿಕಾರ’ವನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಒತ್ತಾಯಿಸಿದರು.

ಗಮನಸೆಳೆಯುವ ಸೂಚನೆಯಡಿ ಮಾತನಾಡಿದ ಅವರು, ‘ಯಕ್ಷಗಾನ ಇತರೆ ಕಲೆಗಳ ರೀತಿಯದಲ್ಲ. ಅದರ ವೈಶಿಷ್ಟ್ಯವೇ ವಿಭಿನ್ನ. ತಾಳ, ಸಂಗೀತ, ಸಾಹಿತ್ಯ, ಅರ್ಥಗಾರಿಕೆ, ಗಾಯನ, ನೃತ್ಯ ಎಲ್ಲವನ್ನೂ ಒಳಗೊಂಡಿರುವ ಯಕ್ಷಗಾನ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸುತ್ತಿದೆ. ಇಂತಹ ಯಕ್ಷಗಾನಕ್ಕೆ ಪ್ರಾಧಿಕಾರ ರಚನೆ ಮಾಡಿ, ₹50 ಕೋಟಿ ಅನುದಾನ ಒದಗಿಸಬೇಕು’ ಎಂದರು.

‘ಜನಪದ, ಯಕ್ಷಗಾನ, ಬಯಲಾಟ ಅಕಾಡೆಮಿಯನ್ನು ಮೂರು ಅಕಾಡೆಮಿಯಾಗಿ ಮಾಡಿ, ಯಕ್ಷಗಾನ ಅಕಾಡೆಮಿಯನ್ನು ರಚಿಸಲಾಗಿದೆ. ಒಟ್ಟು 14 ಅಕಾಡೆಮಿಗಳಿದ್ದು, ಇದೊಂದನ್ನು ಪ್ರಾಧಿಕಾರ ಮಾಡಿದರೆ, ಇನ್ನುಳಿದ 13 ಅಕಾಡೆಮಿಗಳು ಇದನ್ನೇ ಕೇಳುತ್ತವೆ. ಹೀಗಾಗಿ, ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಲಾಗುತ್ತದೆ. ಅಕಾಡೆಮಿಗೆ ಅನುದಾನವನ್ನು ಹೆಚ್ಚಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌. ತಂಗಡಗಿ ಭರವಸೆ ನೀಡಿದರು.

‘ಯಕ್ಷಗಾನ 11 ಮತ್ತು 12ನೇ ಶತಮಾನದ ಕಲೆ. 16ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದು, ಕೃಷ್ಣದೇವರಾಯನ ಕಾಲದಲ್ಲಿ ಹೆಚ್ಚು ಪ್ರಾಮುಖ್ಯ ಪಡೆಯಿತು. ಈ ಕಲೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು’ ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಒತ್ತಾಯಿಸಿದರು.

‘ಯಕ್ಷಗಾನ ಕೇವಲ ಮನರಂಜನೆಗಾಗಿ ಅಲ್ಲ, ಹರಕೆ ತೀರಿಸಲು ಯಕ್ಷಗಾನ ಆಯೋಜಿಸುತ್ತಾರೆ. ನಾವು ನಮ್ಮ ಪಠ್ಯದಲ್ಲಿ ಕಲಿಯದೇ ಇರುವುದನ್ನು ಯಕ್ಷಗಾನದಲ್ಲಿ ಕಲಿತಿದ್ದೇವೆ. ಇತಿಹಾಸವನ್ನು ಅರಿತಿದ್ದೇವೆ. ನಾನೂ ಯಕ್ಷಗಾನ ಮಾಡಿದ್ದೇನೆ’ ಎಂದು ಬಿಜೆಪಿಯ ಭಾರತಿ ಶೆಟ್ಟಿ ಹೇಳಿದರು.

ಗಮನ ಸೆಳೆದ ಬೋಜೇಗೌಡ ಗಾಯನ... ಯಕ್ಷಗಾನದ ಬಗ್ಗೆ ವಿಧಾನಪರಿಷತ್‌ನಲ್ಲಿ ಚರ್ಚೆ ನಡೆಯುತ್ತಿದ್ದಾಗ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ಅವರು ಜೆಡಿಎಸ್‌ನ ಬೋಜೇಗೌಡರನ್ನು ‘ಸಕಲ ಕಲಾವಲ್ಲಭನ್‌’ ಎಂದು ಬಣ್ಣಿಸಿದರು. ತದ ನಂತರ ಮಾತು ಆರಂಭಿಸಿದ ಬೋಜೇಗೌಡ ಅವರು ಜಾನಪದ ಶೈಲಿಯಲ್ಲಿ ಗೀತೆಗಳನ್ನು ಹಾಡಿದರು. ‘ಇದಕ್ಕೇನಾ ನೀವು ಸಕಲಕಲಾವಲ್ಲಭನ್’ ಎಂದು ಹಲವು ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು. ‘ಕಲಿತ ಹುಡುಗಿ ಕುದುರಿ ನಡಿಗಿ...’ ‘ಎಷ್ಟೊಂದು  ಕಾಲದಿಂದ ಹಂಬಲಿಸಿದೆ...’ ‘ಕುದುರೇನ ತಂದೀನಿ...’ ಎಂಬುವುಗಳನ್ನು ಹಾಡಿ ಯಕ್ಷಗಾನದಲ್ಲೂ ಈ ಹಾಡುಗಳನ್ನು ಅವರದೇ ದಾಟಿಯಲ್ಲಿ ಹಾಡುತ್ತಾರೆ. ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಯಕ್ಷಗಾನದ ಕೊಡುಗೆ ಹೆಚ್ಚಿದೆ. ಅದಕ್ಕಾಗಿ ₹100 ಕೋಟಿ ಕೊಡಿ’ ಎಂದು ಬೋಜೇಗೌಡ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT