ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಛಲವಾದಿ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

ಸಿಎ ನಿವೇಶನದಲ್ಲಿ ‘ಧಮ್‌ ಬಿರಿಯಾನಿ’ ಆರೋಪ * ಪರಿಷತ್‌ ಸದಸ್ಯತ್ವ ರದ್ಧತಿಗೆ ಆಗ್ರಹ
Published : 4 ಸೆಪ್ಟೆಂಬರ್ 2024, 0:25 IST
Last Updated : 4 ಸೆಪ್ಟೆಂಬರ್ 2024, 0:25 IST
ಫಾಲೋ ಮಾಡಿ
Comments

ಬೆಂಗಳೂರು: ‘ಶಿಕ್ಷಣದ ಉದ್ದೇಶಕ್ಕೆ ಪಡೆದ ಸಿ.ಎ ನಿವೇಶನದಲ್ಲಿ ‘ಧಮ್‌ ಬಿರಿಯಾನಿ’ ಹೋಟೆಲ್‌ ನಡೆಸುವ ಮೂಲಕ ಅಕ್ರಮ ಎಸಗಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಪರಿಷತ್‌ ಸದಸ್ಯತ್ವ ಸ್ಥಾನದಿಂದ ಅನರ್ಹ ಮಾಡಬೇಕು’ ಎಂದು ಆಗ್ರಹಿಸಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಪಕ್ಷದ ಹಾಲಿ ಮತ್ತು ಮಾಜಿ ಸದಸ್ಯರ ನಿಯೋಗ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಮಂಗಳವಾರ ದೂರು ಸಲ್ಲಿಸಿ, ಮನವಿ ಮಾಡಿದೆ.

ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್, ಎಂ.ಆರ್‌. ಸೀತಾರಾಮ್‌, ಮಂಜುನಾಥ ಭಂಡಾರಿ, ವಸಂತಕುಮಾರ್, ಪುಟ್ಟಣ್ಣ, ಎಸ್‌. ರವಿ, ಎಚ್‌.ಪಿ. ಸುಧಾಮ್‌ ದಾಸ್‌, ದಿನೇಶ್‌ ಗೂಳಿಗೌಡ ಸೇರಿದಂತೆ 11 ಹಾಲಿ ಹಾಗೂ ರಮೇಶ್‌ಬಾಬು, ಎಂ. ನಾರಾಯಣಸ್ವಾಮಿ ಸೇರಿದಂತೆ ಐವರು ಮಾಜಿ ಸದಸ್ಯರು ಈ ಮನವಿ ಸಲ್ಲಿಸಿದ್ದಾರೆ.

ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲೀಂ ಅಹಮದ್, ‘ಆದರ್ಶ ಶಾಲೆ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಛಲವಾದಿ ನಾರಾಯಣಸ್ವಾಮಿ, ಹೊಸಕೋಟೆಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಿ.ಎ ನಿವೇಶನ ಪಡೆದಿದ್ದರು. 2006ರಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಟೆಲಿ ಕಮ್ಯೂನಿಕೇಷನ್‌ಗೆ ನೋಂದಾಯಿಸಿಕೊಂಡಿರುವ ಆ ಜಾಗದಲ್ಲಿ ಈಗ ಧಮ್ ಬಿರಿಯಾನಿ ಹೋಟೆಲ್ ಇದೆ. ಈ ವಿಚಾರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ’ ಎಂದರು.

ದೂರಿನಲ್ಲಿದ್ದ ಅಂಶಗಳನ್ನು ವಿವರಿಸಿದ ರಮೇಶ್ ಬಾಬು, ‘2002–2005ರ ನಡುವೆ ಕರ್ನಾಟಕ ಗೃಹ ಮಂಡಳಿ ಸದಸ್ಯರಾಗಿದ್ದ ನಾರಾಯಣಸ್ವಾಮಿ, ಈ ವೇಳೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಶಾಲೆಗೆ ಕಟ್ಟಡ ಕಟ್ಟಲು ಸಿ.ಎ ನಿವೇಶನವನ್ನು 2004ರಲ್ಲಿ ಪಡೆದಿದ್ದ ಅವರು, 2006ರಲ್ಲಿ ಕ್ರಯಪತ್ರ ಮಾಡುವಾಗ ನಿವೇಶನ ಪಡೆದ ಉದ್ದೇಶವನ್ನು ಟೆಲಿ ಕಮ್ಯೂನಿಕೇಶನ್ ಮತ್ತು ಪಬ್ಲಿಕ್ ಸರ್ವೀಸ್ ಎಂದು ಬದಲಾಯಿಸಿದ್ದಾರೆ. ಸದ್ಯ ಈ ನಿವೇಶನದಲ್ಲಿ ಧಮ್ ಬಿರಿಯಾನಿ ಹೋಟೆಲ್ ಇದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಮೈಸೂರಿನ ಹೆಬ್ಬಾಳದಲ್ಲಿಯೂ ಕೈಗಾರಿಕಾ ನಿವೇಶನ ಪಡೆದಿದ್ದಾರೆ. ಅವರ ಮೇಲೆ ಬಿಎನ್‌ಎಸ್‌ 316, 318 ಸೆಕ್ಷನ್ ಅಡಿ ಮೋಸ ಹಾಗೂ ನಂಬಿಕೆದ್ರೋಹ ‌ಕಾರಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ದೂರು ಸಲ್ಲಿಸಿದ್ದೇವೆ’ ಎಂದರು. 

‘ಸಿ.ಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದರೆ ಮರಳಿ ಪಡೆಯಬೇಕೆಂದು 2023ರಲ್ಲಿ ಹೈಕೋರ್ಟ್ ತೀರ್ಪು ನೀಡಿದೆ’ ಎಂದು ಸುಧಾಮ್‌ ದಾಸ್‌ ಹೇಳಿದರೆ, ‘ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ಅಧಿಕಾರ ಪಡೆದಿದ್ದ ಛಲವಾದಿ ನಾರಾಯಣಸ್ವಾಮಿ, ಈಗ ಅವರ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಮಂಜುನಾಥ ಭಂಡಾರಿ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ದಿನೇಶ್ ಗೂಳಿಗೌಡ, ಜಗದೇವ್ ಗುತ್ತೇದಾರ್, ತಿಪ್ಪಣ್ಣ ಕಮಕನೂರು, ಚಂದ್ರಶೇಖರ ಪಾಟೀಲ, ಕೆಪಿಸಿಸಿ ಎಸ್.ಸಿ ವಿಭಾಗದ ಅಧ್ಯಕ್ಷ ಧರ್ಮಸೇನ, ಕೆಪಿಸಿಸಿ ಉಪಾಧ್ಯಕ್ಷ ಶರಣಪ್ಪ ಮಟ್ಟೂರು, ಎಂ. ನಾರಾಯಣ ಸ್ವಾಮಿ ಇದ್ದರು.

ನಾವು ನೀಡಿರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ರಾಜ್ಯಪಾಲರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸುವ ಭರವಸೆ ನೀಡಿದ್ದಾರೆ

–ಸಲೀಂ ಅಹಮದ್ವಿಧಾನ ಪರಿಷತ್ತಿನ ಮುಖ್ಯ ಸಚೇತಕ 

ಮರುಪ್ರಶ್ನೆ ಕೇಳಿದ ರಾಜ್ಯಪಾಲ?

ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ದೂರು ನೀಡುತ್ತಿದ್ದಂತೆ ‘2002–05ರಲ್ಲಿ ನಿಯಮ ಉಲ್ಲಂಘಿಸಿ ನಿವೇಶನ ಪಡೆದಿರುವ ವಿಷಯವಿದು. ಇಷ್ಟು ವರ್ಷ ಏನು ಮಾಡುತ್ತಿದ್ದಿರಿ? ಈವರೆಗೂ ಯಾಕೆ ದೂರು ಕೊಡಲಿಲ್ಲ’ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ. ಅದಕ್ಕೆ ಕಾಂಗ್ರೆಸ್ ನಾಯಕರು ‘ಈಗ ದಾಖಲೆಗಳು ಸಿಕ್ಕಿವೆ. ಹೀಗಾಗಿ ದೂರು ನೀಡುತ್ತಿದ್ದೇವೆ’ ಎಂದಿದ್ದಾರೆ. ‘ಗೃಹ ಮಂಡಳಿ ನಿರ್ದೇಶಕ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುತ್ತಿದ್ದೀರಿ. ಮುಡಾ ಪ್ರಕರಣವೂ ಇದೇ ರೀತಿ ಅಲ್ಲವೇ? ಎರಡೂ ಪ್ರಕರಣಗಳಿಗೂ ಹೋಲಿಕೆ ಇದೆಯಲ್ಲವೇ’ ಎಂದು ರಾಜ್ಯಪಾಲರು ಮರು ಪ್ರಶ್ನೆ ಹಾಕಿದ್ದಾರೆ. ರಾಜ್ಯಪಾಲರ ಮಾತಿಗೆ ಕಾಂಗ್ರೆಸ್ ನಾಯಕರು ‘ಮುಡಾ ಪ್ರಕರಣವೇ ಬೇರೆ. ಈ ಪ್ರಕರಣವೇ ಬೇರೆ. ದಾಖಲೆಗಳನ್ನು ನೋಡಿ’ ಎಂದಿದ್ದಾರೆ ಎಂದೂ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT